Friday, October 26, 2007

ಶರಣಾಗತ

ಶರಣಾಗತ

- ಕೆ. ತ್ರಿವೇಣಿ ಶ್ರೀನಿವಾಸ ರಾವ್

ಮಧ್ಯಾಹ್ನದ ಸುಡು ಸುಡು ಬಿಸಿಲು ಭೂಮಿಯನ್ನು ನಿರ್ದಯವಾಗಿ ಸುಡುತ್ತಿತ್ತು. ಕೊರಳಿನ ಸುತ್ತ ಹರಿಯುತ್ತಿದ್ದ ಬೆವರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತಾ ಗೇಟು ತೆರೆದು ಕಾಂಪೊಂಡಿನೊಳಗೆ ಪ್ರವೇಶಿಸಿದ ರಾಜೀವ.ಪಾರಿಜಾತದ ನೆರಳಿನಲ್ಲಿ ಆಡಿಕೊಂಡಿದ್ದ ಎರಡು ಮುದ್ದಾದ ಮಕ್ಕಳು ಅಪರಿಚಿತನನ್ನು ಕಂಡು ಬೆರಗಾಗಿ ನಿಂತವು. ನಾಲ್ಕು ವರ್ಷದ ಗಂಡು ಮಗು ಸುದ್ದಿಯನ್ನು ಹಿರಿಯರಿಗೆ ತಲುಪಿಸಲು ಒಳಗೋಡಿದರೆ ಎಂಟು ವರ್ಷದ ಹುಡುಗಿ ಅಲ್ಲಿಯೇ ನಿಂತು ರಾಜೀವನನ್ನು ಮಿಕಿ ಮಕಿ ನೋಡತೊಡಗಿತು.
ಆ ಹುಡುಗಿಯ ಮುಖ ನೋಡುತ್ತಿದ್ದರೆ ರಾಜೀವನಿಗೆ ತನ್ನ ತಾಯಿಯನ್ನೇ ಕಂಡಂತಾಯಿತು. ತಾನು ಎಂಟು ವರ್ಷದ ಹಿಂದೆ ಮನೆಯನ್ನು ತ್ಯಜಿಸಿ ಹೊರನಡೆದಾಗ ಅತ್ತಿಗೆ ತುಂಬಿದ ಬಸುರಿ. ಆಗ ಹುಟ್ಟಿದ್ದವಳೇ ಇವಳಿರಬೇಕು. ಅಜ್ಜಿಯ ಸುಂದರ ರೂಪವನ್ನು ಎರಕ ಹೊಯ್ದುಕೊಂಡು ಹುಟ್ಟಿದೆ ಎಂದು ವಾತ್ಸಲ್ಯದಿಂದ-``ನಿನ್ನ ಹೆಸರೇನು ಮರೀ?"ಹುಡುಗಿಯನ್ನು ಮಾತಿಗೆಳೆಯಲು ಯತ್ನಿಸಿದ.``ವತ್ಸಲಾ" ಎಳಸಾದ ಕಂಠ ಉತ್ತರಿಸಿತು. ಅಣ್ಣನ ಮಗಳು ನನಗೂ ಮಗಳಲ್ಲವೇ? ಅಭಿಮಾನ ಉಕ್ಕಿ ಬಂದು ``ನಿನ್ನ ಅಪ್ಪ ಮನೆಯಲ್ಲಿದ್ದಾರಾ ಪುಟ್ಟಿ" ಎಂದು ಕೇಳಿದ ಮೆಲುವಾಗಿ.``ಇಲ್ಲ, ಕೆಲಸಕ್ಕೆ ಹೋಗಿದಾರೆ" ಎಂದು ಹುಡುಗಿ ನುಡಿಯುವಷ್ಟರಲ್ಲಿಯೇ ಒಳಗೋಡಿದ್ದ ಹುಡುಗ ತಾಯಿಯ ಕೈ ಹಿಡಿದು ಹೊರಗೆ ಕರೆತಂದಿದ್ದ.
ಅತ್ತಿಗೆ ಹಾಗೆಯೇ ಇದ್ದಾರೆ. ಅದೇ ಚೆಲುವಾದ ಶಾಂತಿ, ನೆಮ್ಮದಿ ಹೊರಸೂಸುವ ಸಿರಿಮೊಗ. ಬಿಳುಪಾದ ಮೊಗದಲ್ಲಿ ಈಗ ಸ್ವಲ್ಪ ಕೆಂಪು ಬೆರೆತಿದ್ದು, ಮತ್ತಷ್ಟು ಶೋಭೆ ಹೆಚ್ಚಿದೆ. ದೇಹ ಮೊದಲಿಗಿಂತ ಸ್ವಲ್ಪ ತುಂಬಿಕೊಂಡಿದೆ ಅಷ್ಟೆ.ಅತ್ತಿಗೆಗೆ ಕೂಡಲೇ ಗುರುತು ಹತ್ತಲಿಲ್ಲ. ಒಂದೆರಡು ಕ್ಷಣಗಳ ನಂತರ ಗುರುತು ಹಿಡಿದಂತೆ ಕಂಡರೂ ಮುಖದಲ್ಲಿ ಅಪನಂಬಿಕೆ ಒಡೆದು ತೋರುತ್ತಿತ್ತು.
ಅನುಮಾನದಿಂದಲೇ -ರಾಜೂ ಅಲ್ವಾ ನೀನು? ಎಂದರು.ಇನ್ನೂ ಹತ್ತಿರ ಬಂದು -``ಎಷ್ಟು ಬದಲಾಗಿ ಹೋಗಿದ್ದೀಯಾ? ನಿನ್ನಣ್ಣನಿಗಿಂತ ನಿನಗೇ ವಯಸ್ಸಾದಂತೆ ಕಾಣುತ್ತಲ್ಲೋ" -ಎಂದರು ಸಲಿಗೆಯಿಂದ.ಅತ್ತಿಗೆಯ ಪ್ರಶ್ನೆಗಳಿಗೆ ರಾಜೀವ ಉತ್ತರಿಸಿದೆ ತಲೆದೂಗಿದ.``ಬಾ, ಬಾ. ಆಗಿನಿಂತ ಇಲ್ಲೇ ನಿಂತಿದ್ದೀಯಾ? ಒಳಗೆ ಬರಬಾರದೇನೋ. ಏನೋ ಒಂದು ಮಾತು ಬಂದು ಮನೆ ಬಿಟ್ಟು ಹೋದ ಮಾತ್ರಕ್ಕೆ ಪರಕೀಯನಾಗಿ ಹೋದೆಯಾ?" -ಎಂದು ನೋವಿನಿಂದ ಆಕ್ಷೇಪಿಸಿ, ಒಳಗೆ ಕರೆದೊಯ್ದು ಸೋಫಾದ ಮೇಲೆ ಕೂಡಿಸಿದರು.
``ಒಂದು ನಿಮಿಷ ಸುಧಾರಿಸಿಕೊ. ಉಳಿದದ್ದು ಆಮೇಲೆ" ಎಂದು ಸರ ಸರನೆ ಒಳನಡೆದು ಮಾಯವಾದರು.ತನ್ನ ಬದುಕಿನ ಬಹು ಭಾಗವನ್ನು ಕಳೆದಿದ್ದ ಆ ಮನೆಯನ್ನು ಒಮ್ಮೆ ಪ್ರೀತಿಯಿಂದ ವೀಕ್ಷಿಸಿದ ರಾಜೀವ. ಬಿಸಿಲಿನಿನಲ್ಲಿ ಬೆಂದು ಬಂದಿದ್ದ ಅವನಿಗೆ ಮನೆಯ ನಸುಕತ್ತಲು ತುಂಬಿಕೊಂಡಿದ್ದ ಶೀತಲ ವಾತಾವರಣ ಅಪ್ಯಾಯಮಾನವಾಗಿತ್ತು. ತಾಯಿಯ ಮೃದುವಾದ ಮಡಿಲಿನಲ್ಲಿ ಮಲಗಿದ್ದಂತಹ ಹಿತವಾದ ಭಾವವೊಂದು ಅವನನ್ನು ಆವರಿಸಿಕೊಂಡಿತು.ಮೀರಾ, ಒಂದು ದೊಡ್ಡ ಲೋಟದ ತುಂಬಾ ನಿಂಬೆ ಹಣ್ಣಿನ ಪಾನಕವನ್ನು ತಂದು ಅವನ ಕೈಗಿತ್ತರು. ಸವಿಯಾಗಿ ತಂಪಾಗಿದ್ದ ಅದು ಹನಿ ಹನಿಯಾಗಿ ಒಳ ಸೇರಿದಂತೆ ಮೆತ್ತಿಕೊಂಡಿದ್ದ ಆಯಾಸ ಆವಿಯಾಗಿ ಹೋದಂತೆ ಭಾಸವಾಯಿತು.
ಮೀರಾ ಅವನು ಪೂರ್ತಿಯಾಗಿ ಕುಡಿದು ಮುಗಿಸುವವರೆಗೆ ಅವನನ್ನೇ ನಿಟ್ಟಿಸುತ್ತಾ ಕೂತಿದ್ದರು.ರಾಜೀವ ಹೇಗಿದ್ದವನು ಹೇಗಾಗಿ ಹೋಗಿದ್ದಾನೆ? ಅವನ ಹಿಂದಿನ ಆ ಕಣ್ತುಂಬುವ ಆ ಸುಂದರ ರೂಪ ಎಲ್ಲಿ ಮರೆಯಾಯಿತು? ಬತ್ತಿ ಹೋದ ಕೆನ್ನೆಗಳು, ಗುಳಿಬಿದ್ದ ಕಣ್ಣುಗಳು, ತುಂಬಿಕೊಂಡ ಕ್ರಾಪು ವಿರಳವಾಗಿ ಅಲ್ಲಲ್ಲಿ ಇಣುಕಿ ಹಾಕುತ್ತಿರುವ ಬಿಳಿಗೂದಲುಗಳು. ಅವರೆದೆಯಲ್ಲಿ ನೋವಿನ ತಂತಿ ವಿಷಾದ ರಾಗ ಮೀಟುತ್ತಿತ್ತು.
``ರಾಜೀವ, ಈ ಎಂಟು ವರ್ಷಗಳು ನಿನಗೆ ನಾವ್ಯಾರೂ ನೆನಪೇ ಆಗಲಿಲ್ಲವೇನೋ? ಇಷ್ಟು ವರ್ಷದ ನಂತರ ಈ ಕಡೆ ತಲೆ ಹಾಕಿದೀಯಲ್ಲಾ?"ಎಂದು ನಿಟ್ಟುಸಿರುಬಿಟ್ಟರು.``ಹೋಗಲಿ, ನಮ್ಮನ್ನು ಬೇಡ, ನಿಮ್ಮಮ್ಮನ್ನಾದರೂ ನೋಡಬೇಕು ಅನ್ನಿಸಲೇ ಇಲ್ಲವೇನೋ?"ಎಂದು ಮತ್ತೆ ಕೆಣಕಿದರು.``ಅದೆಲ್ಲಾ ಬಿಡು, ಮುಗಿದುಹೋದ ಕಥೆ. ನಿಮ್ಮಮ್ಮ ತಮ್ಮ ಕೊನೆಯ ಘಳಿಗೆಯವರೆಗೂ ನೀನು ಬರುತ್ತೀಯಾ ಎಂದು ಕಾಯುತ್ತಲೇ ಇದ್ದರು. ಅವರ ಯಾತನೆಯನ್ನು ನಾನು ಎಂದಿಗೂ ಮರೆಯುವಂತಿಲ್ಲ." ಎಂದು ತುಂಬಿ ಬಂದ ಕಣ್ಣುಗಳನ್ನು ಸೆರಗಿನಿಂದ ಒತ್ತಿಕೊಂಡರು.
ರಾಜೀವನಿಗೆ ವಿಷಯ ತಲುಪಿತ್ತು. ಗೆಳೆಯರೊಬ್ಬರ ಮೂಲಕ ತಾಯಿಯ ದೇಹಾಂತ್ಯದ ಸುದ್ದಿ ತಿಳಿದ ಇಡೀ ದಿನ ಹುಚ್ಚನಂತೆ ಆಗಿ ಹೋಗಿದ್ದ. ವಾಪಸ್ಸು ಊರಿಗೆ ಹೋಗಲೇ ಎಂಬ ಅನಿಸಿಕೆ ಮೂಡಿದರೂ ತಾಯಿಯೇ ಇಲ್ಲದ ಆ ಮನೆಗೆ ಹೋಗಿ ತಾನು ಮಾಡಬೇಕಾದುದಾರೂ ಏನು? ಮತ್ತೆ ಅಪ್ಪನ ದರ್ಪ, ವ್ಯಂಗ್ಯ, ಅಹಂಕಾರ ತುಂಬಿದ ಮಾತಿಗೆ ಬಲಿಯಾಗುವುದರ ಹೊರತಾಗಿ ಮತ್ತಾವ ಫಲವೂ ಇಲ್ಲ ಎಂದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಸುಮ್ಮನಾಗಿಬಿಟ್ಟಿದ್ದ! ಈಗನಿಸಿತು ರಾಜೀವನಿಗೆ - ತಪ್ಪು ಮಾಡಿದೆ, ಬರಬೇಕಿತ್ತು, ಆಗ ನಾನು ಬರಬೇಕಿತ್ತು. ಇಲ್ಲೇ ಎಲ್ಲೋ ಅಲೆಯುತ್ತಿದ್ದ ತಾಯಿಯ ಆತ್ಮಕ್ಕೆ ಶಾಂತಿ ದೊರಕುತ್ತಿತ್ತೇನೋ ಎಂದು. ಕೂಡಲೇ ನಗುವು ಬಂತು. ಇದ್ದಾಗ ಸಿಗದ ಶಾಂತಿ, ಸಮಾಧಾನ ಸತ್ತ ಮೇಲೆ ಸಿಗುವುದಾದರೂ ಹೇಗೆ ಅನ್ನಿಸಿತು? ರಾಜೀವ ಎಲ್ಲಾ ನಂಬಿಕೆಗಳಿಂದ ಕಳಚಿಕೊಂಡು ಬಹು ದಿನಗಳೇ ಆಗಿಹೋಗಿತ್ತು.
ರಾಜೀವ ಮಾತಿಲ್ಲದೇ ಯೋಚನೆಗಳ ಹುತ್ತದಲ್ಲಿ ಸೇರಿಹೋಗಿದ್ದು ಕಂಡು ಮೀರಾನೇ-``ನಿನ್ನ ವಿಷಯ ಹೇಳು? ಏನು ಮಾಡಿಕೊಂಡಿದ್ದೀಯ? ಮಕ್ಕಳೆಷ್ಟು? ನಿನ್ನ ಹೆಂಡತಿಯನ್ನು ಯಾಕೆ ಕರೆದುಕೊಂಡು ಬರಲಿಲ್ಲ?" ರಾಜೀವ ಉತ್ತರಿಸುವ ಗೋಜಿಗೆ ಹೋಗದೆ ವಿಷಾದದಿಂದ ನಕ್ಕ. ಅವನಿಗೆ ಮಾತಾಡುವ ಮನಸ್ಸಿಲ್ಲದ್ದು ಕಂಡು ಮೀರಾ ತಾವೇ ಇಲ್ಲಿಯ ವಿದ್ಯಮಾನಗಳನ್ನು ಅರುಹತೊಡಗಿದರು.
``ನೀನು ಹೋದ ಮೇಲೆ ಅತ್ತೆಗೆ ನಿನ್ನದೇ ಕೊರಗಾಗಿ ಹೋಯಿತು. ಮೊದಲೇ ಇಳಿ ವಯಸ್ಸಿನಿಂದ ಸೋತಿದ್ದ ಅವರಿಗೆ ನೀನಿಲ್ಲದೆ ಬಹು ದೊಡ್ಡ ಆಘಾತ ಉಂಟುಮಾಡಿತು. ಯೋಚನೆಗಳು ಹೆಚ್ಚಾದಂತೆ ಅವರ ಮನಸ್ಸಿನ ಸಮತೋಲನವೇ ತಪ್ಪಿಹೋಯಿತು ನೋಡು. ಕೂತರೇ ಕೂತೇ ಬಿಟ್ಟರು, ನಿಂತರೇ ನಿಂತೇ ಬಿಟ್ಟರು. ಊಟ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ನಿನ್ನ ವಯಸ್ಸಿನ ಯಾವ ಹುಡುಗರನ್ನು ಕಂಡರೂ ಸರಿ, ರಾಜೂ ಅಂತ ಓಡಿ ಹೋಗಿ ತಬ್ಬಿಕೊಂಡು ಬಿಡುತ್ತಿದ್ದರು. ಮಾವನವರಂತೂ ಅವರನ್ನು ಹಿಡಿಯುವುದರಲ್ಲಿ ಹಣ್ಣಾಗಿ ಹೋಗುತ್ತಿದ್ದರು. ಅವರ ಉಪಟಳ ತುಂಬಾ ಹೆಚ್ಚಾಗಿದ್ದರೂ ತಮ್ಮ ಕಣ್ಣಿಗಿಂತ ಹೆಚ್ಚಾಗಿ ಅವರನ್ನು ಕಾಪಾಡಿದರು. ಎರಡು ವರುಷಗಳ ಕೆಳಗೆ ಅತ್ತೆ ತೀರಿಕೊಂಡ ಮೇಲೆ ನಿಮ್ಮ ತಂದೆ ಪೂರ್ತಿ ಕುಸಿದು ಹೋದರು. ಒಂದು ದುರ್ದಿನ ಇದ್ದಕ್ಕಿದ್ದಂತೆ ಅವರಿಗೆ ಪಾರ್ಶ್ವವಾಯು ಬಡಿದು, ಅವರ ಇಡೀ ದೇಹದ ಸ್ವಾಧೀನವೇ ತಪ್ಪಿಹೋಯಿತು. ಎಲ್ಲಾ ಹಾಸಿಗೆಯ ಮೇಲೇ ಆಗಬೇಕು. ಮಗನನ್ನು ನಾನೇ ದೂರ ಮಾಡಿಕೊಂಡೆ ಎಂದು ಸುಮ್ಮನೆ ಕಣ್ಣೀರು ಸುರಿಸುತ್ತಾರೆ. ಈಗ ನಿನ್ನನ್ನು ನೋಡಿ ಅವರ ಜೀವಕ್ಕೆ ಹಾಯೆನಿಸಬಹುದು. ಈಗ ತಾನೇ ಚೂರು ಹಣ್ಣಿನ ರಸ ಕುಡಿದು ಮಲಗಿದ್ದಾರೆ. ಎದ್ದ ಮೇಲೆ ಹೋಗಿ ನೋಡುವೆಯಂತೆ."
ಅತ್ತಿಗೆಯ ಮಾತುಗಳನ್ನು ಕೇಳುತ್ತಾ ಇದ್ದಂತೆ ರಾಜೀವ ಒಂದು ಕೆಟ್ಟ ಸಂಕಟವನ್ನು ಅನುಭವಿಸುತ್ತಿದ್ದ. ಬದುಕಿನ ಆಗಾಧವಾದ ಪಯಣದಲ್ಲಿ ಕೇವಲ ಎಂಟೇ ವರ್ಷದ ಅವಧಿಯಲ್ಲಿ ಇಷ್ಟೆಲ್ಲಾ ಘಟಿಸಿಹೋಯಿತೇ? ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ತಾಯಿಯ ಸಾವಿಗೆ ನಾನೇ ಕಾರಣನಾದೆನಲ್ಲಾ ಎಂಬ ನೋವು ಅವನ ಕಣ್ಣಂಚಿನಲ್ಲಿ ನೀರಿನ ರೂಪದಲ್ಲಿ ಮಿಂಚುತ್ತಿತ್ತು. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ನಿರ್ಭಾಗ್ಯನಂತೆ ಕುಳಿತಿದ್ದ ಅವನನ್ನು ಕಂಡು ಮೀರಾಗೆ ಮರುಕ ಉಕ್ಕಿ ಬಂದಿತು.
``ನೋಡಿಲ್ಲಿ ರಾಜೂ, ನಡೆದಿದ್ದಕ್ಕೆಲ್ಲಾ ನೀನೇ ಕಾರಣ ಎಂದುಕೊಂಡು ಕಂಬನಿಗರೆಯಬೇಡ. ಏನಾಗಬೇಕೆಂದಿತ್ತೋ ಅದು ಆಯಿತು ಅಷ್ಟೆ. ಅದಕ್ಕೆಲ್ಲಾ ನೀನು ಕಾರಣ ಹೇಗಾಗುತ್ತೀಯಾ ಹೇಳು? ನಿಮಿತ್ತ ಅಂದುಕೊ ಬೇಕಾದರೆ. ಇಷ್ಟೆಲ್ಲಾ ದುರಂತಗಳು ನಮ್ಮ ಮನೆಯಲ್ಲಿ ನಡೆಯಬಾರದಿತ್ತು. ಏನು ಮಾಡೋಕಾಗತ್ತೆ? ಎಲ್ಲಾ ವಿಧಿಲಿಖಿತ!."ಹಿಂದಾದರೆ ಇಂತಹ ಮಾತುಗಳಿಗೆ ರಾಜೀವ ಗೊಡ್ಡು ವೇದಾಂತ ಎಂದು ನಕ್ಕು ಬಿಡುತ್ತಿದ್ದ. ಕೆಲವು ಸಲ ಇಂತಹ ಮಾತುಗಳಿಂದಲೂ ಗಾಯಗೊಂಡ ಮನಸ್ಸಿಗೆ ಸಾಂತ್ವನ ಸಿಗುವುದು ಸುಳ್ಳಲ್ಲ ಅನ್ನಿಸಿತು.
``ರಾಜೀವ ನಿನ್ನ ಕಥೆಯೇನೋ? ನೆಮ್ಮದಿಯಿಂದ ಇದೆ ತಾನೇ ನಿನ್ನ ಜೀವನದಲ್ಲಿ?"ಮೀರಾ ಮತ್ತೆ ಒತ್ತಾಯಿಸಿದರು.ರಾಜೀವನಿಗೆ ಬೇರೆ ದಾರಿಯೇ ಇಲ್ಲ. ಅತ್ತಿಗೆಯ ಒತ್ತಾಯಕ್ಕೆ ಅವನು ತಲೆಬಾಗಲೇ ಬೇಕಾಗಿತ್ತು. ಇವರಿಂದ ತನ್ನ ಬದುಕಿನ ಕರ್ಮಕಥೆಯನ್ನು ಮುಚ್ಚಿಡುವುದು ಸಾದ್ಯವೇ ಇಲ್ಲ ಅನ್ನಿಸಿತು. ಬಣ್ಣಗೆಟ್ಟ ತನ್ನ ಬಾಳಿನ ಬಣ್ಣನೆಯನ್ನು ಎಲ್ಲಿಂದ ಪ್ರಾರಂಭಿಸಲಿ? ಎಂದು ಪದಗಳಿಗೆ ತಡಕುತ್ತಿರುವಂತೆಯೇ-
``ಮೀರಾ..............."ಎಂಬ ನರಳಿಕೆಯ ದನಿ ಒಳಕೋಣೆಯಿಂದ ಕೇಳಿ ಬಂದಿತು. ತನ್ನ ಅಪ್ಪನ ದನಿಯೇ ಇದು ಯಾವಾಗಲೂ ಎಲ್ಲರನ್ನು ನಡುಗಿಸುತ್ತಿದ್ದ ಆ ಗಡುಸಾದ ಕಂಠವೆಲ್ಲಿ? ಈ ನೋವಿನ ಮುದ್ದೆಯಾದ ಗೊರಗು ದನಿಯೆಲ್ಲಿ?
``ಮಾವನವರು ಎಚ್ಚರವಾಗಿದ್ದಾರೆ ಬಾ. ನಿನ್ನನ್ನು ನೋಡಿದರೆ ಅವರ ಜೀವಕ್ಕೆ ಎಷ್ಟೋ ಸುಖವಾಗುತ್ತದೆ."ಮುನ್ನಡೆದ ಅತ್ತಿಗೆಯನ್ನು ಹಿಂಬಾಲಿಸಿದ ರಾಜೀವ. ಈ ಮನೆ ಅವನಿಗೆ ಅಪರಿಚಿತವೇನಲ್ಲವಲ್ಲ? ಕೋಣೆಯ ಕತ್ತಲಿಗೆ ಹೊಂದಿಕೊಂಡ ಮೇಲೆಯೇ ಅವನಿಗೆ ಮಂಚದ ಮೇಲೆ ಮುದುರಿ ಮಲಗಿದ್ದ ಆಕೃತಿ ಕಾಣಿಸಿದ್ದು.
ತನ್ನ ತಂದೆಯೇ ಇದು? ಅಡಿಯಿಂದ ಮುಡಿಯವರೆಗೂ ದರ್ಪ, ದಬ್ಬಾಳಿಕೆ, ಮುಂಗೋಪಗಳನ್ನು ತುಂಬಿಕೊಂಡ ಆ ಆಜಾನುಬಾಹು ವ್ಯಕ್ತಿತ್ವ ದೈನ್ಯ, ಅಸಹಾಯಕತೆಗಳೇ ಮೈವೆತ್ತಂತೆ ರೂಪಾಂತರಗೊಂಡಿರುವುದು ಮಲಗಿರುವುದು ನಿಜವೇ, ಭ್ರಮೆಯೇ? ಲೋಕದೆಲ್ಲಾ ವೈಭೋಗಗಳು ಕ್ಷಣದಲ್ಲಿ ಗಾಳಿಗುಳ್ಳೆಯಂತೆ ಕರಗಿ ಕೊನೆಗುಳಿಯುವ ಸಾವೊಂದೇ ಶಾಶ್ವತ ಸತ್ಯವೇನೋ? ಅನ್ನಿಸಿಬಿಟ್ಟಿತು ರಾಜೀವನಿಗೆ.
ಅತ್ತಿಗೆ ಮಲಗಿದ್ದ ತಂದೆಯ ಮುಖದ ಹತ್ತಿರ ಬಾಗಿ ಜೋರಾಗಿ ಕೂಗಿ ಹೇಳಿದರು-``ಮಾವಾ, ನಿಮ್ಮ ಮಗ ರಾಜೀವ ಬಂದಿದ್ದಾನೆ, ದಿನಾ ಹಲುಬುತ್ತಿದ್ದಿರಲ್ಲಾ, ನೋಡಿ ಇಲ್ಲಿ."ರಾಜೀವ ತಂದೆಯ ಸನಿಹ ಹೋಗಿ ಕುಳಿತು ಅವರ ಹತ್ತಿಯಂತೆ ಕೃಶವಾಗಿ ಹೋಗಿದ್ದ ಕೈಗಳನ್ನು ಒತ್ತಿ ಹಿಡಿದುಕೊಂಡ.ಒಣಗಿ ಬರಡಾಗಿ ಹೋಗಿದ್ದ ಅಪ್ಪನ ಮುಖದಲ್ಲಿ ಮಿಂಚಿನ ಸೆಳಕೊಂದು ಕಂಡಂತಾಯಿತು.
``ಅಂತೂ ಬಂದೆಯಾ ರಾಜೂ, ಒಂದೆರಡು ವರ್ಷಗಳ ಮುಂಚೆಯಾದರೂ ಬರಬಾರದಿತ್ತೇನೋ? ನಿನ್ನ ತಾಯಿ ನೆಮ್ಮದಿಯಾಗಿ ತನ್ನ ಪ್ರಾಣ ಬಿಡುತ್ತಿದ್ದಳು. ಹೋಗಲಿ ಈಗಲಾದರೂ ಬಂದೆಯಲ್ಲಾ, ನನ್ನ ಜೀವಕ್ಕೆ ಸಮಾಧಾನವಾಯಿತು ಕಣೊ. ಇನ್ನು ನಾನು ನಿರಾಳವಾಗಿ ಪ್ರಾಣಬಿಡುತ್ತೇನೆ."
ಎಂದು ಅಪ್ಪ ಅಸ್ಪಷ್ಟವಾಗಿ ತೊದಲು, ತೊದಲಾಗಿ ಹೇಳುತ್ತಿದ್ದರೆ ಕಣ್ಣೀರು ಅವರ ದಿಂಬನ್ನು ತೋಯಿಸುತ್ತಿತ್ತು.ಇದೇ ತಂದೆಯ ಕೋಪ, ತಾಪಗಳಿಗೆ, ಸರ್ವಾದಿಕಾರೀ ಧೋರಣೆಯ ಉಗ್ರ ವೃಕ್ತಿತ್ವಕ್ಕೆ ರಾಜೀವ ಬೇಸತ್ತು ಹೋಗಿದ್ದ. ಪ್ರತಿಯೊಂದರಲ್ಲೂ ಕುಂದು ಹುಡುಕುತ್ತಿದ್ದರು. ಎಲ್ಲರನ್ನೂ ಆಕ್ಷೇಪಿಸುತ್ತಾ ಕ್ರೂರವಾಗಿ ನೋಯಿಸುವುದು ಅವರ ಸ್ವಭಾವ. ಅವರನ್ನು ಸಂತೋಷಪಡಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಇಷ್ಟದಂತೆಯೇ ನಡೆಯಬೇಕೆಂಬುದು ಅವರ ಹಟ. ಯಾರಾದರೂ ಅವರ ಮಾತು ಮೀರಿ ತಮ್ಮ ಸ್ವಂತಿಕೆ ತೋರಲು ಯತ್ನಿಸಿದರೆ ಅವತ್ತಿಡೀ ದಿನ ಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಗುಡುಗು, ಸಿಡಿಲು, ರಂಪ, ರಾಧ್ಧಾಂತವಾಗಿಹೋಗುತ್ತಿತ್ತು. ಗಂಡ ಈ ಗುಣದಿಂದಾಗಿ ರಾಜೀವನ ತಾಯಿಗೆ ಮನೆಯೇ ನರಕಪ್ರಾಯವಾಗಿ ಹೋಗಿತ್ತು. ಆದರೆ ಅವರು ಎಂದು ಯಾರ ಮುಂದೆಯೂ ತಮ್ಮ ವೇದನೆಯನ್ನು ತೋರಗೊಡುತ್ತಿರಲಿಲ್ಲ.ಅಪ್ಪನ ಈ ಅದಿಕಾರಶಾಹೀ ಮನೋಭಾವದ ವಿರುದ್ಧ ಮೊದಲಬಾರಿಗೆ ಸಿಡಿದು ನಿಂತಿದ್ದ ರಾಜೀವ.
ಅಪ್ಪ ನೋಡಿದ್ದ ಹೆಣ್ಣನ್ನು ನಿರಾಕರಿಸಿ ತಾನು ಪ್ರೀತಿಸಿದ್ದ ಸಹೋದ್ಯೋಗಿ ವಿಮಲಾಳನ್ನು ಮದುವೆಯಾಗುವೆನೆಂದು ನುಡಿದಾಗ ಮನೆಯಲ್ಲಿ ಅಗ್ನಿಪರ್ವತವೇ ಸ್ಫೋಟಿಸಿತ್ತು.ರಾಜೀವ ತಂದೆಯನ್ನು ಪ್ರತಿಭಟಿಸಿ ನಿಂತಿದ್ದ. ತಾಯಿಯ ಗೋಗರೆತ, ಅಣ್ಣನ, ಅತ್ತಿಗೆಯರ ಉಪದೇಶ ಯಾವುದೂ ಅವನ ಕಿವಿಗೆ ಹೋಗಿರಲಿಲ್ಲ.
ರಾಜೀವನ ತಂದೆ ತಮ್ಮ ಮಾಮೂಲಿನ ಧೃಡವಾದ ನಿಶ್ಚಲವಾದ ಸ್ವರದಲ್ಲಿ ಹೇಳಿಬಿಟ್ಟಿದ್ದರು-``ಈ ಪ್ರೀತಿ, ಗೀತಿ ಎಲ್ಲಾ ನಮ್ಮ ಮನೆಯಲ್ಲಿ ನಡೆಯುವುದಿಲ್ಲ, ಯಾವುದೋ ಕಂಡು ಕೇಳದ ಹುಡುಗಿ ಈ ಮನೆಯ ಸೊಸೆಯಾಗಿ ಬರೋದನ್ನು ನಾನು ಒಪ್ಪೋದಿಲ್ಲ. ಇದು ನನ್ನ ಮನೆ. ಇಲ್ಲಿ ನನ್ನ ಇಷ್ಟಕ್ಕೆ ವಿರೋಧವಾಗಿ ನಡೆಯುವವರಿಗೆ ಜಾಗವಿಲ್ಲ. ನಿನ್ನ ದಾರಿ ನೀನು ನೋಡಿಕೊಳ್ಳಬಹುದು."
ರಾಜೀವನೂ ಅದೇ ತಂದೆಯ ಮಗನಲ್ಲವೇ? ಛಲದಲ್ಲಿ ಅವನೂ ಎನೂ ಕಡಿಮೆಯಿರಲಿಲ್ಲ. ಅಪ್ಪ ಹಾಗಂದಿದ್ದೇ ತಡ ಹೊರಟು ನಿಂತೇಬಿಟ್ಟಿದ್ದ. ತಾಯಿಯ ಅಳು, ಗೋಳಾಟ ಅಪ್ಪ, ಮಗ ಇಬ್ಬರನ್ನೂ ತಮ್ಮ ತಮ್ಮ ನಿರ್ಧಾರದಿಂದ ಹಿಂತೆಗೆಯುವಂತೆ ಮಾಡುವುದರಲ್ಲಿ ಯಶಸ್ವಿಯಾಗಿರಲಿಲ್ಲ.
ಹೊರಟು ನಿಂತಿದ್ದ ರಾಜೀವನಿಗೆ ತಂದೆ ಕೂಗಿ ಹೇಳಿದ್ದರು-``ಇವತ್ತಿಗೆ ನಿನಗೆ ಈ ಮನೆಯ ಋಣ ತೀರಿಹೋಯಿತು ಎಂದು ತಿಳಿದುಕೊ. ನೀನು ಇನ್ನು ಯಾವುದೇ ಕಾರಣಕ್ಕೆ ಈ ಮನೆಗೆ ಬರುವ ಅಗತ್ಯವಿಲ್ಲ. ಈ ಮಾತು ನನ್ನ ಅಥವಾ ನಿನ್ನ ತಾಯಿಯ ಸಾವಿಗೂ ಅನ್ವಯಿಸುತ್ತದೆ."ರಾಜೀವ ತಾಯಿಗೆ ಕಡೆಯ ಬಾರಿಗೆ ನಮಸ್ಕರಿಸಿ ತಂದೆಯ ಕಡೆಗೆ ತಿರಸ್ಕಾರದಿಂದೊಮ್ಮೆ ನೋಡಿ ಮನೆಯಿಂದ ಹೊರಟು ಬಂದಿದ್ದ. ಅವನ ಮುಂದೆ ಇಡೀ ಬದುಕು ಉದ್ದವಾಗಿ ಹಾಸಿಕೊಂಡು ನಿಂತಿತ್ತು. ತನ್ನ ಪ್ರೀತಿಯ ವಿಮಲಾಳೊಡನೆ ಮುಂಬಯಿ ಸೇರಿದ್ದ. ಮನೆಯವರೊಡನೆ ಸಂಬಂಧವನ್ನು , ಸಂಪರ್ಕವನ್ನು ಪೂರ್ತಿಯಾಗಿ ಕಡಿದುಕೊಂಡಿದ್ದ.
ಮುಂಬಯಿಯಲ್ಲಿ ವಿಮಲಾಳ ದೂರದ ಸಂಬಂಧಿ ಸುರೇಶ ಇವರಿಗಾಗಿ ಮನೆಯನ್ನು ಹುಡುಕುವುದರಿಂದ ಹಿಡಿದು ಪ್ರತಿಯೊಂದಕ್ಕೂ ಸಹಾಯ ಮಾಡಿದ್ದ. ಅವನ ನೆರವಿನಿಂದಲೇ ವಿಮಲಾ, ರಾಜೀವ ಸರಳವಾಗಿ ವಿವಾಹವಾಗಿ ಸಂಸಾರ ಹೂಡಿದ್ದರು. ವಿಮಲಾ ತನ್ನ ಸಂಗಾತಿಯಾದ ಮೇಲೆ ರಾಜೀವನಿಗೆ ಈ ಪ್ರಪಂಚದಲ್ಲೇ ತನಗಿಂತ ಸುಖಿ ಬೇರೆ ಯಾರಿಲ್ಲ ಅನ್ನಿಸಿಬಿಟ್ಟಿತ್ತು. ಬಿಟ್ಟು ಬಂದ ಮನೆಯ, ತಾಯಿಯ ನೆನಪು ಆಗಾಗ ಕಾಡುತ್ತಿದ್ದರೂ ವಿಮಲಾ ತನ್ನ ಸೌಂದರ್ಯ, ಸಾಂಗತ್ಯದಿಂದ ಎಲ್ಲವನ್ನೂ ಮರೆಯಿಸಿಬಿಟ್ಟಿದ್ದಳು.
ಮದುವೆಯಾದ ಮೇಲೆಯೂ ವಿಮಲಾ ಕೆಲಸಕ್ಕೆ ಹೋಗುತ್ತಿದ್ದರಿಂದ ರಾಜೀವನಿಗೆ ಹಣಕಾಸಿನ ತೊಂದರೆ ಕಿಂಚಿತ್ತೂ ಇರಲಿಲ್ಲ. ಒಮ್ಮೊಮ್ಮೆ ಎಲ್ಲರನ್ನೂ ಬಿಟ್ಟು ಬಂದು ತಪ್ಪು ಮಾಡಿದೆನೇನೋ ಎಂಬ ಅಳುಕು ಹಣಿಕಿ ಹಾಕಿದರೂ ವಿಮಳಾಳ ಸಹವಾಸ ಆ ಕೊರಗನ್ನೂ ಹುಟ್ಟಿದಲ್ಲೇ ಹೊಸಕಿ ಹಾಕಿಬಿಡುತ್ತಿತ್ತು. ಅಪ್ಪ ತಮ್ಮಿಬ್ಬರ ಮದುವೆಗೆ ಅನುಮತಿ ನೀಡಿದ್ದರೆ ತಾನ್ಯಾಕೆ ಎಲ್ಲರನ್ನು ಬಿಟ್ಟು ಬರುತ್ತಿದ್ದೆ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದ.ರಾಜೀವನ ಹೊಸ ಬದುಕು ಸುಖಮಯವಾಗಿ, ನಿರಾತಂಕವಾಗಿ ಸಾಗುತ್ತಿತ್ತು. ವಿಮಲಾ ಅವನ ಸರ್ವಸ್ವವಾಗಿ ಹೋಗಿದ್ದಳು. ತನ್ನ ಬದುಕಿನ ಸಮಸ್ತ ಸೂತ್ರಗಳನ್ನು ಅವಳ ಕೈಗೊಪ್ಪಿಸಿ, ತಾನು ಕೇವಲ ಗಾಳಿಪಟವಾಗಿ ಕನಸಿನ ಲೋಕದಲ್ಲಿ ಹಾರುತ್ತಿದ್ದ. ಆದರೆ ಅವನ ಸಂತೋಷ, ನೆಮ್ಮದಿ ಶಾಶ್ವತವಾಗಿರಲಿಲ್ಲ. ನಿಜವೆಂದುಕೊಂಡಿದ್ದು ಬರೀ ನೆರಳಾಗಿ ಹೋಗಿತ್ತು. ನಿರಂತರವೆಂದು ನೆಚ್ಚಿಕೊಂಡಿದ್ದ ಸುಖ ಸೋಪಿನ ನೊರೆಯಂತೆ ಕಣ್ಣೆದುರೇ ಕರಗಿ ಹೋಗಿತ್ತು. ರಾಜೀವ ಗಾಢವಾಗಿ ಪ್ರೀತಿಸಿದ್ದ, ಆತ್ಮ ಸಂಗಾತಿಯೆಂದು ನಂಬಿದ್ದ ವಿಮಲಾ ಅವನನ್ನು ಘೋರವಾಗಿ ವಂಚಿಸಿದ್ದಳು.ಒಂದು ದಿನ ಆಫೀಸಿನಿಂದ ಮುಂಚಿತವಾಗಿ ಬಂದವನು ತನ್ನಲ್ಲಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಗೆ ಪ್ರವೇಶಿಸಿದ. ಮುಂಭಾಗದಲ್ಲಿ ನಿಂತಿದ್ದ ಸುರೇಶನ ಕಪ್ಪು ಹೀರೋ ಹೊಂಡಾ ರಾಜೀವನಲ್ಲಿ ಆಶ್ಚರ್ಯ ಮೂಡಿಸಿತ್ತೇ ಹೊರತು ಖಂಡಿತವಾಗಿ ಅನುಮಾನವನಲ್ಲ. ಆದರೆ ಇವನಿಗಾಗಿ ಅಲ್ಲಿ ಕರಾಳವಾದ ಸತ್ಯವೊಂದು ಬಾಯ್ತೆರೆದು ಕಾದು ಕುಳಿತಿತ್ತು. ರಾಜೀವ ಯಾರಿಗಾಗಿ ತನ್ನ ಜೀವನವನ್ನೇ ಧಾರೆಯೆರೆಯಲು ಸಿದ್ಧನಿದ್ದನೋ, ಯಾರಿಗಾಗಿ ತನ್ನ ಬದುಕನ್ನೇ ಬಗೆದು ಹಂಚಿಕೊಟ್ಟಿದ್ದನೋ ಅದೇ ವಿಮಲಾ ತನ್ನ ಸಂಬಂಧಿ ಸುರೇಶನೋಡನೆ ಯಃಕಶ್ಚಿತ್ ತನ್ನ ದೇಹವನ್ನು ಹಂಚಿಕೊಳ್ಳುತ್ತಿದ್ದಳು.
ಇಷ್ಟೇ ನಡೆದಿದ್ದು. ರಾಜೀವ ವಿಮಲಾಗಾಗಲೀ, ಸುರೇಶನಿಗಾಗಲೀ ಏನೂ ಹೇಳಲಿಲ್ಲ. ಅವರ ಮೇಲೆ ಕೂಗಾಡಲಿಲ್ಲ. ಜಗಳವಾಡಲಿಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು ತಿಳಿದವನಂತೆ ಸುಮ್ಮನಾಗಿಬಿಟ್ಟಿದ್ದ. ಹತಾಶನಂತೆ ತನ್ನ ಕೋಣೆ ಸೇರಿ, ಬಾಗಿಲು ಹಾಕಿಕೊಂಡು ಮಲಗಿಬಿಟ್ಟಿದ್ದ. ಕಾದು ಕಾವಲಿಯಾದ ಮನಸ್ಸು, ಹೃದಯ. ಅವನಿಗೆ ನಿದ್ದೆ ಹತ್ತಿದಾಗ ಮಧ್ಯರಾತ್ರಿ ಮೀರಿತ್ತು.
ಮರುದಿನ ರಾಜೀವ ಎದ್ದಾಗ ತುಂಬಾ ತಡವಾಗಿ ಹೋಗಿತ್ತು. ಮನೆ ಖಾಲಿ ಖಾಲಿಯಾಗಿತ್ತು. ವಿಮಲಾ ಮನೆಯಲ್ಲಿರಲಿಲ್ಲ. ಅವಳಿಗೆ ಸಂಬಂಧಿಸಿದ ವಸ್ತುಗಳೊಂದೂ ಮನೆಯಲ್ಲಿರಲಿಲ್ಲ. ವಿಮಲಾ ಎಲ್ಲಿ ಹೋಗಿರಬಹುದೋ ಎಂದು ರಾಜೀವನಿಗೆ ಆತಂಕವಾಗಿತ್ತು. ಆದರೆ ಮುಂದೆ ವಿಮಲಾ, ಸುರೇಶ ಜೊತೆ ಜೊತೆಯಾಗಿ ಕಾಣಿಸತೊಡಗಿದಾಗ ಇವನ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು.
ರಾಜೀವನಿಗೆ ತುಂಬಾ ನೋವಾಗಿತ್ತು. ವಿಮಲಾಳ ವರ್ತನೆ ಅವನಿಗೆ ಭರಿಸಲಾಗದ ಆಘಾತ ಉಂಟುಮಾಡಿತ್ತು. ತಾನು ತಪ್ಪಿದ್ದೆಲ್ಲಿ? ಎಂದು ಅವನಿಗೆ ತಿಳಿಯದಾಯಿತು. ಅವನು ಮರು ಮದುವೆಯ ಯೋಚನೆಯನ್ನೂ ಮಾಡಲಿಲ್ಲ. ನೋವಿನ ಗೆಡ್ಡೆಯೊಂದನ್ನು ಎದೆಯಲ್ಲಿ ಬೆಳೆಸಿಕೊಳ್ಳುತ್ತಾ ಒಂಟಿಯಾಗಿ ಇದ್ದುಬಿಟ್ಟ. ಆಸೆಯಿಂದ ಆರಿಸಿಕೊಂಡ ಪ್ರೀತಿಯ ದಾರಿ ಅವನನ್ನು ಬೆಂಗಾಡಿನ ನಡುವೆ ತಂದು ನಿಲ್ಲಿಸಿಬಿಟ್ಟಿತ್ತು. ಅವನಿಗೆ ಜೀವನದ ಮೇಲಿನ ನಂಬಿಕೆಯೇ ಕಳೆದು ಹೋಗಿತ್ತು. ದಿನೇ ದಿನೇ ಅವನು ಬದುಕಿಗೆ ವಿಮುಖನಾಗತೊಡಗಿದ್ದ. ಯಾವಾಗದರೊಮ್ಮೆ ಊರಿಗೆ ಹಿಂತಿರುಗುವ ಯೋಚನೆ ಮನಸ್ಸಿನಲ್ಲಿ ಮೂಡಿದರೂ, ತನ್ನ ಪರಾಜಿತ ಮುಖವನ್ನು ತಂದೆಯೆದುರು ಪ್ರದರ್ಶಿಸಿ, ಅವರ ಹೆಮ್ಮೆಯನ್ನು ಮತ್ತಷ್ಟು ಬೆಳೆಸುವುದು ಅವನಿಗೆ ಇಷ್ಟವಾಗದೆ ಸುಮ್ಮನಾಗಿಬಿಟ್ಟಿದ್ದ.
ದಿನಗಳು ಸರಿದಂತೆ ಹಳೆಯ ರೋಷ, ದ್ವೇಷಗಳು ತಮ್ಮ ಬಿಗುವನ್ನು ಕಳೆದುಕೊಂಡಂತೆ ಊರಿಗೊಮ್ಮೆ ಹೋಗಿ ಬರುವ ನಿರ್ಧಾರಮಾಡಿ, ಅಂತೆಯೇ ಈಗ ಬಂದು ತಂದೆಯೆದುರು ಕೂತಿದ್ದ.
ಗತ ನೆನಪುಗಳ ಗೋರಿಯಲ್ಲಿ ಮುಳುಗಿದ್ದವನ್ನು ತಂದೆಯ ಮಾತು ಮೇಲಕ್ಕೆಳೆದು ತಂದಿತು-``ಆಗಿದ್ದಾಯಿತು ಕಣೊ ರಾಜೂ. ನಾನು ಈಗಾಗಲೇ ಜೀವನದಲ್ಲಿ ಬೇಕಾದಷ್ಟು ಪಾಠ ಕಲಿತುಬಿಟ್ಟಿದ್ದೀನಿ. ನನ್ನ ನಿಷ್ಟುರ ಸ್ವಭಾವಕ್ಕೆ, ಹಟಮಾರಿತನಕ್ಕೆ ಈಗಾಗಲೇ ದಂಡವನ್ನೂ ತೆತ್ತಿದ್ದೀನಿ. ನಿನ್ನ ಬಗ್ಗೆ ತಿಳಿಯಲು ತುಂಬಾ ಪ್ರಯತ್ನಪಟ್ಟೆ. ಆದರೆ ನೀನು ಬೇಕೆಂದೇ ನಮ್ಮಿಂದ ದೂರವಾಗಿಬಿಟ್ಟಿದ್ದೆ. ನಿನ್ನ ಗೆಳೆಯರಿಂದ ಪಡೆದ ನಿನ್ನ ವಿಳಾಸಕ್ಕೆ ಬರೆದ ಪತ್ರಗಳೆಲ್ಲಾ ಹಿಂತಿರುಗಿ ಬಂದವು. ನಿನ್ನ ಹೆಂಡತಿ, ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಿಡು. ನನ್ನ ಕೊನೆಗಾಲವನ್ನಾದರೂ ನಿಮ್ಮನ್ನೆಲ್ಲಾ ನೋಡಿಕೊಂಡು ನೆಮ್ಮದಿಯಾಗಿ ಕಳೆಯುತ್ತೇನೆ. ಇದೊಂದಕ್ಕೆ ಅವಕಾಶ ಮಾಡಿಕೊಡೊ."
ತಂದೆ ಅವನ ಕೈ ಹಿಡಿದು ಅಂಗಲಾಚುತ್ತಿದ್ದರು.ರಾಜೀವನ ಕಾಂತಿ ಕಳೆದುಕೊಂಡ ಕೆನ್ನೆಗಳಲ್ಲಿ ಕ್ಷಿಣವಾದ ನಗುವೊಂದು ಮಿಂಚಿ ಮರೆಯಾಯಿತು. ಬದುಕಿನ ಕಟ್ಟ ಕಡೆಯ ಕ್ಷಣಗಳನ್ನು ಎದುರಿಸುತ್ತಿರುವ ಮುದಿ ತಂದೆಯ ಮುಂದೆ ತನ್ನ ಅಸ್ತವ್ಯಸ್ತ ಬದುಕನ್ನು ಬಿಚ್ಚಿಡುವುದರಲ್ಲಿ ಯಾವ ಅರ್ಥವೂ ಇಲ್ಲ ಅನ್ನಿಸಿತು. ಜೀವನ ಪರಿಯೇ ವಿಚಿತ್ರ. ಯಾವುದೋ ಮರೀಚಿಕೆಯ ಬೆಂಬೆತ್ತಿ, ಹುಟ್ಟಿ ಬೆಳೆದ, ಮನೆ, ಊರನ್ನು ಬಿಟ್ಟು ಅಪರಿಚಿತ ತಾಣದಲ್ಲಿ ನನ್ನ ಬೇರುಗಳನ್ನು ಹುಡುಕಿಕೊಂಡೆ. ಮಮತೆಯ ತಾಯಿಯ ಜೀವಕ್ಕೆ ಎರವಾದೆ. ಅಂದು ತಾವು ಸತ್ತಾಗ ಕೂಡ ಬರಬೇಡವೆಂದು ಕೂಗಾಡಿ ನೋಯಿಸಿದ್ದ ಅಪ್ಪ ಈಗ ಸೋಲೊಪ್ಪಿಕೊಂಡು ಮತ್ತೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಆದರೆ ನನ್ನ ಬಾಳುವೆಯ ಸೇತುವೆ ಸರಿಪಡಿಸದಂತೆ ಮುರಿದುಬಿದ್ದಿದೆ.
ರಾಜೀವ ಎದೆಯ ನೋವಿನ ತರಂಗಗಳನ್ನು ಅಡಗಿಸಿಕೊಳ್ಳುತ್ತಾ-``ಅಷ್ಟು ಸುಲಭವಾಗಿ ಒಮ್ಮೆಗೆ ಇಲ್ಲಿಗೆ ಬರೋದು ಸಾಧ್ಯವಿಲ್ಲಪ್ಪಾ. ಮುಂದೆ ನೋಡೋಣ. ನಾನು ಇನ್ನು ಮುಂದೆ ಆಗಾಗ ಬಂದು ನಿನ್ನನ್ನು ನೋಡಿಕೊಂಡು ಹೋಗ್ತಾಇರ್ತೀನಿ." ಎಂದು ತಂದೆಯನ್ನು ಸಮಾಧಾನಿಸಿದ. ಇವನ ಮಾತಿನಲ್ಲಿ ಅವರಿಗೆ ನಂಬಿಕೆ ಬಂದಂತೆ ದೃಷ್ಟಿ ಕಳೆದುಕೊಂಡು ಮಂಕಾಗಿದ್ದ ಕಣ್ಣುಗಳು ಹೊಳಪುಗೊಂಡವು.ಅಷ್ಟು ಹೊತ್ತಿಗೆ ಬಂದ ರಾಘವ. ಅಣ್ಣ ಹಾಗೇ ಇದ್ದಾನೆ. ಅವನು ಬದುಕನ್ನು ಸವಾಲಾಗಿ ಸ್ವೀಕರಿಸಿದವನಲ್ಲ. ಅದಕ್ಕೆದುರಾಗಿ ಸಡ್ಡು ಹೊಡೆದು ನಿಲ್ಲದೆ ಬಂದದ್ದನ್ನು ಬಂದಂತೆ ಒಪ್ಪಿಕೊಳ್ಳುತ್ತಾ ಬಂದವನು. ಅದಕ್ಕೇ ಇರಬೇಕು ವಯಸ್ಸೂ ಕೂಡ ಅವನ ಮೇಲೆ ಅಷ್ಟಾಗಿ ಪ್ರಭಾವ ಬೀರಿದಂತಿಲ್ಲ. ಅಣ್ಣನದು ತುಂಬಾ ಸಾತ್ವಿಕ ಸ್ವಭಾವ. ಅಪ್ಪನ ನಿರಂಕುಶಮತಿಯಿಂದಾಗಿ ಮುರುಟಿಕೊಂಡ ವ್ಯಕ್ತಿತ್ವ ಅವನದು.
ತಮ್ಮನನ್ನು ಕಂಡ ರಾಘವ ತುಂಬಾ ಸಂತೋಷಪಟ್ಟ. ಅವನನ್ನು ಆಲಂಗಿಸಿಕೊಂಡು ತನ್ನ ಖುಷಿ ವ್ಯಕ್ತಪಡಿಸಿದ. ತನ್ನ ಬದುಕು ಎಲ್ಲವನ್ನೂ ಪೂರ್ತಿಯಾಗಿ ಕಳೆದುಕೊಂಡು ಬರಿದಾಗಿಲ್ಲ, ಇನ್ನೂ ಅಲ್ಪ ಸ್ವಲ್ಪ ಮೆರುಗನ್ನು ಉಳಿಸಿಕೊಂಡಿದೆ ಅನ್ನಿಸಿತು ಅವನ ಅಕ್ಕರೆಯನ್ನು ನೋಡಿ ರಾಜೀವನಿಗೆ.
ಅಣ್ಣ, ಅತ್ತಿಗೆ, ಮಕ್ಕಳೊಡನೆ ನಗುತ್ತಾ, ಮಾತಾಡುತ್ತಾ ಬಹುದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ. ಸಂಜೆ ಮಕ್ಕಳು ವತ್ಸಲಾ, ಮೋಹನರನ್ನು ಕರೆದುಕೊಂಡು ಹೆಓಔಟ್ಹ;ಗಿ ಅವರು ಕೇಳಿದ್ದು, ತನಗೆ ತೋಚಿದ್ದನ್ನೆಲ್ಲಾ ಕೊಡಿಸಿ ಅವರ ನಗುವನ್ನು ಕಂಡು ಆನಂದಿಸಿದ. ಅಣ್ಣ, ಅತ್ತಿಗೆಯರ ವಾತ್ಸಲ್ಯದ ಪರಿಧಿಯಿಂದ ಹೊಸ ಚೈತನ್ಯವನ್ನು ಬಗೆದು ತನ್ನ ಬಾಳಿಗಷ್ಟು ಹನಿಸಿಕೊಂಡ. ರಾಜೀವನಿಗೆ ತನ್ನ ಖಾಸಗೀ ಬದುಕಿನ ಬಗ್ಗೆ ಹೇಳಿಕೊಳ್ಳುವುದು ಅಷ್ಟಾಗಿ ಇಷ್ಟವಿಲ್ಲದ್ದು ಕಂಡು ರಾಘವನಾಗಲೀ, ಮೀರಾಳಾಗಾಗಲೀ ಅವನನ್ನು ಕೆದಕಲು ಹೋಗಲಿಲ್ಲ. ರಾಜೀವನಿಗೆ ಅವರ ನಿರಾಸಕ್ತಿ ಹಾಯೆನಿಸಿತು. ಮುಂದೆ ಎಂದಾದರೂ ತಿಳಿದರೆ ತಿಳಿಯಲಿ. ಈಗಂತೂ ಸತ್ತ ಭೂತವನ್ನು ಮೇಲೆತ್ತುವುದು ಬೇಡ ಎಂಬುದು ಅವನ ಅಭಿಮತವಾಗಿತ್ತು.
ರಾಜೀವ ರಾತ್ರಿಯ ಬಸ್ಸಿಗೆ ಬೊಂಬಾಯಿಗೆ ಹೊರಟು ನಿಂತ. ರಾಘವ, ಮೀರಾಗೆ ಇಷ್ಟು ಬೇಗ ಅವನನ್ನು ಕಳಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ.
``ಇಷ್ಟು ವರ್ಷಗಳ ನಂತರ ಬಂದಿದೀಯ. ಇನ್ನು ಒಂದೆರಡು ದಿನ ಇದ್ದು ಹೋಗು. ಮತ್ತೆ ಯಾವಾಗೋ ನೀನು ಬರುವುದು?" ಎಂಬು ತುಂಬಾ ಒತ್ತಾಯಿಸಿದರು. ರಾಜೀವ ಅವರ ಕೋರಿಕೆಯನ್ನು ಕೆಲಸದ ನೆಪ ಹೇಳಿ ನಯವಾಗಿಯೇ ನಿರಾಕರಿಸಿದ.
``ನಾನು ಧಿಡೀರನೆ ಬಂದಿದ್ದರಿಂದ ಹೋಗಲೇಬೇಕಾಗಿದೆ. ಸಮಯ ಸಿಕ್ಕಾಗಲೆಲ್ಲಾ ಬರುತ್ತಾ ಇರುತ್ತೇನೆ." ಎಂದು ಅವರುಗಳ ಒಪ್ಪಿಗೆಯನ್ನು ಪಡೆದುಕೊಂಡ. ಆದರೆ ಮತ್ತೆ ಇಲ್ಲಿಗೆ ಬರುವ ಇರಾದೆಯೇನೂ ಅವನ ಮನಸ್ಸಿನಲ್ಲಿ ಇರಲಿಲ್ಲ. ಕಡೆಯ ಬಾರಿಗೆಂಬಂತೆ ತಂದೆಗೆ ನಮಸ್ಕರಿಸಿದ ರಾಜೀವ. ಅವರು ನಡುಗುತ್ತಿರುವ ಕೈಯೆತ್ತಿ ಅವನ ತಲೆಯನ್ನು ಮಮತೆಯಿಂದ ನೇವರಿಸಿದರು. ಮಾಡಿದ್ದ ಪಾಪಗಳಿಗೆ ಕ್ಷಮೆ ಪಡೆದುಕೊಂಡಂತಹ ನಿರಾಳವಾದ ಭಾವನೆ ಅವರ ಮುಖದ ಮೇಲೆ ನೆಲೆಸಿತ್ತು.
ಮಕ್ಕಳು ``ಹೋಗಬೇಡ ಚಿಕ್ಕಪ್ಪಾ" ಎಂದು ಅಂಗಲಾಚುತ್ತಿದ್ದವು. ಅವರನ್ನು ಎತ್ತಿಕೊಂಡು ಅಪ್ಪಿ ಮುದ್ದಿಸಿದ. ಅಣ್ಣ, ಅತ್ತಿಗೆಯರ ಕಡೆಗೊಮ್ಮೆ ಕೈಬೀಸುತ್ತಾ ತನ್ನ ಹನಿಗೂಡುತ್ತಿರುವ ಕಣ್ಣುಗಳನ್ನು ಎಲ್ಲರಿಂದ ಮರೆಮಾಚುತ್ತಾ ತಾನು ಹುಟ್ಟಿ ಬೆಳೆದ ಮನೆಗೆ ಬೆನ್ನು ತಿರುಗಿಸಿ ಹೊರನಡೆದ ರಾಜೀವ.

ಒಂದು ಆರ್ಡಿನರಿ ಲವ್‌ಸ್ಟೋರಿ

ಒಂದು ಆರ್ಡಿನರಿ ಲವ್‌ಸ್ಟೋರಿ

- ಬೇಳೂರು ಸುದರ್ಶನ



ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ .....

ಬೆಳಗಿನಿಂದ ಲಾಡ್ಜಿನಲ್ಲಿ ನಡೆದ ಎಲ್ಲ ಮಾತುಕತೆಯಲ್ಲೂ ಅವಳ ಅಳುವೇ ಮುಖ್ಯವಾಗಿ ಕೇಳಿಸುತ್ತಿತ್ತು ಎಂದು ನನ್ನ ಮಿತ್ರನೆಂಬೋ ಮನುಷ್ಯ ಹೇಳಿದ್ದ. ಇಲ್ಲಿ ಅವಳ ಕಣ್ಣುಗಳನ್ನು ನೋಡಿದ ಮೇಲೆ ಅವನ ಮಾತುಗಳನ್ನು ನಾನು ನಿಜವೆಂದೇ ತಿಳಿಬೇಕಿದೆ. ಮದುವೆಯಾಗಲು ಆತ ಒಪ್ಪಲಿಲ್ಲ ಎಂದು ಅವಳು ಮಾತೇ ಆಡದೆ ಸುಮ್ಮನೆ ಅಳುತ್ತ ಕೂತಿದ್ದಳಂತೆ. ಇಲ್ಲಿ ನೋಡಿದರೆ ನನ್ನ ಜತೆ ಬೆಂಗಳೂರಿಗೆ ಹೊರಟಿದ್ದಾಳೆ. ಅವಳನ್ನು ನನ್ನ ಜೊತೆ ಕಳಿಸುತ್ತಿರೋ ವ್ಯಕ್ತಿಗಳಿಗೆ ನನ್ನ ವಿಷಮನಸ್ಸು ಗೊತ್ತಿಲ್ಲ.

ಅವಳೀಗ ಅಲ್ಲಿಯೇ ಶಾಲು ಹಾಸಿ ಮಲಗಿದ್ದಾಳೆ. ಮೂರು ಸೀಟು ಹಾಗೂ ಇಂಜಿನ್ನಿನ ನಡುವೆ ನಾವು ಆರೇಳು ಗಂಟೆಗಳನ್ನು ಕಳೆಯಬೇಕು. ಅವಳು ಎಲ್ಲೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಅವಳನ್ನು ನಾನು ಮುಟ್ಟಬಹುದೆ ಎಂದು ಯಾರನ್ನೂ ಕೇಳಲಾಗಲಿಲ್ಲ. ಹೊರಗೆ ಕಂಡಕ್ಟರ್ ಸೀಟಿ ಊದಿದ್ದಾನೆ. ಮತ್ತೆ ಜನ ಎಲ್ಲಿಂದಲೋ ಬಂದು ತುಂಬಿಕೊಂಡಿದ್ದಾರೆ. ನಮ್ಮ ಸುತ್ತಲೂ ಗೋಣಿಚೀಲಗಳಿವೆ; ಬಾಕ್ಸುಗಳಿವೆ. ಹೂವುಗಳಿವೆ; ಹಣ್ಣುಗಳ ಬುಟ್ಟಿಗಳಿವೆ.

ನಾವು ಯಾವತ್ತೂ ಹೀಗೆ ಒಟ್ಟಿಗೆ ಕುಳಿತವರೂ ಅಲ್ಲ. ಈಗ ಮಾತ್ರ ಒಟ್ಟಿಗೆ ಮಲಗಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ನಾವು ಚಳ್ಳಕೆರೆಯಲ್ಲಿ ಚಾ ಕುಡಿಯಲು ಇಳಿಯುವುದಿಲ್ಲ. ಅಥವಾ ಚುಮುಚುಮು ನಸುಕಿನಲ್ಲಿ ತುಮಕೂರಿನಲ್ಲೂ ಇಳಿಯುವುದಿಲ್ಲ. ನಮಗೆ ಸೀದಾ ಬೆಂಗಳೂರಿಗೆ ಹೋಗಬೇಕು. ಅವಳನ್ನು ನಾನು ಹಾಸ್ಟೆಲಿಗೆ ಸೇರಿಸಬೇಕು. ಅವಳನ್ನು ವಾರಕ್ಕೊಮ್ಮೆ ನೋಡಿಕೊಳ್ಳಬೇಕು. ಅವಳು ಡಿಪ್ರೆಸ್ ಆಗಬಾರದು ಎಂದು ಡಾಕ್ಟರ್ ಹೇಳಿದ್ದಾರೆ.
ಸುಟ್ಟುಹೋದ ಅವಳ ಪ್ರೀತಿಯನ್ನು ಮತ್ತೆ ಅರಳಿಸಲು ಯಾರಾದರೂ ಬರಬಹುದು ಎಂದು ಕಾಯಬೇಕು.
ಬಳ್ಳಾರಿಯನ್ನು ದಾಟಿದ ಮೇಲೆ ಬಸ್ಸು ರೈಲಿ ಹಳಿಗುಂಟ ಹೋಗುತ್ತದೆ. ಬದುಕೇ ಹೀಗೆ ಒಂದು ಉದ್ದನೆಯ ಸರಳರೇಖೆ ಎಂದು ನಾವೆಲ್ಲ ಭಾವಿಸುವಂತೆ ಮಾಡುತ್ತದೆ. ಆಮೇಲೆ ಒಂಟಿ ಹೆದ್ದಾರಿಯಲ್ಲಿ ಚಳ್ಳಕೆರೆ, ಹಿರಿಯೂರು. ಆಮೇಲೆ ಜೋಡಿ ಹೆದ್ದಾರಿಯಲ್ಲಿ ಬೆಂಗಳೂರು. ಯಾವುದಿದ್ದರೂ ಇವಳ ಕಥೆ ಹೀಗಾಯಿತಲ್ಲ ಎಂದು ನನಗೆ ತೀರ ಬೇಸರವಾಗಿ ಎದ್ದು ಕೂತೆ. ಎಲ್ಲರೂ ಕಿಟಕಿಯನ್ನು ತೆರೆದು ಗಾಳಿಗೆ ಮುಖವೊಡ್ಡಿ ಮಲಗುವ ಹತಾಶ ಯತ್ನದಲ್ಲಿದ್ದರು. ಇವಳು ಇಲ್ಲಿ ವೇಲ್‌ನ್ನೇ ಹೊದ್ದು ಮಲಗಿದ್ದಾಳೆ. ಒಮ್ಮೊಮ್ಮೆ ಎದ್ದು ಕೂರುತ್ತಾಳೆ. ಬಿಕ್ಕುತ್ತಾಳೆ. ನಾನು ಅವಳ ಭುಜ ತಟ್ಟಿ ಮಲಗಿಸುತ್ತೇನೆ. ಡ್ರೈವರ್‌ಗೆ ನಮ್ಮ ಬಗ್ಗೆ ಅಂತದ್ದೇನೂ ಅನ್ನಿಸಿಲ್ಲ ಎಂದು ನನಗೆ ಸಮಾಧಾನ. ಎದುರು ವಾಹನಗಳ ಬೆಳಕಿನಿಂದ ಮತ್ತೆ ಮತ್ತೆ ನಾವು ಬೆಳಗುತ್ತಿದ್ದೇವೆ. ಹಾರ್ನ್ ಹೊಡೆತಕ್ಕೆ ನಾವು ಮಂಪರಿನಿಂದ ಮೇಲೆದ್ದು ತತ್ತರಿಸುತ್ತೇವೆ. ನಾವು ಬಳ್ಳಾರಿ ಬಿಟ್ಟಿದ್ದೇ ಹನ್ನೊಂದು ದಾಟಿದ ಮೇಲೆ. ಈಗ ನಮಗೆ ನಿದ್ದೆಯೂ ಬರದೆ, ಮಲಗದೇ ಇರಲಾಗದೆ ಚಡಪಡಿಕೆ ಶುರುವಾಗಿದೆ.

ಯಾವಾಗಲೋ ನಾನು ನಿದ್ದೆಗೆ ಜಾರಿದ್ದೆ. ಅವಳು ಛಕ್ಕನೆ ನನ್ನ ಕೈ ಹಿಡಿದು `ಪ್ಲೀಸ್, ನನ್ನ ಕಥೆ ಮುಂದೇನಾಗುತ್ತೆ ಹೇಳು' ಎಂದಾಗ ನಾನು ಅರೆಕ್ಷಣ ಬೆಚ್ಚಿದೆ.ಅವಳಾಗಲೀ, ನಾನಾಗಲೀ ಹಿಂದೆಂದೂ ಮುಟ್ಟಿಸಿಕೊಳ್ಳದವರು. ಈಗ ಅವಳನ್ನು ಕೈಹಿಡಿದು ಬಸ್ಸಿಗೆ ಹತ್ತಿಸಿದ್ದಷ್ಟೆ; ಇಲ್ಲಿ ಇವಳು ನನಗೆ ಆತುಕೊಂಡು ಮಲಗಿದ್ದಾಳೆ. ಅವಳಿಗೂ, ನನಗೂ ಈ ಸ್ಪರ್ಶ ಹೊಸತು.

`ನೋಡು, ಸುಮ್ನೆ ಸಿದ್ದೆ ಮಾಡು. ಬೆಂಗಳೂರು ಬಂದಮೇಲೆ ಮಾತಾಡೋಣ' ಎಂದೆ. ಅವಳು ಬಿಡಲಿಲ್ಲ. ನನ್ನ ಕೈ ಹಿಡಿದೆಳೆದಳು. ನನ್ನ ಭುಜ ಹಿಡಿದು ಅಲ್ಲಾಡಿಸಿದಳು. ಮತ್ತೆ ಅವಳ ಕಣ್ಣಿನಲ್ಲಿ ನೀರಿದೆಯೇನೋ, ಕತ್ತಲಿನಲ್ಲಿ ಗೊತ್ತಾಗದೆ ನಾನು ತಡವರಿಸಿದೆ.

ನಾಳೆ ಅವಳೇನಾಗುತ್ತಾಳೆ ಎಂದು ನನಗೆ ಗೊತ್ತಿಲ್ಲ ಎಂದು ಅವಳಿಗೆ ಹೇಳಲೆ? ನಾಳೆ ನಾನೇನಾಗುತ್ತೇನೆ ಎಂದು ನನಗೆ ಗೊತ್ತಿದೆಯೆ?

ನಾನು ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ನಿದ್ದೆ ಮಾಡಿದರೂ ಮಾಡಿದೆ; ಹೆಬ್ಬಾಳದಿಂದ ಮೆಜೆಸ್ಟಿಕ್ಕಿಗೆ ನಡೆದುಕೊಂಡು ಬಂದರೂ ಬಂದೆ. ಬನಶಂಕರಿಯಿಂದ ಟಿಕೆಟ್ ಇಲ್ಲದೇ ಕಮಲಾನಗರಕ್ಕೆ ಹೋದರೂ ಹೋದೆ. ವಿಜಯಲಕ್ಷ್ಮಿ ಥಿಯೇಟರಿನಲ್ಲಿ ೪.೮೦ಕ್ಕೆ ಟಿಕೆಟ್ ಖರೀದಿಸಿ ಒಂದು ಅರೆಸೆಕ್ಸಿ ಇಂಗ್ಲಿಶ್ ಸಿನೆಮಾ ನೋಡಿದರೂ ನೋಡಿದೆ. ನಾನು ಮತ್ತೊಂದು ಕಾಡ್ರಾ ಪ್ಯಾಂಟ್ ಖರೀದಿಸಿದರೂ ಖರೀದಿಸಿದೆ. ನಾನು ಗಾಂಧಿ ಬಜಾರಿನ ಟಿವಿ ಸೇಲ್ಸ್‌ಮನ್ ಕೆಲಸ ಬಿಟ್ಟರೂ ಬಿಟ್ಟೆ.... ನಾನು ಏನಾಗುತ್ತೇನೆ, ಬೆಂಗಳೂರಿಗೆ ಹೋದಮೇಲೆ ಕಾಟನ್‌ಪೇಟೆಗೆ ಹೋಗುತ್ತೇನೋ ಅಥವಾ ಮತ್ತಾವುದೋ ಕಾರ್ಖಾನೆಗೆ ಸೇರಿಕೊಳ್ಳುತ್ತೇನೋ ಅನ್ನೋದೇ ಗೊತ್ತಿಲ್ಲದೆ ಇವಳ ಭವಿಷ್ಯವನ್ನು ಹೇಗೆ ಊಹಿಸಲಿ......

ಅವಳ ಆ ಪುಟ್ಟ ಕಣ್ಣುಗಳನ್ನೇ ಮಿಂಚಿಹೋಗುವ ಬೆಳಕಿನಲ್ಲಿ ನೋಡತೊಡಗಿದೆ. ಅವಳ ವೇಲ್ ಸರಿದು ಮುಖ ಬತ್ತಲಾಗಿತ್ತು. ನಮ್ಮನ್ನು ಆದಷ್ಟೂ ಬೇಗೆ ಬೆಂಗಳೂರಿನಲ್ಲಿ ಎಸೆಯಬೇಕೆಂದು ಡ್ರೈವರ್ ನಿರ್ಧರಿಸಿದ ಹಾಗೆ ಬಸ್ಸು ವೇಗ ಪಡೆದಿತ್ತು. ಜಂಪ್‌ಗಳಿಗೆ ನಾವು ಅತ್ತಿತ್ತ ತೊನೆಯುತ್ತಿದ್ದೆವು. ಅವಳು ಮತ್ತೆ ಮತ್ತೆ ನನಗೆ ಡಿಕ್ಕಿಯಾಗುತ್ತಿದ್ದಳು. ಅವಳ ಮುಖವನ್ನು ಅಷ್ಟು ಹತ್ತಿರದಿಂದ ನಾನು ಮತ್ತೆ ನೋಡಲಾರೆ ಅನ್ನಿಸಿತು.

ಅವ ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದೂ ಆಕೆ ಯಾಕೆ ಇಲ್ಲಿಗೆ ಬಂದಳು, ಯಾಕೆ ಮಾತುಕತೆ ನಡೆಸಿದಳು, ಯಾಕೆ ಮತ್ತೆ ಕುಸಿದುಹೋದಳು ಎಂದು ನನಗೆ ಗೊತ್ತಾಗಲಾರದು. ಈ ರಾತ್ರಿ, ನಾಳೆಯ ಬೆಳಗು ಕಳೆದ ಮೇಲೆ ಅವಳು ಸಿಗಬೇಕೆಂದೇನೂ ಇಲ್ಲವಲ್ಲ..... ಆಕೆಯನ್ನು ಸಂಜೆ ಲಾಡ್ಜಿನಲ್ಲಿ ನೋಡಿದಾಗ ಅವಳು ಇಷ್ಟೆಲ್ಲ ಭಾವಜೀವಿ ಎನ್ನಿಸಿರಲಿಲ್ಲ. ಸುಮ್ಮನೆ ಎಲ್ಲೋ ನೋಡುತ್ತ ಕೂತಿದ್ದಳು. ಎಲ್ಲರೂ ಕಾಫಿ ಕುಡಿಯುತ್ತಿದ್ದರೆ ಈಕೆ ಮಂಡಿಗಳನ್ನು ಕೈಗಳಿಂದ ಸುತ್ತುವರಿದು ವಿರಕ್ತೆಯ ಹಾಗೆ ಕೂತಿದ್ದಳು. ಎಲ್ಲರೂ ಅಲ್ಲಿ ಯಾವುದೋ ಸಿನೆಮಾದ ಯಾವುದೋ ಸನ್ನಿವೇಶದ ಬಗ್ಗೆ ಚರ್ಚಿಸುತ್ತಿದ್ದರೆ ಇವಳು ಮಾತ್ರ ಸೋತುಹೋದ ನಾಯಕಿಯ ಹಾಗೆ ವಿಷಣ್ಣವಾಗಿ ನಗುತ್ತಿದ್ದಳು. ಎಲ್ಲರೂ ಊಟಕ್ಕೆ ಹೋದಾಗಲೇ ನನಗೆ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಗೊತ್ತಾಗಿದ್ದು.

ನಾನು ಅವಳ ಅಂಗೈಯನ್ನು ಮೆಲ್ಲಗೆ ಒತ್ತಿದೆ. ಅವಳ ತೋಳುಗಳನ್ನು ಗಟ್ಟಿಯಾಗಿ ಹಿಡಿದೆ. ಅವಳ ವೇಲ್ ಸರಿಪಡಿಸಿ ಕಿವಿ ಮುಚ್ಚಿದೆ. ಅವಳ ಕೆನ್ನೆ ತಟ್ಟಿದೆ. ಅವಳು ಯಾಕೋ ಪುಟ್ಟ ಮಗುವಿನ ಹಾಗೆ ಮುರುಟಿಕೊಂಡಿದ್ದಾಳೆ. ಬಹುಶಃ ನಾಳೆ ಏನಾದರೂ ಆಗಬಹುದೆ? ನಾನು ಅವಳಿಂದ ಬಿಡುಗಡೆ ಪಡೆಯಲಾರೆನೆ?

`ನೀನು ಜೊತೆಗೆ ಬರ್‍ತೀಯ ಅಂದಮೇಲೆ ಸ್ವಲ್ಪ ಸಮಾಧಾನ ಆಯ್ತು ಕಣೋ' ಅವಳಿಗೆ ನಿದ್ದೆ ಬಂದಿಲ್ಲ.
ನಾನು ಅವತ್ತು ಬೆಂಗಳೂರಿಗೆ ವಾಪಸಾಗಬೇಕು ಅನ್ನೋ ನಿಯಮವೇನೂ ಇರಲಿಲ್ಲ. ನನಗೆ ಕೆಲಸವೇ ಇರಲಿಲ್ಲ. ಹಾಗಂತ ನಾನು ಅವಳಿಗೆ ಹೇಳಲಾರೆ. ನಾನೀಗ ಮಹಾನ್ ಸಾಮಾಜಿಕ ಕಾರ್ಯಕರ್ತ. ವಿದ್ಯಾರ್ಥಿ ಚಳವಳಿಯಲ್ಲಿ ನಾನೊಬ್ಬ ಮುಖ್ಯ ವ್ಯಕ್ತಿ. ನ್ಯಾಶನಲ್ ಕಾಲೇಜಿನ ಎತ್ತರದ ಗೋಡೆಗಳ ಮೇಲೆ, ರೈಲ್ವೆ ನಿಲ್ದಾಣದ ಉದ್ದುದ್ದ ಕಟ್ಟೆಯ ಮೇಲೆ, ಜೈಲ್,ರೇಸ್‌ಕೋರ್ಸ್ ರಸ್ತೆಗಳಲ್ಲಿ ನಾನು ಬರೆದ ಗೋಡೆಬರಹಗಳನ್ನು ಈಗಲೂ ಮಸುಕಾಗಿ ಕಾಣಬಹುದು. ಚಳವಳಿಗಳಲ್ಲಿ ಪ್ಲಕಾರ್ಡ್ ಬರೆದಿದ್ದೇನೆ. ವರದಕ್ಷಿಣೆ ಸಾವಿನ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನನ್ನ ಕವನವನ್ನು ಯಾರೋ ಮಹರಾಯ್ತಿ ಓದಿದ್ದಾಳೆ.

`ನೀನು ಚಾಮರಾಜಪೇಟೇಲೇ ಇರ್‍ತೀಯ?'
`ಹೌದು.'
`ಹಾಗಾದ್ರೆ ಅವಾಗಾವಾಗ ನೀನು ನನ್ನ ಹಾಸ್ಟೆಲಿಗೆ ಬರಬಹುದು.'
ನಾನು ಅವಳ ತೋಳು ಹಿಡಿದೇ ಹೇಳಿದೆ: `ಬರ್‍ತೀನಿ. ಕನಿಷ್ಟ ವಾರಕ್ಕೊಂದ್ಸಲ ಬಂದೇ ಬರ್‍ತೀನಿ.'

ನಾವು ಹಾಗೇ ಮಲಗಿದ್ದೇವೆ. ಬಸ್ಸು ಭರಭರ ಹೋಗ್ತಾ ಇದೆ. ಲಾರಿಗಳು ನಮ್ಮೆದುರು, ಹಿಂದೆ, ಮುಂದೆ ಬಂದು ಹೋಗುತ್ತಿವೆ. ನಾವು ಬಸ್ಸಿನ ರೊಯ್ಯರೊಯ್ಯ ಸದ್ದನ್ನೇ ಕೇಳುತ್ತ ಮಲಗಿದ್ದೇವೆ. ನಾವು ಚಳಿಗಾಗಲೀ, ಶಬ್ದಕ್ಕಾಗಲೀ, ನಮ್ಮನ್ನು ಆಗಾಗ ದಿಟ್ಟಿಸುವ ಡ್ರೈವರನಿಗಾಗಲೀ ಹೆದರಿಲ್ಲ.

ಅವಳನ್ನು ಸೆಳೆದು ನಾನು ಮಾತನಾಡೋದಕ್ಕೆ ಶುರು ಮಾಡ್ದೆ. ಅವಳ ಜತೆ ಮಾತನಾಡದೇ ಹೀಗೆ ಇರೋದು ಸರಿಯಲ್ಲ ಅನ್ನಿಸತೊಡಗಿತ್ತು.

`ನೋಡು, ನೀನು ಅವನ ಬಗ್ಗೇನೇ ಯೋಚಿಸ್ಬೇಡ ಮಾರಾಯ್ತಿ. ಸುಮ್ನೆ ಬೆಂಗಳೂರಿನಲ್ಲಿ ನಿನ್ನ ಕೆಲಸ ಮಾಡ್ಕೋತಾ ಇರು. ನಾವು ಹೀಗೆ ನೋವು ಅನುಭವಿಸ್ತಾನೇ ಎಷ್ಟು ದಿನಾ ಅಂತ ಇರೋಕ್ಕಾಗುತ್ತೆ... ನಾನು ಪ್ರೀತಿಸ್ತಾ ಇರೋ ಹುಡುಗಿ ಇವತ್ತಿಗೂ ನನಗೆ ಕಾಗದ ಬರೆದಿಲ್ಲ. ಅವಳು ನಿಜಕ್ಕೂ ನನ್ನ ಪ್ರೀತಿಸ್ತಿದಾಳೋ ಇಲ್ವೋ ಅನ್ನೋದೇ ನನಗೆ ಗೊತ್ತಿಲ್ಲ. ನಾನೂ ನಿಂಥರಾನೇ ನೊಂದಿದೇನೆ. ನನಗೆ ಒಂದು ಒಳ್ಳೆ ಕೆಲಸ ಅನ್ನೋದಿಲ್ಲ. ಸೋಶಿಯಲ್ ವರ್ಕ್ ಮಾಡೋದು, ಕೆಲಸ ಮಾಡೋದು ಎಲ್ಲವೂ ಬೇಜಾರಾಗಿದೆ. ಒಂದ್ಸಲ ನನಗೆ ಚಾರ್ಮಾಡಿ ಘಾಟಿನಲ್ಲಿ ಒಂಟಿಯಾಗಿ ಅಡ್ಡಾಡುತ್ತ, ಬಸ್ಸುಗಳಿಗೆ ಅಡ್ಡಹಾಕಿ ಭಿಕ್ಷೆ ಕೇಳುತ್ತ ಬದುಕಿರೋಣ ಅನ್ನಿಸಿದೆ. ಹೇಗೂ ಅಲ್ಲಿ ನೀರಿದೆ. ದೇವಸ್ಥಾನ ಇದೆ. ಧರ್ಮಸ್ಥಳ,ಕೊಲ್ಲೂರು, ಶೃಂಗೇರಿ ಹೀಗೆ ಹೋಗ್ತಾ ಇರಬಹುದು.

`ಈಗ ನಿದ್ದೆ ಮಾಡು. ನಾನಿಲ್ವ? ಹೀಗೆ ನಾವಿಬ್ರೂ ಎಷ್ಟು ಸಲ ಪ್ರಯಾಣ ಮಾಡೋದಕ್ಕಾಗುತ್ತೆ? ನಿನ್ನನ್ನ ನಾನು ಎಷ್ಟು ಸಲ ನೋಡಿದ್ರೂ ನನ್ನ ಪುಟ್ಟ ಗೆಳತಿ ಅಂತಲೇ ಅನ್ಸುತ್ತೆ. ನಾನು ತುಂಬಾ ಭಾವನಾಜೀವಿ. ನನ್ನ ಕವನಗಳಲ್ಲಿ ಇರೋದೆಲ್ಲ ಬರೀ ಕನಸುಗಳು; ಅದರಲ್ಲಿ ನಾನೇ ತೇಲಿಹೋಗ್ತಾ ಇರ್‍ತೇನೆ. ಎಷ್ಟೋ ಸಲ ಅನಾಥ ಅಂತ ನನ್ನನ್ನೇ ನಾನು ಕರ್‍ಕೊಂಡಿದೇನೆ. ಬೆಂಗಳೂರಿಗೆ ಹೋದಮೇಲೆ ನನ್ನ ಕವನಗಳನ್ನು ಜೆರಾಕ್ಸ್ ಮಾಡಿಕೊಡ್ತೇನೆ, ಓದು. ನನ್ನ ಕತೆಯೆಲ್ಲ ಅದರಲ್ಲಿವೆ.

`ನೀನು ಇವತ್ತು ಬೆಳಗ್ಗೆ ಎಷ್ಟು ಚಲೋ ನಗ್ತಾ ಇದ್ದೆ... ಸಂಜೆ ನೋಡಿದ್ರೆ ಹಾಗೆ ಉಡುಗಿದೀಯ. ಯಾಕೆ ಮಾರಾಯ್ತಿ.... ಅವ ಬಿಟ್ರೆ ನಿನಗೆ ಬೇರೆ ಯಾರೂ ಸಿಗಲ್ವ? ಸುಮ್ನೆ ಯೋಚನೆ ಮಾಡ್ಬೇಡ. ಮಲಕ್ಕೋ. ನಾಳೆ ಮಾತಾಡಣ.'

ಹೀಗೇ ಏನೇನೋ ಮಾತನಾಡುತ್ತ ಅವಳನ್ನು ಹಾಗೇ ನೋಡುತ್ತಿದ್ದೆ. ಅವಳ ಕಣ್ಣಲ್ಲಿ ಎಂಥದೋ ನಿರಾಸಕ್ತಿ. ಅವಳಿಗೆ ನನ್ನ ಪ್ರೀತಿ-ಪ್ರೇಮದ ಕಥೆ ತಗೊಂಡು ಆಗಬೇಕಾದ್ದೇನೂ ಇಲ್ಲವಲ್ಲ.... ಹಾಗೇ ಅವಳ ನೆತ್ತಿ ತಟ್ಟುತ್ತ ಬಸ್ಸಿನ ಛಾವಣಿಯನ್ನೇ ನೋಡುತ್ತ ಮಲಗಿದೆ.

ಯಾವಾಗಲೋ ತುಮಕೂರು ದಾಟಿ ಬೆಂಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ನಾವು ನಡುಗತೊಡಗಿದೆವು. ಯಶವಂತಪುರ,ನವರಂಗ್ ದಾಟಿ ಮೆಜೆಸ್ಟಿಕ್ಕಿಗೆ ಬರೊ ಹೊತ್ತಿಗೆ ನಾವು ನಮ್ಮ ಲಗೇಜನ್ನು ಎತ್ತಿಕೊಂಡಿದ್ದೆವು.
ಸೀದಾ ಆಟೋ ಹಿಡಿದು ಚಾಮರಾಜಪೇಟೆಗೆ ಹೋದೆವು. ಅವಳನ್ನು ಹಾಸ್ಟೆಲಿಗೆ ಬಿಟ್ಟು ನಾನು ನನ್ನ ಕಾಯಕಕ್ಕೆ ಮರಳಿದೆ.

ಒಂದು ವಾರ ಕಳೆದಿತ್ತು. ಅವಳಿಂದ ಯಾವುದೇ ಫೋನ್ ಕೂಡಾ ಇಲ್ಲ. ನಾನೇನೂ ಹೆಚ್ಚು ಚಿಂತಿಸಲಿಲ್ಲ. ಬಸ್ಸಿನಲ್ಲಿ ಅವಳ ಜೊತೆ ಮಲಗಿದಾಗ ನನ್ನೊಳಗೆ ಎದ್ದ ಭಾವತುಮುಲಗಳು ಕಾಂಕ್ರೀಟಿನ ಗೋಡೆಗಳಲ್ಲಿ ಅಡಗಿಹೊಗಿದ್ದವು. ನಾನು ಅಲ್ಲಿ ಬಸ್‌ನಂಬರುಗಳ ನಡುವೆ, ಕ್ರಾಸುಗಳ ನಡುವೆ, ಮನೆ ಸಂಖ್ಯೆಗಳ ನಡುವೆ ಹೂತುಹೋಗಿದ್ದೆ. ನಾನು ಮತ್ತೆ ಕೆಲಸ ಬಿಟ್ಟೆ. ಈಗ ಶ್ರೀರಾಮಪುರದ ಐದನೇ ಕ್ರಾಸಿನ ವಾರಪತ್ರಿಕೆಯಲ್ಲಿ ರಸೀದಿ ಹರಿಯೋ ಕೆಲಸ.
ನನ್ನ ಆಫೀಸಿಗೆ ಫೋನ್ ಬಂದಾಗಲೇ ಅವಳ ನೆನಪಾಗಿದ್ದು. `ಬನ್ನಿ ಸರ್, ಅವಳು ಯಾಕೋ ತುಂಬಾ ಡಲ್ ಆಗಿದಾಳೆ. ತುಂಬಾ ಅಳ್ತಿದಾಳೆ. ಕೊನೆಗೆ ನಿಮ್ಮ ಫೋನ್ ನಂಬರ್ ಕೊಟ್ಳು. ಕೂಡ್ಲೇ ಬರ್‍ತೀರ ಸರ್?' ಯಾರೋ ಅವಳ ಗೆಳತಿ ಕೇಳಿದಾಗ ನನಗೆ ಶಾಕ್ ಆಯ್ತು.

ಅಲ್ಲಿ ಹಾಸ್ಟೆಲಿನ ಜಗಲಿ ಕಟ್ಟೆಯ ಮೇಲೆ ಅವಳು ಕುಳಿತಿದ್ದಾಳೆ. ಯಾರನ್ನು ನೋಡುತ್ತಿದ್ದಾಳೆ ಎಂದು ಹೇಳಲು ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನನ್ನು ನೋಡುತ್ತಾಳೆ. ಅವಳ ಗೆಳತಿಯರು ಒಂದು ಬದಿಯಲ್ಲಿ ಗುಸು ಗುಸು ಮಾತನಾಡಿಕೊಳ್ಳುತ್ತ ಕೂತಿದ್ದಾರೆ. ನಾನು ಅವಳ ಫ್ರೆಂಡ್ ಅಂತ್ಲೋ ಏನೋ, ಹತ್ತಿರ ಬಂದಿಲ್ಲ. ಸಂಜೆಯಾಗ್ತಾ ಇದೆ.
ನಾನು ಅವಳ ಅಂಗೈಯನ್ನು ಹಿಡಿದು ಸಮಾಧಾನ ಮಾಡೋದಕ್ಕೆ ಹೊರಟರೆ,ಮತ್ತೆ ಅವಳ ಕಣ್ಣಿನಿಂದ ನೀರು ಧುಮುಕುತ್ತಿದೆ. ಅವಳೇನೂ ನನ್ನ ಲವ್ ಮಾಡ್ತಿಲ್ಲ. ನಾನೂ ನನ್ನದೇ ಭಗ್ನಬದುಕಿನಲ್ಲಿ ಬಿದ್ದಿದ್ದೇನೆ. ಆದರೂ ಯಾಕೆ ಅವಳಿಗೆ ನಾನು ಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ.

`ಅವನು ಬೇರೆ ಮದುವೆಯಾಗಬಹುದಾ?'

ಅವನು ಬೇರೆ ಮದುವೆಯಾದರೆ ನೀನೂ ಬೇರೆ ಮದುವೆಯಾಗು ಎಂದು ಅವಳಿಗೆ ತಿಳಿಹೇಳುವಷ್ಟರಲ್ಲಿ ಎಂಟೂವರೆ ದಾಟಿತ್ತು.

ಮತ್ತೆ ಅವಳ ಫೋನ್ ಬರಲಿಲ್ಲ.

ಈಗ ನಾನು ಕನಿಂಗ್‌ಹ್ಯಾಮ್ ರಸ್ತೆಯಲ್ಲಿದ್ದೇನೆ. ಸ್ಕೂಟರ್ ಬಂದಿದೆ. ಹೆಂಡತಿ ಇದ್ದಾಳೆ. ಮಗ ಬೆಳೆದಿದ್ದಾನೆ. ಬೀದಿಗಳು ಧುತ್ತನೆ ಬೆಳೆದಿವೆ. ನಾನು ಈಟಿ ಯುಗದ ಹೊಸ ಕೆಲಸ ಸೇರಿದ್ದೇನೆ. ಅವಳಿಗೆ ಆಗಾಗ ಸಿಗುತ್ತಿದ್ದೆ. ಈಗಲೂ ಅವಳಿಗೆ ನನ್ನ ಮೊಬೈಲ್ ಸಂಖ್ಯೆ ಗೊತ್ತು.

ಅವಳ ಫೋನ್ ಬಂದಾಗ ನಾನು ಕೆಳಗೆ ಪಿಜ್ಜಾ ಮುಕ್ಕುತ್ತಿದ್ದೆ. `ಅವನ ಮನೆಗೆ ಹೋಗಬೇಕು ಅಂತ ಅನ್ನಿಸಿದೆ ಮಾರಾಯ' ಎಂದಳು. ಮೊದಲು ಆಟೋದಲ್ಲೇ ಇಲ್ಲಿಗೆ ಬಾ, ಆಮೇಲೆ ಮಾತಾಡೋಣ ಎಂದೆ. ಅವನೂ ಬೆಂಗಳೂರಿನಲ್ಲೇ ಇದ್ದಾನೆ. ದೊಡ್ಡ ಆರ್ಕಿಟೆಕ್ಟ್.

ಅವಳ ಮುಖದಲ್ಲಿ ಏನೋ ದುಗುಡ. ಬಳ್ಳಾರಿಯಿಂದ ಬಸ್ಸಿನಲ್ಲಿ ಬಂದಾಗ ಇದ್ದ ಖಿನ್ನತೆಗೂ, ಇವತ್ತಿನದಕ್ಕೂ ತುಂಬಾ ವ್ಯತ್ಯಾಸವಿದೆ.

ಇಬ್ಬರೂ ಆಟೋದಲ್ಲೇ ಅವನ ಮನೆಗೆ ಹೋದೆವು. ಸುಮ್ಮನೆ ಯಾವುದೋ ಸಿನೆಮಾ ಹಾಕಿಕೊಂಡು ನೋಡ್ತಾ ಇದ್ದವನು ನಮ್ಮನ್ನು ನೋಡಿ ಹುಬ್ಬೇರಿಸಿದ. `ಅರೆ ಎಂಥ ಸರ್‌ಪ್ರೈಸ್' ಎಂದ. ಕೂತುಕೊಳ್ಳಲು ಹೇಳಿ ಹಾಲು ತರಲು ಹೊರಗೆ ಹೋದ. ನಾವು ನಗು ಹಂಚಿಕೊಂಡೆವು. ಅವನಿನ್ನೂ ಮದುವೆಯಾಗಿಲ್ಲ. ಅವನಿಗೆ ವಯಸ್ಸಿನ ಪರಿವೆ ಇಲ್ಲ.
ಅವನೇ ಮಾಡಿದ ಚಾ ಕುಡಿದೆವು. ಮಾಡರ್ನ್ ಆರ್ಕಿಟೆಕ್ಚರ್ ಮಾರುಕಟ್ಟೆಯ ಬಗ್ಗೆ ಅವನು ಹೇಳಿದ ಡೈಲಾಗ್‌ಗಳಿಗೆ ಇವಳೂ ಒಂದಷ್ಟು ಪ್ರತಿಕ್ರಿಯೆ ನೀಡಿದಳು. ಹಾಗೇ ಅರ್ಧ ತಾಸು ಮಾತನಾಡಿ ಹೊರಬಿದ್ದೆವು.

ಆಟೋದಲ್ಲಿ ಕುಳಿತಾಗ ಅವಳ ಮುಖದಲ್ಲಿ ನಗು ಮಾಸಿರಲಿಲ್ಲ. ಯಾಕೆ ಅವಳು ನಗುತ್ತಿದ್ದಾಳೆ? ಅವನನ್ನು ಸೋಲಿಸಿದೆ ಎಂದೆ? ತಾನು ಮದುವೆಯಾಗಿ ಸುಖವಾಗಿದ್ದೇನೆ; ನೀನು ಮಾತ್ರ ಒಂಟಿಯಾಗಿದ್ದೀಯ ಅಂತಲೆ?
ನನ್ನ ಆಫೀಸಿನ ಎದುರು ಇಳಿದೆ. ಮತ್ತೆ ಅವಳ ಕೈ ಹಿಡಿದು ಹೇಳಿದೆ: ಚೆನ್ನಾಗಿರು ಮಾರಾಯ್ತಿ. ಅವನ ಭೇಟಿ ಆದ್ರೂ ಒಂದೆ; ಆಗದಿದ್ದರೂ ಒಂದೆ. ಈಗಂತೂ ಅವನನ್ನು ನೋಡಿದೀಯ. ಮುಂದೆ ಹಾಗೆ ಕೇಳಬೇಡ.

`ಆಯ್ತು ಕಣೋ. ತುಂಬಾ ಥ್ಯಾಂಕ್ಸ್. ನಾನೊಬ್ಳೇ ಖಂಡಿತ ಅವನ ಮನೆಗೆ ಹೋಗ್ತಿರಲಿಲ್ಲ. ಆದ್ರೆ ಎಷ್ಟೋ ವರ್ಷದಿಂದ ಕೊರೀತಾ ಇತ್ತು. ಅವನನ್ನು ಮಾತಾಡಿಸಬೇಕು ಅಂತ. ಇವತ್ತು ಸಮಾಧಾನ ಆಯ್ತು. ಅವನೇನೂ ನನಗೆ ಸೂಟ್ ಆಗ್ತಾ ಇರಲಿಲ್ಲ ಅಂತ ಕಾಣ್ಸುತ್ತೆ. ಅದಕ್ಕೇ ನಗು ಬಂತು.'

ಇವಳಿಗೆ ತನ್ನದೇ ಆದ ಆರ್ಗೂಮೆಂಟ್ ಬೇಕಿತ್ತು ಅನ್ನಿಸಿತು.

ಪಾರ್ಕಿಂಗ್ ಇಲ್ಲದ ಈ ಬೀದಿಯಲ್ಲಿ ಆಟೋ ನಿಲ್ಲಿಸುವುದೇ ಕಷ್ಟ. ಅವಳನ್ನು ಹಾಗೆ ಬೀದಿಯಲ್ಲಿ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. `ಸರಿ ಬೈ. ಮತ್ತೆ ಯಾವಾಗ್ಲಾದರೂ ಸಿಗು' ಎಂದೆ.

`ನೀನು ನನ್ನ ಬೆಸ್ಟ್ ಫ್ರೆಂಡ್ ಮಾರಾಯ. ನನಗೆ ಡಿಪ್ರೆಸ್ ಆದಾಗ್ಲೆಲ್ಲ ನಿನಗೆ ಫೋನ್ ಮಾಡ್ತೀನಿ. ಪ್ಲೀಸ್ ಮಾತಾಡು' ಎಂದಳು. ಇವರ ಮಾತು ನಿಲ್ಲೋದೇ ಇಲ್ಲ ಎಂದು ಗೊತ್ತಾಗಿಬಿಟ್ಟಂತೆ ಆಟೋ ಹೊರಟೇ ಬಿಟ್ಟಿತು.

ಇಲ್ಲಿಗೆ ಈ ಕಥೆ ಮುಗಿಯಿತು ಎಂದು ನಾನೂ ನೀವೂ ಅಂದುಕೊಂಡಿರುವ ಹಾಗೆಯೇ ಹತ್ತು ವರ್ಷಗಳು ಕಳೆದವು.
ಬಳ್ಳಾರಿಯ ಬಸ್ಸು, ಧೂಳು, ಚಳ್ಳಕೆರೆಯ ದಾಭಾ, ತುಮಕೂರಿನ ಟ್ರಾಫಿಕ್ ಜಾಮ್ ಎಲ್ಲವನ್ನೂ ನಾನು ಮರೆತಿದ್ದೆ. ಹಿರಿಯೂರುವರೆಗಿನ ರಸ್ತೆ ಹಾಗೇ ಇದ್ದರೂ ರಾಷ್ಟ್ರೀಯ ಹೆದ್ದಾರಿಯೀಗ ನಾಲ್ಕು ಪಥಗಳಾಗಿ ಬಿಡಿಸಿಕೊಂಡಿದೆ. ನಾನೂ ನಾಲ್ಕಾರು ಕೆಲಸಗಳನ್ನು ಮಾಡಿ, ನನ್ನ ಅನುಭವ ವಿಸ್ತಾರದ ನೆಪದಲ್ಲಿ ಬೆಂಗಳೂರಿನ ಹತ್ತಾರು ಕಂಪನಿಗಳಲ್ಲಿ ದುಡಿದೆ ; ಸೋಡೆಕ್ಸೋ ಪಾಸ್ ಹೊಡೆದು ಮಜಾ ಮಾಡಿದೆ. ಬಸ್ಸಿನ ಸುಖವನ್ನೇ ಮರೆತ ದರಿದ್ರ ಮನುಷ್ಯನಾದೆ; ಸ್ಕೂಟರಿನಿಂದ ಕಾರಿಗೆ ಜಿಗಿದೆ. ಇಂಟರ್‌ನೆಟ್, ಚಾಟ್ ಎಲ್ಲದಕ್ಕೂ ಪಕ್ಕಾದೆ. ಅವಳು ಎಲ್ಲಿದ್ದಾಳೆ, ಹೇಗಿದ್ದಾಳೆ ಅನ್ನೋದಿರಲಿ, ನನ್ನ ಪ್ರೀತಿಯ ಗೆಳೆಯರನ್ನೂ ಮರೆತು ಹಾಯಾಗಿ ಇರೋದಕ್ಕೆ ಆರಂಭಿಸಿದೆ.
`ಹಾಯ್, ಹ್ಯಾಗಿದೀಯ?' ಎಂಬ ಒಂದು ಸಾಲಿನ ಪ್ರೈವೇಟ್ ಮೆಸೇಜ್ ನನ್ನ ಖಾಸಗಿ ಜಾಲತಾಣಕ್ಕೆ ಬಂದಾಗಲೇ ಅವಳೂ ಇಲ್ಲೆಲ್ಲೋ ಇದ್ದಾಳೆ ಎಂದು ಅಚ್ಚರಿಯಾಯ್ತು. ಪೋನ್ ಮಾಡಿದರೆ ಅಚ್ಚ ಬೆಂಗಳೂರು ಇಂಗ್ಲಿಶಿನಲ್ಲಿ ಹಾಯ್, ಹೂ ಈಸ್ ದಿಸ್ ಎಂದಳು. ನಾನೇ ಮಾರಾಯ್ತಿ ಎಂದು ನಸುನಕ್ಕಮೇಲೆ ಅವಳ ಭಾಷೆ ಬದಲಾಯ್ತು. ಅವನೆಲ್ಲಿದಾನೆ ಗೊತ್ತ ಅನ್ನೋದೇ ಮೊದಲ ಪ್ರಶ್ನೆ.

ಅವನೀಗ ಮದುವೆಯಾಗಿದಾನೆ ಎಂದೆ. ಅವನಿಗೆ ಒಬ್ಬ ಮಗಳಿದಾಳೆ. ಚಲೋ ಚೂಟಿ ಎಂದೆ. ಹೌದ ಎಂದು ಅಚ್ಚರಿಪಟ್ಟಳು. ಅವಳ ಹೆಸರು ಕೇಳಿದಳು.

`ಮೌನ'
`ಅದೇ ಹೆಸರು..... ಅದು ನಂದೇ ಪ್ರಪೋಸಲ್ ಕಣೋ...' ಎಂದವಳೇ ಫೋನ್ ಕಟ್ ಮಾಡಿದಳು.

ಕಿಟಕಿಯ ಕರ್ಟನ್ ಸರಿಸಿ ನೋಡಿದೆ. ರಸ್ತೆಯಲ್ಲಿ ಭರ್ರೋ ಎಂದು ರಿಕ್ಷಾಗಳು, ಕಾರುಗಳು,ಸ್ಕೂಟರುಗಳು ಸಾಗುತ್ತಲೇ ಇದ್ದವು.

(ಕೃಪೆ: ಉಷಾಕಿರಣ)