Wednesday, December 12, 2007

ಈ ಪ್ರೀತಿ, ಈ ಪ್ರೇಮ ತುಸು ನನಗೂ ಹೊಸದು, ತುಸು ನೀನಗೂ ಹೊಸದು

ನೀನು ಬರ್ತೀಯೋ ಇಲ್ವೋ? ಏನೋ ಅನ್ನೋದನ್ನ ನನಗೆ ಹತ್ತೇ ಹತ್ತು ನಿಮಿಷದಲ್ಲಿ ಹೇಳು, ನಾನು ಹೊರಗಡೆ ನಿನಗೋಸ್ಕರ ಕಾಯ್ತಾ ಇರ್ತೀನಿ", ಎಂದು ಭೂಸುಗೂಡುತ್ತಾ ಹರ್ಷ ಲೈಬ್ರರಿಯಿಂದ ಹೊರಗಡೆ ಬಂದು ಗಿಡದ ನೆರಳಿಗೆ ನಿಂತ.

'ಏನೋ ಇವಳೊಬ್ಬಳಿಗೆ ಮಾತ್ರ ಇಂಟರ್ನಲ್ ಇರೋ ಹಾಗೆ ಮಾಡ್ತಳೆ, ಬೇರೆಯವರಿಗೇನು ಇಲ್ವಾ'. ಯಾವತ್ತೂ ತನ್ನ ಬೈಕ ಮುಟ್ಟಿಸೋಕೆ ಬಿಡದೆ ಇರೋ ಪಕ್ಯಾ (ಪ್ರಕಾಶ) ಇವತ್ತು ನನ್ಮಗ ಯಾವ ಮೂಡಲ್ಲಿದ್ನೊ, "ಮಾಮಾ, ನನ್ನ ಹುಡಿಗಿನ ಎಲ್ಲಾದ್ರೂ ಸುತ್ತಾಡಿಸ್ಕೊಂಡು ಬರ್ತೀನಿ ಬೈಕ ಕೊಡೋ" ಎಂದ ಕೂಡಲೇ ಕೊಟ್ಟೆ ಬಿಟ್ಟ, ಪೆಟ್ರೋಲ್ ಟ್ಯಾಂಕ ಬೇರೆ ಫೂಲ ತುಂಬಿಸಿದ್ದಾನೆ. ಇವಳು ನೋಡಿದ್ರೆ 'ಇವತ್ತು ಬ್ಯಾಡಾ, ಮತ್ಯಾವತ್ತರ ಹೋಗೋಣೂ' ಅನ್ನುತ್ತಿದ್ದಾಳೆ.

ಮೊನ್ನೆ ಇವಳು ಕರೆದು ಕೂಡ್ಲೇ ಆ ಹುಸೆನ್ಯಾ "ಚಿಕನ್" ಮಾಡಿಸಿಕೊಂಡು ಬರವೊನಿದ್ರು, ನನ್ನ ಫೆವರಿಟ್ ಚಿಕನ್ ತಿನ್ನುದು ಬಿಟ್ಟ ಇವಳ ಜೊತೆ ಆ ಕೃಷ್ಣನ ಗುಡಿಗೆ ಹೋದ್ಯಾ, ಅಲ್ಲಿ ಆ ಸುಂಬಳ ಬುರುಕಿ ಸೂಜಿ ಸಿಕ್ಕ ಕೂಡ್ಲೇ, ಆಕಿ ಜೋಡಿ ಬಂದಿದ್ದ ಅವಳ ಅಕ್ಕನ 3 ವರ್ಷದ ಮಗುವಿನ ಜೊತೆ ನನ್ನನ್ನೇ ಮರೆತು ಒಂದು ಗಂಟೆ ಆಟ ಆಡಿದ್ಲು, ಖರೇಣಾ ಒಂದ ಗಂಟೆ, ನಾನು ವಾಚನ್ನೇ ನೊಡ್ಕೋತ ಕೂತಿದ್ದ್ಯ. ಕೊನಿಗಿ ಆ ಸುಂಬಳ ಸೂಜಿ ಆಕಿ ಮನಿಗಿ ಬಾ ಅಂತ ಕರೆದ್ರ ಹೊರಟೆ ಬಿಟ್ಲು, "ನೀನು ರೂಮಿಗೆ ಹೋಗೋ, ನಾನು ಈಕೀ ಮನೆಯಿಂದ ಸೀದಾ ಹಾಸ್ಟೆಲಗೆ ಹೋಗ್ತೀನಿ" ಅಂತ ಹೇಳಿ ಆ ಮಗುವನ್ನೆತ್ತಿಕೊಂಡು ಅದಕ್ಕೆ ಮುತ್ತು ಕೊಡುತ್ತಾ ಹೋದಳು, ನನಗದೆಷ್ಟು ಉರಿತು.... ಚಿಕನ್ ಆದ್ರೂ ಸಿಗುತ್ತೆ ಅಂತ ರೋಮಿಗೆ ಬಂದ್ರೆ ಆ ನನ್ಮಕ್ಳು ಪಕ್ಯಾ, ಶಂಕರ್ಯಾ, ರಾಜ್ಯಾ ಕೂಡಿಕೊಂಡು ಡಬ್ಬಿ ನೆಕ್ಕೋತ ಕುಂತಿದ್ರು. ಅದಕ್ಕೆ ಮೇಲಾಗಿ ಆ ಪಕ್ಯಾ, "ಏನೋ ಮಾಮಾ, ನಿನ್ನ ಸುಮ್ಮಿನ ಎಲ್ಲಿಗ್ಯೋ ಕರ್ಕೊಂದ ಹೊಕ್ಕಿನಿ ಅಂತ ಹೇಳಿ ಇಷ್ಟ ಜಲ್ದಿ ಹೊಳ್ಳಿ ಬಂದ್ಯಲ್ಲೇ" ಅಂತ ನಗ್ತಾ ಕೇಳಿದಾಗ ಮೈಯೆಲ್ಲ ಉರ್ಕೊಂಡು ಬಂದು... ಏನು ಮಾಡಾಕಾಗ್ಡೆ ತಲೆನೋವು ಅಂತ ಮುಸುಕೇಳೆದುಕೊಂಡು ಮಲಗಿದೆ.

ಅಂತಾದ್ರಲ್ಲಿ ಇವತ್ತು ಬೈಕ್ ತಗೊಂಬಂದು, ಹೊರಗಡೆ ಹೋಗೋಣ ಬಾ ಅಂದ್ರೆ ಇವಳೊಬ್ಬಳು. ಹಾಂ.. ಬರ್ತಾಯಿದ್ದಾಳೆ.. ಅವಳ ಹೆಜ್ಜೆ ಸಪ್ಪಳ ಎಲ್ಲಿದ್ರು ಗುರ್ತಿಸಿಬಿಡ್ತೀನಿ.. ಅವನು ಮುಖದ ಮೇಲಿನ ಸಿಟ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೆ ಅವಳು ಅವನ ಹತ್ತಿರಕ್ಕೆ ಬಂದು ನಿಂತಳು, "ದೋರೆ ಯಾಕೋ ಸಿಟ್ ಮಾಡ್ಕೋತಿಯ, ಇವತ್ತೊಂದಿನ ಬೇಡ್ವೋ, ಪ್ಲೀಜ್.." ಎಂದಳು. ಅದಕ್ಕವನು "ಎಲ್ಲ ನೀನು ಅಂದಕೊಂಡಂಗೆ ನಡಿಬೇಕಾ... ನೀನು ಕರೆದಾಗಲೆಲ್ಲ ನಾನು ಬಂದಿಲ್ಲಾ? ನೀನು ಹೇಳಿದ ಹಾಗೆಲ್ಲಾ ಕೇಳಿಲ್ಲಾ? ಇವತ್ತು ನನ್ನದೊಂದು ಸಣ್ಣ ಆಸೇನು ನೆಡೆಸೋದಿಲ್ವ?" ಅಂದನು.

"ನಾನ್ಯಾವತ್ತು ನಿನಗೆ ಬೇಡ ಅಂದೀದಿನೋ ನನ್ರಾಜಾ, ಇವತ್ತೊಂದಿನ ಬೇಡ್ವೋ, ಪ್ಲೀಜ್ ತುಂಬಾ ಹೊಟ್ಟೆ ನೋವು" ಎಂದವಳು ಪಿಸುಗುಟ್ಟಿದಳು.

"ಊಟಾ ಮಾಡಿ, ಹಂಗ ಒದ್ಕೊತ ವಂದ ಕಡೆ ಕುಂತರ ಅಜೀರ್ಣ ಆಗಿ ಇನ್ನೇನಾಗ್ತದ, ನಡಿ ಹೊರಗ ಒಂದ ರೌಂಡ ಬೈಕ ಮ್ಯಾಲೆ ಹೋಗಿ ಬರುಣ, ಹಂಗ ಒಂದೊಂದು ಸೋಡಾ ಕುಡ್ದ ಬರುಣು, ಹೊಟ್ಟೆ ನೋವು ಕಡಿಮಿ ಅಕ್ಕೈತಿ ಬಾ" ಅಂದ. ಅದಕ್ಕವಳು ಹಣೆ ಚಚ್ಚಿಕೊಳ್ಳುತ್ತಾ " ಆ ತರಾ ಹೊಟ್ಟೆನೋವು ಅಲ್ವೋ, ಇವತ್ತೇ ಲ್ಯಾಸ್ಟ ಡೇ, ನಾಳೆ ನೀನು ಹೇಳಿದ ಕಡೆ ಹೋಗೋಣ" ಎಂದಳು.

"ನಿಂದೇನೆ ಸ್ಪೆಷಲ್ ಅದು, ಹೊಟ್ಟೆನೋವಿಗೂ ಡೇಟ್ಸ್ ಕೊಟ್ಟಿಯೆನ? ಇವತ್ತ ಲ್ಯಾಸ್ಟ ಡೇ ಅಂತ. ನೀನಗ ನಂಜೋತಿ ಬರಾಕ ಮನಸಿಲ್ಲ ಅದಕ್ಕ ನೀ ಹಿಂಗ ಹೇಳಾಕತ್ತಿ, ನಾನು ಮುಂದ ಹೋಗಿ ಆ ಕ್ಯಾಂಟಿನ ಹತ್ರ ನಿಂತಿರ್ತೀನಿ ನೀನಗ ನನ್ನ ಮ್ಯಾಲೆ ಓಂಚೂರರ ಪ್ರೀತಿ ಇದ್ರ ಬರ್ತೀ, ಇಲ್ಲ ಅಂದ್ರ ನಿನಗ ನನ್ನ ಮ್ಯಾಲೆ ಪ್ರೀತಿನ ಇಲ್ಲ ಅಂತ ತಿಳ್ಕೊಂಡೂ ಇನ್ಮ್ಯಾಲೆ ನಿನ್ನ ತಂಟೆಗೆ ಬರುದಿಲ್ಲ" ಎಂದು ಹೇಳಿ ಬೈಕ್ ಹತ್ತಿಬಿಟ್ಟು ಸೀದಾ ಹೊರಟೆ ಬಿಟ್ಟ.

ಲೈಬ್ರರಿಯ ಒಳಗಡೆ ಹೋದ ಅವಳು ತನ್ನೆಲ್ಲ ಪುಸ್ತಕಗಳನ್ನು ಎತ್ತಿಟ್ಟುಕೊಂಡು ಸೀದಾ ಕ್ಯಾಂಟೀನಿನ ಬಳಿ ಬಂದಳು. ಅವನಿನ್ನೂ ಮುಖದ ಮೇಲೆ ಸಿಟ್ಟಿಟ್ಟುಕೊಂಡೆ ಕುಳಿತಿದ್ದ. ಬಂದವಳೇ ಸೀದಾ ಅವನ ಹಿಂದೆ ಕುಳಿತುಕೊಂಡು ಅವನ ಬೆನ್ನಿಗೆ ಒಂದು ಗುದ್ದು ಕೊಟ್ಟು, "ನಡಿ ಎಲ್ಲಿಗೆ ಕರಕೊಂಡು ಹೋಗ್ತೀಯೋ ಹೋಗು" ಎಂದಳು.

ಬೈಕನ್ನು ಸ್ಟಾರ್ಟ್ ಮಾಡಿದ ಅವನು "ಅಮ್ಮೌವ್ರೆನೋ ಹೊಟ್ಟೆನೋವು ಅಂತಿದ್ರಿ, ಲೇಮನ್ ಸೋಡಾ ಕುಡಿಯುನೇನು?" ಎಂದ.

ಅವಳು ಅವನ ತಲೆಗೊಂದು ಏಟು ಹಾಕಿ, "ಅದು ಆ ತರಾ ಹೊಟ್ಟೆನೋವಲ್ವೋ ಕೋತಿ, ಪೀರಿಯಡ್ಸು. ಇವತ್ತೇ ಕೊನೇ ದಿನ" ಎಂದಳು. ಅವನು ಅವಳನ್ನೊಮ್ಮೆ ಬೈಕನ ಕನ್ನಡಿಯಲ್ಲಿ ಅವಳನ್ನು ನೋಡಿ, ನಾಚಿ ಮುಗುಳ್ನಗೆ ಬೀರಿದ. ಅವಳು ಅವನನ್ನು ಗಟ್ಟಿಯಾಗಿ ತಬ್ಬಿ, "ದೋರೆ ಇಗ್ಲೇ ಹೀಗಾದ್ರೆ, ಮದುವೆಯಾದ ಮೇಲೆ ಈ ಮೂರು ದಿನ ಹೇಗೋ?" ಎಂದಳು. ಅದಕ್ಕೆ ಉತ್ತರವಾಗಿ ಅವನು ಎಕ್ಷಲರೆಟರನ್ನು ಜೋರಾಗಿ ತಿರುವಿ ಬೈಕನ ವೇಗವನ್ನು ಹೆಚ್ಚಿಸಿದ.

ಬರೆದವರು
ಈರಣ್ಣ ಶೆಟ್ಟರ
ಭಾರತ