Friday, September 14, 2007

ಮರೀಚಿಕೆ...

ಸೂರಿನಿಂದ ಸೋರುತ್ತಿರುವ ಮಳೆನೀರಿನಿಂದ ತಪ್ಪಿಸಿಕೊಳ್ಳಲು ಈ ಹೆಂಗಸು ಹೆಣಗಾಡ್ತಿದ್ದಾಳೆ.ವಯಸ್ಸಾದ್ಮೇಲೆ ಈ ರೀತಿಯ ಒಂಟಿ ಬಾಳು ತನ್ನ ಶತೃವಿಗೂ ಬರದೇ ಇರಲಿ ಅನ್ನೋದು ಅಲ್ಲಾಹ್‍ನಲ್ಲಿ ಇವಳ ದಿನನಿತ್ಯದ ಪ್ರಾರ್ಥನೆ..ಮನೆಯಲ್ಲಿದ್ದ ಮಸಿಹಿಡಿದ ಹಳೆ ಪಾತ್ರೆಗಳು, ಕಲಾಯಿ ಕಾಣದ ಹಿತ್ತಾಳೆ ಬೋಸಿಗಳು, ತೂತು ಬಿದ್ದ ಪ್ಲಾಸ್ಟಿಕ್ ಬಿಂದಿಗೆ-ಬಕೆಟ್ಟು ಎಲ್ಲವೂ ಮಳೆನೀರು ಹಿಡಿದಿಡುತ್ತ ಅಲ್ಲೊಂದು ಇಲ್ಲೊಂದು ಅಲಂಕೃತವಾಗಿವೆ!ಹತ್ತಡಿ-ಹನ್ನೆರಡಡಿ ಅಗಲದ, ಸ್ವಲ್ಪ ವಿಶಾಲವೇ ಎನ್ನಬಹುದಾದ ಗುಡಿಸಲಾದರೂ ಇರೋದು ತಾನು ಒಂಟೆ ಜೀವ ಅನ್ನೋದು ಯಾವಾಗ್ಲೂ ಕಾಡೋ ವಿಷಯವೇ.
ಆ ಮನೆಯಲ್ಲಿ ಇದ್ದೂ ಇಲ್ಲದಂತಿರುವ ಒಬ್ಬನೇ ಮಗನೂ ತನ್ನ ಮಾತು ಕೇಳನಲ್ಲ ಅನ್ನೋ ಕೊರಗು ಬೇರೆ...
ರುಕ್ಸಾನ ಬೇಗಂ - ವಯಸ್ಸಿನಲ್ಲಿ ತಾನೂ ಚೆಂದವಾಗಿ ಬೆಣ್ಣೆ ಮುರುಕಿನಂತಿದ್ಲು ಅನ್ನೋದು ಅವಳೇ ಹೇಳಿಕೊಳ್ಳುತ್ತಿದ್ದ ಮಾತು.ಗಂಡ ಪೀರ್ ಮೊಹಮ್ಮದ್ ಮೂವತ್ತು ವರ್ಷಗಳ ಹಿಂದೆ ರಕ್ತ ಕಾರಿ ಸತ್ತಾಗ ಈಕೆಗಿನ್ನೂ ಸುಮಾರು ೨೪-೨೫ ವರ್ಷವಂತೆ...ಕೈಗೊಂದು ಅಳುವ ಕೂಸು ಬೆರೆ ಕೊಟ್ಟು ಹೋಗಿದ್ದ.
ಹನ್ನೆರಡನೇ ವಯಸ್ಸಿಗೆ ಮೈನೆರೆದಿದ್ದರಿಂದಲೋ ಏನೋ ಹದಿಮೂರು ತುಂಬುವ ಮುಂಚೆಯೇ ನಲವತ್ತು ವರ್ಷ ಮೀರಿದ ಪೀರ್ ಮೊಹಮ್ಮದನ ಮಡದಿಯಾಗಿದ್ದಳು ರುಕ್ಸಾನ...ನಿಕಾಹ್‍ನಲ್ಲಿ ಯಾರೋ ಹೇಳಿಕೊಟ್ಟಂತೆ ಮೂರು ಬಾರಿ ಕಬೂಲ್ ಅಂದಿದ್ದಳು...ಬುದ್ಧಿ ಬಲಿಯದ ರುಕ್ಸಾನ ಪೀರ್‍ನೊಡನೆ ಸಂಸಾರ ನಡೆಸಿಕೊಂಡು ಹೋಗೋದೇನು ಸುಲಭದ ಕೆಲಸವಾಗಿರಲಿಲ್ಲ..ನಿಕಾಹ್ ಅಂತಾದ ಮೇಲೆ ಕಷ್ಟ ಸುಖ ಎಲ್ಲಕ್ಕೂ ಗಂಡನೇ ತಾನೆ ದಿಕ್ಕು..ತಬ್ಬಲಿ ಹೆಣ್ಣಿಗೆ ಪೀರ್‍ನೇ ಆಸರೆ...ಅದೇನು ಕಾರಣವೋ ಗೊತ್ತಿಲ್ಲ, ಮದುವೆ ಆಗಿ ಹತ್ತು-ಹದಿನೈದು ವರ್ಷಗಳಾಗಿದ್ರೂ ತಮಗೊಂದು ಕೂಸನ್ನು ಕರುಣಿಸಲಿಲ್ಲವಲ್ಲ ಆ ಖುದಾಹ್ ಅನ್ನೋ ಕೊರಗಿತ್ತು ಅವರಲ್ಲಿ...ಅಲೆಯದ ದರ್ಗಾಗಳಿರಲಿಲ್ಲ ನೋಡದ ಮುಲ್ಲಾಗಳಿರಲಿಲ್ಲ...ನವಿಲುಗರಿ ಬೀಸಣಿಗೆ ಸವೆದುಹೋಗೋಷ್ಟು ಬಾರಿ ಆಶೀರ್ವಾದ ಪಡೆದಿದ್ದರು...ಕಡೆಗೂ ಹಸಿರು ತಾವೀಝಿನ ಕರಾಮತ್ತಿನಿಂದ ಒಂದು ಗಂಡು ಕೂಸಾಯ್ತು..ಪೀರ್‍ನಿಗೋ ಮೀಸೆ ತಿರುವೋಷ್ಟು ದರ್ಪ..ಆ ವಯಸ್ಸಿನಲ್ಲೂ ತನ್ನ ಗಂಡಸುತನದ ಬಗ್ಗೆ ಮನಸೊಳಗೇ ನೆನೆದು ಹಿರಿ ಹಿರಿ ಹಿಗ್ಗುತ್ತಿದ್ದ...ತೊಂದರೆ ತನ್ನಲ್ಲಿಲ್ಲ ಅನ್ನೋದು ಅವನ ವಾದ. ಮೂರನೇ ಮದುವೆಯಿಂದ ಇದು ಆತನ ಐದನೇ ಕುಡಿ!ಮೊದಲಿಬ್ಬರು ಹೆಂಡಿರೂ ಎಂದೋ ತೀರಿಕೊಂಡಿದ್ರು..ಅವರ ಮಕ್ಕಳಿಬ್ಬರೂ ಪೀರ್‍ನಿಂದ ದೂರಾಗಿ ಎಲ್ಲೋ ದೂರದೂರಿನಲ್ಲಿ ಹಮಾಲಿಗಳಾಗಿದಾರೆ ಅನ್ನೋದಷ್ಟೇ ಇವನ ಬುದ್ಧಿಗೆ ನಿಲುಕುವ ವಿಷಯ. ಹೆಂಡಿರು ಮಕ್ಕಳ ಬಗೆಗಿನ ಬೇರಾವ ವಿಷಯಗಳೂ ಇವನ ತಲೆಯೊಳಗೆ ಹೋಗುತ್ತಲೇ ಇರಲಿಲ್ಲ..ಅವನಾಯ್ತು ಅವನ ಹೆಂಡದ ಬುಂ-ಹೊಗೆಸೊಪ್ಪಾಯ್ತು...
----*-----
ನಝರಬಾದಿನಲ್ಲಿ ದನ ಕುಯ್ಕೊಂಡಿದ್ದ ಪೀರ್‍ನನ್ನು ಯಾರೋ ಕರೆತಂದು ದೊಡ್ಡಾಸ್ಪತ್ರೆಯಲ್ಲಿ ಹೆಣ ಕುಯ್ಯೋ ಕೆಲಸ ಕೊಡಿಸಿದ್ರು.ಮೊದಮೊದಲಿಗೆ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದ ಪೀರ್ ಮೊಹಮ್ಮದ್ ಕೊನೆಗೆ ತನ್ನ ಸಂಸಾರವನ್ನೂ ಕರೆತಂದು ಶವಾಗಾರದ ಮಗ್ಗುಲಲ್ಲೇ ತನ್ನದೇ ಜೋಪಡಿಯೊಂದನ್ನು ಕಟ್ಟಿಕೊಂಡಿದ್ದ.ಈ ಹೆಣ ಕುಯ್ಯೋ ಕೆಲಸವನ್ನ ಹೀಗೇ ಮಾಡಬೇಕು ಅಂತೇನು ಕಟ್ಟುಪಾಡುಗಳಿಲ್ಲದ ಕಾರಣ ತಾ ಮಾಡಿದ್ದೇ ಕೆಲಸ ಅನ್ನೋ ಥರದಲ್ಲಿ ಸರಕಾರದಿಂದ ಪ್ರತಿ ತಿಂಗಳು ಸಂಬಳ ಎಣಿಸಿಕೊಳ್ಳುವಂತಾದ.
ಮೊದಮೊದಲು ಈ ಕೆಲಸ ಹೀನವೂ ಅಸಹ್ಯವೂ ಆಗಿದ್ದವನಿಗೆ ಬರಬರುತ್ತಾ ಬುಂಡೆಯಿಂದ ಸಾರಾಯಿಯನ್ನು ಗಂಟಲಿಗೆ ಹುಯ್ದುಕೊಳ್ಳುವಷ್ಟೇ ಸುಲಭದಲ್ಲಿ ತನ್ನ ಕೆಲಸ ಮುಗಿಸಿಬಿಡುತ್ತಿದ್ದ. ಕಸಾಯಿಖಾನೆಯಲ್ಲಿ ಉಸಿರಾಡೋ ದನ-ಕರುಗಳನ್ನೇ ಮನಸೋ ಇಚ್ಛೆ ಕುಯ್ದವನಿಗೆ ಇಲ್ಲಿ ಈ ಹೆಣಗಳನ್ನು ಕುಯ್ಯೋದು ಅಂಥಾ ಕಷ್ಟದ ಕೆಲಸವಾಗಲಿಲ್ಲ.ಅದಕ್ಕೆ ಕಾರಣವೂ ಇತ್ತು.ಇಲ್ಲಿಗೆ ಬಂದನಂತರ ಬುಂಡೆ ಸರಾಯಿ ಕೆಲಸವೇ ಮಾಡ್ತಿಲ್ಲ ಅನ್ನಿಸೋಕ್ ಶುರುವಾಯ್ತು.ಸರಕಾರದ ತೀರ್ಥ - ಎರಡು ಪ್ಯಾಕೆಟ್ಟುಗಳನ್ನ ತನ್ನ ಹಲ್ಲುಗಳಿಂದ ಕಚ್ಚಿ ಆಕಾಶ ನೋಡ್ತ ಗಂಟಲಿಗೆ ಸುರಿದುಕೊಳ್ಳೋಕ್ ಶುರುವಿಟ್ಕೊಂಡಿದ್ದ.ದಿನಕ್ಕೆರಡು ಬಾರಿ ಹೀಗೆ ಮಾಡದಿದ್ದರೆ ಅವನ ಕೈಲಿ ಏನೂ ಹರಿಯದು.ಇಷ್ಟು ಸಾಲದೂಂತ ಹೊಸದಾಗಿ ಹೊಗೆಸೊಪ್ಪಿನ ಚಟ ಬೇರೆ.ಒಣಗಿದ ಇಷ್ಟು ಎಲೆಗಳನ್ನು ಚೀಲದಿಂದ ತೆಗೆದು ಅಂಗೈನಲ್ಲಿ ತೀಡಿ ತೀಡಿ ಆಗಾಗ ನೆನಪಾದಾಗಲೆಲ್ಲ ಎಡಗೈನಲ್ಲಿ ಕೆಳತುಟಿಯನ್ನು ಹೊರಗೆಳೆದು ಸೊಪ್ಪಿನ ಪುಡಿಯನ್ನು ತುರುಕಿ ಕೈ ಒದರಿಕೊಳ್ತಿದ್ದ. ಹಾಗೆ ವಸಡಿನಲ್ಲಿ ಒತ್ತರಿಸಿಕೊಂಡು ಹಲ್ಲುಗಳ ಸಂಧಿಯಿಂದ ಅದರ ರಸ ಹೀರಿದರೆ ಉತ್ಸಾಹದ ಚಿಲುಮೆ ಚಿಮ್ತದೆ ಅಂತಿದ್ದ.

ಬೇರೇನಕ್ಕೂ ತಲೆಕೊಡದ ಪೀರ್‍ನಿಗೆ ಇದ್ದ ಸಮಾಧಾನವೆಂದರೆ ಅಲ್ಲಾಹ್‍ನು ತನಗೆ ಒಪ್ಪಿಸಿರುವ ಕರ್ಮವನ್ನೆಲ್ಲ ತಾನು ಚಾಚೂ ತಪ್ಪದೆ ಪೂರೈಸುತ್ತಿರುವೆನೆಂದೂ ಅದರಿಂದಲೇ ಪ್ರಸನ್ನನಾದ ಆ ದೇವನು ತನಗೂ ತನ್ನ ಹೆಂಡಿರು-ಮಕ್ಕಳಿಗೂ ಸದಾ ಒಳ್ಳೆಯದನ್ನೇ ಕರುಣಿಸುತ್ತಾನೆಂಬುದು. ಹಿಂದೊಮ್ಮೆ ಕೊಲೆಯಾಗಿದ್ದ ತನ್ನ ಸೋದರ ಸಂಬಂಧಿ ಮೆಹರುನ್ನೀಸಾಳ ಹೆಣ ಕೊಯ್ಯಬೇಕಾಗಿ ಬಂದಾಗಲೂ ನಿರ್ವಿಕಾರ ಮನೋಭಾವನೆಯೊಂದಿಗೆ ತನ್ನ ಕೆಲಸ ಮುಗಿಸಿ ಯಥಾಪ್ರಕಾರ ಎರಡು ಪ್ಯಾಕೆಟ್ ಇಳಿಸಿದ್ದ. ಇಂಥಹವನಿಗೆ ಹೆಂಡಿರು ಸತ್ತ ಬಳಿಕ ಸಂಬಂಧಿಕರೆಲ್ಲ ಸೇರಿ ಬಡಹುಡುಗಿ ರುಕ್ಸಾನಳನ್ನು ನಿಕಾಹ್ ಮಾಡಿಕೊಳ್ಳುವಂತೆ ಒಪ್ಪಿಸಿದ್ದರು.ಅದೂ ಅಲ್ಲಾಹುವಿನ ಇಚ್ಛೆ ಅಂತಲೇ ಮೂರನೇ ಮದುವೆಗೂ ಒಪ್ಪಿದ.
ರುಕ್ಸಾನಾಳಿಗೆ ಈ ಮುದಿ ಗಂಡನಿಂದ ಸಂಸಾರಸುಖದ ಯಾವುದೇ ಕನಸುಗಳೂ ಇರಲಿಲ್ಲ...ರಾತ್ರಿ ಕುಡಿದುಬಂದು ಪೀಡಿಸಿ-ಹೊಡೆಯದಿದ್ದುದರಿಂದ ಅವಳ ಕಣ್ಣಿನಲ್ಲಿ ಇವನು ಒಳ್ಳೇ ಗಂಡನಾಗಿದ್ದ.ಈತ ದುಡಿದ ಹಣವೆಲ್ಲಾ ಸೇಂದಿ ಸರಾಯಿಗೇ ಸುರಿಯೋದು ನೋಡಿ ತಾನು ನಾಲ್ಕಾರು ಮನೆ ಮುಸುರೆ ತೊಳೆದು ತನ್ನ ಜೀವನ ತಾನು ನೋಡಿಕೊಳ್ಳುವಂತಾಗಿದ್ದಳು.ಮುಂದೆ ಮಗುವಾದ ಬಳಿಕವೂ ತನ್ನ ದುಡಿಮೆ ಅವಳನ್ನು ಕಾಪಾಡುತ್ತದೆಂಬ ನಂಬಿಕೆ ಅವಳಿಗಿತ್ತು.
----*-----
ಪೀರ್ ಮೊಹಮ್ಮದನ ಸಾವಿನ ನಂತರ ರುಕ್ಸಾನಾಳ ಬಾಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು.ಆದರೂ ತಾನು ಕೆಲಸ ಮಾಡುತ್ತಿದ್ದ ಮನೆಯೊಡೆಯ ನವೀದರ ಸಹಾಯದಿಂದ ಮಗ ನಾಝಿರನನ್ನು ಸರಕಾರಿ ಶಾಲೆಯೊಂದಕ್ಕೆ ಸೇರಿಸಿದ್ದಳು.ನಾಝಿರನು ಹಾಗೂ ಹೀಗೂ ಹೈಸ್ಕೂಲ್ ಮೆಟ್ಟಿಲುಗಳನ್ನೇರಿದ್ದ. ಮುಂದಕ್ಕೆ ಓದಿಸುವ ಆಸೆ ಬೆಟ್ಟದಷ್ಟಿದ್ದರೂ ರುಕ್ಸಾನಾಳ ಆರ್ಥಿಕ ಪರಿಸ್ಥಿತಿ ಅವಳಿಗೆ ಅಷ್ಟೇನು ಸಹಾಯ ಮಾಡಲಿಲ್ಲ. ನಾಝಿರನು ಓದಿನಲ್ಲಿ ಅಷ್ಟು ಚುರುಕಲ್ಲದಿದ್ದರೂ ಲೋಕಜ್ಞಾನ ತಿಳಿದವನಾಗಿದ್ದ.ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಬಿಟ್ಟು ವರ್ಕ್‍ ಶಾಪೊಂದರಲ್ಲಿ ಕೆಲಸಕ್ಕಿಳಿದಿದ್ದ.ಸಂಸಾರ ತೂಗಿಸಲು ಮಗನ ದುಡಿಮೆ ನೆರವಾಗುತ್ತಿದ್ದರಿಂದಲೋ ರುಕ್ಸಾನ ಕೂಡಾ 'ಅವನ ಹಣೆಬರಹವೇ ಇಷ್ಟು!" ಅಂದುಕೊಂಡು ನಿಟ್ಟುಸಿರುಬಿಟ್ಟಿದ್ದಳು.
ಇದ್ದ ಹಳೇ ಜೋಪಡಿಗೆ ಟಾರ್ಪಾಲ್ ಹೊದೆಸಿ ಮಳೆಗಾಲದಲ್ಲಿ ಸೋರದಂತೆ ತಾಯಿ-ಮಗ ಗಟ್ಟಿ ಮಾಡಿದ್ದರು.ನಿಷ್ಠೆ-ನಿಯತ್ತು ರುಕ್ಸಾನಳನ್ನು ಕಾಪಾಡಿತ್ತು.ತಾನು ಕೆಲಸ ಮಾಡುತ್ತಿದ್ದ ಮೂರ್ನಾಕು ಮನೆಗಳಲ್ಲಿ 'ಒಳ್ಳೇ ಹೆಂಗಸು'ಅನ್ನೋ ಹೆಸರು ಪಡೆಯುವಲ್ಲಿ ಸಫಲಳಾಗಿದ್ದಳು.ಅವಳು ಕೆಲಸ ಮಾಡುತ್ತಿದ್ದ ನವೀದ-ನುಸ್ರತ್ ದಂಪತಿಗಳ ಪ್ರೀತಿ-ವಿಶ್ವಾಸಗಳನ್ನು ಗಳಿಸಿ ಅವರ ಮಕ್ಕಳನ್ನು ಎತ್ತಿ ಆಡಿಸಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು.ನವೀದರ ಸಹಾಯದಿಂದ ಮುಂದೊಮ್ಮೆ ಸರಕಾರ ಬಡ-ಬಗ್ಗರಿಗೆ ನೀಡುವ ಉಚಿತ ನಿವೇಶನಗಳಲ್ಲಿ ಒಂದನ್ನು ತಂದುಕೊಡುವುದೆಂದು ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ಅವಳ ಬಗ್ಗೆ ಅಭಿಮಾನ ಹೊಂದಿದ್ದ ನುಸ್ರತ್ ತನ್ನ ಪತಿ ನವೀದರಿಗೆ ಹೇಳಿ ಸರಕ್ಕೊಂದು ಅರ್ಜಿ ಬರೆಸಿ ಇವಳಿಗೆ ಊರಿನಾಚೆ ಇಲವಾಲದ ಬಳಿ ಹೊಸದಾಗಿ ರೂಪುಗೊಂಡಿದ್ದ ಬಡಾವಣೆಯೊಂದರಲ್ಲಿ ನಿವೇಶನವೊಂದು ಉಚಿತವಾಗಿ ದೊರಕುವಂತೆ ಮಾಡಿಸಿದ್ದಳು.ಇದರಿಂದ ಆ ಮನೆಯ ಋಣ ತನ್ನ ಮೇಲೆ ಇಮ್ಮಡಿಯಾಗಿದೆಯೆಂದೇ ಭಾವಿಸಿದಳು ರುಕ್ಸಾನ!
----*-----
ಸುಮಾರು ಹತ್ತು ವರ್ಷಗಳಷ್ಟು ಕಾಲ ವರ್ಕ್‍ ಶಾಪಿನಲ್ಲಿ ದುಡಿದಿದ್ದ ನಾಝಿರ ಕೆಲಸವನ್ನು ಚೆನ್ನಾಗಿ ಕಲಿತು ಮನಸಿಟ್ಟು ದುಡಿಯುತಿದ್ದ.ಚಿಕ್ಕ ವಯಸ್ಸಿನಿಂದಲೇ ದುಡಿಮೆಗೆ ಬಿದ್ದವನಿಗೆ ತಾಯಿಯ ಆರೈಕೆ ಪ್ರೀತಿಗಳಿಂದ ದೂರವಾಗಿದ್ದ.ಹೀಗಾಗಿ ತಾಯಿ-ಮಗನ ಬಾಂಧವ್ಯ ಅಷ್ಟೇನು ಚೆನ್ನಾಗಿರಲಿಲ್ಲ.ಆದರೂ ತಂದೆ ಸತ್ತ ಬಳಿಕ ತನ್ನ ತಾಯಿ ದುಡಿದು ತನ್ನನ್ನು ಬೆಳೆಸುವಲ್ಲಿ ಪಟ್ಟ ಪಾಡು ಅವನ ಮನಸ್ಸಿನ ಮೂಲೆಯಲ್ಲೆಲ್ಲೋ ಕೊರೆಯುತಿತ್ತು. ಈ ಕಾರಣದಿಂದಲೋ ಏನೋ ಅವನು ತನ್ನ ಕಾಲ ಮೇಲೆ ತಾನು ನಿಂತು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳೋದಕ್ಕೆ ತಾಯಿಯ ದುಡಿಮೆಯ ಮೇಲೆ ಅವಲಂಬಿಸಲಿಲ್ಲ.
ಮೊದಮೊದೌ ತನ್ನ ದುಡಿಮೆಯ ಒಂದು ಭಾಗವನು ರುಕ್ಸಾನಾಳಿಗೆ ಕೊಡುತ್ತಿದ್ದವನು ಕಾಲಕ್ರಮೇಣ ತಾನಾಯ್ತು ತನ್ನ ಪಾಡಾಯ್ತು ಅಂತಿರುತ್ತಿದ್ದ.ಹಗಲೆಲ್ಲ ಮೈ ಮುರಿಯುವಂತೆ ದುಡಿದು ಸಂಜೆಗೆ ಸ್ನೇಹಿತರೊಡನೆ ತಿರುಗಿ ರಾತ್ರಿ ಮನೆಗೆ ಬಂದು ತಾಯಿ ಬೇಯಿಸಿದ್ದನ್ನು ಸದ್ದು ಮಾಡದೆ ಉಂಡು ಮಲಗಿದರೆ ಮುಗಿಯಿತು.ಆಗೊಮ್ಮೆ ಈಗೊಮ್ಮೆ ಬೀಡಿ ಕುಡಿಯುತ್ತಿದ್ದನಾದರೂ ಅವನಪ್ಪನಂತೆ ಚಟಕ್ಕೆ ಬಲಿಯಾಗಿರಲಿಲ್ಲ.ಬೆಳೆದ ಮಗನನ್ನು ದಬಾಯಿಸುವ ಜಾಯಮಾನ ರುಕ್ಸಾನಳದಲ್ಲ.ಹೇಗೋ ತನ್ನ ಮಗನ ಬಾಳು ಹಸನಾದರೆ ಸಾಕು ಅಂತಿದ್ದವಳಿಗೆ ಅವನ ನಿಕಾಹ್ ಮಾಡುವ ಯೋಚನೆಯೊಂದೇ ತಲೆಯಲ್ಲಿ ಗುಂಯ್‍ ಗುಡುತ್ತಿದ್ದುದು.
----*-----
ಹೀಗಿರುವಾಗ ಒಂದು ದಿನ ಸ್ನೇಹಿತರ ಸಹಾಯದಿಂದ ದೂರದ ದುಬೈಗೆ ಹೊಗಿ ಕೆಲಸ ಮಾಡುವ ಅವಕಾಶ ಬಂದೊದಗಿತ್ತು. ತೈಲ ಘಟಕವೊಂದರಲ್ಲಿಲಾರಿ ಡ್ರೈವರನ ಕೆಲಸ. ಕೆಲಸವೇನೂ ಸುಲಭದ್ದಲ್ಲ...ಹಗಲು ರಾತ್ರಿಯೆನ್ನದೆ ಊರಿಂದ ಊರಿಗೆ ತೈಲ ಸಾಗಿಸಲು ನೂರಾರು ಮೈಲಿಗಳಷ್ಟು ದೂರ ನಿದ್ದೆಗೆಟ್ಟು ಗಾಡಿ ಓಡಿಸಬೆಕಿತ್ತು.ಆದರೆ ಅದಕ್ಕೆ ದೊರಕುತ್ತಿದ್ದ ಹಣ ಇವನ ತಲೆತಿರುಗಿಸಿತ್ತು. ದುಬೈಗೆ ಹೋಗುವ ಯೋಚನೆ ಬಂದಾಗಲಿಂದ ನಾಝಿರನಿಗೆ ಊಟ ಸೇರದಂತಾಯ್ತು, ಕಣ್ಣಿಗೆ ನಿದ್ದೆ ಹತ್ತಿ ಎಷ್ಟೋ ದಿವಸಗಳಾಗಿತ್ತು...ದುಬೈಗೆ ಹೋಗುವುದಾದರೂ ಸುಲಭದ ಕೆಲಸವೇನಲ್ಲ...ಪಾಸ್‍ಪೋರ್ಟ್, ವೀಸಾ ಅಂತೆಲ್ಲ ಮಾಡಿಸಬೇಕು...ಅದನ್ನ ಮಾಡಿಸೋದಕ್ಕೆ ದಲ್ಲಾಳಿಗಳನ್ನ ಹಿಡಿಯಬೇಕು...ಟಿಕೆಟ್ಟಿಗೆ ಇಷ್ಟು ದುಡ್ಡು ತೆಗೆದಿರಿಸಬೇಕು..ಎಲ್ಲವನ್ನು ತಾಳೆ ಮಾಡಿ ನೋಡಿದರೆ ಒಟ್ಟು ಒಂದು-ಒಂದೂವರೆ ಲಕ್ಷಗಳಷ್ಟು ಹಣ ಖರ್ಚಾಗಬಹುದು ಎಂಬ ಅಂದಾಜಿಗೆ ಬಂದ ನಾಝಿರ. ಅಷ್ಟು ಹಣವನ್ನು ಹೊಂದಿಸುವುದಾದರೂ ಹೇಗೆ? ತನ್ನ ವರ್ಕ್‍ ಶಾಪಿನ ದುಡಿಮೆಯಲ್ಲಿ ಉಳಿಸಿದ್ದನ್ನೆಲ್ಲ ಕೊಓಡಿದರೂ ಹತ್ತಿಪ್ಪತ್ತು ಸಾವಿರಕ್ಕಿಂತ ಹೆಚ್ಚಿರಲಿಲ್ಲ.ಇನ್ನು ಸಾಲದ ರೂಪದಲ್ಲಿ ಅಷ್ಟು ಹಣ ಹೊಂದಿಸುವುದಾದರೂ ಹೇಗೆ?ತನಗಿರುವ ಆಸ್ತಿಯಾದರೂ ಏನು? ಸೊನ್ನೆ!

ಥಟ್ಟನೆ ತನ್ನಮ್ಮನ ಹೆಸರಿನಲ್ಲಿದ್ದ ಸರಕಾರದ ನಿವೇಶನ ಇವನ ಮನಸ್ಸನ್ನು ಆವರಿಸಿತು.ಊರಾಚೆಯಿರುವ ಸೈಟನ್ನು ತೋರಿಸಿ ಸಾಲ ಕೇಳಿದರೆ ಹೆಚ್ಚೆಂದರೆ ಒಂದು ಲಕ್ಷ ದೊರಕಬಹುದು.ಮಿಕ್ಕ ಹಣಕ್ಕೇನು ಮಾಡುವುದೆಂದು ತಲೆತುರಿಸಿಕೊಂಡ ನಾಝಿರ. ಅದರ ಬದಲಿಗೆ ತನ್ನಮ್ಮನನ್ನು ಒಪ್ಪಿಸಿ ಆ ಸೈಟನ್ನು ಮಾರಿಬಿಟ್ಟರೆ ಒಳಿತು ಅನ್ನೋ ನಿರ್ಧಾರಕ್ಕೆ ಬಂದ.ಇದಕ್ಕೆ ರುಕ್ಸಾನ ಒಪ್ಪಬೇಕಲ್ಲ! 'ಒಪ್ಪದೇ ಏನು? ಅವಳಿಗಾದರೂ ತನ್ನ ಬಿಟ್ಟರೆ ಬೇರೆ ಯಾರು ದಿಕ್ಕು...ಹೋಗೋವಾಗ ಹೊತ್ಕೊಂಡಾ ಹೋಗ್ತಾಳೆ' ಅಂತು ಅವನ ಮನಸ್ಸು.
ಈ ವಿಷಯವನ್ನು ಅಂದು ರಾತ್ರಿ ಉಣ್ಣೋ ಸಮಯದಲ್ಲಿ ತಾಯಿಯ ಮುಂದಿಟ್ಟ. ರುಕ್ಸಾನ ಸುತರಾಂ ಒಪ್ಪಲಿಲ್ಲ. ರಾತ್ರಿ ಪೂರಾ ನಿದ್ದೆ ಬಾರದೆ ಹೊರಳಾಡುತ್ತಲೇ ಇದ್ದಳು ಆಕೆ. ತನಗಿರುವ ಆಸ್ತಿಯೆಂದರೆ ತನ್ನ ಗಂಡ ಬಿಟ್ಟು ಹೋಗಿದ್ದ ತಲೆಯ ಮೇಲಿನ ಜೋಪಡಿ ಬಿಟ್ಟರೆ ಊರಾಚೆಯ ಈ ಸೈಟು. ಈಗ ಇದನ್ನೂ ಮಾರಿ ಮಗನಿಗೆ ಕೊಟ್ಟು ಕಳಿಸಿದರೆ ಇದ್ದೊಬ್ಬ ಮಗನೂ ದೂರಾಗಿ ತನ್ನ ಕಡೆಗಾಲಕ್ಕೆ ಏನು ಗತಿ ಅನ್ನೋ ಚಿಂತೆ ಕಾಡತೊಡಗಿತು.
ಬೆಳಗಾಗೆದ್ದು ನಾಝಿರನನ್ನೂ ಹೊರಡಿಸಿಕೊಂಡು ನವೀದರ ಬಳಿಗೆ ಕರೆತಂದು ತನ್ನ ಮಗನಿಗೆ ಸ್ವಲ್ಪ ಬುದ್ಧಿಹೇಳುವಂತೆ ಅಂಗಲಾಚಿದಳು.
ನವೀದರನ್ನು ಚಿಕ್ಕಂದಿನಿಂದಲೂ ಕಂಡಿದ್ದ ನಾಝಿರನಿಗೆ ಅವರ ಬಗ್ಗೆ ಗೌರವಭಾವವಿತ್ತು. ಅದರಿಂದಲೇ ನವೀದರ ಮಾತುಗಳಿಗೆ ಎದುರಾಡಲು ಅವನಿಗೆ ಆಗದೇ ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸಿ ಹಿಂದಿರುಗಿದ್ದ.
ರಾತ್ರಿಯೆಲ್ಲ ನಿದ್ದೆಬಾರದೆ ಹೊರಳಾಡುವ ಸರದಿ ಈಗ ನಾಝಿರನದಾಗಿತ್ತು.ಇಷ್ಟೂ ದಿನ ತಾವು ಪಟ್ಟ ಕಷ್ಟಗಳನ್ನು ನೆನೆದು ಕೊರಗುತಿದ್ದ.ದೂರದೂರಿನ ಬಣ್ಣಬಣ್ಣದ ಕನಸುಗಳು ಕೈಬೀಸಿ ಕರೆಯ ಹತ್ತಿದವು. ಸ್ನೇಹಿತನಿಂದ ಕೇಳಿ ತಿಳಿದಿದ್ದ ವಿಷಯಗಳೆಲ್ಲ ರಂಗುರಂಗಾಗಿ ಕಣ್ಮುಂದೆ ಬರತೊಡಗಿದವು.ಡ್ರೈವರ್ ಕೆಲಸ ಕೈತುಂಬಾ ಸಂಬಳ ಎಲ್ಲವನ್ನು ಒಮ್ಮೆಗೆ ಬಿಟ್ಟುಬಿಡುವುದಕ್ಕೆ ಅವನ ಮನಸ್ಸು ಒಪ್ಪಲಿಲ್ಲ.
----*-----
ಬೆಳಕು ಹರಿದಿತ್ತು. ವಿಮನಸ್ಕನಾಗಿದ್ದ ನಾಝಿರ ಇದ್ದಕ್ಕಿದ್ದಂತೆ ಒಂದು ನಿರ್ಧಾರಕ್ಕೆ ಬಂದವನಂತೆ ದಢಕ್ಕನೆ ಎದ್ದು ನವೀದರ ಮನೆಯೆಡೆಗೆ ಹೆಜ್ಜೆ ಹಾಕಿದ.ರಾತ್ರಿಯೆಲ್ಲ ತನ್ನ ಮನಸ್ಸಿನಲ್ಲುಂಟಾದ ಕೋಲಾಹಲಗಳನ್ನು ನವೀದರಿಗೆ ವಿವರಿಸಿದ. ಹಾಗೆಯೇ ತನಗೆ ಒದಗಿ ಬಂದಿರುವ ಅವಕಾಶವನ್ನು ಅದರಿಂದ ತನಗೂ ತನ್ನ ತಾಯಿಗೂ ಆಗಬಹುದಾದ ಪರಿಣಾಮಗಳನ್ನು ಬಣ್ಣಕಟ್ಟಿ ವಿವರಿಸಿದ..ಸಾಲದ್ದಕ್ಕೆ ಈಗ ತಾನು ಒಂಟಿಯಾಗಿ ಹೋಗುವುದಿಲ್ಲವೆಂದೂ ತನ್ನೊಡನೆ ರುಕ್ಸಾನಳನ್ನೂ ಕರೆದೊಯ್ಯುವುದಾಗಿ ಹೇಳಿದ. ಈ ಮಾತುಗಳಿಂದ ನವೀದರಿಗೆ ಸ್ವಲ್ಪ ಸಮಾಧಾನವಾಯ್ತು.ನಾಝಿರನ ಮಾತಿನಂತೆ ಅವರೇ ರುಕ್ಸಾನಳನ್ನು ಬರಹೇಳಿ ಪರಿಸ್ಥಿತಿಯನ್ನು ವಿವರಿಸಿದರು. ಮಗನೊಡನೆ ಅವಳೂ ಹೋಗುವುದರಿಂದ ಅವರ ಜೀವನದಲ್ಲಿ ಆಗಬಹುದಾದ ಸುಧಾರಣೆಗಳ ಬಗ್ಗೆ ವಿವರವಾಗಿ ತಿಳಿಹೇಳಿದರು.ನಿವೇಶನದೊಡನೆ ಅವರಿದ್ದ ಜೋಪಡಿಯನ್ನೂ ಮಾರಿದರೆ ಸುಮಾರು ಮೂರು ಲಕ್ಷದಷ್ಟು ಹಣ ದೊರೆಯಬಹುದೆಂಬ ಅಂದಾಜಿತ್ತು ನವೀದರಿಗೆ. ಅದರ ಮೇಲೆ ಕೈ ಖರ್ಚಿಗೆಂದು ಸುಮಾರು ಇಪ್ಪತ್ತು ಸಾವಿರದಷ್ಟು ಮೊತ್ತವನ್ನು ನವೀದರೇ ಕೊಡುವುದಾಗಿ ಹೇಳಿ ಧೈರ್ಯ ತುಂಬಿದರು.
----*-----
ಉಂಡನ್ನ ಅರಗೋಷ್ಟ್ರಲ್ಲಿ ನಾಝಿರ ಸೈಟು-ಜೋಪಡಿಯನ್ನ ಮಾರಿಯಾಗಿತ್ತು.ಪಕ್ಕದೂರಿನ ರೆಡ್ಡಿಗಳ್ಯಾರೊ ಇವರ ಅಂದಾಜಿಗಿಂತ ಇಪ್ಪತ್ತೇಳು ಸಾವಿರ ಕಡಿಮೆ ಹಣಕ್ಕೆ ಕೊಂಡುಕೊಂಡ್ರು. ಮೇಲಿನ ಸ್ವಲ್ಪ ಖರ್ಚನ್ನ ನವೀದರು ವಹಿಸಿದ್ದರಿಂದ ತಾಯಿ ಮಗನ ಪಾಸ್‍ ಪೋರ್ಟು,ಟಿಕೆಟ್ಟುಗಳು,ವೀಸಾ ಎಲ್ಲವೂ ಸಮಯಕ್ಕೆ ಸರಿಯಾಗಿ ಬಂದವು.ನಾಝಿರನೇ ಖುದ್ದಾಗಿ ಬೆಂಗಳೂರಿಗೆ ಹೋಗಿ ಎಲ್ಲವನ್ನೂ ಮಾಡಿಸಿಕೊಂಡು ಬಂದಿದ್ದ.ದುಬೈಗೆ ಹೊರಡೋಕೆ ಎಲ್ಲ ತಯಾರಿ ನಡೆಸಿಕೊಳ್ಳತೊಡಗಿದರು.
ಶುಕ್ರವಾರ ನಮಾಝಿಗೆ ತೆರಳಿದ್ದ ನಾಝಿರನಿಗೆ ಏನೋ ಕಸಿವಿಸಿ.ಹಿಂದಿನ ದಿನದಿಂದಲೂ ಹೊಟ್ಟೆಗೆ ಏನೂ ತಿಂದಿರಲಿಲ್ಲ...ನಾಲಿಗೆ ರುಚಿ ಕಳೆದುಕೊಂಡಿತ್ತು...ಮಂಕು ಬಡಿದಂತಾಗಿದ್ದ..ಸದಾ ಏನೋ ಯೋಚಿಸುತ್ತಿರುವವನಂತೆ ತೋರುತ್ತಿದ್ದ.ಅಲ್ಲಿ ಮಸೀದಿಯಲ್ಲಿ ಹಾಜಿ ಮೊಹಮ್ಮದರನ್ನ ಭೇಟಿ ಮಾಡಿ ತಾನು ಮತ್ತು ತನ್ನ ತಾಯಿ ರುಕ್ಸಾನ ಬೇಗಂ ದುಬೈಗೆ ಹೋಗುತ್ತಿರುವುದಾಗಿ ಹೇಳಿ ಅವರಿಂದ ಆಶೀರ್ವಾದ ಪಡೆದುಕೊಂಡು ಕುತ್ತಿಗೆಗೆ ತಾವೀಝ್ ಕಟ್ಟಿಸಿಕೊಂಡುಬಂದ.
ಭಾನುವಾರ ಬೆಳಗಿನ ಝಾವದ ಪ್ಲೇನಾದ್ದರಿಂದ ಶನಿವಾರ ರಾತ್ರಿ ಊಟ ಮುಗಿಸಿಕೊಂಡು ಸುಮಾರು ಹತ್ತೂವರೆಯ ಸುಮಾರಿಗೆ ನಾಝಿರನ ಗೆಳೆಯ ಸಲೀಂ ಪಾಶನ ಆಟೋದಲ್ಲಿ ಏರ್ಪೋರ್ಟಿಗೆ ಬಂದಿಳಿದರು.ಇತ್ತ ನಡುರಾತ್ರಿಯೂ ಅಲ್ಲ ಅತ್ತ ಬೆಳಕೂ ಹರಿದಿರುವುದಿಲ್ಲ...ಸರಿ ರಾತ್ರಿ ಎರಡೂ ಐವತಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ನೀರವಾದ ಫ್ಲೈಟು. ಇವರಿಬ್ಬರೂ ಅಲ್ಲಿ ದುಬೈನಲ್ಲಿ ಇಳಿಯುತಿದ್ದ ಹಾಗೆಯೇ ಅಲ್ಲಿದ್ದ ನಾಝಿರನ ಸ್ನೇಹಿತ ಇವರನ್ನು ಏರ್ಪೋರ್ಟಿನಿಂದ ಅವನ ಮನೆಗೆ ಕರೆದುಕೊಂಡು ಹೋಗುವವನಿದ್ದ.ಅದರಿಂದ ಹೆಚ್ಚಿನ ಗಾಭರಿಯೇನೂ ಇರಲಿಲ್ಲ ಇವರಿಗೆ...ಇವರುಗಳನ್ನು ಬೀಳ್ಕೊಡುವ ಸಲುವಾಗಿ ನವೀದರು ಸಂಸಾರದೊಡನೆ ತಮ್ಮ ಕಾರಿನಲ್ಲೇ ಬಂದಿದ್ದರು.
----*-----
ಹೆಚ್ಚಾಗಿ ಬಸ್ಸಿನಲ್ಲೂ ಪ್ರಯಾಣ ಮಾಡದವಳು ಈಗ ಏಕ್‍ದಂ ದೇಶವನ್ನೇ ಬಿಟ್ಟು, ತನ್ನೂರು ಪರಿಚಯಸ್ಥರು ಬಂಧುಗಳನ್ನೆಲ್ಲ ಬಿಟ್ಟು ದೂರದೂರಿಗೆ ಹೋಗಿರಬೇಕು ಅಂದರೆ ಹೊಟ್ಟೆಯೆಲ್ಲಾ ಮರಳಿಸುವಂತಾಗಿತ್ತು.ನುಸ್ರತ್‍ರ ಕೈ ಹಿಡಿದು ಕಣ್ಣೀರು ತುಂಬಿಕೊಂಡಿದ್ದಳು ರುಕ್ಸಾನ.ಅವಳ ಕೈಯನ್ನೇ ಬಿಗಿದಪ್ಪಿ ಹಿಡಿದು ಒಮ್ಮೆ ಸಮಾಧಾನದ ನೋಟ ಬೀರಿದರು..ಅಲ್ಲೇ ಅವಳ ಕೈಯಲ್ಲಿ ಮುದುರಿದ ಎರಡು ಐನೂರರ ನೋಟನ್ನು ತುರುಕಿದ್ದರು.ಹಲವು ವರ್ಷಗಳಿಂದ ತಮ್ಮ ಮನೆ, ಮಕ್ಕಳನ್ನು ನೋಡಿಕೊಂಡ ಹೆಂಗಸು ತಮ್ಮನ್ನೆಲ್ಲ ಬಿಟ್ಟು ದೂರದೂರಿಗೆ ಹೋಗ್ತಿರೋದು ನೋಡಿ ಅವರಿಗೂ ಸ್ವಲ್ಪ ಸಂಕಟವಾಗಿತ್ತು.

ಸಲೀಂ ಮತ್ತು ನಾವಿದರಿಗೆ ಖುದಾಹ್ ಹಾಫಿಝ್ ಹೇಳಿ ಮುಂದೆ ನಡೆದ ನಾಝಿರ. ಚೆಕಿನ್ ಎಲ್ಲ ಮುಗಿಸಿ ತಮ್ಮಿಬ್ಬರ ಪಾಸ್‍ಪೋರ್ಟ್ ಜೋಪಾನವಾಗಿ ಹೆಗಲಿನ ಬ್ಯಾಗಿನಲ್ಲಿಟ್ಟುಕೊಂಡು ತಾಯಿಯ ಕೈ ಹಿಡಿದು ಒಳನಡೆದನು.ಒಳಗೆ ಹೋಗುವ ಮುನ್ನ ದೂರದಿಂದಲೇ ನವೀದರಿಗೂ ಸಲೀಮನಿಗೂ ಮತ್ತೊಮ್ಮೆ ಕೈಬೀಸಿ ಎರ್‍ಪೋರ್ಟಿನೊಳಗೆ ನಡೆದು ಕಣ್ಮರೆಯಾದರು. ಎಲ್ಲವೂ ಒಳ್ಳೇದಾಗಲಿ ಅಂತ ಮನಸ್ಸಲ್ಲೇ ಹರಸಿ ಇತ್ತ ನವೀದರೂ ಸಂಸಾರವೂ ನಿಟ್ಟುಸಿರು ಬಿಟ್ಟು ಮನೆಗೆ ತೆರಳಿದರು.
----*-----
ಬದುಕಿನಲ್ಲಿ ಸಾಕಷ್ಟು ನೊಂದು ಬೆಂದಿದ್ದ ಜೀವಕ್ಕೆ ಏರೋಪ್ಲೇನಿನ ಪ್ರಯಾಣ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.ಅವರು ತಂದುಕೊಟ್ಟ ಊಟವನ್ನು ಮುಗಿಸಿ ಒಂದು ಕಪ್ ಬಿಸಿ ಚಾ ಹೀರಿದಾಗ ಮನಸ್ಸಿಗೆ ಹಿತವೆನಿಸಿರಬೇಕು.ತನ್ನ ಬದುಕಿನ ನೆನಪುಗಳೆಲ್ಲ ಸುರುಸುರುಳಿಯಾಗಿ ಬಿಚ್ಚಿಕೊಳ್ತಿದ್ದ ಹಾಗೆ ತನಗೇ ತಿಳಿಯದಂತೆ ನಿದ್ದೆ ಹೋಗಿದ್ದಳು.ಮುಂದಿನ ತನ್ನ ಬದುಕು ಹಸನಾಗಿದ್ದಂತೆ ಕನಸು ಕೂಡಾ ಕಂಡಳು ಮುದುಕಿ!
ದುಬೈನಲ್ಲಿ ಇಳಿದಾಗ ಸಮಯ ಸುಮಾರು ಎಂಟು ಹೊಡೆದಿತ್ತು. ಅತ್ತ ಛಳಿಯೂ ಅಲ್ಲ ಇತ್ತ ಧಗೆಯೂ ಇಲ್ಲದಂತಹ ವಾತಾವರಣ.ಏರ್‍ಪೋರ್ಟಿನ ಕಣ್ಣು ಕೋರೈಸುವ ಝಗಮಗಿಸುವ ದೀಪಗಳು ಅಂಗಡಿ ಸಾಲುಗಳನ್ನು ಬಿಟ್ಟ ಕಣ್ಣು ಬಾಯಿ ಬಿಟ್ಟು ನೋಡತೊಡಗಿದರು ಇಬ್ಬರೂ.ಲಗೇಜನ್ನೆಲ್ಲ ಟ್ರಾಲಿಗೆ ಹಾಕಿಕೊಂಡು ಬಂದು ರುಕ್ಸಾನಳಿಗೆ ಅಲ್ಲಿ ದೂರದಲ್ಲಿ ಕಾಣುವ ಶೌಚಗೃಹದೆಡೆಗೆ ಕೈ ಮಾಡಿ ತೋರಿಸಿ ಕಳಿಸಿದ.ಬೆಳಗಿನ ಉಪಹಾರವನ್ನು ಅಲ್ಲೇ ಮುಗಿಸಿದರು ಇಬ್ಬರೂ!
ನಾಝಿರನ ಸ್ನೇಹಿತ ಬಂದು ಇವರಿಬ್ಬರನ್ನೂ ಕರೆದೊಯ್ಯಬೇಕಿತ್ತು.ಆದರೆ ಯಾಕೆ ಬಂದಿಲ್ಲವೆಂಬುದು ರುಕ್ಸಾನಳಿಗೆ ತಿಳಿಯದಾಯಿತು.
ನಾಝಿರ ಏನೋ ಮರೆತವನಂತೆ ತನ್ನ ಕಿಸೆಯಲ್ಲೊಮ್ಮೆ ತಡಕಾಡಿ ಇಷ್ಟು ಹಣವನ್ನು ಹೊರತೆಗೆದ. ಆ ರೀತಿಯ ನೋಟುಗಳನ್ನು ಇವಳು ನೋಡಿಯೇ ಇರಲಿಲ್ಲ.ಅದು ದುಬೈನವರ ಹಣದ ನೋಟುಗಳು ಅನ್ನೋದು ಅರ್ಥವಾಯ್ತು. ಒಂಭತ್ತೂವರೆಯಾಗ್ತಾ ಬಂದರೂ ಯಾಕೋ ತನ್ನ ಸ್ನೇಹಿತ ಬಂದಿಲ್ಲ...ಇವನೇ ಟ್ಯಾಕ್ಸಿಯೊಂದನ್ನೆ ತರುವೆನೆಂದು ಹೇಳಿ ಇವಳನ್ನು ಅಲ್ಲಿಯೇ ಕೂರಿಸಿ ಲಗೇಜುಗಳ ಟ್ರಾಲಿಯನ್ನು ತಳ್ಳಿಕೊಂಡು ಹೊರಗೆ ನಡೆದನು.
----*-----
ಸಮಯ ಸುಮಾರು ಸಂಜೆ ನಾಕೂವರೆ.ಸೆಕ್ಯೂರಿಟಿ ಅಧಿಕಾರಿಗಳು ಉರ್ದುವಿನಂಥ ಭಾಷೆಯಲ್ಲಿ ಏನೋ ಕೇಳ್ತಿದಾರೆ..ಮಧ್ಯೆ ಮಧ್ಯೆ ಕಿರ್ರ್ ಗುಟ್ಟುವ ವಾಕಿಟಾಕಿಯಲ್ಲಿ ಯಾರ ಜತೆಗೋ ಮಾತಾಡ್ತಿದಾರೆ..ಅವರ ಎಲ್ಲ ಪ್ರಶ್ನೆಗಳಿಗೂ ಇವಳದು ನಡುಗುವ ದನಿಯಲ್ಲಿ ಒಂದೇ ಉತ್ತರ..ತನ್ನ ಮಗ ಟ್ಯಾಕ್ಸಿ ತರೋದಿಕ್ಕೆ ಹೊರಗೆ ಹೋಗಿದಾನೆ ಅನ್ನೋದು...ಗಂಟಲಿನಿಂದಾಚೆ ಮಾತುಗಳು ಹೊರಡುತ್ತಿಲ್ಲ...ಕಣ್ಣೆವೆ ತುಂಬಿಬಂದಿದೆ...ಅದುರುವ ಕೈಗಳು ಬಾಗಿಲಿನೆಡೆಗೆ ಸಂಜ್ಞೆ ಮಾಡಿ ತೋರಿಸುತ್ತಿವೆ...ತನ್ನ ಹಳೇ ಮಾಸಿದ ಬಟ್ಟೆಯ ಬ್ಯಾಗನ್ನು ಎದೆಗವಚಿಕೊಂಡು ಅವಳಲ್ಲೇ ಕುಸಿದು ಕುಳಿತಿದ್ದಾಳೆ.ಚೀಲದಲ್ಲಿ ಏನಿದೆಯೋ ತಿಳಿಯದೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.ಭಯ-ಆತಂಕದ ವಾತಾವರಣ.ನಾಲ್ಕೈದು ಕರಿ-ಕಂದು ಬಣ್ಣದ ಲ್ಯಾಬ್ರಡಾರ್ ನಾಯಿಗಳು ಸಿಕ್ಕಸಿಕ್ಕದ್ದನ್ನೆಲ್ಲ ಮೂಸಿ ನೋಡ್ತಿದೆ...ರೆಡ್ ಅಲರ್ಟ್!
----*-----
(ಮುಗಿಯಿತು)

No comments: