Monday, July 23, 2007
ಭೂಮಿ ತೂಕದವಳು……………!!!!
ಇದ್ದಿದ್ದೆ ಒಂದು ಚಿಕ್ಕ ಗುಡಿಸಲು, ಗುಡಿಸಿಲ ಮೇಲೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಇದೆಯೋ ಇಲ್ಲವೋ ಅನ್ನುವಷ್ಟು ಹುಲ್ಲು.ಈಗಲೋ ಆಗಲೋ ಧರೆಗುರುಳಲೂ ಸರತಿ ಸಾಲಿನಲ್ಲಿ ನಿಂತಿರುವ ಆ ಮನೆಯ ಬಿರುಕು ಬಿಟ್ಟ ಗೋಡೆಗಳು,ರಾತ್ರಿ ಮಳೆ ಬಂತೆಂದರೆ ಮನೆಯೊಳಗೆ ಈಜಾಡಬಹುದಾದಷ್ಟು ನೀರು ಮನೆಯ ಒಳಗೆ ಜಮಾವಣೆಯಾಗುತ್ತಿತ್ತು…ಇದ್ದ 3 ಜನಮಕ್ಕಳನ್ನು ರಾತ್ರಿ ಒಂದು ಬದಿಗೆ ಕೂರಿಸಿ ತಾನು ಮನೆಯ ಒಳಗಿದ್ದ ಅಷ್ಟೂ ನೀರನ್ನ ಹೊರಗೆ ಹಾಕಿ ಮಕ್ಕಳನ್ನೆಲ್ಲ ಹೇಗೋ ಮನೆಯ ಒಳಗೆ ಮಲಗಿಸಿ ತಾನು ತೂಕಡಿಸುತ್ತ ಮನೆಯ ಹೊರಗೆ ಕುಳಿತರೇ…”ಯಾವ ಮಿಂಡ ಬರ್ತಾನೆ ಅಂತ ಕಾಯ್ತ ಇದ್ದೀಯೇ ಹಾದರಗಿತ್ತೀ” ಅಂತಲೇ ತೂರಾಡುತ್ತ ಬರುವ ಕುಡುಕ ಗಂಡನ ಬೈಗುಳ ಕೇಳಿದೊಡನೆ ಕಣ್ಣೀರಾಗುವ ತಾಯಿ ಗಂಡನ ಬೈಗುಳಗಳಿಗೆ ಸೊಪ್ಪು ಹಾಕದೆ ಕುಡಿದು ತೂರಾಡುತ್ತಿದ್ದ ಗಂಡನನ್ನ ನಿಧಾನವಾಗಿ ಬೀಳದಂತೆ ಮನೆಯ ಒಳಕ್ಕೆ ಕರೆದುಕೊಂಡು ಹೋಗಿ ಕೂರಿಸಿ ಉಣ್ಣಲಿಕ್ಕೆ ಬಡಿಸಿದರೇ..”ಯಾಕೆ ಇಷ್ಟೇ ಅನ್ನ ಇದೆ? ಎಲ್ಲ ನಿನ್ ಮಿಂಡ ತಿಂದು ಹೋಗಿ ಬಿಟ್ನ? ಅಂತ ಹೇಳಿ ಬೆಂಕಿಕೊಳ್ಳಿಯನ್ನ ತೆಗೆದು ಗುಬ್ಬಿ ಗಾತ್ರದ ತಾಯಿಗೆ ಬಡಿದನೆಂದರೇ ತಾಯಿ ಜೋರಗಿ ಕೂಗುವಂತೆಯೂ ಇಲ್ಲ .ಅಕ್ಕ ಪಕ್ಕದ ಮನೆಯವರಿಗೇ ಗೊತ್ತಾದರೇ?..” ಇಲ್ಲ ಕಣ್ರಿ ಇದ್ದಿದ್ದೆ ಪಾವು ಅಕ್ಕಿ ಅದನ್ನೆ ಮಾಡಿದ್ದು ಅಷ್ಟೆ” ಅಂತ ತಾಯಿ ಕಣ್ಣೀರಾದರೇ ಅದ್ಯವುದರ ಪರಿವೇ ಇಲ್ಲದಂತೆ ದನಕ್ಕೆ ಬಡಿದ ಹಾಗೆ ಬಡಿದು ಅಂತ ಮಳೆಗಾಲದ ಚಳಿಮಳೆಯಲ್ಲಿ ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ತಾಯಿಯನ್ನ. ಮುದುರಿ ಮಲಗಿರುವ ಮಕ್ಕಳು ತುಟಿ ಕಚ್ಚಿ ಹಿಡಿಯ ಬೇಕಿತ್ತು ದುಃಖ… ಮಕ್ಕಳತ್ತರೇ ಮಕ್ಕಳಿಗೂ ಅದೇ ಗತಿ ಕೈಗೆ ಸಿಕ್ಕಿದನ್ನ ತೆಗೆದುಕೊಂಡು ಬಾರಿಸುತ್ತಿದ್ದ…ಆದರೂ ದೈರ್ಯ ಮಾಡಿ ಇದ್ದ ಒಬ್ಬ ಮಗ ” ಅಪ್ಪಾ ಅವ್ವಾಗೆ ಚಳಿ ಆಕೈತಿ ಒಳಕ್ಕೆ ಕರಿಲಾ ಅವ್ವನ್ನ?” ಅಂತ ಮೈ ನಡುಗುತ್ತ ಕೇಳಿದರೇ..” ಗೊತ್ತಲೆ ಸೂಳೆ ಮಗನೇ ನೀನು ನಿಮ್ಮವ್ವನ ಪರ ನೀನು ಹೊರಗೆ ಹೋಗಿ ಸಾಯಿ ನಿಮ್ಮವ್ವನ ಜೊತೆ” ಅಂತ ಹೇಳಿ ಮಗನನ್ನು ಅಂತ ಚಳಿಮಳೆಯಲ್ಲಿ ಹೊರಗೆ ಕಳುಹಿಸುತ್ತಿದ್ದ.. ಅಂತ ಚಳಿಮಳೆಯಲ್ಲಿ ಅಮ್ಮನಿಗೆ ಮಗ ಮಗನಿಗೆ ಅವ್ವ ಮಾತ್ರ ಸಮಧಾನ ಹೇಳಿ ಆ ಯಾತನಮಯ ರಾತ್ರಿಯನ್ನ ಕಳೆಯುತ್ತಿದ್ದರು…!ಅಂತ ಸಮಯದಲ್ಲಿ ಆ ದೇವರಾದವನು ಎಲ್ಲಿ ಹುಲ್ಲು ಮೆಯ್ಯುತ್ತಿದ್ದನೊ….
ಮಗಳೇ ಕಾಪೀ ಕೊಡು ಅಂತ ತನ್ನ ಮುದ್ದಿನ ಇಬ್ಬರೂ ಹೆಣ್ಣುಮಕ್ಕಳನ್ನ ಕೇಳುತ್ತಿದ್ದ ಬೆಳಗ್ಗೆ ಎದ್ದ ಕೂಡಲೇ.. ” ಹೋಗಪ್ಪ ನನಗೆ ಬೆಂಕಿ ಒಟ್ಟೋಕೆ ಬರಕಲ್ಲ ಕಾಪೀ ಮಾಡಾಕು ಬರಾಕಲ್ಲ ಅವ್ವನಿಗೆ ರಾತ್ರಿ ಹಂಗೆ ಹೊಡೆದು ಮನೆಯಿಂದ ಹೊರಗೆ ಕಳ್ಸಿದೆ, ನಾವ್ ಮಾಡಿಕೊಡಕಲ್ಲ ಹೋಗು ಅಂತ ಮುದ್ದಿನ ಹೆಣ್ಣು ಮಕ್ಕಳೂ ಹೇಳಿದರೇ” ತಲೆ ತಗ್ಗಿಸಿದ ಅಪ್ಪ ತಲೆ ಮೇಲೆತ್ತುತ್ತಿರಲಿಲ್ಲ .ಯಾವ ಮುಖವಿಟ್ಟಾದರೂ ತನ್ನಿಬ್ಬರು ಹೆಣ್ಣುಮಕ್ಕಳನ್ನ ನೋಡಿಯಾನು?..ತಗ್ಗಿಸಿದ ತಲೆ ತಗ್ಗಿಸಿಕೊಂಡೆ ಮತ್ತೆ ಮನೆಯಲ್ಲಿ ಅವ್ವ ಯಾರಿಗೂ ಕಾಣದಂತಹ ಛಹಾ ಡಬ್ಬಿಗಳಲ್ಲಿ ಮತ್ತೆ ಕಾರದ ಪುಡಿ ಡಬ್ಬಿಗಳಲ್ಲಿ ಅಡಗಿರಿಸುತ್ತಿದ್ದ ಚಿಲ್ರೆ ಕಾಸುಗಳನ್ನ ಸೇರಿಸಿ ತನ್ನ ಜೇಬಿಗಿಳಿಸಿಕೊಂಡು ಮನೆಯಿಂದ ಹೊರಕ್ಕೆ ಹೋದಮೇಲೆಯೇ ತನ್ನ ನೀಚ ತಲೆಯೆತ್ತುತ್ತಿದ್ದ.ಅದೇ ಚಿಲ್ಲರೇ ಕಾಸನ್ನ ಚೌಡಮ್ಮನ ಮನೆನಲ್ಲಿ ಎರೆಡು ಕ್ವಾಟರ್ ಸಾರಾಯಿ ಕುಡಿದುಕೊಂಡು ಬಂದು ತನ್ನ ಪೌರುಷವನ್ನ ಮತ್ತೆ ಮಕ್ಕಳ ಮುಂದೆ ತೋರಿಸುತ್ತಿದ್ದ… ” ಎಲ್ಲೆ ನಿಮ್ಮವ್ವ ರಾತ್ರಿ ಮನೆಯಿಂದ ಹೊರಗೆ ಹೋದವಳು ಇನ್ನು ಬಂದಿಲ್ಲವಲ್ರೆ? ಯಾರ ಜೊತೆಗೆ ಹೋದ್ಲು ” ಅಂತ ಕೇಳಿದರೇ… ” ಅವ್ವ ಸಾವಕಾರ್ ಗದ್ದೆ ಗೆ ಸಸಿ ಕೀಳಾಕೆ ಹೋದ್ಲು ಬೆಳಗ್ಗೆ ೫ ಗಂಟೆಗೆನೆ” ಅಂತ ಮಕ್ಕಳು ಹೇಳಿದ ಕೂಡಲೇ ಸಾವಕಾರ್ ಗದ್ದೆಗೆ ತೂರಾಡುತ್ತ ಹೋಗೇ ಬಿಡುತ್ತಿದ್ದ..ಅಲ್ಲಿ ಆ ಚಳಿಮಳೆಯಲ್ಲಿ ರಾತ್ರಿ ಪೂರ ನಿದ್ದೆಗೆಟ್ಟು ನಡಬಗ್ಗಿಸಿ ಸಸಿ ಕೀಳುತ್ತಿದ್ದವಳನ್ನ ಹಾಗೆ ಕುರಿಯನ್ನ ಎಳೆದುತರುವ ಹಾಗೆ ಗದ್ದೆಯಿಂದ ಹೊರತಂದು ಬಾರಿಸುತ್ತಿದ್ದ “ಒಂದು ಲೋಟ ಟೀ ಮಾಡಿಕೋಡಾಕೆ ಆಗಲ್ಲ ನಿಂಗೆ ನಿನ್ನ ಚರ್ಮ ಸುಲಿತೀನಿ ಹಾದರಗಿತ್ತೀ” ಅಂತ ಕೂಗಾಡುತ್ತಿದ್ದ…” ರೀ ಇನ್ನು ಸ್ವಲ್ಪ ಸಸಿ ಕಿತ್ತು ಬರ್ತೀನಿ ಮಕ್ಕಳ ಸ್ಕೂಲ್ ಪೀಜಿಗೆ ಆಕೈತಿ” ಹೋಗ್ರಿ ಮನಿಗೇ ಅಂತ ಕೇಳಿಕೊಂಡರೂ ಬಿಡುತ್ತಿರಲಿಲ್ಲ..ಗೌಡರ ಗದ್ದೆಯಿಂದ ಹೊಡೆಯುತ್ತ ಬರುತ್ತಿದ್ದವನು ಮನೆತನಕ ಬಂದರೂ ಬಿಡುತ್ತಿರಲಿಲ್ಲ.. ಊರಿನ ತನ್ನ ವಾರಿಗೆಯ ಹೆಂಗಸರ ಮುಂದೆ ತನಗಾಗುತ್ತಿದ್ದ ಅವಮಾನಕ್ಕೆ ಒಂದೊಂದು ಸಲ ಕುಸಿದು ಬೀಳುತ್ತಿದ್ದಳು…
ಒಂದೇ ಚಿಂತೆ ತನ್ನ ನೆರೆಹೊರೆಯವರೆಲ್ಲ ಗಂಡ ಹೆಂಡತಿ ಮಕ್ಕಳೊಡನೆ ಚೆನ್ನಾಗಿರಬೇಕಾದರೆ ನನಗ್ಯಾಕಪ್ಪ ಇಂತಾ ಹಿಂಸೆ ಅಂತ ದಿನಾ ಕೊರಗುತ್ತಾ ಇದ್ಲು. ತನ್ನೊಳಗೆ ಎಲ್ಲಾ ನೋವ ನುಂಗಿಕೊಂಡಿರುತ್ತಿದ್ದಳೇ ವಿನಹಾ ಅಪ್ಪಿ ತಪ್ಪಿ ಕೂಡ ನೆರೆಹೊರೆಯವರಲ್ಲಿ ತನ್ನ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ.ಕೂಲಿ ನಾಲಿ ಮಾಡಿ ಅಷ್ಟಿಷ್ಟು ಉಳಿದ ಹಣದಲ್ಲಿ ಮನೆಗೆ ಒಂದಿಷ್ಟು ಮಣ್ಣಿನ ಗಡಿಗೆಗಳನ್ನ ಶೇಕರಿಸಿಟ್ಟುಕೊಂಡರೇ ಕುಡಿದಾಗ ಅದರ ಮೇಲು ಅವನ ಕಣ್ಣು ಬೀಳುತ್ತಿದ್ದು..” ಮಗನೇ ಬಾರಲಾ ಇಲ್ಲಿ ಒಡೆದ್ ಹಾಕು ಆ ಗಡಿಗೇನ..ಯಾಕ್ ಬೇಕು ಈ ಚಿಕ್ ಮನೆಗೆ ಅಷ್ಟೋಂದು ಗಡಿಗೆಗಳು ಒಡೆದ್ ಹಾಕ್ಲ ” ಅಂತ ತನ್ನ ಮಗನಿಗೆ ಹೇಳಿದರೇ ಮಗ ಆದವನೂ ಹೇಗಾದರೂ ಒಡೆದಾನು? ” ಇಲ್ಲ ನಾನ್ ಒಡಿಯಾದಿಲ್ಲ ಅಂತ ಹೇಳಿದ ಕೂಡಲೇ ಅಲ್ಲಿದ್ದ ಮಣ್ಣಿನ ಗಡಿಗೆಯನ್ನ ಮಗನ ಮುಖಕ್ಕೆ ಬೀಸುತ್ತಿದ್ದ. ಹೀಗೆ ಮಾಡುತ್ತಿದ್ದುದ್ದರಿಂದಲೇ ಕೆಲವೊಂದು ಸಲ ಮಗ ಅಪ್ಪನ ಹೆದರಿಕೆಗೆ ಮಣಿದು ಅವ್ವಾ ಪ್ರೀತಿಯಿಂದ ಕೂಡಿಟ್ಟ ಮಣ್ಣಿನ ಗಡೀಗೆಗಳನ್ನ ನೋವಿನಿಂದ ಒಡೆದುಹಾಕುತ್ತಿದ್ದುದೂ ಇತ್ತು. ಒಂದೊಂದೆ ಮಣ್ಣಿನ ಗಡೀಗೆಗಳನ್ನ ಒಡೆದು ಹಾಕುತ್ತಿದ್ದರೆ ಅವ್ವ ಮಾತ್ರ ಮೂಲೆಯಲ್ಲಿ ಕುಳಿತು ಕಣ್ಣೀರಾಗುತ್ತಿದ್ದಳು. ಅಷ್ಟು ಮಣ್ಣಿನ ಗಡಿಗೆಗಳನ್ನ ಕೂಡಿ ಹಾಕಲಿಕ್ಕೆ ಅವಳು ಪಟ್ಟ ಕಷ್ಟವನ್ನ ನೆನೆಸಿಕೊಂಡರೆ ಎಂತವನಿಗಾದರೂ ಕರುಳು ನೋಯದೇ ಇರುವುದಿಲ್ಲ…
ಅದೆಷ್ಟು ಸಲ ಮನೆಯಿಂದ ನಡುರಾತ್ರಿ ಮಳೆಯಲ್ಲಿ ತೋಯುತ್ತ ನಿದ್ರೆ ಬಾರದ ರಾತ್ರಿಗಳನ್ನ ಕಳೆದಿದ್ದಾಳೋ ದೇವರಿಗೇ ಗೊತ್ತು… ಮನೆಯ ಗೋಡೆಗೆ ಹೊಂದಿಕೊಂಡಂತೆ ಇರುವ ಸದಾ ಕಾಲ ನೀರಿರುವ ಬಾವಿ. ಮನೆಯಿಂದ ಹೊರಗೆ ಹಾಕಿದ ಕೂಡಲೇ ಹೋಗಿ ಬಾವಿ ಕಟ್ಟೆಯ ಮೇಲೆ ಕೂರುತ್ತಿದ್ದಳು. ಮನಸ್ಸು ಮಾಡಿದ್ದರೇ ಯಾವತ್ತೋ ಒಂದು ದಿನ ಅದೇ ಬಾವಿಯಲ್ಲಿ ಹೆಣವಾಗಿ ತೇಲಬಹುದಿತ್ತು ಅವಳು. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅವಳನ್ನ ಅಂತ ಅನಾಹುತ ಮಾಡಿಕೊಳ್ಳದಂತೆ ತಡೆದಿತ್ತು.” ಅಣ್ಣಾ..ಅವ್ವ ಬಾವಿ ಕಟ್ಟೆ ಮ್ಯಾಲೆ ಕುಂತಾಳೇನೋ ನೋಡೋ ನಂಗೆ ಹೆದ್ರಿಕೆ ಆಗ್ತ ಐತಿ” ಅಂತ ತಂಗಿ ಹೇಳಿದರೇ ಅಪ್ಪನಿಗೆ ಗೊತ್ತಗದಂತೆ ಮುರುಕು ಬಾಗಿಲನ್ನ ತಳ್ಳಿಕೊಂಡು ಅಣ್ಣ ಹೊರಗೇ ನೋಡಿದರೇ ಅದೇ ಭಾವಿಕಟ್ಟೆಯ ಮೇಲೆ ಅದೇ ಚಳಿಯಲ್ಲಿ ಮುದುರಿ ಕುಳಿತುಕೊಂಡಿರುತ್ತಿದ್ದ ಗುಬಿ ಗಾತ್ರದ ಅವ್ವನ ಸ್ಥಿತಿ ನೋಡಿ ಕಣ್ಣೀರಾಗುತ್ತಿದ್ದ. ಅಳುತ್ತಿದ್ದ ಮಗನನ್ನ ಸಮಾಧಾನ ಪಡಿಸಿ “ನೀನ್ ಹೋಗಿ ಮಲಿಕ್ಯ ಮಗನೇ ಬಾಳ ಹೊತ್ತಾತು” ಅಂತ ತಾನು ಹಾಗೆ ಮುದುರಿ ಕುಳಿತುಕೊಳ್ಳುತ್ತಿದ್ದಳು.ಬೆಳಗ್ಗೆ ತನ್ನ ಕುಡುಕ ಗಂಡನ ನಿಶೆ ಇಳಿದಿದ್ದನ್ನ ನೋಡಿಕೊಂಡೆ ಮಕ್ಕಳಿಗೆ ಇದ್ದ ಅರೆಪಾವು ಅಕ್ಕಿಯಲ್ಲೆ ಗಂಜಿ ಮಾಡಿ ಹಾಕಿ ಶಾಲೆಗೆ ಕಳಿಸಿ ತಾನು ಮಾತ್ರ ಏನೂ ತಿನ್ನದೇ ಕೂಲಿ ಕೆಲಸಕ್ಕೆ ಹೊರಡುತ್ತಿದ್ದಳು. ಹಾಗೆ ಹಸಿದು ಹೋಗುತ್ತಿತ್ತ ಅವ್ವನನ್ನ ಮಕ್ಕಳೂ ಯಾಕಮ್ಮ ನೀನು ಹಂಗೆ ಹೋಕೀಯಾ ಅಂತ ಕೇಳಿದ್ರೆ..” ಅಯ್ಯೋ ಅಲ್ಲಿ ಮಧ್ಯಾಹ್ನ ಊಟ ಕೋಡುತ್ತಾರೆ ಕಣ್ರೋ ನೀವ್ ಹೋಗಿ ಅಂತ ಸಮಾಧಾನ ಮಾಡುತ್ತಾ ಕಳಿಸುತ್ತಿದ್ದಳು..
ಅವಳಿಗೆ ಯಾವತ್ತೂ ಒಡವೆ ಬಗ್ಗೆ ವ್ಯಾಮೋಹವಿರಲಿಲ್ಲ.ಇದ್ದ ತಾಳಿಗೆ ೧೦ ಬಂಗಾರದ ಗುಂಡು ಮಾಡಿಸಿ ಹಾಕಿಕೊಳ್ಳಬೆಕೆಂಬ ಆಸೆ ಮೊದಮೊದಲು ಇತ್ತಾದರೂ ಕೊನೆಕೊನೆಗೆ ತಾಳಿಯ ಮೇಲೆ ಕೂಡ ಅಂತ ನಂಬಿಕೆ ಮತ್ತೆ ವ್ಯಾಮೋಹವಿಲ್ಲದೇ ಹೋಯಿತು. ಕಾರಣ? ಕುಡಿದುಕೊಂಡು ಬಂದ ಗಂಡ ತಾಳಿಯನ್ನ ವಾರಕ್ಕೆರೆಡು ಬಾರಿ ಹರಿದು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ.ಹರಿಯುವುದು ಮತ್ತೆ ಊರಿನ ಕೆಲವು ಹಿರಿಯರು???? ರಾಜಿ ಮಾಡಿಸಿ ಕಟ್ಟಿಸುವುದು ಮಾಮೂಲೆ ಆಗಿತ್ತು.ಒಂದೊಂದು ಸಲ ಸಿಟ್ಟಿಗೆದ್ದು ನನಗೆ ನನ್ ಮಕ್ಲು ಸಾಕು ಇಂತ ಗಂಡ ನಂಗೆ ಬೇಕಾಗಿಲ್ಲ. ಹಿಂಗೇ ಇದ್ರೆ ನನ್ ಮಕ್ಳನ್ನು ಸಾಯಿಸಿ ಬಿಡ್ತಾನೆ ಇವ್ನು.ನನ್ ಮಕ್ಳು ಕಟ್ಟಿಕೊಂಡು ನಾನ್ ಎಲ್ಲಾದ್ರು ಹೋಕೇನಿ ಅಂತ ಜೋರಾಗಿ ಅಳ್ತ ಇದ್ಲು. ಮತ್ತೆ ಎಲ್ಲವನ್ನು ಸರಿ ಮಾಡಿ?? ಊರ ಹಿರಿಯರೂ ಅವರವರ ಮನೆಗೆ ಹೊರಟರೇ,ಅಂತಾ ಅವ್ವನ ಎದೆಯಲ್ಲಿ ಕೂಡ ನಡುಕ..! ಇವತ್ತು ಮತ್ತೆ ಕುಡಿದು ಬಂದು ಮನೆ ಹೊರಗೆ ನಿಲ್ಲಿಸುತಾನೆಂದು. ತಾನಾದರೂ ಎಷ್ಟು ದಿನ ಹೀಗೆ ನಿದ್ದೆಗೆಟ್ಟು ಇಂತ ನರಕಯಾತನೆಯನ್ನು ಸಹಿಸಿಕೊಂಡಾಳು?..
“ಅಕ್ಕಾ ಅಕ್ಕಾ ನಿನ್ ಗಂಡ ಕುಡಿದು ಊರು ಹೊರಗಿನ ತೋಟದಲ್ಲ್ ಬಿದ್ದಾನೆ ಮೈಮೇಲೆ ಜ್ನಾನ ಇಲ್ಲ ಮಳೆ ಬ್ಯಾರೆ ರವಷ್ಟ್ ಜಾಸ್ತೀನೆ ಬರ್ತ ಐತೆ” ಅಂತ ಊರ ದನಗಳನ್ನ ಕಾಯುವ ಹುಡುಗಾ ಹೇಳಿದ್ದೆ ತಡ.” ಈ ಮನೆಹಾಳ್ರು ನನ್ ಮನೆ ನೆ ತೆಗುದ್ರಪ್ಪಾ ಇವರ್ ಮನೆ ಹಾಳಾಗ ಈ ಸಾರಾಯಿ ಕುಡ್ಸೋರ ಮನೆ ಕಾಯ್ವಾಗ” ಅಂತ ಅಷ್ಟು ಮಳೆನಲ್ಲಿ ಕಂಬಳಿ ಹಾಕೋಂಡು, ಅಂತ ಮಳೆನಲ್ಲಿ ಓಡಿಹೋಗಿದ್ದಳು ತಾಯಿ. ಅಲ್ಲಿ ಕುಡಿದು ಬಿದ್ದಿದ್ದ ತನ್ನ ಗಂಡಾನನ್ನ ನಿಧಾನವಾಗಿ ಎಬ್ಬಿಸಿ ತಂದು ಮನೆನಲ್ಲಿ ಮಲಗಿಸಿ ಮತ್ತೆ ಬಯ್ಯೋಕೆ ಶುರು ಮಾಡ್ತ ಇದ್ಲು. ಅಷ್ಟರಲ್ಲಿ ನಮ್ಮೂರಿನ ಸಾರಾಯಿ ಮಾರೋ ಮನೆಯ ಯಜಮಾನ?? … “ಅಯ್ ಅದ್ಯಾಕಂಗೆ ಬೈಯ್ತಿಯಾ ನಿನ್ ಗಂಡನ್ ಮನೆನಲ್ಲಿ ಕಟ್ಟಾಕೋ ಕುಡಿಯಾಕೆ ಕಳ್ಸ್ ಬ್ಯಾಡ”ಅಂತ ಹೇಳಿದ ಕೂಡಲೇ ” ಹೂನೋ ಬೇವರ್ಸಿ ನನ್ ಗಂಡನ್ ಕಟ್ಟಾಕೊತೀನಿ ಮನೆಹಾಳ ಮೊದಲು ನಿನ್ನ ಹೆಂಡ್ರು ಮದ್ಯ ರಾತ್ರಿ ನಮ್ ಮನೆ ಪಕ್ಕದ್ ಮನೆ ಹನುಮಂತನ ಮನಿ ಒಳಕ್ಕೆ ಪುಸುಕ್ಕ್ ಅಂತ ಯಾಕ್ ಹೊಕ್ಕೊತ್ತಳೆ ಅಲ್ಲವ ಅವಳನ್ನ ಮೊದಲು ಕಟ್ಟಾಕೊಳೋ ರಂಡೆಗಂಡ ಮನೆಹಾಳ ನನಗೆ ಹೆಳಾಕ ಬರ್ತಿಯ ,ನಮ್ಮೂರಿನ ಹೆಂಡ್ರು ಮಕ್ಕಳ ಶಾಪ ತಟ್ಟದೇ ಬಿಡಾದಿಲ್ಲ ನೋಡು ” ಅಂತ ಅವನ ಮೇಲೆ ಜಗಳಕ್ಕೆ ಹೊರಟಿದ್ದಳು ಒಂದು ಸಲ..
ಮನೆಯಲ್ಲಿ ಗಂಡ ಎಷ್ಟೇ ಹೊಡೆದರೂ ಪಕ್ಕದ ಮನೆಯವರಿಗೆ ಗೊತ್ತಾಗದೇ ಇರುತ್ತಿದ್ದಳು..ಯಾಕೆ ಕೈಮೇಲೆಲ್ಲ ಸುಟ್ಟ ಗಾಯ ಅಂತ ಕೆಲಸಕ್ಕೆ ಹೋದಾಗ ಕೆಲ್ಸದ ಹೆಂಗಸರೂ ಕೇಳಿದರೇ” ಅಯ್ಯೋ ಅದಾ ಬೆಳಗ್ಗೆ ನಲ್ಡಿ ಮನೆ[ಸ್ನಾನದ ಮನೆ] ಗೆ ಬೆಂಕಿ ಹಾಕೋವಾಗ ಹೀಗ್ ಆಯ್ತಪ್ಪ ಅಂತ ದು:ಖ ಮುಚ್ಚಿಡುತ್ತಿದ್ದಳು.ಅದೆಷ್ಟು ದಿನ ಉಪವಾಸ ಮಾಡಿದ್ದಳೋ ದೇವರಿಗೇ ಗೊತ್ತು. ಮನೆಯಲ್ಲಿದ್ದ ಅಕ್ಕಿಯೆಲ್ಲ ಕಾಲಿಯಾಗಿ ತಿನ್ನೋಕೆ ಏನು ಇಲ್ಲವಾದಗ ಅಲ್ಲಿ ಇಲ್ಲಿ ಶೇಕರಿಸಿಟ್ಟ ನುಚ್ಚನ್ನ ಗಂಜಿ ಮಾಡಿ ಮಕ್ಕಳಿಗೆ ತಿನ್ನಿಸಿ ತಾನು ಮಾತ್ರ “ಹೊಟ್ಟೇ ಯಾಕೊ ನೋವು ಕಣ್ರೋ ನನಗೆ,ಮದ್ಯಾನ ಜಾಸ್ತಿ ಊಟ ಮಾಡಿದೆ ಅಂತ ಕಾಣುತ್ತೆ ಗೌಡರ ತೋಟದ ಕೆಲ್ಸಕ್ಕೆ ಹೋದಾಗ” ಅಂತ ಹೇಳಿ ತಾನು ಮಾತ್ರ ಹಾಗೆಯೇ ಮಲಗುತ್ತಿದ್ದಳು.ಇಂತ “ಮಹಾನ್ ಸುಳ್ಳುಗಳನ್ನೇನು ” ಕಮ್ಮಿ ಹೇಳುತ್ತಿರಲಿಲ್ಲ.
ಇದ್ದ ಹರಕಲು ಮುರುಕಲು ಮನೆಯ ೪ ಗೋಡೆಗಳಲ್ಲಿ ಆ ಹೊತ್ತಿಗಾಗಲೇ ೨ ಗೋಡೆ ಅರ್ದ ಕುಸಿದು ಕುಳಿತಿದ್ದವು. ಕಂಡ ಕಂಡವರನ್ನೆಲ್ಲ ಕಾಡಿ ಬೇಡಿ ಗ್ರಾಮಪಂಚಾಯತಿ ಕಛೇರಿಗೆ ಅಲೆದು ಅಲೆದೂ ಒಂದು ಆಶ್ರಯಾ ಮನೆಯನ್ನ ಮಂಜೂರು ಮಾಡಿಸಿಕೊಂಡೇ ಬಿಟ್ಟಳು. ಹೇಗಿದ್ರು ಸರ್ಕಾರಿ ಮನೆ ಅಲ್ಲವ ಅರ್ದಂಬರ್ದ ಆಗಿದ್ದ ಮನೆಗೆ ತನ್ನ ಗಂಡನನ್ನ ಕಾಡೀಬೇಡಿ ಅದಕ್ಕೆ ಚಂದನೆಯ ಗೋಡೆ ಕಟ್ಟಿಕೊಂಡು, ನೋಡನೋಡುತ್ತಿದ್ದಂತೆಯೆ ಒಂದು ಚಂದನೆಯ ಮನೆ ಊರ ಹೊರಗೆ ನಿಂತಿತ್ತು. ಒಂದೆ ಸಮಾಧಾನ ಅವಳಿಗೆ ಇನ್ನು ಮುಂದೆ ನನ್ನ ಮಕ್ಕಳು ಮಳೆಯಲ್ಲಿ ತೋಯುವ ಹಾಗಿಲ್ಲ.ರಾತ್ರಿಪೂರ ನಿದ್ದೆಗೆಟ್ಟು ಮಳೆಬಂದಾಗ ಒಳನುಗ್ಗುತ್ತಿದ್ದ ನೀರನ್ನ ಆಚಗೆ ಹಾಕೊ ಕರ್ಮವಿಲ್ಲ. ಹೀಗೆ ಬದುದು ಸಾಗುತ್ತಿರುವಾಗಲೇ ಒಂದು ದಿನ ಕುಡಿದು ಬಂದ ಗಂಡ ಊಟ ಬೇಕೆಂದಾಗ ” ಸ್ವಲ್ಪ ಅಕ್ಕಿ ಇತ್ತು ಮಕ್ಕಳಿಗೆ ಗಂಜಿ ಮಾಡಿ ಹಾಕಿ ಮಲಗಿಸಿಬಿಟ್ಟೆ ರೀ ನಾ ಕೂಡ ಏನು ತಿಂದಿಲ್ಲ” ಅಂದಿದ್ದು ಒಂದೆ ಮಾತು ಅದ್ಯಾವ ಮಹತಾಯಿ ಹೆತ್ತಿದ್ದಳೋ ಅವನನ್ನ ೩ ಮಕ್ಕಳಲ್ಲಿ ಅವನಿಷ್ಟ ಪಡುತ್ತಿದ್ದ ಒಂದು ಹೆಣ್ಣು ಮಗಳನ್ನ ಹೊರಗೆ ಕರೆದು ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಮನೆಗೆ ಬೆಂಕಿ ಕೊಟ್ಟೆ ಬಿಟ್ಟ..!!!! ಬೇಸಿಗೆ ಕಾಲ ಹುಲ್ಲಿನ ಮನೆಯದ್ದರಿಂದ ಬಹುಬೇಗ ಇಡೀ ಮನೆ ಬೆಂಕಿಯುಂಡೆಯಂತಾದರೇ ಮನೆಯಿಂದ ಯಾರು ಹೊರಗೆ ಬರಬಾರದೆಂದು ಮನೆ ಮುಂದೆ ಅರ್ದ ಕಟ್ಟಿದ್ದ ಗೋಡೆಯ ಹತ್ತಿರ ಕೊಡಲಿಯನ್ನು ಹಿಡಿದುಕೊಂಡು ನಿಂತಿದ್ದ ಮಹಾನುಭಾವ.ಮನೆ ಹಿಂದೆ ಕಟ್ಟಿದ ಅರ್ದ ಗೋಡೆಯನ್ನ ಹಾರಿ ತಪ್ಪಿಸಿಕೊಳ್ಳಲಡ್ಡಿಯೇನು ಇರಲಿಲ್ಲ. ಆದರೆ ತಾಯಿ ಮಕ್ಕಳ ಪುಸ್ತಕಗಳನ್ನ ಬಟ್ಟೆಬರೆಗಳನ್ನ ತೆಗಿಯೋಕೆ ಹೋಗಿ ಕೈಸುಟ್ಟುಕೊಂಡಿದ್ದಳು. ಮಗನೂ ಚಿಕ್ಕವನೇನು ಆಗಿರಲಿಲ್ಲ ಅಮ್ಮ ಮತ್ತು ತಂಗಿಯನ್ನ ಬಲವಂತವಾಗಿ ಮನೆ ಹಿಂದಿನ ಗೋಡೆಯಿಂದ ಆಚೆಗೆ ಕಳಿಸಿ ತಾನು ಗೋಡೆ ಹಾರಿ ಪ್ರಾಣ ಉಳಿಸಿಕೊಂಡಿದ್ದ. ಬೆಂಕಿ ಬಿದ್ದ ಮನೆಯಲ್ಲಿದ್ದ ಅಷ್ಟೂ ಬಟ್ಟೆಬರೆಗಳು ದಿನನಿತ್ಯ ಉಪಯೋಗಿಸುವ ಸಾಮನುಗಳು ನೋಡನೋಡುತ್ತಿದ್ದಂತೆಯ ಬೆಂಕಿಯಲ್ಲಿ ಸುಟ್ಟು ಕರುಕಲು. ತಾಯಿ ಎದೆಬಡಿದುಕೊಂಡು ಅಳುತಿದ್ದರೆ ಬೆಂಕಿ ಹಾಕಿದ ಮಹಾನುಭಾವ ಮಾತ್ರ ತನಗೇನು ಆಗೇ ಇಲ್ಲವೆಂದು ಊರ ಜನರ ಬೈಗುಳಗಳಿಗೆ ತಲೆತಗ್ಗಿಸಿ ನಿಂತಿದ್ದ. ತನ್ನದೆಲ್ಲವನ್ನು ಕಳೆದುಕೊಂಡು ತಾಯಿ ರೋಧಿಸುತ್ತಿದ್ದುದ್ದನ್ನ ಕಂಡ ಮಗ ಸಿಟ್ಟಿನಿಂದ ಅಲ್ಲೆ ಇದೆ ಮರದ ತುಂಡನ್ನ ತೆಗೆದುಕೊಂಡು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರೆ ಯಾರೆಂದರೇ ಯಾರು ಬಿಡಿಸಲು ಬಂದಿರಲಿಲ್ಲ. ಹಾಗೆ ಸಿಟ್ಟಿನಿಂದ ಕಾಲಿನಲ್ಲಿ ತುಳಿಯುತ್ತಿದ್ದ ಮಗನನ್ನ ದೂರತಳ್ಳಿದವಳೇ ” ಅಪ್ಪನಿಗೇ ಹೊಡೆಯುವಷ್ಟು ದೈರ್ಯ ಬಂತೇನೋ ನಿನಗೆ” ಅಂದು ಗಂಡನನ್ನ ಬಿಡಿಸಿಕೊಂಡಿದ್ದಳು.
ಅವತ್ತು ಅವನಿಗಾದ ಅವಮಾನದಿಂದ ಕುದ್ದು ಹೋಗಿದ್ದ.೩ ದಿನಕ್ಕೆ ತನ್ನ ಕುಡುಕ ಗೆಳೆಯರ ಸಹಕಾರದಿಂದ ಒಂದು ಚಿಕ್ಕ ಮನೆಯನ್ನ ಮಾಡಿಯೇ ಬಿಟ್ಟ. ಊರ ಮುಂದೇಯೇ ತನಗೆ ಮೈ ಕೈಯಲ್ಲಿ ರಕ್ತ ಬರುವಂತೆ ಹೊಡೆದ ಮಗನ ಮೇಲೆ ಅದ್ಯಾವ ಸಿಟ್ಟಿತ್ತೆಂದರೇ… ಸಿಕ್ಕರೆ ಅವನ ತಲೆ ಕಡಿಯುತ್ತೇನೆಂದು ಅಬ್ಬರದಿಂದ ಅಬ್ಬರಿಸುತ್ತಿದ್ದ.ದುಷ್ಟ ಅಪ್ಪನ ಹೆದರಿಕೆಯಿಂದ ಕಂಗಾಲಾದ ಮಗ ಮನೆ ಬಿಟ್ಟು ಊರಿಂದ ಹೊರ ಬಂದು ಬಿಟ್ಟ. ಮತ್ತೆ ಊರಿಗೆ ಹೋಗಿದ್ದು ೨ ವರ್ಷಗಳ ನಂತರ ಅವನ ತಂಗಿ ಪೋನ್ ಮಾಡಿ ” ಅಣ್ಣಯ್ಯಾ ಅಪ್ಪನಿಗೆ ಲಕ್ವಾ ಆಗೈತಿ ಕಣೋ” ಅಂತ ಕಣ್ಣೀರಿಟ್ಟಾಗಲೆ.
೩ ವರ್ಷಗಳ ನಂತರ ಊರಿಗೆ ಹೋದವನಿಗೆ ಅಲ್ಲಿದ್ದದ್ದನ್ನ ಕಂಡು ಮಾತೆ ಹೊರಡುತಿರಲಿಲ್ಲ. ಅಪ್ಪ ಅಸಹಾಯಕತೆಯಿಂದ ಕುಳಿತಿದ್ದ ಕೈ ಕಾಲುಗಳೆಲ್ಲ ನಡುಗುತ್ತಿದ್ದವು. ಒಂದೆ ಸಮನೇ ಕಣ್ಣೀರು ಹಾಕುತ್ತಿದ್ದ .ಗೊತ್ತಾಗಿರಬೇಕು ಅವನಿಗೆ ಯಾರು ಮತ್ತೆ ಯಾವುದು ಶಾಶ್ವತವಲ್ಲವೆಂದು. ಅವತ್ತು ಒಂದೆ ಒಂದು ಮಾತು ಆಡಲಿಲ್ಲ ಸುಮ್ಮನೆ ಕಣ್ಣೀರು ಹಾಕುತ್ತಿದ್ದ. ತಾಯಿ ಒಂದು ಮೂಲೆಯಲ್ಲಿ ಅಳುತ್ತ ಕೂತಿದ್ದಳು. ಅವತ್ತಿಂದ ಸ್ವಲ್ಪ ಬದಲಾದನಾದರೂ ಪೂರ್ತಿ ಬದಲಾಗಲಿಲ್ಲ ಅದು ಅವನ ಜಾಯಮಾನ. ಕುಡಿದು ಕುಡಿದು ಅರೋಗ್ಯ ಪೂರ್ತಿ ಹಾಳು ಮಾಡಿಕೊಂಡ. ಊರಲ್ಲಿ ಸ್ವಲ್ಪ ದಿನ ಇದ್ದು ಹಿಂದಿರುಗಿದ ಮಗನಿಗೆ ಮತ್ತೆ ಸುದ್ದಿ ಬಂತು. ಅಪ್ಪನಿಗೆ ಮಾತು ಹೊರಟು ಹೋಗಿದೆ ಸರಿಯಾಗಿ ನಡೆಯಲಿಕ್ಕು ಬರುತ್ತಿಲ್ಲ. ಮತ್ತೆ ಊರಿಗೆ ಹೋದಾಗ ನೋಡಿದರೇ ಅಪ್ಪನ ಸ್ಥಿತಿ ಕಂಡು ಕಣ್ಣೀರಾಗಿದ್ದ. ಅವತ್ತಿಂದ ಇವತ್ತಿನವರೆಗೂ ತಾಯಿ ಅವನ ಸೇವೆ ಮಾಡುತ್ತಲೇ ಇದ್ದಾಳೆ ಕೈ ಹಿಡಿದು ಕೂರಿಸುವುದರಿಂದ ಹಿಡಿದು ಅವನ ಎಲ್ಲ ಕೆಲಸಗಳನ್ನು ತಾಯಿ ತನ್ನ ಕೆಲಸಗಳೆಂದೇ ಮಾಡುತ್ತಿದ್ದಾಳೆ.ಸ್ವಲ್ಪವೂ ಅಸಹ್ಯ ಪಡದೇ ಸ್ವಲ್ಪವೂ ಬೇಸರವಿಲ್ಲದೇ. ಸರಿಯಾಗಿ ನಡೆಯಲು ಬಾರದ ಗಂಡ ಕೈ ಸನ್ನೆ ಮಾಡಿ ನನಗೆ ಸರಾಯಿ ಬೇಕೆಂದು ಕೇಳಿದಾಗ ಪಕ್ಕದೂರಿನಿಂದ ಯಾರದೋ ಕೈನಲ್ಲಿ ೫ ರೂಪಾಯಿ ಕೊಟ್ಟು ಸಾರಾಯಿ ತರಿಸಿ ತಾನೆ ಕುಡಿಸಿ ಇವತ್ತಿಗೂ ಗಂಡನ ಸೇವಯೆನ್ನ ಪ್ರೀತಿಯಿಂದ ಮಾಡುತ್ತಿದ್ದಾಳೆ. ಅವಳಿಗೆ ತನ್ನ ಗಂಡ ಕರುಣಿಸಿದ ಹಿಂಸೆ ಕಣ್ಣೀರು ಅವಮಾನ ಇದ್ಯಾವುದರ ಚಿಂತೆ ಇಲ್ಲ. ಈಗ ತನ್ನ ಗಂಡನಿಗೆ ಹೆಂಡತಿ ಮತ್ತೆ ತಾಯಿ ಎರೆಡು ಅವಳೆ…..
ಇದಕ್ಕೆ ಯಾವ ತರಹದ ಪ್ರೀತಿ ಅಂತೀರಿ? ಯಾವ ತರಹದ ಸಹನೆ ಅಂತೀರಿ? ಭೂಮಿ ತೂಕದವಳೂ ಭೂಮಿ ತೂಕದವರೂ ಅಂದರೆ ಇಂತ ತಾಯಂದಿರೇ ಅಲ್ಲವೇ?……………….
by
www.navilagari.wordpress.com
navila_gari@yahoo.com
Subscribe to:
Post Comments (Atom)
No comments:
Post a Comment