Monday, July 30, 2007

ಹೀಗೊಂದು ಸಂಜೆ...

ಪಾರ್ಕಿನ ಗೇಟಿಗೆ ಸಮೀಪದಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅವಳ ತೊಡೆಯ ಮೇಲೆ ಅವನ ಕೈ, ಅವನ ಕೈ ಮೇಲೆ ಅವಳ ಕೈ. ಅವಳ ಬೆರಳುಗಳು ಅವನ ಬೆರಳುಗಳೊಡನೆ ಆಟವಾಡುತ್ತಿದ್ದವು. ಕಳೆದ ಅರ್ಧ ಗಂಟೆಯಿಂದ ಅವರಿಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ. ಬರಿ ಬೆರಳುಗಳೊಂದಿಗೆ ಬೆರಳಾಟ, ಮನದಲ್ಲಿ ಭಾವನೆಗಳ ಹೊಯ್ದಾಟ, ಮನದಲ್ಲಿ ಮೂಡಿದ ಭಾವನೆಗಳು ಮಾತುಗಳಾಗುತಿಲ್ಲ. ಇಬ್ಬರ ಕಣ್ಣು-ಕಣ್ಣುಗಳು ಸಂಧಿಸಿದವು. ಇಬ್ಬರಿಗೂ ಭಾವನೆಗಳ ಪ್ರಾವಾಹದಲ್ಲಿ ತೆಲಿ ಹೋದಂತಾಯಿತು. ಮೊದಲು ಹತೋಟಿಗೆ ಬಂದವಳು ಅವಳೇ, ಅವನ ಕೈಯನೊಮ್ಮೆ ಅದುಮಿ, ಸಮಾಧಾನ ಮಾಡಿಕೊಳ್ಳೆಂದು ಕಣ್ಣಲ್ಲೇ ಹೇಳಿದಳು. ಅವನಿಗಿನ್ನೂ ಕಣ್ಣೀರು ತಡೆದಿಟ್ಟುಕೊಳ್ಳಲಾಗಲಿಲ್ಲ. ಕಣ್ಣೀರ ಹನಿ ಕೆನ್ನೆಯಿಂದಿಳಿದು ಕೈ ಮೇಲೆ ಬಿದ್ದಾಗಲೆ ಅವನಿಗೆ ಗೊತ್ತಾಗಿದ್ದು ತಟ್ಟನೆ ಕಣ್ಣೀರನ್ಣೊರೆಸಿಕೊಂಡು, "ತುಂಬಾ ಕಣ್ಣುನೋವೂ, ಇತ್ತಿಚಿಗೆ ಕಣ್ಣಿಂದ ನೀರು ತನ್ನಿಂದ ತಾನೇ ಹಾಗೆ ಬರುತ್ತವೆ" ಅಂದ ಅವರಿಬ್ಬರ ನಡುವೆ ಸಂಭಾಷಣೆ ಹೀಗೆ ಶುರುವಾಗಿತ್ತು

ಅವಳು ತನ್ನ ಕಣ್ಣಂಚಿಗೆ ಬಂದು ನಿಂತಿದ್ದ ಕಣ್ಣೀರ ಹನಿಗಳನ್ನು ತನ್ನ ಪುಟ್ಟ ಹಂಸಬಿಳುಪಿನ ಕೈವಸ್ತ್ರದಿಂದ ಹತ್ತಿಕ್ಕಿಕೊಂಡು, ಕಣ್ಣಲ್ಲಿ ಕಸ ಬಿದ್ದಿದೆಯೇನೋ ಎಂಬಂತೆ ಒರೆಸಿಕೊಂಡಳು, "ರಾಕ್ಷಸ ಕಣೋ ನೀನು, ಕೆಲಸಕ್ಕೆ ಅಂತ ಕುಳಿತರೆ ಏಳೋದೇ ಇಲ್ಲ, ಯಾವುದಾದರೂ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಮುಗಿಸಿ ಎಲೋ ವರೆಗೂ ಕಣ್ಣಿನ ರೆಪ್ಪೆಗಳನ್ನು ಬಡಿಯೋದಿಲ್ಲ. ಇವಾಗಲಾದ್ರೂ ಸರಿಯಾಗಿ ನಿದ್ರೆ ಮಾಡ್ತೀಯೋ ಇಲ್ವೋ, ಗೂಬೆ ಜಾತಿಯೋನೇ", ಎನ್ನುತ್ತಾ ಎದೆಯಾಳದಿಂದ ಬಾರದ ನಗೆಯನ್ನು ತುಟಿಗೆ ತರುವ ಯತ್ನ ಮಾಡಿದಳು. ಅವನು ಕೂಡ ಅದೇ ಪ್ರಯತ್ನದಲ್ಲಿ, "ನನ್ನ ಕಣ್ಣಿಗೆ ನಂಬರ ಬರದಿದ್ದರು, ನನ್ನ ಸುತ್ತಳತೆ ಸಾಕಷ್ಟು ಬೆಳದಿದೆ, ಅದಕ್ಕೆ ತಕ್ಕಂತೆ ನಿನ್ನ ಕನ್ನಡಕದ ನಂಬರ್ ಏರಿದೆ" ಎಂದ.

ಇಬ್ಬರು ಬಾರದ ನಗೆಯನ್ನು ತುಟಿಗೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕಾಲೇಜಿನಿಂದ ನೇರವಾಗಿ ಪಾರ್ಕಿಗೆ ಬಂದ ಒಂದು ಜೋಡಿ ಅವರ ಪಕ್ಕದಲ್ಲಿಯೇ ಬೈಕ ನಿಲ್ಲಿಸಿ. ಕೈ-ಕೈ ಹಿಡಿದು ಪಾರ್ಕಿನ ಗಿಡ-ಮರಗಳ ನಡುವೆ ಮರೆಯಾದರು. ಅದನ್ನು ಕಂಡ ಅವರಿಬ್ಬರ ಕಣ್ಣುಗಳಲ್ಲಿ ಹೇಳಲಾಗದ ಮಂದಹಾಸವೊಂದು ಮೀನುಗಿ, ಮೂಡಿದಷ್ಟೇ ವೇಗವಾಗಿ ಕರಗಿಹೋಯಿತು. ಇಲ್ಲಿಯವರೆಗೂ ಕೂತಿದ್ದ ಕಲ್ಲು ಬೆಂಚಿನ ಮೇಲೆ ಈಗ ಕುಳಿತುಕೊಳ್ಳಲಾಗದೇ ಚಡಪಡಿಸಿದರು. ಅದು ಇಬ್ಬರಿಗೂ ಅರ್ಥವಾಗಿ ಅಲ್ಲಿಂದೆದ್ದು ಪಾರ್ಕಿನ ಗೆಟನ್ನು ದಾಟಿ ರಸ್ತೆಗೆ ಬಂದರು. ಕಣ್ಣಲ್ಲೇ ನೂರಾರು ಮಾತು ಮಾತನಾಡಿ, ಕಣ್ಣಲ್ಲೇ ವಿದಾಯ ಹೇಳಿ ಅವನು ಎಡಕ್ಕೂ ಮತ್ತು ಅವಳು ಬಲಕ್ಕೂ ತಿರುಗಿ ಹೋರಟರು.

ಹತ್ತು ಹೆಜ್ಜೆ ನೆಡದ ಅವಳು ಅಲ್ಲಿಯೇ ಹಿಂದೆ ತಿರುಗಿ ನಿಂತಳು. ಅವನು ಹಿಂತಿರುಗಿ ನೋಡುವನೇನೋ ಎಂದು ಕಾದಳು. ಅವನು ತನ್ನಷ್ಟಕ್ಕೆ ತಾನೇ ಏನೋ ಮಾತನಾಡುತ್ತಾ ಹಾಗೆ ಹೊರಟಿದ್ದ. ಅವಳು ಸ್ವಲ್ಪ ಹೊತ್ತು ಕಾಯ್ದು, "ಇವತ್ತಿಗೂ ಇವನು ಏನು ಬದಲಾಗೆ ಇಲ್ಲ" ಎಂದುಕೊಳ್ಳುತ್ತಾ ನಿಟ್ಟುಸಿರು ಬಿಟ್ಟಳು.

ಅವನಿಗೆ ಹೋಗುತ್ತಾ ಒಮ್ಮೆ ಹಿಂತಿರುಗಿ ನೋಡಬೇಕೆನಿಸಿತು......ಮತ್ತೊಮ್ಮೆ ಅವಳ ಶಾಂತ ಸರೋವರಕ್ಕೆ ಕಲ್ಲೇಸೆದು ಕದಡುವ ಪ್ರಯತ್ನ ಬೇಡವೆಂದು ತನ್ನ ಮನಸ್ಸಿಗೆ ಬುದ್ಡಿ ಹೇಳುತ್ತಾ, ಒಮ್ಮೆ ಬೈಯುತ್ತಾ, ಮತ್ತೊಮ್ಮೆ ರಮಿಸುತ್ತಾ ಆ ಅಜ್ಜನು ಹಾಗೆಯೇ ಕಾಲೇಳೆಯುತ್ತಾ ಮುನ್ನೇಡದ. ಅಲ್ಲಿಯೇ ನಿಂತಿದ್ದ ಅಜ್ಜಿ ಮತ್ತೊಮ್ಮೆ ತನ್ನ ಹಂಸಬಿಳುಪಿನ ಕೈವಸ್ತ್ರವನ್ನು ಮುಖಕ್ಕೆ ಹತ್ತಿರ ತಂದಳು.


- ಈರಣ್ಣ ಶೆಟ್ಟರ

No comments: