ಇಂದಿನ ಯುವಜನಾಂಗದ ದೃಷ್ಟಿಯಲ್ಲಿ ಅರೇಂಜ್ಡ್ ಮ್ಯಾರೇಜ್ ಎಂಬುದು ಅರ್ಥ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವಾಗಿ ಇಂಗ್ಲೀಷಿನಲ್ಲಿ ನಾನು ಓದಿದ ಸಣ್ಣ ಕಥೆಯೊಂದನ್ನು ಕನ್ನಡದಲ್ಲಿ ಓದಿಸುವ ಪ್ರಯತ್ನ ಮಾಡಿದ್ದೇನೆ
=======================================================
ದಟ್ಟವಾದ ಗಿಡಮರಗಳ ಮಧ್ಯ ಒದ್ದೆಯಾದ ಮಣ್ಣಿನ ದಾರಿಯಲ್ಲಿ ಅವಳು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ಪಕ್ಕದಲ್ಲಿ ಬರುತ್ತಿದ್ದವನು ತನ್ನ ಗಂಡ ಎಂದಷ್ಟೆ ಅವಳಿಗೆ ಗೊತ್ತಿತ್ತು. ಅವನು ಬಹಳ ಖುಷಿಯಾಗಿ, ದೂರದಲ್ಲೆಲ್ಲೋ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಬರುತ್ತಿದ್ದ. ಅವಳ ಕೈಯ ಮೆಹಂದಿ ಎರಡು ದಿನಗಳ ಸಂಭ್ರಮವನ್ನು ನೆನಪಿಸುತ್ತಿತ್ತು.
******* *****
ಹೇಯ್. ಅಲ್ನೋಡು... !!! ಆಶ್ಚರ್ಯದಿಂದ ಏನನ್ನೋ ತೋರಿಸುತ್ತಾ ಅವನು ಕೂಗಿದ.ಅವನು ತೋರಿಸದೆಡೆಗೆ ನೋಡಿದಳು.ಸುಂದರವಾದ ಬಣ್ಣ ಬಣ್ಣದ ಬಲೂನುಗಳಿಂದ ಆಕಾಶವು ತುಂಬಿ ಹೋಗಿತ್ತು. ಮಕ್ಕಳು ಆಕಾಶವನ್ನು ನೋಡುತ್ತಾ ಕುಣಿಯುತ್ತಿದ್ದರು.ಇವನು ಅದರಲ್ಲೇ ಪೂರ್ತಿ ಮುಳುಗಿಹೋಗಿದ್ದ. ಹೌದು, ಬಣ್ಣಗಳೆಂದರೆ ಯಾವಾಗಲೂ ಖುಷಿ ಕೊಡುವಂತದ್ದು.. ಆದರೆ ಈಗೇಕೋ ಹಾಗೆ ಅನಿಸುತ್ತಿಲ್ಲ. ಏಕೆಂದರೆ ಅವಳು ಅವಳ ಗೆಳತಿಯರೊಂದಿಗೆ ಇಲ್ಲ, ಅಪ್ಪ-ಅಮ್ಮಂದಿರೊಂದಿಗಿಲ್ಲ, ತನ್ನ ಸಹೋದ್ಯೋಗಿಗಳೊಂದಿಗೂ ಇಲ್ಲ. ಇದು ಶಾಲೆಯ ಅಥವಾ ಕಂಪನಿಯಿಂದ ಬಂದ ಪ್ರವಾಸವಾಗಿರಲಿಲ್ಲ. ಇದು ಅವಳ ಜೀವನದ ಪ್ರಶ್ನೆಯಾಗಿತ್ತು ಮತ್ತು ಅವಳ ಬದುಕನ್ನು ಈ ಹುಡುಗನೊಟ್ಟಿಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿತ್ತು. ಒಂದು ರೀತಿಯ ಒಬ್ಬಂಟಿತನ, ಅಸಮಾಧಾನ ಮನಸ್ಸನ್ನು ಕಾಡುತ್ತಿತ್ತು. ತಾನು ಮದುವೆಯಾದ ಹುಡುಗನ ಹೆಸರು ಮತ್ತು ಕೆಲಸ ಇಷ್ಟು ಬಿಟ್ಟು ಮತ್ತೇನೂ ಅವಳಿಗೆ ಸರಿಯಾಗಿ ಗೊತ್ತೇ ಇರಲಿಲ್ಲ. ಆ ಹುಡುಗನನ್ನು ಇದಕ್ಕೂ ಮೊದಲು ಅವಳು ನೋಡಿದ್ದು ಒಮ್ಮೆ ಮಾತ್ರ . ಒಂದೆರಡು ಬಾರಿ ಮಾತಾಡಿದ್ದಳು ಅಷ್ಟೆ. ಎಲ್ಲವೂ ಬಹಳ ತರಾತುರಿಯಲ್ಲಿ ನಡೆದು, ಅವಳು ಉಸಿರು ಬಿಡುವುದರೊಳಗೆ ಎಲ್ಲವೂ ಮುಗಿದುಹೋಗಿತ್ತು. ಈಗ ಮದುವೆಯಾದ ಆ ಹುಡುಗನೊಂದಿಗೆ ಒಂದು ಗಿರಿಧಾಮಕ್ಕೆ ಬಂದಿದ್ದಳು. ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಇವರು ಈಗ ಯಾರೋ ಗುರುತು ಪರಿಚಯ ಇಲ್ಲದವನ ಜೊತೆ ತಮ್ಮ ಮಗಳನ್ನು ಮದುವೆ ಮಾಡಿ ಈ ರೀತಿ ಅದು ಹೇಗೆ ಇಷ್ಟು ದೂರ ಒಬ್ಬಂಟಿಯಾಗಿ ಕಳುಹಿಸಿದರು ಎಂದು ಮನಸ್ಸಿನಲ್ಲಿ ಅಪ್ಪ ಅಮ್ಮರಿಗೆ ಶಾಪ ಹಾಕುತ್ತಾ ಸುಮ್ಮನೇ ಅವನೆಡೆಗೆ ನೋಡಿತ್ತಾ ಯೋಚಿಸಿದಳು.
"ಈ ಹುಡುಗನಿಗೆ ತನ್ನ ಜೊತೆಗಿರುವವಳು ತನ್ನ ಹೆಂಡತಿ ಎಂದು ಅರ್ಥ ಆಗಿದೆಯೆ. ಅಪರಿಚಿತ ಹುಡುಗಿಯೊಬ್ಬಳನ್ನು ಈ ಹುಡುಗ ಅರ್ಥಮಾಡಿಕೊಳ್ಳುತ್ತಾನಾ, ನನ್ನ ಭಾವನೆಗಳನ್ನು ಗೌರವಿಸುತ್ತಾನಾ, ಪ್ರೀತಿ ಮಾಡುತ್ತಾನಾ, ಬಾಳುತ್ತಾನಾ! "
**************************************************
"ಅಮ್ಮಾ ಈ ರೀತಿ ಎಲ್ಲಾ ಸರಿ ಆಗಲ್ಲ, ದಯವಿಟ್ಟು ನಿಲ್ಲಿಸು ಇದನ್ನ" ಅವಳು ಕೊನೆಯ ಗಳಿಗೆವರೆಗೂ ತನ್ನ ತಾಯಿಗೆ ಹೇಳುತ್ತಲೇ ಇದ್ದರೆ ಅವಳಮ್ಮ ಅದಕ್ಕೆ ಕಿವಿಗೊಡದೆ ಮಗಳಿನ ಕೇಶ ಶೃಂಗಾರದಲ್ಲಿ ತೊಡಗಿದ್ದರು. ರಾತ್ರಿಯೆಲ್ಲಾ ಅತ್ತು ಅತ್ತು ಬಾಡಿದ ಅವಳ ಮುಖಕ್ಕೆ ಪುನಃ ಕಾಂತಿ ತರಿಸುವ ಪ್ರಯತ್ನವೆಂಬಂತೆ ಎರಡು-ಮೂರು ಸಾರಿ ಮೇಕಪ್ ಮಾಡಬೇಕಾಗಿತ್ತು. ಆದರೆ ಈಗ ಬಹಳ ತಡವಾಗಿಹೋಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಅವಳ ಮದುವೆ. ಆ ಮದುವೆಯ ಮುಂಜಾನೆ ಒಂದು ದುಃಸ್ವಪ್ನದಂತೆ ಭಾಸವಾಗಿತ್ತು. ಜೀವನದಲ್ಲಿ ಮೊದಲನೇ ಬಾರಿ ಅವಳಿಗೆ ತಾನು ಯಾರನ್ನಾದರೂ ಪ್ರೀತಿ ಮಾಡಿ ಮದುವೆಯಾಗಬೇಕಿತ್ತು ಎನಿಸಿತ್ತು. ತನಗೆ ಮನಸ್ಸಿಗೆ ಹಿತವೆನಿಸುವ, ಅವನ ಹೆಸರು ಹಿಡಿದು ಕೂಗಿ ತನ್ನ ಗೆಳತಿಯರಿಗೆಲ್ಲಾ ಪರಿಚಯ ಮಾಡಿಕೊಡುವಂತಹ, ನಂಬಿಕೆ ಇರುವಂತಹ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಿತ್ತು. ಅವಳು ಯಾರನ್ನಾದರೂ ಪ್ರೀತಿಸಿ ಅವನನ್ನೆ ಮದುವೆಯಾಗಿತ್ತೇನೆ ಎಂದಿದ್ದರೆ ಅವಳ ತಂದೆ-ತಾಯಿಗಳು ಬೇಡವೆನ್ನುತ್ತಿರಲಿಲ್ಲ. ಆದರೆ ಅವಳು ಇದುವರೆಗೂ ಯಾರನ್ನೂ ಅದರಲ್ಲೂ ಯಾವ ಹುಡುಗನನ್ನೂ ಭಾವನಾತ್ಮಕವಾಗಿ ಹಚ್ಚಿಕೊಂಡಿರಲೇ ಇಲ್ಲ. ತನ್ನ ಗೆಳೆಯರೊಂದಿಗೆ ಸ್ನೇಹದಿಂದ ವರ್ತಿಸುತ್ತಾ , ಆಟ ಆಡುತ್ತಾ, ಕೀಟಲೆ ಮಾಡುತ್ತಾ ಆರಾಮಾಗಿದ್ದಳೇ ಹೊರತು ಯಾರೊಂದಿಗೂ ಆ ರೀತಿಯ ಬೇರೆ ಭಾವನೆಗಳು ಅವಳಿಗೆ ಯಾವತ್ತೂ ಬಂದಿರಲಿಲ್ಲ. ಈಗ ಮದುವೆಯ ವಯಸ್ಸಿಗೆ ಬಂದ ಮೇಲೆ ಸಹಜವಾಗಿಯೇ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುವ ಕರ್ತವ್ಯ ತಂದೆ-ತಾಯಿಯರಿಗೆ ಬಂದಿತ್ತು. ತಮ್ಮ ಮಗಳಿಗೆ ಯೋಗ್ಯ ವರನನ್ನು ಹುಡುಕಲು ಬಹಳ ಕಷ್ಟ ಪಟ್ಟಿದ್ದರು. ಜಾತಿ, ಜಾತಕ, ಒಳ್ಳೆಯ ಕುಟುಂಬ, ಸುರೂಪಿ, ಒಳ್ಳೆ ಆದಾಯ ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಹುಡುಗನನ್ನು ಹುಡುಕಿದ್ದರು. ಅಂತೂ ಅವರ ಪ್ರಯತ್ನ ೮ ತಿಂಗಳ ನಂತರ ಫಲ ಕೊಟ್ಟಿತ್ತು. ಆದರೆ ಅವಳು ತನ್ನ ತಂದೆಗೆ ಹೇಳಿಬಿಟ್ಟಿದ್ದಳು. ಈ ಹುಡುಗನನ್ನು ನೋಡಿದರೆ ನನಗೆ ಯಾವುದೇ ಭಾವನೆಗಳು ಬರುತ್ತಿಲ್ಲ. ತನಗೆ ಅವನು ದಿನಾ ನೋಡುವ ಹುಡುಗರಂತೆ, ಚಾಟ್ ರೂಮಿನಲ್ಲಿ ಸಿಗುವ ಯಾರೋ ಒಬ್ಬನಂತೆ, ಯಾರೋ ಒಬ್ಬ ಅಪರಿಚಿತ ಮನುಷ್ಯನೇ ಹೊರತು ಬೇರೇನೂ ಅನಿಸಿರಲಿಲ್ಲ. ಅವಳ ತಂದೆ ಇಬ್ಬರನ್ನೂ ಪರಸ್ಪರ ಭೇಟಿಯಾಗಲು ಹೇಳಿದ್ದರು, ನಿಮ್ಮ ಇಷ್ಟ ಕಷ್ಟಗಳನ್ನು ಚರ್ಚಿಸಿ ಒಪ್ಪಿಗೆ ಮಾಡಿಕೊಳ್ಳಿ ಎಂದು ಅವಕಾಶ ಕೊಟ್ಟಿದ್ದರು. ಅದರಂತೆಯೇ ಭೇಟಿಯೋ ಆಯಿತು, ಮಾತಾಡಿಯೂ ಆಯಿತು. ಅದು ಅವಳಿಗೆ ತನ್ನ ಕಂಪನಿಯ ಯಾವುದೋ ಮೀಟಿಂಗಿನಂತೆ, ಸೆಮಿನಾರಿನಂತೆ ಅಷ್ಟೆ ಅನಿಸಿತ್ತು. ಬರುತ್ತಿದ್ದಂತೆ ತಂದೆ ಕೇಳಿದ್ದರು, "ಅವನೊಟ್ಟಿಗೆ ಮಾತಾಡಿದೆಯಾ, ಹೇಗನ್ನಿಸಿತು, ಹುಡುಗ ಒಳ್ಳೆಯವನು ತಾನೆ, ಚೆನಾಗಿ ಮಾತಾಡಿದನೆ?" ಅದೂ ಇದೂ ಕೇಳಿದರು. ಇನ್ನೇನು ಹೇಳುವುದು, ಎಲ್ಲಾದಕ್ಕೂ ಹೂಂ ಎಂದು ತಲೆಯಾಡಿಸಿದ್ದಳು. ಹೇಳುವುದಕ್ಕೆ ಏನಾದರೂ ಇದ್ದರೆ ತಾನೆ ! ಮನಸ್ಸಿನಲ್ಲಿ ಮಾತ್ರ "ಅವನು ಕೊಡಿಸಿದ ಐಸ್ ಕ್ರೀಂ ಒಂದು ಭಾರಿ ಚೆನಾಗಿತ್ತು" ಅಂದುಕೊಂಡು ಸುಮ್ಮನೆ ಎದ್ದು ಬಂದಿದ್ದಳು.
ಅವಳ ತಂದೆ-ತಾಯಿಗಳು, ಬಂಧುಗಳು ಎಲ್ಲಾ ಚರ್ಚಿಸಿ, ಅವಳಿಗೆ ತನ್ನ ಜೀವನ ಸಂಗಾತಿ ಆಗುವವನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಟ್ಟಾಯಿತು. ಇನ್ನು ಮದುವೆ ಮಾಡಲು ತೊಂದರೆ ಏನಿಲ್ಲ ಎಂದು ನಿರ್ಧರಿಸಿದ್ದರು. ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು. ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತ್ತು. ಮದುವೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮದುವೆ ಮನೆಯ ತುಂಬಾ ಜನಗಳು, ಹಬ್ಬದ ವಾತಾವರಣ. ಮದುವೆ ಹಾಲಿನಲ್ಲಿ ಮಕ್ಕಳು ಕುಣಿದು, ಓಡುತ್ತಾ , ಕೂಗಾಡುತ್ತಾ ಆಡುತ್ತಿದ್ದರೆ, ಹೆಂಗಸರಿಗೆಲ್ಲಾ ರೇಷ್ಮೆ ಸೀರೆಯ ಸಂಭ್ರಮ. ಹಿತವಾದ ಗುಲಾಬಿಯ,ಮಲ್ಲಿಗೆಯ ಪರಿಮಳ.. ಸಣ್ಣಗೆ ಕೇಳಿ ಬರುತ್ತಿದ್ದ ಮಂಗಳ ವಾದ್ಯದ ಸದ್ದು, ಮಂತ್ರೋದ್ಘೋಷದ ಮದ್ಯೆ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ನಂತರ ಯಥಾಪ್ರಕಾರ ಫೋಟೊಗಳಿಗೆ, ವಿಡಿಯೋ ಗೆ ಸಂಬಂಧಿಕರ, ಗೆಳೆಯರ ಜೊತೆ ನಿಂತು ಕೃತಕ ನಗೆ ಬೀರುವುದು ಎಲ್ಲಾ ಮುಗಿದಿತ್ತು. ಈಗ ಅವಳು ಅವನ ಹೆಂಡತಿ. ಸಮಾಜ ಮತ್ತು ಕಾನೂನಿನ ಪ್ರಕಾರ ಅವರಿಬ್ಬರು ದಂಪತಿಗಳು. ತಂದೆ-ತಾಯಿಯರಿಗೆ ತಮ್ಮ ಕರ್ತವ್ಯ ಭಾರ ಇಳಿದಂತೆ ನಿಟ್ಟುಸಿರು ಬಿಟ್ಟಿದ್ದರು. ತುಂಬಿದ ಮದುವೆ ಮನೆಯಿಂದ ಜನರೆಲ್ಲಾ ಒಬ್ಬೊಬ್ಬರಾಗಿ ಖಾಲಿ ಯಾಗಿ ಈಗ ಅವರಿಬ್ಬರೂ ಹೊಸ ಜಗತ್ತಿನ , ಹೊಸ ಬದುಕಿನ ಪ್ರಾರಂಭದಲ್ಲಿ ನಿಂತಿದ್ದರು.
******************************************************************************
"ಬಾ ಇಲ್ಲಿ ಕೂರೋಣ"..ಅವನು ಅವಳ ಕೈಯನ್ನು ಮೃದುವಾಗಿ ಹಿಡಿದೆಳೆಯುತ್ತಾ ಒಂದು ಕಲ್ಲಿನ ಬೆಂಚಿನೆಡೆಗೆ ಕರೆದ. ಆಗಷ್ಟೆ ಬಿದ್ದ ಸಣ್ಣ ಮಳೆಯಿಂದ ಕಲ್ಲು ಬೆಂಚು ಇನ್ನೂ ಸ್ವಲ್ಪ ಒದ್ದೆ ಇತ್ತು .. ಕೂತಾಗ ತಣ್ಣನೆಯೆ ಅನುಭವ.
"ಏನು ಯೋಚನೆ ಮಾಡ್ತಾ ಇದಿಯಾ? ನಿನಗೆ ಈ ಮದುವೆ ಇಷ್ಟ ಇರಲಿಲ್ಲವೇ?"
ಇದ್ದಕ್ಕಿದ್ದಂತೆ ಅನಿರೀಕ್ಷಿತ ಪ್ರಶ್ನೆ ಅವನಿಂದ !
ತಾನು ಉತ್ತರಿಸಬೇಕೆ? ಸುಮ್ಮನಿರಬೇಕೆ? ಏನೂ ಹೇಳಲು ಮನಸ್ಸಾಗುತ್ತಿಲ್ಲ ! ಅವಳ ಮನಸ್ಸು ತಾನು ಹಿಂದಿನ ತಿಂಗಳು ತನ್ನ ಕಂಪನಿಯಲ್ಲಿ ನಡೆಸಿಕೊಟ್ಟ ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿತ್ತು. ಅದರಲ್ಲಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ಎಷ್ಟು ವಿಶ್ವಾಸದಿಂದ ನಗುನಗುತ್ತಾ ಉತ್ತರಿಸುತ್ತಿದ್ದೆ. ಈಗೇಕೆ ಆಗುತ್ತಿಲ್ಲ !! ಅವಳು ಉತ್ತರಿಸದೇ ಸುಮ್ಮನೇ ಉಳಿದಳು.
ಅವನೆ ಮುಂದುವರೆಸಿದ .."ನಿನಗೆ ಗೊತ್ತಾ ... ನಾನು ಕೂಡ ಇಂಥಹ ಮದುವೆಗೆ ತಯಾರಿರಲಿಲ್ಲ...."!!
"ಅಯ್ಯೋ ದೇವರೆ .. ಏನಿದು !! ಇದನ್ನು ಅವನೇ ಹೇಳುತ್ತಿದ್ದಾನಾ ಅಥವಾ ನಾನೇ ಯೋಚನೆ ಮಾಡುತ್ತಾ ಜೋರಾಗಿ ಹೇಳಿಬಿಟ್ಟೆನಾ" !! ಅವಳಿಗೇ ತಿಳಿಯಲಿಲ್ಲ.
"ಅವನ ಈ ಮಾತಿನ ಅರ್ಥ ಏನು, ಅವನಿಗೆ ನಾನು ಇಷ್ಟ ಇಲ್ಲವಾ, ಅವನು ಒತ್ತಾಯಪೂರ್ವಕವಾಗಿ ನನ್ನನ್ನು ಮದುವೆಯಾದನೆ ! ಅಥವಾ ನನ್ನ ಮನಸ್ಸಿನ ಯೋಚನೆ ನನ್ನ ಮುಖಭಾವದಿಂದ ಅವನಿಗೆ ತಿಳಿದು ಹೋಯಿತಾ !! "
ಅವನ ಮುಖವನ್ನೇ ನೋಡಿದಳು.
ಅವನು ಕಿರುನಗೆಯೊಂದಿಗೆ ಮುಂದುವರೆಸಿದ...
"ನಾನು ನನ್ನ ಹುಡುಗಿಯನ್ನು ನಾನೇ ಹುಡುಕಿಕೊಳ್ಳಬೇಕು ಅಂತ ಇದ್ದೆ.. ಮನಸ್ಸಿಗೆ ಒಪ್ಪುವಂತಹ ಹುಡುಗಿಯನ್ನು ನೋಡಿ ಪ್ರೀತಿ ಮಾಡಿ ನಾನು ಅವಳ ಜೊತೆ ಸುತ್ತಾಡಬೇಕು, ಅವಳಿಗೆ ಶಾಪಿಂಗ್ ಮಾಡಿಸಬೇಕು,ತಮಾಷೆ ಮಾಡಿ ನಗಬೇಕು, ಅವಳೊಂದಿಗೆ ವಾದ ಮಾಡಬೇಕು, ಸುಖ-ದುಃಖ ಹಂಚಿಕೊಳ್ಳಬೇಕು, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು, ಒಟ್ಟಿನಲ್ಲಿ ಅವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು.. ಆಮೇಲೆ ಅವಳನ್ನ ಮದುವೆಯಾಗಿ ಅವಳೊಂದಿಗೆ ಜೀವನ ಮಾಡಬೇಕು ಅಂತ ಆಸೆ ಪಟ್ಟಿದ್ದೆ. ಬೇರೆ ರೀತಿಯ ಮದುವೆ ಏನಿದ್ದರೂ ಎಲ್ಲಾ ಸುಮ್ಮನೆ ನಾಟಕದಂತೆ ಆಗುತ್ತದೆ ಅಂತ ನನ್ನ ಭಾವನೆ ಆಗಿತ್ತು. ನಾನು ಅದಕ್ಕೆ ತಯಾರಿರಲಿಲ್ಲ. ಆದರೆ ನನ್ನ ಕೆಲಸದ ಮೇಲಿನ ಪ್ರೀತಿಯಿಂದ ಅದರಲ್ಲೆ ಮುಳುಗಿಬಿಟ್ಟೆ. ನನಗೆ ನನ್ನ ಹುಡುಗಿಯನ್ನು ಹುಡುಕಿಕೊಳ್ಳಲು ಸಮಯವೇ ಸಿಗಲಿಲ್ಲ. ಅದರ ಬಗ್ಗೆ ಯೋಚನೆ ಮಾಡಲೂ ಮನಸ್ಸು ಬರದೆ ಹೋಯಿತು.ಆದರೆ ಮದುವೆಯ ವಯಸ್ಸು ಆಗುತ್ತಿದ್ದಂತೆ ಮನೆಯಲ್ಲಿ ಹೆಣ್ಣು ಹುಡುಕಲು ಪ್ರಾರಂಭಿಸಿದಾಗಲೇ ನಾನು ಎಚ್ಚೆತ್ತು ಕೊಂಡಿದ್ದು. ಆದರೆ ಆಗ ಸಮಯ ಮಿಂಚಿ ಹೋಗಿತ್ತು. ಕೊನೆಗೆ ನಮ್ಮ ಅಪ್ಪ ಅಮ್ಮ ಯಾರನ್ನು ಹುಡುಕಿತ್ತಾರೋ ಅವಳನ್ನೇ ಮದುವೆಯಾಗುವುದು ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದನ್ನು ಬಿಟ್ಟು ಬೇರೇ ಏನನ್ನೂ ಮಾಡಲು ನನ್ನಿಂದ ಸಾದ್ಯವಿರಲಿಲ್ಲ. ಮದುವೆಗೆ ಮುಂಚೆ ನಮಗೆ ಮಾತನಾಡಲು ಅವಕಾಶ ಕೊಟ್ಟಾಗ ನಿನಗೆ ನನ್ನೊಂದಿಗೆ ಮಾತಾಡುವುದು, ಸಮಯ ಕಳೆಯುವುದು ಕಷ್ಟ, ಕಿರಿಕಿಯಾಗುತ್ತಿದ್ದುದು ನನಗೆ ಅರ್ಥ ಆಗುತ್ತಿತ್ತು. ಒಟ್ಟಿನಲ್ಲಿ ಈ ರೀತಿ ಅಪರಿಚಿತನೊಂದಿಗೆ ಇದ್ದಕ್ಕಿದ್ದಂತೆ ಬದುಕನ್ನು ಹೊಂದಿಸಿಕೊಳ್ಳಲು ನಿನಗೆ ಇಷ್ಟವಿಲ್ಲದಿರುವುದು ತಿಳಿಯುತ್ತಿತ್ತು. ಏಕೆಂದರೆ ನನಗೂ ಅದೇ ರೀತಿ ಆಗುತ್ತಿತ್ತು. ನಾವಿಬ್ಬರೂ ಅಪರಿಚಿತರು. ಆದರೆ ಏನು ಮಾಡುವುದು , ನನಗೆ ನಿನ್ನನ್ನು ಸಾಕಷ್ಟು ಅರ್ಥ ಮಾಡಿಕೊಳ್ಳಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ನನ್ನ ಬಗ್ಗೆ ನಿನಗೆ ನಂಬಿಕೆ ಬರಿಸಲು, ನಿನಗೆ ನನ್ನ ಬಗ್ಗೆ ತಿಳಿಸಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ಎಲ್ಲವೂ ತರಾತುರಿಯಲ್ಲಿ ನಡೆದು ಹೋಯಿತು. ಆದರೆ ಈಗಲೂ ಕಾಲ ಮಿಂಚಿಲ್ಲ. ನನ್ನ ಮುಂದೆ ಇನ್ನೂ ಅಗಾಧವಾಗ ಜೀವನವಿದೆ. ಅದರಲ್ಲಿ ನಿನ್ನನ್ನು ಪ್ರೀತಿಸಲು, ನೋಡಿಕೊಳ್ಳಲು, ನಿನ್ನ ನಂಬಿಕೆಯಲ್ಲಿ ಬದುಕಲು ಬೇಕಾದಷ್ಟು ಸಮಯವಿದೆ. ನಾನು ಇದುವರೆಗೂ ಹುಡುಕುತ್ತಿದ್ದ ಹುಡುಗಿ ಯಾರೋ ಅಲ್ಲ. ಅದು ನೀನೆ ಅಂದು ಕೊಳ್ಳುತ್ತೇನೆ".
ಅವನು ಅವಳ ಕಣ್ಣುಗಳನ್ನೆ ಆಳವಾಗಿ ನೋಡುತ್ತಾ ಕೇಳಿದ.
" ಈಗ ಹೇಳು ನೀನು ನನ್ನನ್ನು ಪ್ರೀತಿಸ್ತೀಯಾ?"
ಅವಳ ಕಣ್ಣಿಂದ ನೀರ ಹನಿಯೊಂದು ಜಾರಿತು. ತನ್ನ ತಂದೆ-ತಾಯಿಗಳು ತನಗೆ ನಿಜವಾಗಿಯೂ 'ಯೋಗ್ಯ' ಹುಡುಗನನ್ನೇ ಹುಡುಗನನ್ನೆ ಹುಡುಕಿದ್ದಾರೆ ಅನ್ನಿಸಿತು. ಮನಸ್ಸಿನಲ್ಲಿಯೇ ಅಪ್ಪ-ಅಮ್ಮರಿಗೆ ನಮಸ್ಕಾರ ಮಾಡಿದಳು."ನನ್ನನ್ನು ಪ್ರೀತಿಸುತ್ತೀಯಾ" ಎಂದು ಅವನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯ ಕಾಣಿಸಲಿಲ್ಲ. ಇಬ್ಬರಿಗೂ ಅದರ ಉತ್ತರ ತಿಳಿದಿತ್ತು.
ಅವನು ಅವಳ ಹೆಗಲ ಮೆಲೆ ಕೈ ಹಾಕಿ, ಅವಳು ಅವನ ಭುಜಕ್ಕೊರಗಿ ನಡೆಯುತ್ತಿದ್ದರೆ ಮುಳುಗುತ್ತಿದ್ದ ಸೂರ್ಯ ಅಲ್ಲಿ ಪ್ರಾರಂಭಗೊಂಡ ಹೊಸ ಬದುಕೊಂದಕ್ಕೆ ಸಾಕ್ಷಿಯಾಗಿದ್ದ. ಹಿತವಾದ ತಂಗಾಳಿ ಬೀಸುತ್ತಾ ಮರಗಿಡಗಳು ತೂಗಾಡುತ್ತಾ ಪ್ರಕೃತಿಮಾತೆ ಹೊಸ ದಾಂಪತ್ಯಕ್ಕೆ ಎದೆತುಂಬಿ ಹಾರೈಸಿದ್ದಳು.
Tuesday, July 31, 2007
Subscribe to:
Post Comments (Atom)
No comments:
Post a Comment