ನಾನು ೧೯೭೭ರಲ್ಲಿ ಹಿರಿಯೂರಿನಲ್ಲಿ ಸರ್ಕಾರಿ ಬಾಲಕರ ಕಿರಿಯರ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾಗ ಈ ಘಟನೆ ನಡೆಯಿತು. ನಮ್ಮ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳಲ್ಲಿ ಬಹುತೇಕರು ಆರ್ಥಿಕವಾಗಿ ತೀರಾ ಹಿಂದುಳಿದ ಹಿನ್ನೆಲೆಯಿಂದ ಬಂದವರಾದ್ದರಿಮ್ದ ಎಷ್ಟೋ ಸಮಯ ಬಹಳಷ್ಟು ಜನರಿಗೆ ಬಟ್ಟೆಬರೆ ಚೆನ್ನಾಗಿರುತ್ತಿರಲಿಲ್ಲ. ನನ್ನ ಮನೆಗೆ ಹತ್ತಿರವೇ ಮನೆ ಇದ್ದ ಸಹಪಾಠಿಯೊಬ್ಬ ಪ್ರತಿದಿನ ಶಾಲೆಯಿಂದ ಹಿತಿರುಗುವಾಗ ನನ್ನನ್ನು ಬಹಳಷ್ಟು ಬಲವಂತ ಮಾಡಿ ಇಡೀ ಶಾಲೆಯಲ್ಲಿ ನನ್ನ ಬಳಿ ಮಾತ್ರ ಇದ್ದಂತಹ ಅಲ್ಯೂಮೀನಿಯಂ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದ. ಅವನ ಚೀಲವನ್ನು ನಾನು ಹಿಡಿದುಕೊಳ್ಳಬೇಕಾಗುತ್ತಿತ್ತು. ತಾನು ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದೇನೆ ಎನ್ನುವುದೇ ಅವನಿಗೆ ಅತ್ಯಂತ ಸಂತಸದ ವಿಷಯವಾಗಿತ್ತು!
ನಾನೊಂದು ದಿನ ಹೊಸ ಬಟ್ಟೆಯನ್ನು ಧರಿಸಿಕೊಂಡು ಶಾಲೆಗೆ ಹೋದೆ. ಗಂಟೆ ಬಾರಿಸಲು ಸಮಯ ಇನ್ನೂ ಬಹಳಷ್ಟಿತ್ತು. ವಿದ್ಯಾರ್ಥಿಗಳು ಹೆಚ್ಚು ಬಂದಿರಲಿಲ್ಲ. ಅಂದು ಹೊಸ ಬಟ್ಟೆ ಧರಿಸಿದ ಹುರುಪಿನಲ್ಲಿ ಶಾಲೆಗೆ ನಾನು ಬಹಳ ಮುಂಚೆಯೇ ಹೋಗಿ ಬಿಟ್ಟಿದ್ದೆ! ಶಾಲೆಯ ಹಿಂದೆ ಶಾಲೆಗೆ ಸೇರಿದ್ದ ಸಣ್ಣದೊಂದು ಕೈತೋಟವಿತ್ತು ಸುಮ್ಮನೇ ಅಲ್ಲಿಗೆ ಹೋದೆ. ಅಲ್ಲಿ ನನ್ನ ಟ್ರಂಕ್ ಗೆಳೆಯ ನೇರಳೇ ಹಣ್ಣು ತಿನ್ನುತ್ತಾ ಕುಳಿತಿದ್ದ. ನನ್ನನ್ನು ನೋಡಿ ನನಗೂ ನೇರಳೇ ಹಣ್ಣನ್ನು ಕೊಟ್ಟ. ಆಗ ಸಹಜವಾಗಿ ಅವನ ದೃಷ್ಟಿ ನಾನು ಧರಿಸಿದ ಅಂಗಿಯ ಮೇಲೆ ಹರಿಯಿತು. ಅದರ ಬಣ್ಣ ಅವನಿಗೆ ತುಂಬಾ ಮೆಚ್ಚುಗೆಯಾಯಿತು. ಒಂದೇ ಒಂದು ಕ್ಷಣ ನಿನ್ನ ಅಂಗಿಯನ್ನು ಹಾಕಿಕೊಂಡು ನೋಡಿ ಕೊಡುತ್ತೇನೆ ಬಿಚ್ಚಿಕೊಡು ಎಂದು ಅವನು ಹೇಳಿದ್ದಕ್ಕೆ ಬಿಚ್ಚಿಕೊಟ್ಟೆ. ನನ್ನ ಅಂಗಿಯನ್ನು ಅವನು ಧರಿಸಿದ ಕೂಡಲೇ ತನ್ನ ಕೈ ಚೀಲವನ್ನು ಬಿಸುಟು ನಾಗಾಲೋಟದಿಂದ ಓಡಿಹೋದ. ನಾನು ಕೂಗಿದರೂ ನಿಲ್ಲಲಿಲ್ಲ! ನಾನು ಬರಿಯ ಚೆಡ್ಡಿ ಹಾಗೂ ಬನಿಯನ್ನಿನಲ್ಲಿ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ನಿಂತಿದ್ದೆ (ಈಗ ಇದನ್ನು ನೆನಪಿಸಿಕೊಂಡಾಗಲೆಲ್ಲಾ ನಗು ಬರುತ್ತದೆ) ನನಗೆ ಅವನ ಮೇಲೆ ಕೋಪ ಬಂದಿತು. ನನ್ನ ಟ್ರಂಕ್ ನೊಂದಿಗೆ ಅವನು ಬಿಸುಟಿದ್ದ ಚೀಲವನ್ನೂ ಹಿಡಿದುಕೊಂಡು ಅವನ ಮನೆಯ ಕಡೆ ನಡೆಯತೊಡಗಿದೆ. ನಾನು ಅರ್ಧ ದಾರಿಯೂ ಸಹ ಕ್ರಮಿಸುವ ಮೊದಲೇ, ಅವನು ಯಾವ ವೇಗದಲ್ಲಿ ಓಡಿ ಹೋಗಿದ್ದನೋ ಅದೇ ವೇಗದಲ್ಲಿ ಓಡಿ ಬರುತ್ತಿದ್ದ! ನನ್ನನ್ನು ಕಂಡಕೂಡಲೇ ನಿಂತು ಏದುಸಿರು ಬಿಡುತ್ತಾ 'ಗುರು, ನಿನ್ನ ಅಂಗಿಯನ್ನು ನಮ್ಮಮ್ಮನಿಗೆ ತೋರಿಸಲು ಹೋಗಿದ್ದೆ ಚೆನ್ನಾಗಿದೆ ಅಂದ್ರು ನನಗೂ ಹಬ್ಬಕ್ಕೆ ಇಂಥದನ್ನೇ ಕೊಡುಸ್ತಾರಂತೆ' ಎಂದು ಸಂತಸದಿಂದ ಹೇಳಿದ.
ಅಂದು ಚಿಕ್ಕ ವಯಸ್ಸಿನ ನನಗೆ ಅವನ ಸಂತಸ ಅರ್ಥ ಮಾಡಿಕೊಳ್ಳುವ ಶಕ್ತಿ ಇರಲಿಲ್ಲ. ಬನಿಯನ್ನಿನಲ್ಲಿ ನಿಲ್ಲಿಸಿದನಲ್ಲ ಎನ್ನುವ ಕೋಪದಿಂದ ಅವನನ್ನು ಹೀನಾಮಾನ ನಿಂದಿಸಿದೆ. ನಾನು ನಿಂದಿಸಿದರೂ ಹೊಸ ಅಂಗಿ ಧರಿಸದೆ ಹೊಸ ಅಂಗಿ ಬರುತ್ತದೆಂಬ ಸಂತಸ ಅವನಲ್ಲಿ ಕಡಿಮೆಯಾಗಲಿಲ್ಲ!
ಇಂದು ಅವನು ಎಲ್ಲಿದ್ದಾನೋ ನನಗೆ ತಿಳಿದಿಲ್ಲ, ತೀರಾ ದುರ್ಬಲವಾದ ಆರ್ಥಿಕ ನೆಲೆಗಟ್ಟಿನಿಂಡ ಬಂದಿದ್ದ ಅವನಿಗೆ ನನ್ನ ಹೊಸ ಅಂಗಿಯನ್ನು ಧರಿಸಿ ಪಡೆದ ಆನಂದದ ಕ್ಷಣ ನನ್ನಲ್ಲಿ ಶಾಶ್ವತವಾಗಿ ನೆಲೆಯೂರಿದೆ.
ಈ ಅನುಭವ ಕಥನ ೨೦೦೧, ಜನವರಿಯ 'ಕಸ್ತೂರಿ' ಮಾಸಿಕದಲ್ಲಿ 'ಇದುವೆ ಜೀವ... ಇದು ಜೀವನ' ಎಂಬ ಕಾಲಂನಲ್ಲಿ ಪ್ರಕಟವಾಗಿತ್ತು
- ಟಿ ಎಸ್ ಗುರುರಾಜ
Monday, July 30, 2007
Subscribe to:
Post Comments (Atom)
No comments:
Post a Comment