Wednesday, December 12, 2007

ಈ ಪ್ರೀತಿ, ಈ ಪ್ರೇಮ ತುಸು ನನಗೂ ಹೊಸದು, ತುಸು ನೀನಗೂ ಹೊಸದು

ನೀನು ಬರ್ತೀಯೋ ಇಲ್ವೋ? ಏನೋ ಅನ್ನೋದನ್ನ ನನಗೆ ಹತ್ತೇ ಹತ್ತು ನಿಮಿಷದಲ್ಲಿ ಹೇಳು, ನಾನು ಹೊರಗಡೆ ನಿನಗೋಸ್ಕರ ಕಾಯ್ತಾ ಇರ್ತೀನಿ", ಎಂದು ಭೂಸುಗೂಡುತ್ತಾ ಹರ್ಷ ಲೈಬ್ರರಿಯಿಂದ ಹೊರಗಡೆ ಬಂದು ಗಿಡದ ನೆರಳಿಗೆ ನಿಂತ.

'ಏನೋ ಇವಳೊಬ್ಬಳಿಗೆ ಮಾತ್ರ ಇಂಟರ್ನಲ್ ಇರೋ ಹಾಗೆ ಮಾಡ್ತಳೆ, ಬೇರೆಯವರಿಗೇನು ಇಲ್ವಾ'. ಯಾವತ್ತೂ ತನ್ನ ಬೈಕ ಮುಟ್ಟಿಸೋಕೆ ಬಿಡದೆ ಇರೋ ಪಕ್ಯಾ (ಪ್ರಕಾಶ) ಇವತ್ತು ನನ್ಮಗ ಯಾವ ಮೂಡಲ್ಲಿದ್ನೊ, "ಮಾಮಾ, ನನ್ನ ಹುಡಿಗಿನ ಎಲ್ಲಾದ್ರೂ ಸುತ್ತಾಡಿಸ್ಕೊಂಡು ಬರ್ತೀನಿ ಬೈಕ ಕೊಡೋ" ಎಂದ ಕೂಡಲೇ ಕೊಟ್ಟೆ ಬಿಟ್ಟ, ಪೆಟ್ರೋಲ್ ಟ್ಯಾಂಕ ಬೇರೆ ಫೂಲ ತುಂಬಿಸಿದ್ದಾನೆ. ಇವಳು ನೋಡಿದ್ರೆ 'ಇವತ್ತು ಬ್ಯಾಡಾ, ಮತ್ಯಾವತ್ತರ ಹೋಗೋಣೂ' ಅನ್ನುತ್ತಿದ್ದಾಳೆ.

ಮೊನ್ನೆ ಇವಳು ಕರೆದು ಕೂಡ್ಲೇ ಆ ಹುಸೆನ್ಯಾ "ಚಿಕನ್" ಮಾಡಿಸಿಕೊಂಡು ಬರವೊನಿದ್ರು, ನನ್ನ ಫೆವರಿಟ್ ಚಿಕನ್ ತಿನ್ನುದು ಬಿಟ್ಟ ಇವಳ ಜೊತೆ ಆ ಕೃಷ್ಣನ ಗುಡಿಗೆ ಹೋದ್ಯಾ, ಅಲ್ಲಿ ಆ ಸುಂಬಳ ಬುರುಕಿ ಸೂಜಿ ಸಿಕ್ಕ ಕೂಡ್ಲೇ, ಆಕಿ ಜೋಡಿ ಬಂದಿದ್ದ ಅವಳ ಅಕ್ಕನ 3 ವರ್ಷದ ಮಗುವಿನ ಜೊತೆ ನನ್ನನ್ನೇ ಮರೆತು ಒಂದು ಗಂಟೆ ಆಟ ಆಡಿದ್ಲು, ಖರೇಣಾ ಒಂದ ಗಂಟೆ, ನಾನು ವಾಚನ್ನೇ ನೊಡ್ಕೋತ ಕೂತಿದ್ದ್ಯ. ಕೊನಿಗಿ ಆ ಸುಂಬಳ ಸೂಜಿ ಆಕಿ ಮನಿಗಿ ಬಾ ಅಂತ ಕರೆದ್ರ ಹೊರಟೆ ಬಿಟ್ಲು, "ನೀನು ರೂಮಿಗೆ ಹೋಗೋ, ನಾನು ಈಕೀ ಮನೆಯಿಂದ ಸೀದಾ ಹಾಸ್ಟೆಲಗೆ ಹೋಗ್ತೀನಿ" ಅಂತ ಹೇಳಿ ಆ ಮಗುವನ್ನೆತ್ತಿಕೊಂಡು ಅದಕ್ಕೆ ಮುತ್ತು ಕೊಡುತ್ತಾ ಹೋದಳು, ನನಗದೆಷ್ಟು ಉರಿತು.... ಚಿಕನ್ ಆದ್ರೂ ಸಿಗುತ್ತೆ ಅಂತ ರೋಮಿಗೆ ಬಂದ್ರೆ ಆ ನನ್ಮಕ್ಳು ಪಕ್ಯಾ, ಶಂಕರ್ಯಾ, ರಾಜ್ಯಾ ಕೂಡಿಕೊಂಡು ಡಬ್ಬಿ ನೆಕ್ಕೋತ ಕುಂತಿದ್ರು. ಅದಕ್ಕೆ ಮೇಲಾಗಿ ಆ ಪಕ್ಯಾ, "ಏನೋ ಮಾಮಾ, ನಿನ್ನ ಸುಮ್ಮಿನ ಎಲ್ಲಿಗ್ಯೋ ಕರ್ಕೊಂದ ಹೊಕ್ಕಿನಿ ಅಂತ ಹೇಳಿ ಇಷ್ಟ ಜಲ್ದಿ ಹೊಳ್ಳಿ ಬಂದ್ಯಲ್ಲೇ" ಅಂತ ನಗ್ತಾ ಕೇಳಿದಾಗ ಮೈಯೆಲ್ಲ ಉರ್ಕೊಂಡು ಬಂದು... ಏನು ಮಾಡಾಕಾಗ್ಡೆ ತಲೆನೋವು ಅಂತ ಮುಸುಕೇಳೆದುಕೊಂಡು ಮಲಗಿದೆ.

ಅಂತಾದ್ರಲ್ಲಿ ಇವತ್ತು ಬೈಕ್ ತಗೊಂಬಂದು, ಹೊರಗಡೆ ಹೋಗೋಣ ಬಾ ಅಂದ್ರೆ ಇವಳೊಬ್ಬಳು. ಹಾಂ.. ಬರ್ತಾಯಿದ್ದಾಳೆ.. ಅವಳ ಹೆಜ್ಜೆ ಸಪ್ಪಳ ಎಲ್ಲಿದ್ರು ಗುರ್ತಿಸಿಬಿಡ್ತೀನಿ.. ಅವನು ಮುಖದ ಮೇಲಿನ ಸಿಟ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೆ ಅವಳು ಅವನ ಹತ್ತಿರಕ್ಕೆ ಬಂದು ನಿಂತಳು, "ದೋರೆ ಯಾಕೋ ಸಿಟ್ ಮಾಡ್ಕೋತಿಯ, ಇವತ್ತೊಂದಿನ ಬೇಡ್ವೋ, ಪ್ಲೀಜ್.." ಎಂದಳು. ಅದಕ್ಕವನು "ಎಲ್ಲ ನೀನು ಅಂದಕೊಂಡಂಗೆ ನಡಿಬೇಕಾ... ನೀನು ಕರೆದಾಗಲೆಲ್ಲ ನಾನು ಬಂದಿಲ್ಲಾ? ನೀನು ಹೇಳಿದ ಹಾಗೆಲ್ಲಾ ಕೇಳಿಲ್ಲಾ? ಇವತ್ತು ನನ್ನದೊಂದು ಸಣ್ಣ ಆಸೇನು ನೆಡೆಸೋದಿಲ್ವ?" ಅಂದನು.

"ನಾನ್ಯಾವತ್ತು ನಿನಗೆ ಬೇಡ ಅಂದೀದಿನೋ ನನ್ರಾಜಾ, ಇವತ್ತೊಂದಿನ ಬೇಡ್ವೋ, ಪ್ಲೀಜ್ ತುಂಬಾ ಹೊಟ್ಟೆ ನೋವು" ಎಂದವಳು ಪಿಸುಗುಟ್ಟಿದಳು.

"ಊಟಾ ಮಾಡಿ, ಹಂಗ ಒದ್ಕೊತ ವಂದ ಕಡೆ ಕುಂತರ ಅಜೀರ್ಣ ಆಗಿ ಇನ್ನೇನಾಗ್ತದ, ನಡಿ ಹೊರಗ ಒಂದ ರೌಂಡ ಬೈಕ ಮ್ಯಾಲೆ ಹೋಗಿ ಬರುಣ, ಹಂಗ ಒಂದೊಂದು ಸೋಡಾ ಕುಡ್ದ ಬರುಣು, ಹೊಟ್ಟೆ ನೋವು ಕಡಿಮಿ ಅಕ್ಕೈತಿ ಬಾ" ಅಂದ. ಅದಕ್ಕವಳು ಹಣೆ ಚಚ್ಚಿಕೊಳ್ಳುತ್ತಾ " ಆ ತರಾ ಹೊಟ್ಟೆನೋವು ಅಲ್ವೋ, ಇವತ್ತೇ ಲ್ಯಾಸ್ಟ ಡೇ, ನಾಳೆ ನೀನು ಹೇಳಿದ ಕಡೆ ಹೋಗೋಣ" ಎಂದಳು.

"ನಿಂದೇನೆ ಸ್ಪೆಷಲ್ ಅದು, ಹೊಟ್ಟೆನೋವಿಗೂ ಡೇಟ್ಸ್ ಕೊಟ್ಟಿಯೆನ? ಇವತ್ತ ಲ್ಯಾಸ್ಟ ಡೇ ಅಂತ. ನೀನಗ ನಂಜೋತಿ ಬರಾಕ ಮನಸಿಲ್ಲ ಅದಕ್ಕ ನೀ ಹಿಂಗ ಹೇಳಾಕತ್ತಿ, ನಾನು ಮುಂದ ಹೋಗಿ ಆ ಕ್ಯಾಂಟಿನ ಹತ್ರ ನಿಂತಿರ್ತೀನಿ ನೀನಗ ನನ್ನ ಮ್ಯಾಲೆ ಓಂಚೂರರ ಪ್ರೀತಿ ಇದ್ರ ಬರ್ತೀ, ಇಲ್ಲ ಅಂದ್ರ ನಿನಗ ನನ್ನ ಮ್ಯಾಲೆ ಪ್ರೀತಿನ ಇಲ್ಲ ಅಂತ ತಿಳ್ಕೊಂಡೂ ಇನ್ಮ್ಯಾಲೆ ನಿನ್ನ ತಂಟೆಗೆ ಬರುದಿಲ್ಲ" ಎಂದು ಹೇಳಿ ಬೈಕ್ ಹತ್ತಿಬಿಟ್ಟು ಸೀದಾ ಹೊರಟೆ ಬಿಟ್ಟ.

ಲೈಬ್ರರಿಯ ಒಳಗಡೆ ಹೋದ ಅವಳು ತನ್ನೆಲ್ಲ ಪುಸ್ತಕಗಳನ್ನು ಎತ್ತಿಟ್ಟುಕೊಂಡು ಸೀದಾ ಕ್ಯಾಂಟೀನಿನ ಬಳಿ ಬಂದಳು. ಅವನಿನ್ನೂ ಮುಖದ ಮೇಲೆ ಸಿಟ್ಟಿಟ್ಟುಕೊಂಡೆ ಕುಳಿತಿದ್ದ. ಬಂದವಳೇ ಸೀದಾ ಅವನ ಹಿಂದೆ ಕುಳಿತುಕೊಂಡು ಅವನ ಬೆನ್ನಿಗೆ ಒಂದು ಗುದ್ದು ಕೊಟ್ಟು, "ನಡಿ ಎಲ್ಲಿಗೆ ಕರಕೊಂಡು ಹೋಗ್ತೀಯೋ ಹೋಗು" ಎಂದಳು.

ಬೈಕನ್ನು ಸ್ಟಾರ್ಟ್ ಮಾಡಿದ ಅವನು "ಅಮ್ಮೌವ್ರೆನೋ ಹೊಟ್ಟೆನೋವು ಅಂತಿದ್ರಿ, ಲೇಮನ್ ಸೋಡಾ ಕುಡಿಯುನೇನು?" ಎಂದ.

ಅವಳು ಅವನ ತಲೆಗೊಂದು ಏಟು ಹಾಕಿ, "ಅದು ಆ ತರಾ ಹೊಟ್ಟೆನೋವಲ್ವೋ ಕೋತಿ, ಪೀರಿಯಡ್ಸು. ಇವತ್ತೇ ಕೊನೇ ದಿನ" ಎಂದಳು. ಅವನು ಅವಳನ್ನೊಮ್ಮೆ ಬೈಕನ ಕನ್ನಡಿಯಲ್ಲಿ ಅವಳನ್ನು ನೋಡಿ, ನಾಚಿ ಮುಗುಳ್ನಗೆ ಬೀರಿದ. ಅವಳು ಅವನನ್ನು ಗಟ್ಟಿಯಾಗಿ ತಬ್ಬಿ, "ದೋರೆ ಇಗ್ಲೇ ಹೀಗಾದ್ರೆ, ಮದುವೆಯಾದ ಮೇಲೆ ಈ ಮೂರು ದಿನ ಹೇಗೋ?" ಎಂದಳು. ಅದಕ್ಕೆ ಉತ್ತರವಾಗಿ ಅವನು ಎಕ್ಷಲರೆಟರನ್ನು ಜೋರಾಗಿ ತಿರುವಿ ಬೈಕನ ವೇಗವನ್ನು ಹೆಚ್ಚಿಸಿದ.

ಬರೆದವರು
ಈರಣ್ಣ ಶೆಟ್ಟರ
ಭಾರತ

Friday, October 26, 2007

ಶರಣಾಗತ

ಶರಣಾಗತ

- ಕೆ. ತ್ರಿವೇಣಿ ಶ್ರೀನಿವಾಸ ರಾವ್

ಮಧ್ಯಾಹ್ನದ ಸುಡು ಸುಡು ಬಿಸಿಲು ಭೂಮಿಯನ್ನು ನಿರ್ದಯವಾಗಿ ಸುಡುತ್ತಿತ್ತು. ಕೊರಳಿನ ಸುತ್ತ ಹರಿಯುತ್ತಿದ್ದ ಬೆವರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತಾ ಗೇಟು ತೆರೆದು ಕಾಂಪೊಂಡಿನೊಳಗೆ ಪ್ರವೇಶಿಸಿದ ರಾಜೀವ.ಪಾರಿಜಾತದ ನೆರಳಿನಲ್ಲಿ ಆಡಿಕೊಂಡಿದ್ದ ಎರಡು ಮುದ್ದಾದ ಮಕ್ಕಳು ಅಪರಿಚಿತನನ್ನು ಕಂಡು ಬೆರಗಾಗಿ ನಿಂತವು. ನಾಲ್ಕು ವರ್ಷದ ಗಂಡು ಮಗು ಸುದ್ದಿಯನ್ನು ಹಿರಿಯರಿಗೆ ತಲುಪಿಸಲು ಒಳಗೋಡಿದರೆ ಎಂಟು ವರ್ಷದ ಹುಡುಗಿ ಅಲ್ಲಿಯೇ ನಿಂತು ರಾಜೀವನನ್ನು ಮಿಕಿ ಮಕಿ ನೋಡತೊಡಗಿತು.
ಆ ಹುಡುಗಿಯ ಮುಖ ನೋಡುತ್ತಿದ್ದರೆ ರಾಜೀವನಿಗೆ ತನ್ನ ತಾಯಿಯನ್ನೇ ಕಂಡಂತಾಯಿತು. ತಾನು ಎಂಟು ವರ್ಷದ ಹಿಂದೆ ಮನೆಯನ್ನು ತ್ಯಜಿಸಿ ಹೊರನಡೆದಾಗ ಅತ್ತಿಗೆ ತುಂಬಿದ ಬಸುರಿ. ಆಗ ಹುಟ್ಟಿದ್ದವಳೇ ಇವಳಿರಬೇಕು. ಅಜ್ಜಿಯ ಸುಂದರ ರೂಪವನ್ನು ಎರಕ ಹೊಯ್ದುಕೊಂಡು ಹುಟ್ಟಿದೆ ಎಂದು ವಾತ್ಸಲ್ಯದಿಂದ-``ನಿನ್ನ ಹೆಸರೇನು ಮರೀ?"ಹುಡುಗಿಯನ್ನು ಮಾತಿಗೆಳೆಯಲು ಯತ್ನಿಸಿದ.``ವತ್ಸಲಾ" ಎಳಸಾದ ಕಂಠ ಉತ್ತರಿಸಿತು. ಅಣ್ಣನ ಮಗಳು ನನಗೂ ಮಗಳಲ್ಲವೇ? ಅಭಿಮಾನ ಉಕ್ಕಿ ಬಂದು ``ನಿನ್ನ ಅಪ್ಪ ಮನೆಯಲ್ಲಿದ್ದಾರಾ ಪುಟ್ಟಿ" ಎಂದು ಕೇಳಿದ ಮೆಲುವಾಗಿ.``ಇಲ್ಲ, ಕೆಲಸಕ್ಕೆ ಹೋಗಿದಾರೆ" ಎಂದು ಹುಡುಗಿ ನುಡಿಯುವಷ್ಟರಲ್ಲಿಯೇ ಒಳಗೋಡಿದ್ದ ಹುಡುಗ ತಾಯಿಯ ಕೈ ಹಿಡಿದು ಹೊರಗೆ ಕರೆತಂದಿದ್ದ.
ಅತ್ತಿಗೆ ಹಾಗೆಯೇ ಇದ್ದಾರೆ. ಅದೇ ಚೆಲುವಾದ ಶಾಂತಿ, ನೆಮ್ಮದಿ ಹೊರಸೂಸುವ ಸಿರಿಮೊಗ. ಬಿಳುಪಾದ ಮೊಗದಲ್ಲಿ ಈಗ ಸ್ವಲ್ಪ ಕೆಂಪು ಬೆರೆತಿದ್ದು, ಮತ್ತಷ್ಟು ಶೋಭೆ ಹೆಚ್ಚಿದೆ. ದೇಹ ಮೊದಲಿಗಿಂತ ಸ್ವಲ್ಪ ತುಂಬಿಕೊಂಡಿದೆ ಅಷ್ಟೆ.ಅತ್ತಿಗೆಗೆ ಕೂಡಲೇ ಗುರುತು ಹತ್ತಲಿಲ್ಲ. ಒಂದೆರಡು ಕ್ಷಣಗಳ ನಂತರ ಗುರುತು ಹಿಡಿದಂತೆ ಕಂಡರೂ ಮುಖದಲ್ಲಿ ಅಪನಂಬಿಕೆ ಒಡೆದು ತೋರುತ್ತಿತ್ತು.
ಅನುಮಾನದಿಂದಲೇ -ರಾಜೂ ಅಲ್ವಾ ನೀನು? ಎಂದರು.ಇನ್ನೂ ಹತ್ತಿರ ಬಂದು -``ಎಷ್ಟು ಬದಲಾಗಿ ಹೋಗಿದ್ದೀಯಾ? ನಿನ್ನಣ್ಣನಿಗಿಂತ ನಿನಗೇ ವಯಸ್ಸಾದಂತೆ ಕಾಣುತ್ತಲ್ಲೋ" -ಎಂದರು ಸಲಿಗೆಯಿಂದ.ಅತ್ತಿಗೆಯ ಪ್ರಶ್ನೆಗಳಿಗೆ ರಾಜೀವ ಉತ್ತರಿಸಿದೆ ತಲೆದೂಗಿದ.``ಬಾ, ಬಾ. ಆಗಿನಿಂತ ಇಲ್ಲೇ ನಿಂತಿದ್ದೀಯಾ? ಒಳಗೆ ಬರಬಾರದೇನೋ. ಏನೋ ಒಂದು ಮಾತು ಬಂದು ಮನೆ ಬಿಟ್ಟು ಹೋದ ಮಾತ್ರಕ್ಕೆ ಪರಕೀಯನಾಗಿ ಹೋದೆಯಾ?" -ಎಂದು ನೋವಿನಿಂದ ಆಕ್ಷೇಪಿಸಿ, ಒಳಗೆ ಕರೆದೊಯ್ದು ಸೋಫಾದ ಮೇಲೆ ಕೂಡಿಸಿದರು.
``ಒಂದು ನಿಮಿಷ ಸುಧಾರಿಸಿಕೊ. ಉಳಿದದ್ದು ಆಮೇಲೆ" ಎಂದು ಸರ ಸರನೆ ಒಳನಡೆದು ಮಾಯವಾದರು.ತನ್ನ ಬದುಕಿನ ಬಹು ಭಾಗವನ್ನು ಕಳೆದಿದ್ದ ಆ ಮನೆಯನ್ನು ಒಮ್ಮೆ ಪ್ರೀತಿಯಿಂದ ವೀಕ್ಷಿಸಿದ ರಾಜೀವ. ಬಿಸಿಲಿನಿನಲ್ಲಿ ಬೆಂದು ಬಂದಿದ್ದ ಅವನಿಗೆ ಮನೆಯ ನಸುಕತ್ತಲು ತುಂಬಿಕೊಂಡಿದ್ದ ಶೀತಲ ವಾತಾವರಣ ಅಪ್ಯಾಯಮಾನವಾಗಿತ್ತು. ತಾಯಿಯ ಮೃದುವಾದ ಮಡಿಲಿನಲ್ಲಿ ಮಲಗಿದ್ದಂತಹ ಹಿತವಾದ ಭಾವವೊಂದು ಅವನನ್ನು ಆವರಿಸಿಕೊಂಡಿತು.ಮೀರಾ, ಒಂದು ದೊಡ್ಡ ಲೋಟದ ತುಂಬಾ ನಿಂಬೆ ಹಣ್ಣಿನ ಪಾನಕವನ್ನು ತಂದು ಅವನ ಕೈಗಿತ್ತರು. ಸವಿಯಾಗಿ ತಂಪಾಗಿದ್ದ ಅದು ಹನಿ ಹನಿಯಾಗಿ ಒಳ ಸೇರಿದಂತೆ ಮೆತ್ತಿಕೊಂಡಿದ್ದ ಆಯಾಸ ಆವಿಯಾಗಿ ಹೋದಂತೆ ಭಾಸವಾಯಿತು.
ಮೀರಾ ಅವನು ಪೂರ್ತಿಯಾಗಿ ಕುಡಿದು ಮುಗಿಸುವವರೆಗೆ ಅವನನ್ನೇ ನಿಟ್ಟಿಸುತ್ತಾ ಕೂತಿದ್ದರು.ರಾಜೀವ ಹೇಗಿದ್ದವನು ಹೇಗಾಗಿ ಹೋಗಿದ್ದಾನೆ? ಅವನ ಹಿಂದಿನ ಆ ಕಣ್ತುಂಬುವ ಆ ಸುಂದರ ರೂಪ ಎಲ್ಲಿ ಮರೆಯಾಯಿತು? ಬತ್ತಿ ಹೋದ ಕೆನ್ನೆಗಳು, ಗುಳಿಬಿದ್ದ ಕಣ್ಣುಗಳು, ತುಂಬಿಕೊಂಡ ಕ್ರಾಪು ವಿರಳವಾಗಿ ಅಲ್ಲಲ್ಲಿ ಇಣುಕಿ ಹಾಕುತ್ತಿರುವ ಬಿಳಿಗೂದಲುಗಳು. ಅವರೆದೆಯಲ್ಲಿ ನೋವಿನ ತಂತಿ ವಿಷಾದ ರಾಗ ಮೀಟುತ್ತಿತ್ತು.
``ರಾಜೀವ, ಈ ಎಂಟು ವರ್ಷಗಳು ನಿನಗೆ ನಾವ್ಯಾರೂ ನೆನಪೇ ಆಗಲಿಲ್ಲವೇನೋ? ಇಷ್ಟು ವರ್ಷದ ನಂತರ ಈ ಕಡೆ ತಲೆ ಹಾಕಿದೀಯಲ್ಲಾ?"ಎಂದು ನಿಟ್ಟುಸಿರುಬಿಟ್ಟರು.``ಹೋಗಲಿ, ನಮ್ಮನ್ನು ಬೇಡ, ನಿಮ್ಮಮ್ಮನ್ನಾದರೂ ನೋಡಬೇಕು ಅನ್ನಿಸಲೇ ಇಲ್ಲವೇನೋ?"ಎಂದು ಮತ್ತೆ ಕೆಣಕಿದರು.``ಅದೆಲ್ಲಾ ಬಿಡು, ಮುಗಿದುಹೋದ ಕಥೆ. ನಿಮ್ಮಮ್ಮ ತಮ್ಮ ಕೊನೆಯ ಘಳಿಗೆಯವರೆಗೂ ನೀನು ಬರುತ್ತೀಯಾ ಎಂದು ಕಾಯುತ್ತಲೇ ಇದ್ದರು. ಅವರ ಯಾತನೆಯನ್ನು ನಾನು ಎಂದಿಗೂ ಮರೆಯುವಂತಿಲ್ಲ." ಎಂದು ತುಂಬಿ ಬಂದ ಕಣ್ಣುಗಳನ್ನು ಸೆರಗಿನಿಂದ ಒತ್ತಿಕೊಂಡರು.
ರಾಜೀವನಿಗೆ ವಿಷಯ ತಲುಪಿತ್ತು. ಗೆಳೆಯರೊಬ್ಬರ ಮೂಲಕ ತಾಯಿಯ ದೇಹಾಂತ್ಯದ ಸುದ್ದಿ ತಿಳಿದ ಇಡೀ ದಿನ ಹುಚ್ಚನಂತೆ ಆಗಿ ಹೋಗಿದ್ದ. ವಾಪಸ್ಸು ಊರಿಗೆ ಹೋಗಲೇ ಎಂಬ ಅನಿಸಿಕೆ ಮೂಡಿದರೂ ತಾಯಿಯೇ ಇಲ್ಲದ ಆ ಮನೆಗೆ ಹೋಗಿ ತಾನು ಮಾಡಬೇಕಾದುದಾರೂ ಏನು? ಮತ್ತೆ ಅಪ್ಪನ ದರ್ಪ, ವ್ಯಂಗ್ಯ, ಅಹಂಕಾರ ತುಂಬಿದ ಮಾತಿಗೆ ಬಲಿಯಾಗುವುದರ ಹೊರತಾಗಿ ಮತ್ತಾವ ಫಲವೂ ಇಲ್ಲ ಎಂದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಸುಮ್ಮನಾಗಿಬಿಟ್ಟಿದ್ದ! ಈಗನಿಸಿತು ರಾಜೀವನಿಗೆ - ತಪ್ಪು ಮಾಡಿದೆ, ಬರಬೇಕಿತ್ತು, ಆಗ ನಾನು ಬರಬೇಕಿತ್ತು. ಇಲ್ಲೇ ಎಲ್ಲೋ ಅಲೆಯುತ್ತಿದ್ದ ತಾಯಿಯ ಆತ್ಮಕ್ಕೆ ಶಾಂತಿ ದೊರಕುತ್ತಿತ್ತೇನೋ ಎಂದು. ಕೂಡಲೇ ನಗುವು ಬಂತು. ಇದ್ದಾಗ ಸಿಗದ ಶಾಂತಿ, ಸಮಾಧಾನ ಸತ್ತ ಮೇಲೆ ಸಿಗುವುದಾದರೂ ಹೇಗೆ ಅನ್ನಿಸಿತು? ರಾಜೀವ ಎಲ್ಲಾ ನಂಬಿಕೆಗಳಿಂದ ಕಳಚಿಕೊಂಡು ಬಹು ದಿನಗಳೇ ಆಗಿಹೋಗಿತ್ತು.
ರಾಜೀವ ಮಾತಿಲ್ಲದೇ ಯೋಚನೆಗಳ ಹುತ್ತದಲ್ಲಿ ಸೇರಿಹೋಗಿದ್ದು ಕಂಡು ಮೀರಾನೇ-``ನಿನ್ನ ವಿಷಯ ಹೇಳು? ಏನು ಮಾಡಿಕೊಂಡಿದ್ದೀಯ? ಮಕ್ಕಳೆಷ್ಟು? ನಿನ್ನ ಹೆಂಡತಿಯನ್ನು ಯಾಕೆ ಕರೆದುಕೊಂಡು ಬರಲಿಲ್ಲ?" ರಾಜೀವ ಉತ್ತರಿಸುವ ಗೋಜಿಗೆ ಹೋಗದೆ ವಿಷಾದದಿಂದ ನಕ್ಕ. ಅವನಿಗೆ ಮಾತಾಡುವ ಮನಸ್ಸಿಲ್ಲದ್ದು ಕಂಡು ಮೀರಾ ತಾವೇ ಇಲ್ಲಿಯ ವಿದ್ಯಮಾನಗಳನ್ನು ಅರುಹತೊಡಗಿದರು.
``ನೀನು ಹೋದ ಮೇಲೆ ಅತ್ತೆಗೆ ನಿನ್ನದೇ ಕೊರಗಾಗಿ ಹೋಯಿತು. ಮೊದಲೇ ಇಳಿ ವಯಸ್ಸಿನಿಂದ ಸೋತಿದ್ದ ಅವರಿಗೆ ನೀನಿಲ್ಲದೆ ಬಹು ದೊಡ್ಡ ಆಘಾತ ಉಂಟುಮಾಡಿತು. ಯೋಚನೆಗಳು ಹೆಚ್ಚಾದಂತೆ ಅವರ ಮನಸ್ಸಿನ ಸಮತೋಲನವೇ ತಪ್ಪಿಹೋಯಿತು ನೋಡು. ಕೂತರೇ ಕೂತೇ ಬಿಟ್ಟರು, ನಿಂತರೇ ನಿಂತೇ ಬಿಟ್ಟರು. ಊಟ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ನಿನ್ನ ವಯಸ್ಸಿನ ಯಾವ ಹುಡುಗರನ್ನು ಕಂಡರೂ ಸರಿ, ರಾಜೂ ಅಂತ ಓಡಿ ಹೋಗಿ ತಬ್ಬಿಕೊಂಡು ಬಿಡುತ್ತಿದ್ದರು. ಮಾವನವರಂತೂ ಅವರನ್ನು ಹಿಡಿಯುವುದರಲ್ಲಿ ಹಣ್ಣಾಗಿ ಹೋಗುತ್ತಿದ್ದರು. ಅವರ ಉಪಟಳ ತುಂಬಾ ಹೆಚ್ಚಾಗಿದ್ದರೂ ತಮ್ಮ ಕಣ್ಣಿಗಿಂತ ಹೆಚ್ಚಾಗಿ ಅವರನ್ನು ಕಾಪಾಡಿದರು. ಎರಡು ವರುಷಗಳ ಕೆಳಗೆ ಅತ್ತೆ ತೀರಿಕೊಂಡ ಮೇಲೆ ನಿಮ್ಮ ತಂದೆ ಪೂರ್ತಿ ಕುಸಿದು ಹೋದರು. ಒಂದು ದುರ್ದಿನ ಇದ್ದಕ್ಕಿದ್ದಂತೆ ಅವರಿಗೆ ಪಾರ್ಶ್ವವಾಯು ಬಡಿದು, ಅವರ ಇಡೀ ದೇಹದ ಸ್ವಾಧೀನವೇ ತಪ್ಪಿಹೋಯಿತು. ಎಲ್ಲಾ ಹಾಸಿಗೆಯ ಮೇಲೇ ಆಗಬೇಕು. ಮಗನನ್ನು ನಾನೇ ದೂರ ಮಾಡಿಕೊಂಡೆ ಎಂದು ಸುಮ್ಮನೆ ಕಣ್ಣೀರು ಸುರಿಸುತ್ತಾರೆ. ಈಗ ನಿನ್ನನ್ನು ನೋಡಿ ಅವರ ಜೀವಕ್ಕೆ ಹಾಯೆನಿಸಬಹುದು. ಈಗ ತಾನೇ ಚೂರು ಹಣ್ಣಿನ ರಸ ಕುಡಿದು ಮಲಗಿದ್ದಾರೆ. ಎದ್ದ ಮೇಲೆ ಹೋಗಿ ನೋಡುವೆಯಂತೆ."
ಅತ್ತಿಗೆಯ ಮಾತುಗಳನ್ನು ಕೇಳುತ್ತಾ ಇದ್ದಂತೆ ರಾಜೀವ ಒಂದು ಕೆಟ್ಟ ಸಂಕಟವನ್ನು ಅನುಭವಿಸುತ್ತಿದ್ದ. ಬದುಕಿನ ಆಗಾಧವಾದ ಪಯಣದಲ್ಲಿ ಕೇವಲ ಎಂಟೇ ವರ್ಷದ ಅವಧಿಯಲ್ಲಿ ಇಷ್ಟೆಲ್ಲಾ ಘಟಿಸಿಹೋಯಿತೇ? ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ತಾಯಿಯ ಸಾವಿಗೆ ನಾನೇ ಕಾರಣನಾದೆನಲ್ಲಾ ಎಂಬ ನೋವು ಅವನ ಕಣ್ಣಂಚಿನಲ್ಲಿ ನೀರಿನ ರೂಪದಲ್ಲಿ ಮಿಂಚುತ್ತಿತ್ತು. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ನಿರ್ಭಾಗ್ಯನಂತೆ ಕುಳಿತಿದ್ದ ಅವನನ್ನು ಕಂಡು ಮೀರಾಗೆ ಮರುಕ ಉಕ್ಕಿ ಬಂದಿತು.
``ನೋಡಿಲ್ಲಿ ರಾಜೂ, ನಡೆದಿದ್ದಕ್ಕೆಲ್ಲಾ ನೀನೇ ಕಾರಣ ಎಂದುಕೊಂಡು ಕಂಬನಿಗರೆಯಬೇಡ. ಏನಾಗಬೇಕೆಂದಿತ್ತೋ ಅದು ಆಯಿತು ಅಷ್ಟೆ. ಅದಕ್ಕೆಲ್ಲಾ ನೀನು ಕಾರಣ ಹೇಗಾಗುತ್ತೀಯಾ ಹೇಳು? ನಿಮಿತ್ತ ಅಂದುಕೊ ಬೇಕಾದರೆ. ಇಷ್ಟೆಲ್ಲಾ ದುರಂತಗಳು ನಮ್ಮ ಮನೆಯಲ್ಲಿ ನಡೆಯಬಾರದಿತ್ತು. ಏನು ಮಾಡೋಕಾಗತ್ತೆ? ಎಲ್ಲಾ ವಿಧಿಲಿಖಿತ!."ಹಿಂದಾದರೆ ಇಂತಹ ಮಾತುಗಳಿಗೆ ರಾಜೀವ ಗೊಡ್ಡು ವೇದಾಂತ ಎಂದು ನಕ್ಕು ಬಿಡುತ್ತಿದ್ದ. ಕೆಲವು ಸಲ ಇಂತಹ ಮಾತುಗಳಿಂದಲೂ ಗಾಯಗೊಂಡ ಮನಸ್ಸಿಗೆ ಸಾಂತ್ವನ ಸಿಗುವುದು ಸುಳ್ಳಲ್ಲ ಅನ್ನಿಸಿತು.
``ರಾಜೀವ ನಿನ್ನ ಕಥೆಯೇನೋ? ನೆಮ್ಮದಿಯಿಂದ ಇದೆ ತಾನೇ ನಿನ್ನ ಜೀವನದಲ್ಲಿ?"ಮೀರಾ ಮತ್ತೆ ಒತ್ತಾಯಿಸಿದರು.ರಾಜೀವನಿಗೆ ಬೇರೆ ದಾರಿಯೇ ಇಲ್ಲ. ಅತ್ತಿಗೆಯ ಒತ್ತಾಯಕ್ಕೆ ಅವನು ತಲೆಬಾಗಲೇ ಬೇಕಾಗಿತ್ತು. ಇವರಿಂದ ತನ್ನ ಬದುಕಿನ ಕರ್ಮಕಥೆಯನ್ನು ಮುಚ್ಚಿಡುವುದು ಸಾದ್ಯವೇ ಇಲ್ಲ ಅನ್ನಿಸಿತು. ಬಣ್ಣಗೆಟ್ಟ ತನ್ನ ಬಾಳಿನ ಬಣ್ಣನೆಯನ್ನು ಎಲ್ಲಿಂದ ಪ್ರಾರಂಭಿಸಲಿ? ಎಂದು ಪದಗಳಿಗೆ ತಡಕುತ್ತಿರುವಂತೆಯೇ-
``ಮೀರಾ..............."ಎಂಬ ನರಳಿಕೆಯ ದನಿ ಒಳಕೋಣೆಯಿಂದ ಕೇಳಿ ಬಂದಿತು. ತನ್ನ ಅಪ್ಪನ ದನಿಯೇ ಇದು ಯಾವಾಗಲೂ ಎಲ್ಲರನ್ನು ನಡುಗಿಸುತ್ತಿದ್ದ ಆ ಗಡುಸಾದ ಕಂಠವೆಲ್ಲಿ? ಈ ನೋವಿನ ಮುದ್ದೆಯಾದ ಗೊರಗು ದನಿಯೆಲ್ಲಿ?
``ಮಾವನವರು ಎಚ್ಚರವಾಗಿದ್ದಾರೆ ಬಾ. ನಿನ್ನನ್ನು ನೋಡಿದರೆ ಅವರ ಜೀವಕ್ಕೆ ಎಷ್ಟೋ ಸುಖವಾಗುತ್ತದೆ."ಮುನ್ನಡೆದ ಅತ್ತಿಗೆಯನ್ನು ಹಿಂಬಾಲಿಸಿದ ರಾಜೀವ. ಈ ಮನೆ ಅವನಿಗೆ ಅಪರಿಚಿತವೇನಲ್ಲವಲ್ಲ? ಕೋಣೆಯ ಕತ್ತಲಿಗೆ ಹೊಂದಿಕೊಂಡ ಮೇಲೆಯೇ ಅವನಿಗೆ ಮಂಚದ ಮೇಲೆ ಮುದುರಿ ಮಲಗಿದ್ದ ಆಕೃತಿ ಕಾಣಿಸಿದ್ದು.
ತನ್ನ ತಂದೆಯೇ ಇದು? ಅಡಿಯಿಂದ ಮುಡಿಯವರೆಗೂ ದರ್ಪ, ದಬ್ಬಾಳಿಕೆ, ಮುಂಗೋಪಗಳನ್ನು ತುಂಬಿಕೊಂಡ ಆ ಆಜಾನುಬಾಹು ವ್ಯಕ್ತಿತ್ವ ದೈನ್ಯ, ಅಸಹಾಯಕತೆಗಳೇ ಮೈವೆತ್ತಂತೆ ರೂಪಾಂತರಗೊಂಡಿರುವುದು ಮಲಗಿರುವುದು ನಿಜವೇ, ಭ್ರಮೆಯೇ? ಲೋಕದೆಲ್ಲಾ ವೈಭೋಗಗಳು ಕ್ಷಣದಲ್ಲಿ ಗಾಳಿಗುಳ್ಳೆಯಂತೆ ಕರಗಿ ಕೊನೆಗುಳಿಯುವ ಸಾವೊಂದೇ ಶಾಶ್ವತ ಸತ್ಯವೇನೋ? ಅನ್ನಿಸಿಬಿಟ್ಟಿತು ರಾಜೀವನಿಗೆ.
ಅತ್ತಿಗೆ ಮಲಗಿದ್ದ ತಂದೆಯ ಮುಖದ ಹತ್ತಿರ ಬಾಗಿ ಜೋರಾಗಿ ಕೂಗಿ ಹೇಳಿದರು-``ಮಾವಾ, ನಿಮ್ಮ ಮಗ ರಾಜೀವ ಬಂದಿದ್ದಾನೆ, ದಿನಾ ಹಲುಬುತ್ತಿದ್ದಿರಲ್ಲಾ, ನೋಡಿ ಇಲ್ಲಿ."ರಾಜೀವ ತಂದೆಯ ಸನಿಹ ಹೋಗಿ ಕುಳಿತು ಅವರ ಹತ್ತಿಯಂತೆ ಕೃಶವಾಗಿ ಹೋಗಿದ್ದ ಕೈಗಳನ್ನು ಒತ್ತಿ ಹಿಡಿದುಕೊಂಡ.ಒಣಗಿ ಬರಡಾಗಿ ಹೋಗಿದ್ದ ಅಪ್ಪನ ಮುಖದಲ್ಲಿ ಮಿಂಚಿನ ಸೆಳಕೊಂದು ಕಂಡಂತಾಯಿತು.
``ಅಂತೂ ಬಂದೆಯಾ ರಾಜೂ, ಒಂದೆರಡು ವರ್ಷಗಳ ಮುಂಚೆಯಾದರೂ ಬರಬಾರದಿತ್ತೇನೋ? ನಿನ್ನ ತಾಯಿ ನೆಮ್ಮದಿಯಾಗಿ ತನ್ನ ಪ್ರಾಣ ಬಿಡುತ್ತಿದ್ದಳು. ಹೋಗಲಿ ಈಗಲಾದರೂ ಬಂದೆಯಲ್ಲಾ, ನನ್ನ ಜೀವಕ್ಕೆ ಸಮಾಧಾನವಾಯಿತು ಕಣೊ. ಇನ್ನು ನಾನು ನಿರಾಳವಾಗಿ ಪ್ರಾಣಬಿಡುತ್ತೇನೆ."
ಎಂದು ಅಪ್ಪ ಅಸ್ಪಷ್ಟವಾಗಿ ತೊದಲು, ತೊದಲಾಗಿ ಹೇಳುತ್ತಿದ್ದರೆ ಕಣ್ಣೀರು ಅವರ ದಿಂಬನ್ನು ತೋಯಿಸುತ್ತಿತ್ತು.ಇದೇ ತಂದೆಯ ಕೋಪ, ತಾಪಗಳಿಗೆ, ಸರ್ವಾದಿಕಾರೀ ಧೋರಣೆಯ ಉಗ್ರ ವೃಕ್ತಿತ್ವಕ್ಕೆ ರಾಜೀವ ಬೇಸತ್ತು ಹೋಗಿದ್ದ. ಪ್ರತಿಯೊಂದರಲ್ಲೂ ಕುಂದು ಹುಡುಕುತ್ತಿದ್ದರು. ಎಲ್ಲರನ್ನೂ ಆಕ್ಷೇಪಿಸುತ್ತಾ ಕ್ರೂರವಾಗಿ ನೋಯಿಸುವುದು ಅವರ ಸ್ವಭಾವ. ಅವರನ್ನು ಸಂತೋಷಪಡಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಇಷ್ಟದಂತೆಯೇ ನಡೆಯಬೇಕೆಂಬುದು ಅವರ ಹಟ. ಯಾರಾದರೂ ಅವರ ಮಾತು ಮೀರಿ ತಮ್ಮ ಸ್ವಂತಿಕೆ ತೋರಲು ಯತ್ನಿಸಿದರೆ ಅವತ್ತಿಡೀ ದಿನ ಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಗುಡುಗು, ಸಿಡಿಲು, ರಂಪ, ರಾಧ್ಧಾಂತವಾಗಿಹೋಗುತ್ತಿತ್ತು. ಗಂಡ ಈ ಗುಣದಿಂದಾಗಿ ರಾಜೀವನ ತಾಯಿಗೆ ಮನೆಯೇ ನರಕಪ್ರಾಯವಾಗಿ ಹೋಗಿತ್ತು. ಆದರೆ ಅವರು ಎಂದು ಯಾರ ಮುಂದೆಯೂ ತಮ್ಮ ವೇದನೆಯನ್ನು ತೋರಗೊಡುತ್ತಿರಲಿಲ್ಲ.ಅಪ್ಪನ ಈ ಅದಿಕಾರಶಾಹೀ ಮನೋಭಾವದ ವಿರುದ್ಧ ಮೊದಲಬಾರಿಗೆ ಸಿಡಿದು ನಿಂತಿದ್ದ ರಾಜೀವ.
ಅಪ್ಪ ನೋಡಿದ್ದ ಹೆಣ್ಣನ್ನು ನಿರಾಕರಿಸಿ ತಾನು ಪ್ರೀತಿಸಿದ್ದ ಸಹೋದ್ಯೋಗಿ ವಿಮಲಾಳನ್ನು ಮದುವೆಯಾಗುವೆನೆಂದು ನುಡಿದಾಗ ಮನೆಯಲ್ಲಿ ಅಗ್ನಿಪರ್ವತವೇ ಸ್ಫೋಟಿಸಿತ್ತು.ರಾಜೀವ ತಂದೆಯನ್ನು ಪ್ರತಿಭಟಿಸಿ ನಿಂತಿದ್ದ. ತಾಯಿಯ ಗೋಗರೆತ, ಅಣ್ಣನ, ಅತ್ತಿಗೆಯರ ಉಪದೇಶ ಯಾವುದೂ ಅವನ ಕಿವಿಗೆ ಹೋಗಿರಲಿಲ್ಲ.
ರಾಜೀವನ ತಂದೆ ತಮ್ಮ ಮಾಮೂಲಿನ ಧೃಡವಾದ ನಿಶ್ಚಲವಾದ ಸ್ವರದಲ್ಲಿ ಹೇಳಿಬಿಟ್ಟಿದ್ದರು-``ಈ ಪ್ರೀತಿ, ಗೀತಿ ಎಲ್ಲಾ ನಮ್ಮ ಮನೆಯಲ್ಲಿ ನಡೆಯುವುದಿಲ್ಲ, ಯಾವುದೋ ಕಂಡು ಕೇಳದ ಹುಡುಗಿ ಈ ಮನೆಯ ಸೊಸೆಯಾಗಿ ಬರೋದನ್ನು ನಾನು ಒಪ್ಪೋದಿಲ್ಲ. ಇದು ನನ್ನ ಮನೆ. ಇಲ್ಲಿ ನನ್ನ ಇಷ್ಟಕ್ಕೆ ವಿರೋಧವಾಗಿ ನಡೆಯುವವರಿಗೆ ಜಾಗವಿಲ್ಲ. ನಿನ್ನ ದಾರಿ ನೀನು ನೋಡಿಕೊಳ್ಳಬಹುದು."
ರಾಜೀವನೂ ಅದೇ ತಂದೆಯ ಮಗನಲ್ಲವೇ? ಛಲದಲ್ಲಿ ಅವನೂ ಎನೂ ಕಡಿಮೆಯಿರಲಿಲ್ಲ. ಅಪ್ಪ ಹಾಗಂದಿದ್ದೇ ತಡ ಹೊರಟು ನಿಂತೇಬಿಟ್ಟಿದ್ದ. ತಾಯಿಯ ಅಳು, ಗೋಳಾಟ ಅಪ್ಪ, ಮಗ ಇಬ್ಬರನ್ನೂ ತಮ್ಮ ತಮ್ಮ ನಿರ್ಧಾರದಿಂದ ಹಿಂತೆಗೆಯುವಂತೆ ಮಾಡುವುದರಲ್ಲಿ ಯಶಸ್ವಿಯಾಗಿರಲಿಲ್ಲ.
ಹೊರಟು ನಿಂತಿದ್ದ ರಾಜೀವನಿಗೆ ತಂದೆ ಕೂಗಿ ಹೇಳಿದ್ದರು-``ಇವತ್ತಿಗೆ ನಿನಗೆ ಈ ಮನೆಯ ಋಣ ತೀರಿಹೋಯಿತು ಎಂದು ತಿಳಿದುಕೊ. ನೀನು ಇನ್ನು ಯಾವುದೇ ಕಾರಣಕ್ಕೆ ಈ ಮನೆಗೆ ಬರುವ ಅಗತ್ಯವಿಲ್ಲ. ಈ ಮಾತು ನನ್ನ ಅಥವಾ ನಿನ್ನ ತಾಯಿಯ ಸಾವಿಗೂ ಅನ್ವಯಿಸುತ್ತದೆ."ರಾಜೀವ ತಾಯಿಗೆ ಕಡೆಯ ಬಾರಿಗೆ ನಮಸ್ಕರಿಸಿ ತಂದೆಯ ಕಡೆಗೆ ತಿರಸ್ಕಾರದಿಂದೊಮ್ಮೆ ನೋಡಿ ಮನೆಯಿಂದ ಹೊರಟು ಬಂದಿದ್ದ. ಅವನ ಮುಂದೆ ಇಡೀ ಬದುಕು ಉದ್ದವಾಗಿ ಹಾಸಿಕೊಂಡು ನಿಂತಿತ್ತು. ತನ್ನ ಪ್ರೀತಿಯ ವಿಮಲಾಳೊಡನೆ ಮುಂಬಯಿ ಸೇರಿದ್ದ. ಮನೆಯವರೊಡನೆ ಸಂಬಂಧವನ್ನು , ಸಂಪರ್ಕವನ್ನು ಪೂರ್ತಿಯಾಗಿ ಕಡಿದುಕೊಂಡಿದ್ದ.
ಮುಂಬಯಿಯಲ್ಲಿ ವಿಮಲಾಳ ದೂರದ ಸಂಬಂಧಿ ಸುರೇಶ ಇವರಿಗಾಗಿ ಮನೆಯನ್ನು ಹುಡುಕುವುದರಿಂದ ಹಿಡಿದು ಪ್ರತಿಯೊಂದಕ್ಕೂ ಸಹಾಯ ಮಾಡಿದ್ದ. ಅವನ ನೆರವಿನಿಂದಲೇ ವಿಮಲಾ, ರಾಜೀವ ಸರಳವಾಗಿ ವಿವಾಹವಾಗಿ ಸಂಸಾರ ಹೂಡಿದ್ದರು. ವಿಮಲಾ ತನ್ನ ಸಂಗಾತಿಯಾದ ಮೇಲೆ ರಾಜೀವನಿಗೆ ಈ ಪ್ರಪಂಚದಲ್ಲೇ ತನಗಿಂತ ಸುಖಿ ಬೇರೆ ಯಾರಿಲ್ಲ ಅನ್ನಿಸಿಬಿಟ್ಟಿತ್ತು. ಬಿಟ್ಟು ಬಂದ ಮನೆಯ, ತಾಯಿಯ ನೆನಪು ಆಗಾಗ ಕಾಡುತ್ತಿದ್ದರೂ ವಿಮಲಾ ತನ್ನ ಸೌಂದರ್ಯ, ಸಾಂಗತ್ಯದಿಂದ ಎಲ್ಲವನ್ನೂ ಮರೆಯಿಸಿಬಿಟ್ಟಿದ್ದಳು.
ಮದುವೆಯಾದ ಮೇಲೆಯೂ ವಿಮಲಾ ಕೆಲಸಕ್ಕೆ ಹೋಗುತ್ತಿದ್ದರಿಂದ ರಾಜೀವನಿಗೆ ಹಣಕಾಸಿನ ತೊಂದರೆ ಕಿಂಚಿತ್ತೂ ಇರಲಿಲ್ಲ. ಒಮ್ಮೊಮ್ಮೆ ಎಲ್ಲರನ್ನೂ ಬಿಟ್ಟು ಬಂದು ತಪ್ಪು ಮಾಡಿದೆನೇನೋ ಎಂಬ ಅಳುಕು ಹಣಿಕಿ ಹಾಕಿದರೂ ವಿಮಳಾಳ ಸಹವಾಸ ಆ ಕೊರಗನ್ನೂ ಹುಟ್ಟಿದಲ್ಲೇ ಹೊಸಕಿ ಹಾಕಿಬಿಡುತ್ತಿತ್ತು. ಅಪ್ಪ ತಮ್ಮಿಬ್ಬರ ಮದುವೆಗೆ ಅನುಮತಿ ನೀಡಿದ್ದರೆ ತಾನ್ಯಾಕೆ ಎಲ್ಲರನ್ನು ಬಿಟ್ಟು ಬರುತ್ತಿದ್ದೆ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದ.ರಾಜೀವನ ಹೊಸ ಬದುಕು ಸುಖಮಯವಾಗಿ, ನಿರಾತಂಕವಾಗಿ ಸಾಗುತ್ತಿತ್ತು. ವಿಮಲಾ ಅವನ ಸರ್ವಸ್ವವಾಗಿ ಹೋಗಿದ್ದಳು. ತನ್ನ ಬದುಕಿನ ಸಮಸ್ತ ಸೂತ್ರಗಳನ್ನು ಅವಳ ಕೈಗೊಪ್ಪಿಸಿ, ತಾನು ಕೇವಲ ಗಾಳಿಪಟವಾಗಿ ಕನಸಿನ ಲೋಕದಲ್ಲಿ ಹಾರುತ್ತಿದ್ದ. ಆದರೆ ಅವನ ಸಂತೋಷ, ನೆಮ್ಮದಿ ಶಾಶ್ವತವಾಗಿರಲಿಲ್ಲ. ನಿಜವೆಂದುಕೊಂಡಿದ್ದು ಬರೀ ನೆರಳಾಗಿ ಹೋಗಿತ್ತು. ನಿರಂತರವೆಂದು ನೆಚ್ಚಿಕೊಂಡಿದ್ದ ಸುಖ ಸೋಪಿನ ನೊರೆಯಂತೆ ಕಣ್ಣೆದುರೇ ಕರಗಿ ಹೋಗಿತ್ತು. ರಾಜೀವ ಗಾಢವಾಗಿ ಪ್ರೀತಿಸಿದ್ದ, ಆತ್ಮ ಸಂಗಾತಿಯೆಂದು ನಂಬಿದ್ದ ವಿಮಲಾ ಅವನನ್ನು ಘೋರವಾಗಿ ವಂಚಿಸಿದ್ದಳು.ಒಂದು ದಿನ ಆಫೀಸಿನಿಂದ ಮುಂಚಿತವಾಗಿ ಬಂದವನು ತನ್ನಲ್ಲಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಗೆ ಪ್ರವೇಶಿಸಿದ. ಮುಂಭಾಗದಲ್ಲಿ ನಿಂತಿದ್ದ ಸುರೇಶನ ಕಪ್ಪು ಹೀರೋ ಹೊಂಡಾ ರಾಜೀವನಲ್ಲಿ ಆಶ್ಚರ್ಯ ಮೂಡಿಸಿತ್ತೇ ಹೊರತು ಖಂಡಿತವಾಗಿ ಅನುಮಾನವನಲ್ಲ. ಆದರೆ ಇವನಿಗಾಗಿ ಅಲ್ಲಿ ಕರಾಳವಾದ ಸತ್ಯವೊಂದು ಬಾಯ್ತೆರೆದು ಕಾದು ಕುಳಿತಿತ್ತು. ರಾಜೀವ ಯಾರಿಗಾಗಿ ತನ್ನ ಜೀವನವನ್ನೇ ಧಾರೆಯೆರೆಯಲು ಸಿದ್ಧನಿದ್ದನೋ, ಯಾರಿಗಾಗಿ ತನ್ನ ಬದುಕನ್ನೇ ಬಗೆದು ಹಂಚಿಕೊಟ್ಟಿದ್ದನೋ ಅದೇ ವಿಮಲಾ ತನ್ನ ಸಂಬಂಧಿ ಸುರೇಶನೋಡನೆ ಯಃಕಶ್ಚಿತ್ ತನ್ನ ದೇಹವನ್ನು ಹಂಚಿಕೊಳ್ಳುತ್ತಿದ್ದಳು.
ಇಷ್ಟೇ ನಡೆದಿದ್ದು. ರಾಜೀವ ವಿಮಲಾಗಾಗಲೀ, ಸುರೇಶನಿಗಾಗಲೀ ಏನೂ ಹೇಳಲಿಲ್ಲ. ಅವರ ಮೇಲೆ ಕೂಗಾಡಲಿಲ್ಲ. ಜಗಳವಾಡಲಿಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು ತಿಳಿದವನಂತೆ ಸುಮ್ಮನಾಗಿಬಿಟ್ಟಿದ್ದ. ಹತಾಶನಂತೆ ತನ್ನ ಕೋಣೆ ಸೇರಿ, ಬಾಗಿಲು ಹಾಕಿಕೊಂಡು ಮಲಗಿಬಿಟ್ಟಿದ್ದ. ಕಾದು ಕಾವಲಿಯಾದ ಮನಸ್ಸು, ಹೃದಯ. ಅವನಿಗೆ ನಿದ್ದೆ ಹತ್ತಿದಾಗ ಮಧ್ಯರಾತ್ರಿ ಮೀರಿತ್ತು.
ಮರುದಿನ ರಾಜೀವ ಎದ್ದಾಗ ತುಂಬಾ ತಡವಾಗಿ ಹೋಗಿತ್ತು. ಮನೆ ಖಾಲಿ ಖಾಲಿಯಾಗಿತ್ತು. ವಿಮಲಾ ಮನೆಯಲ್ಲಿರಲಿಲ್ಲ. ಅವಳಿಗೆ ಸಂಬಂಧಿಸಿದ ವಸ್ತುಗಳೊಂದೂ ಮನೆಯಲ್ಲಿರಲಿಲ್ಲ. ವಿಮಲಾ ಎಲ್ಲಿ ಹೋಗಿರಬಹುದೋ ಎಂದು ರಾಜೀವನಿಗೆ ಆತಂಕವಾಗಿತ್ತು. ಆದರೆ ಮುಂದೆ ವಿಮಲಾ, ಸುರೇಶ ಜೊತೆ ಜೊತೆಯಾಗಿ ಕಾಣಿಸತೊಡಗಿದಾಗ ಇವನ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು.
ರಾಜೀವನಿಗೆ ತುಂಬಾ ನೋವಾಗಿತ್ತು. ವಿಮಲಾಳ ವರ್ತನೆ ಅವನಿಗೆ ಭರಿಸಲಾಗದ ಆಘಾತ ಉಂಟುಮಾಡಿತ್ತು. ತಾನು ತಪ್ಪಿದ್ದೆಲ್ಲಿ? ಎಂದು ಅವನಿಗೆ ತಿಳಿಯದಾಯಿತು. ಅವನು ಮರು ಮದುವೆಯ ಯೋಚನೆಯನ್ನೂ ಮಾಡಲಿಲ್ಲ. ನೋವಿನ ಗೆಡ್ಡೆಯೊಂದನ್ನು ಎದೆಯಲ್ಲಿ ಬೆಳೆಸಿಕೊಳ್ಳುತ್ತಾ ಒಂಟಿಯಾಗಿ ಇದ್ದುಬಿಟ್ಟ. ಆಸೆಯಿಂದ ಆರಿಸಿಕೊಂಡ ಪ್ರೀತಿಯ ದಾರಿ ಅವನನ್ನು ಬೆಂಗಾಡಿನ ನಡುವೆ ತಂದು ನಿಲ್ಲಿಸಿಬಿಟ್ಟಿತ್ತು. ಅವನಿಗೆ ಜೀವನದ ಮೇಲಿನ ನಂಬಿಕೆಯೇ ಕಳೆದು ಹೋಗಿತ್ತು. ದಿನೇ ದಿನೇ ಅವನು ಬದುಕಿಗೆ ವಿಮುಖನಾಗತೊಡಗಿದ್ದ. ಯಾವಾಗದರೊಮ್ಮೆ ಊರಿಗೆ ಹಿಂತಿರುಗುವ ಯೋಚನೆ ಮನಸ್ಸಿನಲ್ಲಿ ಮೂಡಿದರೂ, ತನ್ನ ಪರಾಜಿತ ಮುಖವನ್ನು ತಂದೆಯೆದುರು ಪ್ರದರ್ಶಿಸಿ, ಅವರ ಹೆಮ್ಮೆಯನ್ನು ಮತ್ತಷ್ಟು ಬೆಳೆಸುವುದು ಅವನಿಗೆ ಇಷ್ಟವಾಗದೆ ಸುಮ್ಮನಾಗಿಬಿಟ್ಟಿದ್ದ.
ದಿನಗಳು ಸರಿದಂತೆ ಹಳೆಯ ರೋಷ, ದ್ವೇಷಗಳು ತಮ್ಮ ಬಿಗುವನ್ನು ಕಳೆದುಕೊಂಡಂತೆ ಊರಿಗೊಮ್ಮೆ ಹೋಗಿ ಬರುವ ನಿರ್ಧಾರಮಾಡಿ, ಅಂತೆಯೇ ಈಗ ಬಂದು ತಂದೆಯೆದುರು ಕೂತಿದ್ದ.
ಗತ ನೆನಪುಗಳ ಗೋರಿಯಲ್ಲಿ ಮುಳುಗಿದ್ದವನ್ನು ತಂದೆಯ ಮಾತು ಮೇಲಕ್ಕೆಳೆದು ತಂದಿತು-``ಆಗಿದ್ದಾಯಿತು ಕಣೊ ರಾಜೂ. ನಾನು ಈಗಾಗಲೇ ಜೀವನದಲ್ಲಿ ಬೇಕಾದಷ್ಟು ಪಾಠ ಕಲಿತುಬಿಟ್ಟಿದ್ದೀನಿ. ನನ್ನ ನಿಷ್ಟುರ ಸ್ವಭಾವಕ್ಕೆ, ಹಟಮಾರಿತನಕ್ಕೆ ಈಗಾಗಲೇ ದಂಡವನ್ನೂ ತೆತ್ತಿದ್ದೀನಿ. ನಿನ್ನ ಬಗ್ಗೆ ತಿಳಿಯಲು ತುಂಬಾ ಪ್ರಯತ್ನಪಟ್ಟೆ. ಆದರೆ ನೀನು ಬೇಕೆಂದೇ ನಮ್ಮಿಂದ ದೂರವಾಗಿಬಿಟ್ಟಿದ್ದೆ. ನಿನ್ನ ಗೆಳೆಯರಿಂದ ಪಡೆದ ನಿನ್ನ ವಿಳಾಸಕ್ಕೆ ಬರೆದ ಪತ್ರಗಳೆಲ್ಲಾ ಹಿಂತಿರುಗಿ ಬಂದವು. ನಿನ್ನ ಹೆಂಡತಿ, ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಿಡು. ನನ್ನ ಕೊನೆಗಾಲವನ್ನಾದರೂ ನಿಮ್ಮನ್ನೆಲ್ಲಾ ನೋಡಿಕೊಂಡು ನೆಮ್ಮದಿಯಾಗಿ ಕಳೆಯುತ್ತೇನೆ. ಇದೊಂದಕ್ಕೆ ಅವಕಾಶ ಮಾಡಿಕೊಡೊ."
ತಂದೆ ಅವನ ಕೈ ಹಿಡಿದು ಅಂಗಲಾಚುತ್ತಿದ್ದರು.ರಾಜೀವನ ಕಾಂತಿ ಕಳೆದುಕೊಂಡ ಕೆನ್ನೆಗಳಲ್ಲಿ ಕ್ಷಿಣವಾದ ನಗುವೊಂದು ಮಿಂಚಿ ಮರೆಯಾಯಿತು. ಬದುಕಿನ ಕಟ್ಟ ಕಡೆಯ ಕ್ಷಣಗಳನ್ನು ಎದುರಿಸುತ್ತಿರುವ ಮುದಿ ತಂದೆಯ ಮುಂದೆ ತನ್ನ ಅಸ್ತವ್ಯಸ್ತ ಬದುಕನ್ನು ಬಿಚ್ಚಿಡುವುದರಲ್ಲಿ ಯಾವ ಅರ್ಥವೂ ಇಲ್ಲ ಅನ್ನಿಸಿತು. ಜೀವನ ಪರಿಯೇ ವಿಚಿತ್ರ. ಯಾವುದೋ ಮರೀಚಿಕೆಯ ಬೆಂಬೆತ್ತಿ, ಹುಟ್ಟಿ ಬೆಳೆದ, ಮನೆ, ಊರನ್ನು ಬಿಟ್ಟು ಅಪರಿಚಿತ ತಾಣದಲ್ಲಿ ನನ್ನ ಬೇರುಗಳನ್ನು ಹುಡುಕಿಕೊಂಡೆ. ಮಮತೆಯ ತಾಯಿಯ ಜೀವಕ್ಕೆ ಎರವಾದೆ. ಅಂದು ತಾವು ಸತ್ತಾಗ ಕೂಡ ಬರಬೇಡವೆಂದು ಕೂಗಾಡಿ ನೋಯಿಸಿದ್ದ ಅಪ್ಪ ಈಗ ಸೋಲೊಪ್ಪಿಕೊಂಡು ಮತ್ತೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಆದರೆ ನನ್ನ ಬಾಳುವೆಯ ಸೇತುವೆ ಸರಿಪಡಿಸದಂತೆ ಮುರಿದುಬಿದ್ದಿದೆ.
ರಾಜೀವ ಎದೆಯ ನೋವಿನ ತರಂಗಗಳನ್ನು ಅಡಗಿಸಿಕೊಳ್ಳುತ್ತಾ-``ಅಷ್ಟು ಸುಲಭವಾಗಿ ಒಮ್ಮೆಗೆ ಇಲ್ಲಿಗೆ ಬರೋದು ಸಾಧ್ಯವಿಲ್ಲಪ್ಪಾ. ಮುಂದೆ ನೋಡೋಣ. ನಾನು ಇನ್ನು ಮುಂದೆ ಆಗಾಗ ಬಂದು ನಿನ್ನನ್ನು ನೋಡಿಕೊಂಡು ಹೋಗ್ತಾಇರ್ತೀನಿ." ಎಂದು ತಂದೆಯನ್ನು ಸಮಾಧಾನಿಸಿದ. ಇವನ ಮಾತಿನಲ್ಲಿ ಅವರಿಗೆ ನಂಬಿಕೆ ಬಂದಂತೆ ದೃಷ್ಟಿ ಕಳೆದುಕೊಂಡು ಮಂಕಾಗಿದ್ದ ಕಣ್ಣುಗಳು ಹೊಳಪುಗೊಂಡವು.ಅಷ್ಟು ಹೊತ್ತಿಗೆ ಬಂದ ರಾಘವ. ಅಣ್ಣ ಹಾಗೇ ಇದ್ದಾನೆ. ಅವನು ಬದುಕನ್ನು ಸವಾಲಾಗಿ ಸ್ವೀಕರಿಸಿದವನಲ್ಲ. ಅದಕ್ಕೆದುರಾಗಿ ಸಡ್ಡು ಹೊಡೆದು ನಿಲ್ಲದೆ ಬಂದದ್ದನ್ನು ಬಂದಂತೆ ಒಪ್ಪಿಕೊಳ್ಳುತ್ತಾ ಬಂದವನು. ಅದಕ್ಕೇ ಇರಬೇಕು ವಯಸ್ಸೂ ಕೂಡ ಅವನ ಮೇಲೆ ಅಷ್ಟಾಗಿ ಪ್ರಭಾವ ಬೀರಿದಂತಿಲ್ಲ. ಅಣ್ಣನದು ತುಂಬಾ ಸಾತ್ವಿಕ ಸ್ವಭಾವ. ಅಪ್ಪನ ನಿರಂಕುಶಮತಿಯಿಂದಾಗಿ ಮುರುಟಿಕೊಂಡ ವ್ಯಕ್ತಿತ್ವ ಅವನದು.
ತಮ್ಮನನ್ನು ಕಂಡ ರಾಘವ ತುಂಬಾ ಸಂತೋಷಪಟ್ಟ. ಅವನನ್ನು ಆಲಂಗಿಸಿಕೊಂಡು ತನ್ನ ಖುಷಿ ವ್ಯಕ್ತಪಡಿಸಿದ. ತನ್ನ ಬದುಕು ಎಲ್ಲವನ್ನೂ ಪೂರ್ತಿಯಾಗಿ ಕಳೆದುಕೊಂಡು ಬರಿದಾಗಿಲ್ಲ, ಇನ್ನೂ ಅಲ್ಪ ಸ್ವಲ್ಪ ಮೆರುಗನ್ನು ಉಳಿಸಿಕೊಂಡಿದೆ ಅನ್ನಿಸಿತು ಅವನ ಅಕ್ಕರೆಯನ್ನು ನೋಡಿ ರಾಜೀವನಿಗೆ.
ಅಣ್ಣ, ಅತ್ತಿಗೆ, ಮಕ್ಕಳೊಡನೆ ನಗುತ್ತಾ, ಮಾತಾಡುತ್ತಾ ಬಹುದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ. ಸಂಜೆ ಮಕ್ಕಳು ವತ್ಸಲಾ, ಮೋಹನರನ್ನು ಕರೆದುಕೊಂಡು ಹೆಓಔಟ್ಹ;ಗಿ ಅವರು ಕೇಳಿದ್ದು, ತನಗೆ ತೋಚಿದ್ದನ್ನೆಲ್ಲಾ ಕೊಡಿಸಿ ಅವರ ನಗುವನ್ನು ಕಂಡು ಆನಂದಿಸಿದ. ಅಣ್ಣ, ಅತ್ತಿಗೆಯರ ವಾತ್ಸಲ್ಯದ ಪರಿಧಿಯಿಂದ ಹೊಸ ಚೈತನ್ಯವನ್ನು ಬಗೆದು ತನ್ನ ಬಾಳಿಗಷ್ಟು ಹನಿಸಿಕೊಂಡ. ರಾಜೀವನಿಗೆ ತನ್ನ ಖಾಸಗೀ ಬದುಕಿನ ಬಗ್ಗೆ ಹೇಳಿಕೊಳ್ಳುವುದು ಅಷ್ಟಾಗಿ ಇಷ್ಟವಿಲ್ಲದ್ದು ಕಂಡು ರಾಘವನಾಗಲೀ, ಮೀರಾಳಾಗಾಗಲೀ ಅವನನ್ನು ಕೆದಕಲು ಹೋಗಲಿಲ್ಲ. ರಾಜೀವನಿಗೆ ಅವರ ನಿರಾಸಕ್ತಿ ಹಾಯೆನಿಸಿತು. ಮುಂದೆ ಎಂದಾದರೂ ತಿಳಿದರೆ ತಿಳಿಯಲಿ. ಈಗಂತೂ ಸತ್ತ ಭೂತವನ್ನು ಮೇಲೆತ್ತುವುದು ಬೇಡ ಎಂಬುದು ಅವನ ಅಭಿಮತವಾಗಿತ್ತು.
ರಾಜೀವ ರಾತ್ರಿಯ ಬಸ್ಸಿಗೆ ಬೊಂಬಾಯಿಗೆ ಹೊರಟು ನಿಂತ. ರಾಘವ, ಮೀರಾಗೆ ಇಷ್ಟು ಬೇಗ ಅವನನ್ನು ಕಳಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ.
``ಇಷ್ಟು ವರ್ಷಗಳ ನಂತರ ಬಂದಿದೀಯ. ಇನ್ನು ಒಂದೆರಡು ದಿನ ಇದ್ದು ಹೋಗು. ಮತ್ತೆ ಯಾವಾಗೋ ನೀನು ಬರುವುದು?" ಎಂಬು ತುಂಬಾ ಒತ್ತಾಯಿಸಿದರು. ರಾಜೀವ ಅವರ ಕೋರಿಕೆಯನ್ನು ಕೆಲಸದ ನೆಪ ಹೇಳಿ ನಯವಾಗಿಯೇ ನಿರಾಕರಿಸಿದ.
``ನಾನು ಧಿಡೀರನೆ ಬಂದಿದ್ದರಿಂದ ಹೋಗಲೇಬೇಕಾಗಿದೆ. ಸಮಯ ಸಿಕ್ಕಾಗಲೆಲ್ಲಾ ಬರುತ್ತಾ ಇರುತ್ತೇನೆ." ಎಂದು ಅವರುಗಳ ಒಪ್ಪಿಗೆಯನ್ನು ಪಡೆದುಕೊಂಡ. ಆದರೆ ಮತ್ತೆ ಇಲ್ಲಿಗೆ ಬರುವ ಇರಾದೆಯೇನೂ ಅವನ ಮನಸ್ಸಿನಲ್ಲಿ ಇರಲಿಲ್ಲ. ಕಡೆಯ ಬಾರಿಗೆಂಬಂತೆ ತಂದೆಗೆ ನಮಸ್ಕರಿಸಿದ ರಾಜೀವ. ಅವರು ನಡುಗುತ್ತಿರುವ ಕೈಯೆತ್ತಿ ಅವನ ತಲೆಯನ್ನು ಮಮತೆಯಿಂದ ನೇವರಿಸಿದರು. ಮಾಡಿದ್ದ ಪಾಪಗಳಿಗೆ ಕ್ಷಮೆ ಪಡೆದುಕೊಂಡಂತಹ ನಿರಾಳವಾದ ಭಾವನೆ ಅವರ ಮುಖದ ಮೇಲೆ ನೆಲೆಸಿತ್ತು.
ಮಕ್ಕಳು ``ಹೋಗಬೇಡ ಚಿಕ್ಕಪ್ಪಾ" ಎಂದು ಅಂಗಲಾಚುತ್ತಿದ್ದವು. ಅವರನ್ನು ಎತ್ತಿಕೊಂಡು ಅಪ್ಪಿ ಮುದ್ದಿಸಿದ. ಅಣ್ಣ, ಅತ್ತಿಗೆಯರ ಕಡೆಗೊಮ್ಮೆ ಕೈಬೀಸುತ್ತಾ ತನ್ನ ಹನಿಗೂಡುತ್ತಿರುವ ಕಣ್ಣುಗಳನ್ನು ಎಲ್ಲರಿಂದ ಮರೆಮಾಚುತ್ತಾ ತಾನು ಹುಟ್ಟಿ ಬೆಳೆದ ಮನೆಗೆ ಬೆನ್ನು ತಿರುಗಿಸಿ ಹೊರನಡೆದ ರಾಜೀವ.

ಒಂದು ಆರ್ಡಿನರಿ ಲವ್‌ಸ್ಟೋರಿ

ಒಂದು ಆರ್ಡಿನರಿ ಲವ್‌ಸ್ಟೋರಿ

- ಬೇಳೂರು ಸುದರ್ಶನ



ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ .....

ಬೆಳಗಿನಿಂದ ಲಾಡ್ಜಿನಲ್ಲಿ ನಡೆದ ಎಲ್ಲ ಮಾತುಕತೆಯಲ್ಲೂ ಅವಳ ಅಳುವೇ ಮುಖ್ಯವಾಗಿ ಕೇಳಿಸುತ್ತಿತ್ತು ಎಂದು ನನ್ನ ಮಿತ್ರನೆಂಬೋ ಮನುಷ್ಯ ಹೇಳಿದ್ದ. ಇಲ್ಲಿ ಅವಳ ಕಣ್ಣುಗಳನ್ನು ನೋಡಿದ ಮೇಲೆ ಅವನ ಮಾತುಗಳನ್ನು ನಾನು ನಿಜವೆಂದೇ ತಿಳಿಬೇಕಿದೆ. ಮದುವೆಯಾಗಲು ಆತ ಒಪ್ಪಲಿಲ್ಲ ಎಂದು ಅವಳು ಮಾತೇ ಆಡದೆ ಸುಮ್ಮನೆ ಅಳುತ್ತ ಕೂತಿದ್ದಳಂತೆ. ಇಲ್ಲಿ ನೋಡಿದರೆ ನನ್ನ ಜತೆ ಬೆಂಗಳೂರಿಗೆ ಹೊರಟಿದ್ದಾಳೆ. ಅವಳನ್ನು ನನ್ನ ಜೊತೆ ಕಳಿಸುತ್ತಿರೋ ವ್ಯಕ್ತಿಗಳಿಗೆ ನನ್ನ ವಿಷಮನಸ್ಸು ಗೊತ್ತಿಲ್ಲ.

ಅವಳೀಗ ಅಲ್ಲಿಯೇ ಶಾಲು ಹಾಸಿ ಮಲಗಿದ್ದಾಳೆ. ಮೂರು ಸೀಟು ಹಾಗೂ ಇಂಜಿನ್ನಿನ ನಡುವೆ ನಾವು ಆರೇಳು ಗಂಟೆಗಳನ್ನು ಕಳೆಯಬೇಕು. ಅವಳು ಎಲ್ಲೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಅವಳನ್ನು ನಾನು ಮುಟ್ಟಬಹುದೆ ಎಂದು ಯಾರನ್ನೂ ಕೇಳಲಾಗಲಿಲ್ಲ. ಹೊರಗೆ ಕಂಡಕ್ಟರ್ ಸೀಟಿ ಊದಿದ್ದಾನೆ. ಮತ್ತೆ ಜನ ಎಲ್ಲಿಂದಲೋ ಬಂದು ತುಂಬಿಕೊಂಡಿದ್ದಾರೆ. ನಮ್ಮ ಸುತ್ತಲೂ ಗೋಣಿಚೀಲಗಳಿವೆ; ಬಾಕ್ಸುಗಳಿವೆ. ಹೂವುಗಳಿವೆ; ಹಣ್ಣುಗಳ ಬುಟ್ಟಿಗಳಿವೆ.

ನಾವು ಯಾವತ್ತೂ ಹೀಗೆ ಒಟ್ಟಿಗೆ ಕುಳಿತವರೂ ಅಲ್ಲ. ಈಗ ಮಾತ್ರ ಒಟ್ಟಿಗೆ ಮಲಗಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ನಾವು ಚಳ್ಳಕೆರೆಯಲ್ಲಿ ಚಾ ಕುಡಿಯಲು ಇಳಿಯುವುದಿಲ್ಲ. ಅಥವಾ ಚುಮುಚುಮು ನಸುಕಿನಲ್ಲಿ ತುಮಕೂರಿನಲ್ಲೂ ಇಳಿಯುವುದಿಲ್ಲ. ನಮಗೆ ಸೀದಾ ಬೆಂಗಳೂರಿಗೆ ಹೋಗಬೇಕು. ಅವಳನ್ನು ನಾನು ಹಾಸ್ಟೆಲಿಗೆ ಸೇರಿಸಬೇಕು. ಅವಳನ್ನು ವಾರಕ್ಕೊಮ್ಮೆ ನೋಡಿಕೊಳ್ಳಬೇಕು. ಅವಳು ಡಿಪ್ರೆಸ್ ಆಗಬಾರದು ಎಂದು ಡಾಕ್ಟರ್ ಹೇಳಿದ್ದಾರೆ.
ಸುಟ್ಟುಹೋದ ಅವಳ ಪ್ರೀತಿಯನ್ನು ಮತ್ತೆ ಅರಳಿಸಲು ಯಾರಾದರೂ ಬರಬಹುದು ಎಂದು ಕಾಯಬೇಕು.
ಬಳ್ಳಾರಿಯನ್ನು ದಾಟಿದ ಮೇಲೆ ಬಸ್ಸು ರೈಲಿ ಹಳಿಗುಂಟ ಹೋಗುತ್ತದೆ. ಬದುಕೇ ಹೀಗೆ ಒಂದು ಉದ್ದನೆಯ ಸರಳರೇಖೆ ಎಂದು ನಾವೆಲ್ಲ ಭಾವಿಸುವಂತೆ ಮಾಡುತ್ತದೆ. ಆಮೇಲೆ ಒಂಟಿ ಹೆದ್ದಾರಿಯಲ್ಲಿ ಚಳ್ಳಕೆರೆ, ಹಿರಿಯೂರು. ಆಮೇಲೆ ಜೋಡಿ ಹೆದ್ದಾರಿಯಲ್ಲಿ ಬೆಂಗಳೂರು. ಯಾವುದಿದ್ದರೂ ಇವಳ ಕಥೆ ಹೀಗಾಯಿತಲ್ಲ ಎಂದು ನನಗೆ ತೀರ ಬೇಸರವಾಗಿ ಎದ್ದು ಕೂತೆ. ಎಲ್ಲರೂ ಕಿಟಕಿಯನ್ನು ತೆರೆದು ಗಾಳಿಗೆ ಮುಖವೊಡ್ಡಿ ಮಲಗುವ ಹತಾಶ ಯತ್ನದಲ್ಲಿದ್ದರು. ಇವಳು ಇಲ್ಲಿ ವೇಲ್‌ನ್ನೇ ಹೊದ್ದು ಮಲಗಿದ್ದಾಳೆ. ಒಮ್ಮೊಮ್ಮೆ ಎದ್ದು ಕೂರುತ್ತಾಳೆ. ಬಿಕ್ಕುತ್ತಾಳೆ. ನಾನು ಅವಳ ಭುಜ ತಟ್ಟಿ ಮಲಗಿಸುತ್ತೇನೆ. ಡ್ರೈವರ್‌ಗೆ ನಮ್ಮ ಬಗ್ಗೆ ಅಂತದ್ದೇನೂ ಅನ್ನಿಸಿಲ್ಲ ಎಂದು ನನಗೆ ಸಮಾಧಾನ. ಎದುರು ವಾಹನಗಳ ಬೆಳಕಿನಿಂದ ಮತ್ತೆ ಮತ್ತೆ ನಾವು ಬೆಳಗುತ್ತಿದ್ದೇವೆ. ಹಾರ್ನ್ ಹೊಡೆತಕ್ಕೆ ನಾವು ಮಂಪರಿನಿಂದ ಮೇಲೆದ್ದು ತತ್ತರಿಸುತ್ತೇವೆ. ನಾವು ಬಳ್ಳಾರಿ ಬಿಟ್ಟಿದ್ದೇ ಹನ್ನೊಂದು ದಾಟಿದ ಮೇಲೆ. ಈಗ ನಮಗೆ ನಿದ್ದೆಯೂ ಬರದೆ, ಮಲಗದೇ ಇರಲಾಗದೆ ಚಡಪಡಿಕೆ ಶುರುವಾಗಿದೆ.

ಯಾವಾಗಲೋ ನಾನು ನಿದ್ದೆಗೆ ಜಾರಿದ್ದೆ. ಅವಳು ಛಕ್ಕನೆ ನನ್ನ ಕೈ ಹಿಡಿದು `ಪ್ಲೀಸ್, ನನ್ನ ಕಥೆ ಮುಂದೇನಾಗುತ್ತೆ ಹೇಳು' ಎಂದಾಗ ನಾನು ಅರೆಕ್ಷಣ ಬೆಚ್ಚಿದೆ.ಅವಳಾಗಲೀ, ನಾನಾಗಲೀ ಹಿಂದೆಂದೂ ಮುಟ್ಟಿಸಿಕೊಳ್ಳದವರು. ಈಗ ಅವಳನ್ನು ಕೈಹಿಡಿದು ಬಸ್ಸಿಗೆ ಹತ್ತಿಸಿದ್ದಷ್ಟೆ; ಇಲ್ಲಿ ಇವಳು ನನಗೆ ಆತುಕೊಂಡು ಮಲಗಿದ್ದಾಳೆ. ಅವಳಿಗೂ, ನನಗೂ ಈ ಸ್ಪರ್ಶ ಹೊಸತು.

`ನೋಡು, ಸುಮ್ನೆ ಸಿದ್ದೆ ಮಾಡು. ಬೆಂಗಳೂರು ಬಂದಮೇಲೆ ಮಾತಾಡೋಣ' ಎಂದೆ. ಅವಳು ಬಿಡಲಿಲ್ಲ. ನನ್ನ ಕೈ ಹಿಡಿದೆಳೆದಳು. ನನ್ನ ಭುಜ ಹಿಡಿದು ಅಲ್ಲಾಡಿಸಿದಳು. ಮತ್ತೆ ಅವಳ ಕಣ್ಣಿನಲ್ಲಿ ನೀರಿದೆಯೇನೋ, ಕತ್ತಲಿನಲ್ಲಿ ಗೊತ್ತಾಗದೆ ನಾನು ತಡವರಿಸಿದೆ.

ನಾಳೆ ಅವಳೇನಾಗುತ್ತಾಳೆ ಎಂದು ನನಗೆ ಗೊತ್ತಿಲ್ಲ ಎಂದು ಅವಳಿಗೆ ಹೇಳಲೆ? ನಾಳೆ ನಾನೇನಾಗುತ್ತೇನೆ ಎಂದು ನನಗೆ ಗೊತ್ತಿದೆಯೆ?

ನಾನು ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ನಿದ್ದೆ ಮಾಡಿದರೂ ಮಾಡಿದೆ; ಹೆಬ್ಬಾಳದಿಂದ ಮೆಜೆಸ್ಟಿಕ್ಕಿಗೆ ನಡೆದುಕೊಂಡು ಬಂದರೂ ಬಂದೆ. ಬನಶಂಕರಿಯಿಂದ ಟಿಕೆಟ್ ಇಲ್ಲದೇ ಕಮಲಾನಗರಕ್ಕೆ ಹೋದರೂ ಹೋದೆ. ವಿಜಯಲಕ್ಷ್ಮಿ ಥಿಯೇಟರಿನಲ್ಲಿ ೪.೮೦ಕ್ಕೆ ಟಿಕೆಟ್ ಖರೀದಿಸಿ ಒಂದು ಅರೆಸೆಕ್ಸಿ ಇಂಗ್ಲಿಶ್ ಸಿನೆಮಾ ನೋಡಿದರೂ ನೋಡಿದೆ. ನಾನು ಮತ್ತೊಂದು ಕಾಡ್ರಾ ಪ್ಯಾಂಟ್ ಖರೀದಿಸಿದರೂ ಖರೀದಿಸಿದೆ. ನಾನು ಗಾಂಧಿ ಬಜಾರಿನ ಟಿವಿ ಸೇಲ್ಸ್‌ಮನ್ ಕೆಲಸ ಬಿಟ್ಟರೂ ಬಿಟ್ಟೆ.... ನಾನು ಏನಾಗುತ್ತೇನೆ, ಬೆಂಗಳೂರಿಗೆ ಹೋದಮೇಲೆ ಕಾಟನ್‌ಪೇಟೆಗೆ ಹೋಗುತ್ತೇನೋ ಅಥವಾ ಮತ್ತಾವುದೋ ಕಾರ್ಖಾನೆಗೆ ಸೇರಿಕೊಳ್ಳುತ್ತೇನೋ ಅನ್ನೋದೇ ಗೊತ್ತಿಲ್ಲದೆ ಇವಳ ಭವಿಷ್ಯವನ್ನು ಹೇಗೆ ಊಹಿಸಲಿ......

ಅವಳ ಆ ಪುಟ್ಟ ಕಣ್ಣುಗಳನ್ನೇ ಮಿಂಚಿಹೋಗುವ ಬೆಳಕಿನಲ್ಲಿ ನೋಡತೊಡಗಿದೆ. ಅವಳ ವೇಲ್ ಸರಿದು ಮುಖ ಬತ್ತಲಾಗಿತ್ತು. ನಮ್ಮನ್ನು ಆದಷ್ಟೂ ಬೇಗೆ ಬೆಂಗಳೂರಿನಲ್ಲಿ ಎಸೆಯಬೇಕೆಂದು ಡ್ರೈವರ್ ನಿರ್ಧರಿಸಿದ ಹಾಗೆ ಬಸ್ಸು ವೇಗ ಪಡೆದಿತ್ತು. ಜಂಪ್‌ಗಳಿಗೆ ನಾವು ಅತ್ತಿತ್ತ ತೊನೆಯುತ್ತಿದ್ದೆವು. ಅವಳು ಮತ್ತೆ ಮತ್ತೆ ನನಗೆ ಡಿಕ್ಕಿಯಾಗುತ್ತಿದ್ದಳು. ಅವಳ ಮುಖವನ್ನು ಅಷ್ಟು ಹತ್ತಿರದಿಂದ ನಾನು ಮತ್ತೆ ನೋಡಲಾರೆ ಅನ್ನಿಸಿತು.

ಅವ ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದೂ ಆಕೆ ಯಾಕೆ ಇಲ್ಲಿಗೆ ಬಂದಳು, ಯಾಕೆ ಮಾತುಕತೆ ನಡೆಸಿದಳು, ಯಾಕೆ ಮತ್ತೆ ಕುಸಿದುಹೋದಳು ಎಂದು ನನಗೆ ಗೊತ್ತಾಗಲಾರದು. ಈ ರಾತ್ರಿ, ನಾಳೆಯ ಬೆಳಗು ಕಳೆದ ಮೇಲೆ ಅವಳು ಸಿಗಬೇಕೆಂದೇನೂ ಇಲ್ಲವಲ್ಲ..... ಆಕೆಯನ್ನು ಸಂಜೆ ಲಾಡ್ಜಿನಲ್ಲಿ ನೋಡಿದಾಗ ಅವಳು ಇಷ್ಟೆಲ್ಲ ಭಾವಜೀವಿ ಎನ್ನಿಸಿರಲಿಲ್ಲ. ಸುಮ್ಮನೆ ಎಲ್ಲೋ ನೋಡುತ್ತ ಕೂತಿದ್ದಳು. ಎಲ್ಲರೂ ಕಾಫಿ ಕುಡಿಯುತ್ತಿದ್ದರೆ ಈಕೆ ಮಂಡಿಗಳನ್ನು ಕೈಗಳಿಂದ ಸುತ್ತುವರಿದು ವಿರಕ್ತೆಯ ಹಾಗೆ ಕೂತಿದ್ದಳು. ಎಲ್ಲರೂ ಅಲ್ಲಿ ಯಾವುದೋ ಸಿನೆಮಾದ ಯಾವುದೋ ಸನ್ನಿವೇಶದ ಬಗ್ಗೆ ಚರ್ಚಿಸುತ್ತಿದ್ದರೆ ಇವಳು ಮಾತ್ರ ಸೋತುಹೋದ ನಾಯಕಿಯ ಹಾಗೆ ವಿಷಣ್ಣವಾಗಿ ನಗುತ್ತಿದ್ದಳು. ಎಲ್ಲರೂ ಊಟಕ್ಕೆ ಹೋದಾಗಲೇ ನನಗೆ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಗೊತ್ತಾಗಿದ್ದು.

ನಾನು ಅವಳ ಅಂಗೈಯನ್ನು ಮೆಲ್ಲಗೆ ಒತ್ತಿದೆ. ಅವಳ ತೋಳುಗಳನ್ನು ಗಟ್ಟಿಯಾಗಿ ಹಿಡಿದೆ. ಅವಳ ವೇಲ್ ಸರಿಪಡಿಸಿ ಕಿವಿ ಮುಚ್ಚಿದೆ. ಅವಳ ಕೆನ್ನೆ ತಟ್ಟಿದೆ. ಅವಳು ಯಾಕೋ ಪುಟ್ಟ ಮಗುವಿನ ಹಾಗೆ ಮುರುಟಿಕೊಂಡಿದ್ದಾಳೆ. ಬಹುಶಃ ನಾಳೆ ಏನಾದರೂ ಆಗಬಹುದೆ? ನಾನು ಅವಳಿಂದ ಬಿಡುಗಡೆ ಪಡೆಯಲಾರೆನೆ?

`ನೀನು ಜೊತೆಗೆ ಬರ್‍ತೀಯ ಅಂದಮೇಲೆ ಸ್ವಲ್ಪ ಸಮಾಧಾನ ಆಯ್ತು ಕಣೋ' ಅವಳಿಗೆ ನಿದ್ದೆ ಬಂದಿಲ್ಲ.
ನಾನು ಅವತ್ತು ಬೆಂಗಳೂರಿಗೆ ವಾಪಸಾಗಬೇಕು ಅನ್ನೋ ನಿಯಮವೇನೂ ಇರಲಿಲ್ಲ. ನನಗೆ ಕೆಲಸವೇ ಇರಲಿಲ್ಲ. ಹಾಗಂತ ನಾನು ಅವಳಿಗೆ ಹೇಳಲಾರೆ. ನಾನೀಗ ಮಹಾನ್ ಸಾಮಾಜಿಕ ಕಾರ್ಯಕರ್ತ. ವಿದ್ಯಾರ್ಥಿ ಚಳವಳಿಯಲ್ಲಿ ನಾನೊಬ್ಬ ಮುಖ್ಯ ವ್ಯಕ್ತಿ. ನ್ಯಾಶನಲ್ ಕಾಲೇಜಿನ ಎತ್ತರದ ಗೋಡೆಗಳ ಮೇಲೆ, ರೈಲ್ವೆ ನಿಲ್ದಾಣದ ಉದ್ದುದ್ದ ಕಟ್ಟೆಯ ಮೇಲೆ, ಜೈಲ್,ರೇಸ್‌ಕೋರ್ಸ್ ರಸ್ತೆಗಳಲ್ಲಿ ನಾನು ಬರೆದ ಗೋಡೆಬರಹಗಳನ್ನು ಈಗಲೂ ಮಸುಕಾಗಿ ಕಾಣಬಹುದು. ಚಳವಳಿಗಳಲ್ಲಿ ಪ್ಲಕಾರ್ಡ್ ಬರೆದಿದ್ದೇನೆ. ವರದಕ್ಷಿಣೆ ಸಾವಿನ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನನ್ನ ಕವನವನ್ನು ಯಾರೋ ಮಹರಾಯ್ತಿ ಓದಿದ್ದಾಳೆ.

`ನೀನು ಚಾಮರಾಜಪೇಟೇಲೇ ಇರ್‍ತೀಯ?'
`ಹೌದು.'
`ಹಾಗಾದ್ರೆ ಅವಾಗಾವಾಗ ನೀನು ನನ್ನ ಹಾಸ್ಟೆಲಿಗೆ ಬರಬಹುದು.'
ನಾನು ಅವಳ ತೋಳು ಹಿಡಿದೇ ಹೇಳಿದೆ: `ಬರ್‍ತೀನಿ. ಕನಿಷ್ಟ ವಾರಕ್ಕೊಂದ್ಸಲ ಬಂದೇ ಬರ್‍ತೀನಿ.'

ನಾವು ಹಾಗೇ ಮಲಗಿದ್ದೇವೆ. ಬಸ್ಸು ಭರಭರ ಹೋಗ್ತಾ ಇದೆ. ಲಾರಿಗಳು ನಮ್ಮೆದುರು, ಹಿಂದೆ, ಮುಂದೆ ಬಂದು ಹೋಗುತ್ತಿವೆ. ನಾವು ಬಸ್ಸಿನ ರೊಯ್ಯರೊಯ್ಯ ಸದ್ದನ್ನೇ ಕೇಳುತ್ತ ಮಲಗಿದ್ದೇವೆ. ನಾವು ಚಳಿಗಾಗಲೀ, ಶಬ್ದಕ್ಕಾಗಲೀ, ನಮ್ಮನ್ನು ಆಗಾಗ ದಿಟ್ಟಿಸುವ ಡ್ರೈವರನಿಗಾಗಲೀ ಹೆದರಿಲ್ಲ.

ಅವಳನ್ನು ಸೆಳೆದು ನಾನು ಮಾತನಾಡೋದಕ್ಕೆ ಶುರು ಮಾಡ್ದೆ. ಅವಳ ಜತೆ ಮಾತನಾಡದೇ ಹೀಗೆ ಇರೋದು ಸರಿಯಲ್ಲ ಅನ್ನಿಸತೊಡಗಿತ್ತು.

`ನೋಡು, ನೀನು ಅವನ ಬಗ್ಗೇನೇ ಯೋಚಿಸ್ಬೇಡ ಮಾರಾಯ್ತಿ. ಸುಮ್ನೆ ಬೆಂಗಳೂರಿನಲ್ಲಿ ನಿನ್ನ ಕೆಲಸ ಮಾಡ್ಕೋತಾ ಇರು. ನಾವು ಹೀಗೆ ನೋವು ಅನುಭವಿಸ್ತಾನೇ ಎಷ್ಟು ದಿನಾ ಅಂತ ಇರೋಕ್ಕಾಗುತ್ತೆ... ನಾನು ಪ್ರೀತಿಸ್ತಾ ಇರೋ ಹುಡುಗಿ ಇವತ್ತಿಗೂ ನನಗೆ ಕಾಗದ ಬರೆದಿಲ್ಲ. ಅವಳು ನಿಜಕ್ಕೂ ನನ್ನ ಪ್ರೀತಿಸ್ತಿದಾಳೋ ಇಲ್ವೋ ಅನ್ನೋದೇ ನನಗೆ ಗೊತ್ತಿಲ್ಲ. ನಾನೂ ನಿಂಥರಾನೇ ನೊಂದಿದೇನೆ. ನನಗೆ ಒಂದು ಒಳ್ಳೆ ಕೆಲಸ ಅನ್ನೋದಿಲ್ಲ. ಸೋಶಿಯಲ್ ವರ್ಕ್ ಮಾಡೋದು, ಕೆಲಸ ಮಾಡೋದು ಎಲ್ಲವೂ ಬೇಜಾರಾಗಿದೆ. ಒಂದ್ಸಲ ನನಗೆ ಚಾರ್ಮಾಡಿ ಘಾಟಿನಲ್ಲಿ ಒಂಟಿಯಾಗಿ ಅಡ್ಡಾಡುತ್ತ, ಬಸ್ಸುಗಳಿಗೆ ಅಡ್ಡಹಾಕಿ ಭಿಕ್ಷೆ ಕೇಳುತ್ತ ಬದುಕಿರೋಣ ಅನ್ನಿಸಿದೆ. ಹೇಗೂ ಅಲ್ಲಿ ನೀರಿದೆ. ದೇವಸ್ಥಾನ ಇದೆ. ಧರ್ಮಸ್ಥಳ,ಕೊಲ್ಲೂರು, ಶೃಂಗೇರಿ ಹೀಗೆ ಹೋಗ್ತಾ ಇರಬಹುದು.

`ಈಗ ನಿದ್ದೆ ಮಾಡು. ನಾನಿಲ್ವ? ಹೀಗೆ ನಾವಿಬ್ರೂ ಎಷ್ಟು ಸಲ ಪ್ರಯಾಣ ಮಾಡೋದಕ್ಕಾಗುತ್ತೆ? ನಿನ್ನನ್ನ ನಾನು ಎಷ್ಟು ಸಲ ನೋಡಿದ್ರೂ ನನ್ನ ಪುಟ್ಟ ಗೆಳತಿ ಅಂತಲೇ ಅನ್ಸುತ್ತೆ. ನಾನು ತುಂಬಾ ಭಾವನಾಜೀವಿ. ನನ್ನ ಕವನಗಳಲ್ಲಿ ಇರೋದೆಲ್ಲ ಬರೀ ಕನಸುಗಳು; ಅದರಲ್ಲಿ ನಾನೇ ತೇಲಿಹೋಗ್ತಾ ಇರ್‍ತೇನೆ. ಎಷ್ಟೋ ಸಲ ಅನಾಥ ಅಂತ ನನ್ನನ್ನೇ ನಾನು ಕರ್‍ಕೊಂಡಿದೇನೆ. ಬೆಂಗಳೂರಿಗೆ ಹೋದಮೇಲೆ ನನ್ನ ಕವನಗಳನ್ನು ಜೆರಾಕ್ಸ್ ಮಾಡಿಕೊಡ್ತೇನೆ, ಓದು. ನನ್ನ ಕತೆಯೆಲ್ಲ ಅದರಲ್ಲಿವೆ.

`ನೀನು ಇವತ್ತು ಬೆಳಗ್ಗೆ ಎಷ್ಟು ಚಲೋ ನಗ್ತಾ ಇದ್ದೆ... ಸಂಜೆ ನೋಡಿದ್ರೆ ಹಾಗೆ ಉಡುಗಿದೀಯ. ಯಾಕೆ ಮಾರಾಯ್ತಿ.... ಅವ ಬಿಟ್ರೆ ನಿನಗೆ ಬೇರೆ ಯಾರೂ ಸಿಗಲ್ವ? ಸುಮ್ನೆ ಯೋಚನೆ ಮಾಡ್ಬೇಡ. ಮಲಕ್ಕೋ. ನಾಳೆ ಮಾತಾಡಣ.'

ಹೀಗೇ ಏನೇನೋ ಮಾತನಾಡುತ್ತ ಅವಳನ್ನು ಹಾಗೇ ನೋಡುತ್ತಿದ್ದೆ. ಅವಳ ಕಣ್ಣಲ್ಲಿ ಎಂಥದೋ ನಿರಾಸಕ್ತಿ. ಅವಳಿಗೆ ನನ್ನ ಪ್ರೀತಿ-ಪ್ರೇಮದ ಕಥೆ ತಗೊಂಡು ಆಗಬೇಕಾದ್ದೇನೂ ಇಲ್ಲವಲ್ಲ.... ಹಾಗೇ ಅವಳ ನೆತ್ತಿ ತಟ್ಟುತ್ತ ಬಸ್ಸಿನ ಛಾವಣಿಯನ್ನೇ ನೋಡುತ್ತ ಮಲಗಿದೆ.

ಯಾವಾಗಲೋ ತುಮಕೂರು ದಾಟಿ ಬೆಂಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ನಾವು ನಡುಗತೊಡಗಿದೆವು. ಯಶವಂತಪುರ,ನವರಂಗ್ ದಾಟಿ ಮೆಜೆಸ್ಟಿಕ್ಕಿಗೆ ಬರೊ ಹೊತ್ತಿಗೆ ನಾವು ನಮ್ಮ ಲಗೇಜನ್ನು ಎತ್ತಿಕೊಂಡಿದ್ದೆವು.
ಸೀದಾ ಆಟೋ ಹಿಡಿದು ಚಾಮರಾಜಪೇಟೆಗೆ ಹೋದೆವು. ಅವಳನ್ನು ಹಾಸ್ಟೆಲಿಗೆ ಬಿಟ್ಟು ನಾನು ನನ್ನ ಕಾಯಕಕ್ಕೆ ಮರಳಿದೆ.

ಒಂದು ವಾರ ಕಳೆದಿತ್ತು. ಅವಳಿಂದ ಯಾವುದೇ ಫೋನ್ ಕೂಡಾ ಇಲ್ಲ. ನಾನೇನೂ ಹೆಚ್ಚು ಚಿಂತಿಸಲಿಲ್ಲ. ಬಸ್ಸಿನಲ್ಲಿ ಅವಳ ಜೊತೆ ಮಲಗಿದಾಗ ನನ್ನೊಳಗೆ ಎದ್ದ ಭಾವತುಮುಲಗಳು ಕಾಂಕ್ರೀಟಿನ ಗೋಡೆಗಳಲ್ಲಿ ಅಡಗಿಹೊಗಿದ್ದವು. ನಾನು ಅಲ್ಲಿ ಬಸ್‌ನಂಬರುಗಳ ನಡುವೆ, ಕ್ರಾಸುಗಳ ನಡುವೆ, ಮನೆ ಸಂಖ್ಯೆಗಳ ನಡುವೆ ಹೂತುಹೋಗಿದ್ದೆ. ನಾನು ಮತ್ತೆ ಕೆಲಸ ಬಿಟ್ಟೆ. ಈಗ ಶ್ರೀರಾಮಪುರದ ಐದನೇ ಕ್ರಾಸಿನ ವಾರಪತ್ರಿಕೆಯಲ್ಲಿ ರಸೀದಿ ಹರಿಯೋ ಕೆಲಸ.
ನನ್ನ ಆಫೀಸಿಗೆ ಫೋನ್ ಬಂದಾಗಲೇ ಅವಳ ನೆನಪಾಗಿದ್ದು. `ಬನ್ನಿ ಸರ್, ಅವಳು ಯಾಕೋ ತುಂಬಾ ಡಲ್ ಆಗಿದಾಳೆ. ತುಂಬಾ ಅಳ್ತಿದಾಳೆ. ಕೊನೆಗೆ ನಿಮ್ಮ ಫೋನ್ ನಂಬರ್ ಕೊಟ್ಳು. ಕೂಡ್ಲೇ ಬರ್‍ತೀರ ಸರ್?' ಯಾರೋ ಅವಳ ಗೆಳತಿ ಕೇಳಿದಾಗ ನನಗೆ ಶಾಕ್ ಆಯ್ತು.

ಅಲ್ಲಿ ಹಾಸ್ಟೆಲಿನ ಜಗಲಿ ಕಟ್ಟೆಯ ಮೇಲೆ ಅವಳು ಕುಳಿತಿದ್ದಾಳೆ. ಯಾರನ್ನು ನೋಡುತ್ತಿದ್ದಾಳೆ ಎಂದು ಹೇಳಲು ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನನ್ನು ನೋಡುತ್ತಾಳೆ. ಅವಳ ಗೆಳತಿಯರು ಒಂದು ಬದಿಯಲ್ಲಿ ಗುಸು ಗುಸು ಮಾತನಾಡಿಕೊಳ್ಳುತ್ತ ಕೂತಿದ್ದಾರೆ. ನಾನು ಅವಳ ಫ್ರೆಂಡ್ ಅಂತ್ಲೋ ಏನೋ, ಹತ್ತಿರ ಬಂದಿಲ್ಲ. ಸಂಜೆಯಾಗ್ತಾ ಇದೆ.
ನಾನು ಅವಳ ಅಂಗೈಯನ್ನು ಹಿಡಿದು ಸಮಾಧಾನ ಮಾಡೋದಕ್ಕೆ ಹೊರಟರೆ,ಮತ್ತೆ ಅವಳ ಕಣ್ಣಿನಿಂದ ನೀರು ಧುಮುಕುತ್ತಿದೆ. ಅವಳೇನೂ ನನ್ನ ಲವ್ ಮಾಡ್ತಿಲ್ಲ. ನಾನೂ ನನ್ನದೇ ಭಗ್ನಬದುಕಿನಲ್ಲಿ ಬಿದ್ದಿದ್ದೇನೆ. ಆದರೂ ಯಾಕೆ ಅವಳಿಗೆ ನಾನು ಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ.

`ಅವನು ಬೇರೆ ಮದುವೆಯಾಗಬಹುದಾ?'

ಅವನು ಬೇರೆ ಮದುವೆಯಾದರೆ ನೀನೂ ಬೇರೆ ಮದುವೆಯಾಗು ಎಂದು ಅವಳಿಗೆ ತಿಳಿಹೇಳುವಷ್ಟರಲ್ಲಿ ಎಂಟೂವರೆ ದಾಟಿತ್ತು.

ಮತ್ತೆ ಅವಳ ಫೋನ್ ಬರಲಿಲ್ಲ.

ಈಗ ನಾನು ಕನಿಂಗ್‌ಹ್ಯಾಮ್ ರಸ್ತೆಯಲ್ಲಿದ್ದೇನೆ. ಸ್ಕೂಟರ್ ಬಂದಿದೆ. ಹೆಂಡತಿ ಇದ್ದಾಳೆ. ಮಗ ಬೆಳೆದಿದ್ದಾನೆ. ಬೀದಿಗಳು ಧುತ್ತನೆ ಬೆಳೆದಿವೆ. ನಾನು ಈಟಿ ಯುಗದ ಹೊಸ ಕೆಲಸ ಸೇರಿದ್ದೇನೆ. ಅವಳಿಗೆ ಆಗಾಗ ಸಿಗುತ್ತಿದ್ದೆ. ಈಗಲೂ ಅವಳಿಗೆ ನನ್ನ ಮೊಬೈಲ್ ಸಂಖ್ಯೆ ಗೊತ್ತು.

ಅವಳ ಫೋನ್ ಬಂದಾಗ ನಾನು ಕೆಳಗೆ ಪಿಜ್ಜಾ ಮುಕ್ಕುತ್ತಿದ್ದೆ. `ಅವನ ಮನೆಗೆ ಹೋಗಬೇಕು ಅಂತ ಅನ್ನಿಸಿದೆ ಮಾರಾಯ' ಎಂದಳು. ಮೊದಲು ಆಟೋದಲ್ಲೇ ಇಲ್ಲಿಗೆ ಬಾ, ಆಮೇಲೆ ಮಾತಾಡೋಣ ಎಂದೆ. ಅವನೂ ಬೆಂಗಳೂರಿನಲ್ಲೇ ಇದ್ದಾನೆ. ದೊಡ್ಡ ಆರ್ಕಿಟೆಕ್ಟ್.

ಅವಳ ಮುಖದಲ್ಲಿ ಏನೋ ದುಗುಡ. ಬಳ್ಳಾರಿಯಿಂದ ಬಸ್ಸಿನಲ್ಲಿ ಬಂದಾಗ ಇದ್ದ ಖಿನ್ನತೆಗೂ, ಇವತ್ತಿನದಕ್ಕೂ ತುಂಬಾ ವ್ಯತ್ಯಾಸವಿದೆ.

ಇಬ್ಬರೂ ಆಟೋದಲ್ಲೇ ಅವನ ಮನೆಗೆ ಹೋದೆವು. ಸುಮ್ಮನೆ ಯಾವುದೋ ಸಿನೆಮಾ ಹಾಕಿಕೊಂಡು ನೋಡ್ತಾ ಇದ್ದವನು ನಮ್ಮನ್ನು ನೋಡಿ ಹುಬ್ಬೇರಿಸಿದ. `ಅರೆ ಎಂಥ ಸರ್‌ಪ್ರೈಸ್' ಎಂದ. ಕೂತುಕೊಳ್ಳಲು ಹೇಳಿ ಹಾಲು ತರಲು ಹೊರಗೆ ಹೋದ. ನಾವು ನಗು ಹಂಚಿಕೊಂಡೆವು. ಅವನಿನ್ನೂ ಮದುವೆಯಾಗಿಲ್ಲ. ಅವನಿಗೆ ವಯಸ್ಸಿನ ಪರಿವೆ ಇಲ್ಲ.
ಅವನೇ ಮಾಡಿದ ಚಾ ಕುಡಿದೆವು. ಮಾಡರ್ನ್ ಆರ್ಕಿಟೆಕ್ಚರ್ ಮಾರುಕಟ್ಟೆಯ ಬಗ್ಗೆ ಅವನು ಹೇಳಿದ ಡೈಲಾಗ್‌ಗಳಿಗೆ ಇವಳೂ ಒಂದಷ್ಟು ಪ್ರತಿಕ್ರಿಯೆ ನೀಡಿದಳು. ಹಾಗೇ ಅರ್ಧ ತಾಸು ಮಾತನಾಡಿ ಹೊರಬಿದ್ದೆವು.

ಆಟೋದಲ್ಲಿ ಕುಳಿತಾಗ ಅವಳ ಮುಖದಲ್ಲಿ ನಗು ಮಾಸಿರಲಿಲ್ಲ. ಯಾಕೆ ಅವಳು ನಗುತ್ತಿದ್ದಾಳೆ? ಅವನನ್ನು ಸೋಲಿಸಿದೆ ಎಂದೆ? ತಾನು ಮದುವೆಯಾಗಿ ಸುಖವಾಗಿದ್ದೇನೆ; ನೀನು ಮಾತ್ರ ಒಂಟಿಯಾಗಿದ್ದೀಯ ಅಂತಲೆ?
ನನ್ನ ಆಫೀಸಿನ ಎದುರು ಇಳಿದೆ. ಮತ್ತೆ ಅವಳ ಕೈ ಹಿಡಿದು ಹೇಳಿದೆ: ಚೆನ್ನಾಗಿರು ಮಾರಾಯ್ತಿ. ಅವನ ಭೇಟಿ ಆದ್ರೂ ಒಂದೆ; ಆಗದಿದ್ದರೂ ಒಂದೆ. ಈಗಂತೂ ಅವನನ್ನು ನೋಡಿದೀಯ. ಮುಂದೆ ಹಾಗೆ ಕೇಳಬೇಡ.

`ಆಯ್ತು ಕಣೋ. ತುಂಬಾ ಥ್ಯಾಂಕ್ಸ್. ನಾನೊಬ್ಳೇ ಖಂಡಿತ ಅವನ ಮನೆಗೆ ಹೋಗ್ತಿರಲಿಲ್ಲ. ಆದ್ರೆ ಎಷ್ಟೋ ವರ್ಷದಿಂದ ಕೊರೀತಾ ಇತ್ತು. ಅವನನ್ನು ಮಾತಾಡಿಸಬೇಕು ಅಂತ. ಇವತ್ತು ಸಮಾಧಾನ ಆಯ್ತು. ಅವನೇನೂ ನನಗೆ ಸೂಟ್ ಆಗ್ತಾ ಇರಲಿಲ್ಲ ಅಂತ ಕಾಣ್ಸುತ್ತೆ. ಅದಕ್ಕೇ ನಗು ಬಂತು.'

ಇವಳಿಗೆ ತನ್ನದೇ ಆದ ಆರ್ಗೂಮೆಂಟ್ ಬೇಕಿತ್ತು ಅನ್ನಿಸಿತು.

ಪಾರ್ಕಿಂಗ್ ಇಲ್ಲದ ಈ ಬೀದಿಯಲ್ಲಿ ಆಟೋ ನಿಲ್ಲಿಸುವುದೇ ಕಷ್ಟ. ಅವಳನ್ನು ಹಾಗೆ ಬೀದಿಯಲ್ಲಿ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. `ಸರಿ ಬೈ. ಮತ್ತೆ ಯಾವಾಗ್ಲಾದರೂ ಸಿಗು' ಎಂದೆ.

`ನೀನು ನನ್ನ ಬೆಸ್ಟ್ ಫ್ರೆಂಡ್ ಮಾರಾಯ. ನನಗೆ ಡಿಪ್ರೆಸ್ ಆದಾಗ್ಲೆಲ್ಲ ನಿನಗೆ ಫೋನ್ ಮಾಡ್ತೀನಿ. ಪ್ಲೀಸ್ ಮಾತಾಡು' ಎಂದಳು. ಇವರ ಮಾತು ನಿಲ್ಲೋದೇ ಇಲ್ಲ ಎಂದು ಗೊತ್ತಾಗಿಬಿಟ್ಟಂತೆ ಆಟೋ ಹೊರಟೇ ಬಿಟ್ಟಿತು.

ಇಲ್ಲಿಗೆ ಈ ಕಥೆ ಮುಗಿಯಿತು ಎಂದು ನಾನೂ ನೀವೂ ಅಂದುಕೊಂಡಿರುವ ಹಾಗೆಯೇ ಹತ್ತು ವರ್ಷಗಳು ಕಳೆದವು.
ಬಳ್ಳಾರಿಯ ಬಸ್ಸು, ಧೂಳು, ಚಳ್ಳಕೆರೆಯ ದಾಭಾ, ತುಮಕೂರಿನ ಟ್ರಾಫಿಕ್ ಜಾಮ್ ಎಲ್ಲವನ್ನೂ ನಾನು ಮರೆತಿದ್ದೆ. ಹಿರಿಯೂರುವರೆಗಿನ ರಸ್ತೆ ಹಾಗೇ ಇದ್ದರೂ ರಾಷ್ಟ್ರೀಯ ಹೆದ್ದಾರಿಯೀಗ ನಾಲ್ಕು ಪಥಗಳಾಗಿ ಬಿಡಿಸಿಕೊಂಡಿದೆ. ನಾನೂ ನಾಲ್ಕಾರು ಕೆಲಸಗಳನ್ನು ಮಾಡಿ, ನನ್ನ ಅನುಭವ ವಿಸ್ತಾರದ ನೆಪದಲ್ಲಿ ಬೆಂಗಳೂರಿನ ಹತ್ತಾರು ಕಂಪನಿಗಳಲ್ಲಿ ದುಡಿದೆ ; ಸೋಡೆಕ್ಸೋ ಪಾಸ್ ಹೊಡೆದು ಮಜಾ ಮಾಡಿದೆ. ಬಸ್ಸಿನ ಸುಖವನ್ನೇ ಮರೆತ ದರಿದ್ರ ಮನುಷ್ಯನಾದೆ; ಸ್ಕೂಟರಿನಿಂದ ಕಾರಿಗೆ ಜಿಗಿದೆ. ಇಂಟರ್‌ನೆಟ್, ಚಾಟ್ ಎಲ್ಲದಕ್ಕೂ ಪಕ್ಕಾದೆ. ಅವಳು ಎಲ್ಲಿದ್ದಾಳೆ, ಹೇಗಿದ್ದಾಳೆ ಅನ್ನೋದಿರಲಿ, ನನ್ನ ಪ್ರೀತಿಯ ಗೆಳೆಯರನ್ನೂ ಮರೆತು ಹಾಯಾಗಿ ಇರೋದಕ್ಕೆ ಆರಂಭಿಸಿದೆ.
`ಹಾಯ್, ಹ್ಯಾಗಿದೀಯ?' ಎಂಬ ಒಂದು ಸಾಲಿನ ಪ್ರೈವೇಟ್ ಮೆಸೇಜ್ ನನ್ನ ಖಾಸಗಿ ಜಾಲತಾಣಕ್ಕೆ ಬಂದಾಗಲೇ ಅವಳೂ ಇಲ್ಲೆಲ್ಲೋ ಇದ್ದಾಳೆ ಎಂದು ಅಚ್ಚರಿಯಾಯ್ತು. ಪೋನ್ ಮಾಡಿದರೆ ಅಚ್ಚ ಬೆಂಗಳೂರು ಇಂಗ್ಲಿಶಿನಲ್ಲಿ ಹಾಯ್, ಹೂ ಈಸ್ ದಿಸ್ ಎಂದಳು. ನಾನೇ ಮಾರಾಯ್ತಿ ಎಂದು ನಸುನಕ್ಕಮೇಲೆ ಅವಳ ಭಾಷೆ ಬದಲಾಯ್ತು. ಅವನೆಲ್ಲಿದಾನೆ ಗೊತ್ತ ಅನ್ನೋದೇ ಮೊದಲ ಪ್ರಶ್ನೆ.

ಅವನೀಗ ಮದುವೆಯಾಗಿದಾನೆ ಎಂದೆ. ಅವನಿಗೆ ಒಬ್ಬ ಮಗಳಿದಾಳೆ. ಚಲೋ ಚೂಟಿ ಎಂದೆ. ಹೌದ ಎಂದು ಅಚ್ಚರಿಪಟ್ಟಳು. ಅವಳ ಹೆಸರು ಕೇಳಿದಳು.

`ಮೌನ'
`ಅದೇ ಹೆಸರು..... ಅದು ನಂದೇ ಪ್ರಪೋಸಲ್ ಕಣೋ...' ಎಂದವಳೇ ಫೋನ್ ಕಟ್ ಮಾಡಿದಳು.

ಕಿಟಕಿಯ ಕರ್ಟನ್ ಸರಿಸಿ ನೋಡಿದೆ. ರಸ್ತೆಯಲ್ಲಿ ಭರ್ರೋ ಎಂದು ರಿಕ್ಷಾಗಳು, ಕಾರುಗಳು,ಸ್ಕೂಟರುಗಳು ಸಾಗುತ್ತಲೇ ಇದ್ದವು.

(ಕೃಪೆ: ಉಷಾಕಿರಣ)

Friday, September 14, 2007

ಮರೀಚಿಕೆ...

ಸೂರಿನಿಂದ ಸೋರುತ್ತಿರುವ ಮಳೆನೀರಿನಿಂದ ತಪ್ಪಿಸಿಕೊಳ್ಳಲು ಈ ಹೆಂಗಸು ಹೆಣಗಾಡ್ತಿದ್ದಾಳೆ.ವಯಸ್ಸಾದ್ಮೇಲೆ ಈ ರೀತಿಯ ಒಂಟಿ ಬಾಳು ತನ್ನ ಶತೃವಿಗೂ ಬರದೇ ಇರಲಿ ಅನ್ನೋದು ಅಲ್ಲಾಹ್‍ನಲ್ಲಿ ಇವಳ ದಿನನಿತ್ಯದ ಪ್ರಾರ್ಥನೆ..ಮನೆಯಲ್ಲಿದ್ದ ಮಸಿಹಿಡಿದ ಹಳೆ ಪಾತ್ರೆಗಳು, ಕಲಾಯಿ ಕಾಣದ ಹಿತ್ತಾಳೆ ಬೋಸಿಗಳು, ತೂತು ಬಿದ್ದ ಪ್ಲಾಸ್ಟಿಕ್ ಬಿಂದಿಗೆ-ಬಕೆಟ್ಟು ಎಲ್ಲವೂ ಮಳೆನೀರು ಹಿಡಿದಿಡುತ್ತ ಅಲ್ಲೊಂದು ಇಲ್ಲೊಂದು ಅಲಂಕೃತವಾಗಿವೆ!ಹತ್ತಡಿ-ಹನ್ನೆರಡಡಿ ಅಗಲದ, ಸ್ವಲ್ಪ ವಿಶಾಲವೇ ಎನ್ನಬಹುದಾದ ಗುಡಿಸಲಾದರೂ ಇರೋದು ತಾನು ಒಂಟೆ ಜೀವ ಅನ್ನೋದು ಯಾವಾಗ್ಲೂ ಕಾಡೋ ವಿಷಯವೇ.
ಆ ಮನೆಯಲ್ಲಿ ಇದ್ದೂ ಇಲ್ಲದಂತಿರುವ ಒಬ್ಬನೇ ಮಗನೂ ತನ್ನ ಮಾತು ಕೇಳನಲ್ಲ ಅನ್ನೋ ಕೊರಗು ಬೇರೆ...
ರುಕ್ಸಾನ ಬೇಗಂ - ವಯಸ್ಸಿನಲ್ಲಿ ತಾನೂ ಚೆಂದವಾಗಿ ಬೆಣ್ಣೆ ಮುರುಕಿನಂತಿದ್ಲು ಅನ್ನೋದು ಅವಳೇ ಹೇಳಿಕೊಳ್ಳುತ್ತಿದ್ದ ಮಾತು.ಗಂಡ ಪೀರ್ ಮೊಹಮ್ಮದ್ ಮೂವತ್ತು ವರ್ಷಗಳ ಹಿಂದೆ ರಕ್ತ ಕಾರಿ ಸತ್ತಾಗ ಈಕೆಗಿನ್ನೂ ಸುಮಾರು ೨೪-೨೫ ವರ್ಷವಂತೆ...ಕೈಗೊಂದು ಅಳುವ ಕೂಸು ಬೆರೆ ಕೊಟ್ಟು ಹೋಗಿದ್ದ.
ಹನ್ನೆರಡನೇ ವಯಸ್ಸಿಗೆ ಮೈನೆರೆದಿದ್ದರಿಂದಲೋ ಏನೋ ಹದಿಮೂರು ತುಂಬುವ ಮುಂಚೆಯೇ ನಲವತ್ತು ವರ್ಷ ಮೀರಿದ ಪೀರ್ ಮೊಹಮ್ಮದನ ಮಡದಿಯಾಗಿದ್ದಳು ರುಕ್ಸಾನ...ನಿಕಾಹ್‍ನಲ್ಲಿ ಯಾರೋ ಹೇಳಿಕೊಟ್ಟಂತೆ ಮೂರು ಬಾರಿ ಕಬೂಲ್ ಅಂದಿದ್ದಳು...ಬುದ್ಧಿ ಬಲಿಯದ ರುಕ್ಸಾನ ಪೀರ್‍ನೊಡನೆ ಸಂಸಾರ ನಡೆಸಿಕೊಂಡು ಹೋಗೋದೇನು ಸುಲಭದ ಕೆಲಸವಾಗಿರಲಿಲ್ಲ..ನಿಕಾಹ್ ಅಂತಾದ ಮೇಲೆ ಕಷ್ಟ ಸುಖ ಎಲ್ಲಕ್ಕೂ ಗಂಡನೇ ತಾನೆ ದಿಕ್ಕು..ತಬ್ಬಲಿ ಹೆಣ್ಣಿಗೆ ಪೀರ್‍ನೇ ಆಸರೆ...ಅದೇನು ಕಾರಣವೋ ಗೊತ್ತಿಲ್ಲ, ಮದುವೆ ಆಗಿ ಹತ್ತು-ಹದಿನೈದು ವರ್ಷಗಳಾಗಿದ್ರೂ ತಮಗೊಂದು ಕೂಸನ್ನು ಕರುಣಿಸಲಿಲ್ಲವಲ್ಲ ಆ ಖುದಾಹ್ ಅನ್ನೋ ಕೊರಗಿತ್ತು ಅವರಲ್ಲಿ...ಅಲೆಯದ ದರ್ಗಾಗಳಿರಲಿಲ್ಲ ನೋಡದ ಮುಲ್ಲಾಗಳಿರಲಿಲ್ಲ...ನವಿಲುಗರಿ ಬೀಸಣಿಗೆ ಸವೆದುಹೋಗೋಷ್ಟು ಬಾರಿ ಆಶೀರ್ವಾದ ಪಡೆದಿದ್ದರು...ಕಡೆಗೂ ಹಸಿರು ತಾವೀಝಿನ ಕರಾಮತ್ತಿನಿಂದ ಒಂದು ಗಂಡು ಕೂಸಾಯ್ತು..ಪೀರ್‍ನಿಗೋ ಮೀಸೆ ತಿರುವೋಷ್ಟು ದರ್ಪ..ಆ ವಯಸ್ಸಿನಲ್ಲೂ ತನ್ನ ಗಂಡಸುತನದ ಬಗ್ಗೆ ಮನಸೊಳಗೇ ನೆನೆದು ಹಿರಿ ಹಿರಿ ಹಿಗ್ಗುತ್ತಿದ್ದ...ತೊಂದರೆ ತನ್ನಲ್ಲಿಲ್ಲ ಅನ್ನೋದು ಅವನ ವಾದ. ಮೂರನೇ ಮದುವೆಯಿಂದ ಇದು ಆತನ ಐದನೇ ಕುಡಿ!ಮೊದಲಿಬ್ಬರು ಹೆಂಡಿರೂ ಎಂದೋ ತೀರಿಕೊಂಡಿದ್ರು..ಅವರ ಮಕ್ಕಳಿಬ್ಬರೂ ಪೀರ್‍ನಿಂದ ದೂರಾಗಿ ಎಲ್ಲೋ ದೂರದೂರಿನಲ್ಲಿ ಹಮಾಲಿಗಳಾಗಿದಾರೆ ಅನ್ನೋದಷ್ಟೇ ಇವನ ಬುದ್ಧಿಗೆ ನಿಲುಕುವ ವಿಷಯ. ಹೆಂಡಿರು ಮಕ್ಕಳ ಬಗೆಗಿನ ಬೇರಾವ ವಿಷಯಗಳೂ ಇವನ ತಲೆಯೊಳಗೆ ಹೋಗುತ್ತಲೇ ಇರಲಿಲ್ಲ..ಅವನಾಯ್ತು ಅವನ ಹೆಂಡದ ಬುಂ-ಹೊಗೆಸೊಪ್ಪಾಯ್ತು...
----*-----
ನಝರಬಾದಿನಲ್ಲಿ ದನ ಕುಯ್ಕೊಂಡಿದ್ದ ಪೀರ್‍ನನ್ನು ಯಾರೋ ಕರೆತಂದು ದೊಡ್ಡಾಸ್ಪತ್ರೆಯಲ್ಲಿ ಹೆಣ ಕುಯ್ಯೋ ಕೆಲಸ ಕೊಡಿಸಿದ್ರು.ಮೊದಮೊದಲಿಗೆ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದ ಪೀರ್ ಮೊಹಮ್ಮದ್ ಕೊನೆಗೆ ತನ್ನ ಸಂಸಾರವನ್ನೂ ಕರೆತಂದು ಶವಾಗಾರದ ಮಗ್ಗುಲಲ್ಲೇ ತನ್ನದೇ ಜೋಪಡಿಯೊಂದನ್ನು ಕಟ್ಟಿಕೊಂಡಿದ್ದ.ಈ ಹೆಣ ಕುಯ್ಯೋ ಕೆಲಸವನ್ನ ಹೀಗೇ ಮಾಡಬೇಕು ಅಂತೇನು ಕಟ್ಟುಪಾಡುಗಳಿಲ್ಲದ ಕಾರಣ ತಾ ಮಾಡಿದ್ದೇ ಕೆಲಸ ಅನ್ನೋ ಥರದಲ್ಲಿ ಸರಕಾರದಿಂದ ಪ್ರತಿ ತಿಂಗಳು ಸಂಬಳ ಎಣಿಸಿಕೊಳ್ಳುವಂತಾದ.
ಮೊದಮೊದಲು ಈ ಕೆಲಸ ಹೀನವೂ ಅಸಹ್ಯವೂ ಆಗಿದ್ದವನಿಗೆ ಬರಬರುತ್ತಾ ಬುಂಡೆಯಿಂದ ಸಾರಾಯಿಯನ್ನು ಗಂಟಲಿಗೆ ಹುಯ್ದುಕೊಳ್ಳುವಷ್ಟೇ ಸುಲಭದಲ್ಲಿ ತನ್ನ ಕೆಲಸ ಮುಗಿಸಿಬಿಡುತ್ತಿದ್ದ. ಕಸಾಯಿಖಾನೆಯಲ್ಲಿ ಉಸಿರಾಡೋ ದನ-ಕರುಗಳನ್ನೇ ಮನಸೋ ಇಚ್ಛೆ ಕುಯ್ದವನಿಗೆ ಇಲ್ಲಿ ಈ ಹೆಣಗಳನ್ನು ಕುಯ್ಯೋದು ಅಂಥಾ ಕಷ್ಟದ ಕೆಲಸವಾಗಲಿಲ್ಲ.ಅದಕ್ಕೆ ಕಾರಣವೂ ಇತ್ತು.ಇಲ್ಲಿಗೆ ಬಂದನಂತರ ಬುಂಡೆ ಸರಾಯಿ ಕೆಲಸವೇ ಮಾಡ್ತಿಲ್ಲ ಅನ್ನಿಸೋಕ್ ಶುರುವಾಯ್ತು.ಸರಕಾರದ ತೀರ್ಥ - ಎರಡು ಪ್ಯಾಕೆಟ್ಟುಗಳನ್ನ ತನ್ನ ಹಲ್ಲುಗಳಿಂದ ಕಚ್ಚಿ ಆಕಾಶ ನೋಡ್ತ ಗಂಟಲಿಗೆ ಸುರಿದುಕೊಳ್ಳೋಕ್ ಶುರುವಿಟ್ಕೊಂಡಿದ್ದ.ದಿನಕ್ಕೆರಡು ಬಾರಿ ಹೀಗೆ ಮಾಡದಿದ್ದರೆ ಅವನ ಕೈಲಿ ಏನೂ ಹರಿಯದು.ಇಷ್ಟು ಸಾಲದೂಂತ ಹೊಸದಾಗಿ ಹೊಗೆಸೊಪ್ಪಿನ ಚಟ ಬೇರೆ.ಒಣಗಿದ ಇಷ್ಟು ಎಲೆಗಳನ್ನು ಚೀಲದಿಂದ ತೆಗೆದು ಅಂಗೈನಲ್ಲಿ ತೀಡಿ ತೀಡಿ ಆಗಾಗ ನೆನಪಾದಾಗಲೆಲ್ಲ ಎಡಗೈನಲ್ಲಿ ಕೆಳತುಟಿಯನ್ನು ಹೊರಗೆಳೆದು ಸೊಪ್ಪಿನ ಪುಡಿಯನ್ನು ತುರುಕಿ ಕೈ ಒದರಿಕೊಳ್ತಿದ್ದ. ಹಾಗೆ ವಸಡಿನಲ್ಲಿ ಒತ್ತರಿಸಿಕೊಂಡು ಹಲ್ಲುಗಳ ಸಂಧಿಯಿಂದ ಅದರ ರಸ ಹೀರಿದರೆ ಉತ್ಸಾಹದ ಚಿಲುಮೆ ಚಿಮ್ತದೆ ಅಂತಿದ್ದ.

ಬೇರೇನಕ್ಕೂ ತಲೆಕೊಡದ ಪೀರ್‍ನಿಗೆ ಇದ್ದ ಸಮಾಧಾನವೆಂದರೆ ಅಲ್ಲಾಹ್‍ನು ತನಗೆ ಒಪ್ಪಿಸಿರುವ ಕರ್ಮವನ್ನೆಲ್ಲ ತಾನು ಚಾಚೂ ತಪ್ಪದೆ ಪೂರೈಸುತ್ತಿರುವೆನೆಂದೂ ಅದರಿಂದಲೇ ಪ್ರಸನ್ನನಾದ ಆ ದೇವನು ತನಗೂ ತನ್ನ ಹೆಂಡಿರು-ಮಕ್ಕಳಿಗೂ ಸದಾ ಒಳ್ಳೆಯದನ್ನೇ ಕರುಣಿಸುತ್ತಾನೆಂಬುದು. ಹಿಂದೊಮ್ಮೆ ಕೊಲೆಯಾಗಿದ್ದ ತನ್ನ ಸೋದರ ಸಂಬಂಧಿ ಮೆಹರುನ್ನೀಸಾಳ ಹೆಣ ಕೊಯ್ಯಬೇಕಾಗಿ ಬಂದಾಗಲೂ ನಿರ್ವಿಕಾರ ಮನೋಭಾವನೆಯೊಂದಿಗೆ ತನ್ನ ಕೆಲಸ ಮುಗಿಸಿ ಯಥಾಪ್ರಕಾರ ಎರಡು ಪ್ಯಾಕೆಟ್ ಇಳಿಸಿದ್ದ. ಇಂಥಹವನಿಗೆ ಹೆಂಡಿರು ಸತ್ತ ಬಳಿಕ ಸಂಬಂಧಿಕರೆಲ್ಲ ಸೇರಿ ಬಡಹುಡುಗಿ ರುಕ್ಸಾನಳನ್ನು ನಿಕಾಹ್ ಮಾಡಿಕೊಳ್ಳುವಂತೆ ಒಪ್ಪಿಸಿದ್ದರು.ಅದೂ ಅಲ್ಲಾಹುವಿನ ಇಚ್ಛೆ ಅಂತಲೇ ಮೂರನೇ ಮದುವೆಗೂ ಒಪ್ಪಿದ.
ರುಕ್ಸಾನಾಳಿಗೆ ಈ ಮುದಿ ಗಂಡನಿಂದ ಸಂಸಾರಸುಖದ ಯಾವುದೇ ಕನಸುಗಳೂ ಇರಲಿಲ್ಲ...ರಾತ್ರಿ ಕುಡಿದುಬಂದು ಪೀಡಿಸಿ-ಹೊಡೆಯದಿದ್ದುದರಿಂದ ಅವಳ ಕಣ್ಣಿನಲ್ಲಿ ಇವನು ಒಳ್ಳೇ ಗಂಡನಾಗಿದ್ದ.ಈತ ದುಡಿದ ಹಣವೆಲ್ಲಾ ಸೇಂದಿ ಸರಾಯಿಗೇ ಸುರಿಯೋದು ನೋಡಿ ತಾನು ನಾಲ್ಕಾರು ಮನೆ ಮುಸುರೆ ತೊಳೆದು ತನ್ನ ಜೀವನ ತಾನು ನೋಡಿಕೊಳ್ಳುವಂತಾಗಿದ್ದಳು.ಮುಂದೆ ಮಗುವಾದ ಬಳಿಕವೂ ತನ್ನ ದುಡಿಮೆ ಅವಳನ್ನು ಕಾಪಾಡುತ್ತದೆಂಬ ನಂಬಿಕೆ ಅವಳಿಗಿತ್ತು.
----*-----
ಪೀರ್ ಮೊಹಮ್ಮದನ ಸಾವಿನ ನಂತರ ರುಕ್ಸಾನಾಳ ಬಾಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು.ಆದರೂ ತಾನು ಕೆಲಸ ಮಾಡುತ್ತಿದ್ದ ಮನೆಯೊಡೆಯ ನವೀದರ ಸಹಾಯದಿಂದ ಮಗ ನಾಝಿರನನ್ನು ಸರಕಾರಿ ಶಾಲೆಯೊಂದಕ್ಕೆ ಸೇರಿಸಿದ್ದಳು.ನಾಝಿರನು ಹಾಗೂ ಹೀಗೂ ಹೈಸ್ಕೂಲ್ ಮೆಟ್ಟಿಲುಗಳನ್ನೇರಿದ್ದ. ಮುಂದಕ್ಕೆ ಓದಿಸುವ ಆಸೆ ಬೆಟ್ಟದಷ್ಟಿದ್ದರೂ ರುಕ್ಸಾನಾಳ ಆರ್ಥಿಕ ಪರಿಸ್ಥಿತಿ ಅವಳಿಗೆ ಅಷ್ಟೇನು ಸಹಾಯ ಮಾಡಲಿಲ್ಲ. ನಾಝಿರನು ಓದಿನಲ್ಲಿ ಅಷ್ಟು ಚುರುಕಲ್ಲದಿದ್ದರೂ ಲೋಕಜ್ಞಾನ ತಿಳಿದವನಾಗಿದ್ದ.ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಬಿಟ್ಟು ವರ್ಕ್‍ ಶಾಪೊಂದರಲ್ಲಿ ಕೆಲಸಕ್ಕಿಳಿದಿದ್ದ.ಸಂಸಾರ ತೂಗಿಸಲು ಮಗನ ದುಡಿಮೆ ನೆರವಾಗುತ್ತಿದ್ದರಿಂದಲೋ ರುಕ್ಸಾನ ಕೂಡಾ 'ಅವನ ಹಣೆಬರಹವೇ ಇಷ್ಟು!" ಅಂದುಕೊಂಡು ನಿಟ್ಟುಸಿರುಬಿಟ್ಟಿದ್ದಳು.
ಇದ್ದ ಹಳೇ ಜೋಪಡಿಗೆ ಟಾರ್ಪಾಲ್ ಹೊದೆಸಿ ಮಳೆಗಾಲದಲ್ಲಿ ಸೋರದಂತೆ ತಾಯಿ-ಮಗ ಗಟ್ಟಿ ಮಾಡಿದ್ದರು.ನಿಷ್ಠೆ-ನಿಯತ್ತು ರುಕ್ಸಾನಳನ್ನು ಕಾಪಾಡಿತ್ತು.ತಾನು ಕೆಲಸ ಮಾಡುತ್ತಿದ್ದ ಮೂರ್ನಾಕು ಮನೆಗಳಲ್ಲಿ 'ಒಳ್ಳೇ ಹೆಂಗಸು'ಅನ್ನೋ ಹೆಸರು ಪಡೆಯುವಲ್ಲಿ ಸಫಲಳಾಗಿದ್ದಳು.ಅವಳು ಕೆಲಸ ಮಾಡುತ್ತಿದ್ದ ನವೀದ-ನುಸ್ರತ್ ದಂಪತಿಗಳ ಪ್ರೀತಿ-ವಿಶ್ವಾಸಗಳನ್ನು ಗಳಿಸಿ ಅವರ ಮಕ್ಕಳನ್ನು ಎತ್ತಿ ಆಡಿಸಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು.ನವೀದರ ಸಹಾಯದಿಂದ ಮುಂದೊಮ್ಮೆ ಸರಕಾರ ಬಡ-ಬಗ್ಗರಿಗೆ ನೀಡುವ ಉಚಿತ ನಿವೇಶನಗಳಲ್ಲಿ ಒಂದನ್ನು ತಂದುಕೊಡುವುದೆಂದು ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ಅವಳ ಬಗ್ಗೆ ಅಭಿಮಾನ ಹೊಂದಿದ್ದ ನುಸ್ರತ್ ತನ್ನ ಪತಿ ನವೀದರಿಗೆ ಹೇಳಿ ಸರಕ್ಕೊಂದು ಅರ್ಜಿ ಬರೆಸಿ ಇವಳಿಗೆ ಊರಿನಾಚೆ ಇಲವಾಲದ ಬಳಿ ಹೊಸದಾಗಿ ರೂಪುಗೊಂಡಿದ್ದ ಬಡಾವಣೆಯೊಂದರಲ್ಲಿ ನಿವೇಶನವೊಂದು ಉಚಿತವಾಗಿ ದೊರಕುವಂತೆ ಮಾಡಿಸಿದ್ದಳು.ಇದರಿಂದ ಆ ಮನೆಯ ಋಣ ತನ್ನ ಮೇಲೆ ಇಮ್ಮಡಿಯಾಗಿದೆಯೆಂದೇ ಭಾವಿಸಿದಳು ರುಕ್ಸಾನ!
----*-----
ಸುಮಾರು ಹತ್ತು ವರ್ಷಗಳಷ್ಟು ಕಾಲ ವರ್ಕ್‍ ಶಾಪಿನಲ್ಲಿ ದುಡಿದಿದ್ದ ನಾಝಿರ ಕೆಲಸವನ್ನು ಚೆನ್ನಾಗಿ ಕಲಿತು ಮನಸಿಟ್ಟು ದುಡಿಯುತಿದ್ದ.ಚಿಕ್ಕ ವಯಸ್ಸಿನಿಂದಲೇ ದುಡಿಮೆಗೆ ಬಿದ್ದವನಿಗೆ ತಾಯಿಯ ಆರೈಕೆ ಪ್ರೀತಿಗಳಿಂದ ದೂರವಾಗಿದ್ದ.ಹೀಗಾಗಿ ತಾಯಿ-ಮಗನ ಬಾಂಧವ್ಯ ಅಷ್ಟೇನು ಚೆನ್ನಾಗಿರಲಿಲ್ಲ.ಆದರೂ ತಂದೆ ಸತ್ತ ಬಳಿಕ ತನ್ನ ತಾಯಿ ದುಡಿದು ತನ್ನನ್ನು ಬೆಳೆಸುವಲ್ಲಿ ಪಟ್ಟ ಪಾಡು ಅವನ ಮನಸ್ಸಿನ ಮೂಲೆಯಲ್ಲೆಲ್ಲೋ ಕೊರೆಯುತಿತ್ತು. ಈ ಕಾರಣದಿಂದಲೋ ಏನೋ ಅವನು ತನ್ನ ಕಾಲ ಮೇಲೆ ತಾನು ನಿಂತು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳೋದಕ್ಕೆ ತಾಯಿಯ ದುಡಿಮೆಯ ಮೇಲೆ ಅವಲಂಬಿಸಲಿಲ್ಲ.
ಮೊದಮೊದೌ ತನ್ನ ದುಡಿಮೆಯ ಒಂದು ಭಾಗವನು ರುಕ್ಸಾನಾಳಿಗೆ ಕೊಡುತ್ತಿದ್ದವನು ಕಾಲಕ್ರಮೇಣ ತಾನಾಯ್ತು ತನ್ನ ಪಾಡಾಯ್ತು ಅಂತಿರುತ್ತಿದ್ದ.ಹಗಲೆಲ್ಲ ಮೈ ಮುರಿಯುವಂತೆ ದುಡಿದು ಸಂಜೆಗೆ ಸ್ನೇಹಿತರೊಡನೆ ತಿರುಗಿ ರಾತ್ರಿ ಮನೆಗೆ ಬಂದು ತಾಯಿ ಬೇಯಿಸಿದ್ದನ್ನು ಸದ್ದು ಮಾಡದೆ ಉಂಡು ಮಲಗಿದರೆ ಮುಗಿಯಿತು.ಆಗೊಮ್ಮೆ ಈಗೊಮ್ಮೆ ಬೀಡಿ ಕುಡಿಯುತ್ತಿದ್ದನಾದರೂ ಅವನಪ್ಪನಂತೆ ಚಟಕ್ಕೆ ಬಲಿಯಾಗಿರಲಿಲ್ಲ.ಬೆಳೆದ ಮಗನನ್ನು ದಬಾಯಿಸುವ ಜಾಯಮಾನ ರುಕ್ಸಾನಳದಲ್ಲ.ಹೇಗೋ ತನ್ನ ಮಗನ ಬಾಳು ಹಸನಾದರೆ ಸಾಕು ಅಂತಿದ್ದವಳಿಗೆ ಅವನ ನಿಕಾಹ್ ಮಾಡುವ ಯೋಚನೆಯೊಂದೇ ತಲೆಯಲ್ಲಿ ಗುಂಯ್‍ ಗುಡುತ್ತಿದ್ದುದು.
----*-----
ಹೀಗಿರುವಾಗ ಒಂದು ದಿನ ಸ್ನೇಹಿತರ ಸಹಾಯದಿಂದ ದೂರದ ದುಬೈಗೆ ಹೊಗಿ ಕೆಲಸ ಮಾಡುವ ಅವಕಾಶ ಬಂದೊದಗಿತ್ತು. ತೈಲ ಘಟಕವೊಂದರಲ್ಲಿಲಾರಿ ಡ್ರೈವರನ ಕೆಲಸ. ಕೆಲಸವೇನೂ ಸುಲಭದ್ದಲ್ಲ...ಹಗಲು ರಾತ್ರಿಯೆನ್ನದೆ ಊರಿಂದ ಊರಿಗೆ ತೈಲ ಸಾಗಿಸಲು ನೂರಾರು ಮೈಲಿಗಳಷ್ಟು ದೂರ ನಿದ್ದೆಗೆಟ್ಟು ಗಾಡಿ ಓಡಿಸಬೆಕಿತ್ತು.ಆದರೆ ಅದಕ್ಕೆ ದೊರಕುತ್ತಿದ್ದ ಹಣ ಇವನ ತಲೆತಿರುಗಿಸಿತ್ತು. ದುಬೈಗೆ ಹೋಗುವ ಯೋಚನೆ ಬಂದಾಗಲಿಂದ ನಾಝಿರನಿಗೆ ಊಟ ಸೇರದಂತಾಯ್ತು, ಕಣ್ಣಿಗೆ ನಿದ್ದೆ ಹತ್ತಿ ಎಷ್ಟೋ ದಿವಸಗಳಾಗಿತ್ತು...ದುಬೈಗೆ ಹೋಗುವುದಾದರೂ ಸುಲಭದ ಕೆಲಸವೇನಲ್ಲ...ಪಾಸ್‍ಪೋರ್ಟ್, ವೀಸಾ ಅಂತೆಲ್ಲ ಮಾಡಿಸಬೇಕು...ಅದನ್ನ ಮಾಡಿಸೋದಕ್ಕೆ ದಲ್ಲಾಳಿಗಳನ್ನ ಹಿಡಿಯಬೇಕು...ಟಿಕೆಟ್ಟಿಗೆ ಇಷ್ಟು ದುಡ್ಡು ತೆಗೆದಿರಿಸಬೇಕು..ಎಲ್ಲವನ್ನು ತಾಳೆ ಮಾಡಿ ನೋಡಿದರೆ ಒಟ್ಟು ಒಂದು-ಒಂದೂವರೆ ಲಕ್ಷಗಳಷ್ಟು ಹಣ ಖರ್ಚಾಗಬಹುದು ಎಂಬ ಅಂದಾಜಿಗೆ ಬಂದ ನಾಝಿರ. ಅಷ್ಟು ಹಣವನ್ನು ಹೊಂದಿಸುವುದಾದರೂ ಹೇಗೆ? ತನ್ನ ವರ್ಕ್‍ ಶಾಪಿನ ದುಡಿಮೆಯಲ್ಲಿ ಉಳಿಸಿದ್ದನ್ನೆಲ್ಲ ಕೊಓಡಿದರೂ ಹತ್ತಿಪ್ಪತ್ತು ಸಾವಿರಕ್ಕಿಂತ ಹೆಚ್ಚಿರಲಿಲ್ಲ.ಇನ್ನು ಸಾಲದ ರೂಪದಲ್ಲಿ ಅಷ್ಟು ಹಣ ಹೊಂದಿಸುವುದಾದರೂ ಹೇಗೆ?ತನಗಿರುವ ಆಸ್ತಿಯಾದರೂ ಏನು? ಸೊನ್ನೆ!

ಥಟ್ಟನೆ ತನ್ನಮ್ಮನ ಹೆಸರಿನಲ್ಲಿದ್ದ ಸರಕಾರದ ನಿವೇಶನ ಇವನ ಮನಸ್ಸನ್ನು ಆವರಿಸಿತು.ಊರಾಚೆಯಿರುವ ಸೈಟನ್ನು ತೋರಿಸಿ ಸಾಲ ಕೇಳಿದರೆ ಹೆಚ್ಚೆಂದರೆ ಒಂದು ಲಕ್ಷ ದೊರಕಬಹುದು.ಮಿಕ್ಕ ಹಣಕ್ಕೇನು ಮಾಡುವುದೆಂದು ತಲೆತುರಿಸಿಕೊಂಡ ನಾಝಿರ. ಅದರ ಬದಲಿಗೆ ತನ್ನಮ್ಮನನ್ನು ಒಪ್ಪಿಸಿ ಆ ಸೈಟನ್ನು ಮಾರಿಬಿಟ್ಟರೆ ಒಳಿತು ಅನ್ನೋ ನಿರ್ಧಾರಕ್ಕೆ ಬಂದ.ಇದಕ್ಕೆ ರುಕ್ಸಾನ ಒಪ್ಪಬೇಕಲ್ಲ! 'ಒಪ್ಪದೇ ಏನು? ಅವಳಿಗಾದರೂ ತನ್ನ ಬಿಟ್ಟರೆ ಬೇರೆ ಯಾರು ದಿಕ್ಕು...ಹೋಗೋವಾಗ ಹೊತ್ಕೊಂಡಾ ಹೋಗ್ತಾಳೆ' ಅಂತು ಅವನ ಮನಸ್ಸು.
ಈ ವಿಷಯವನ್ನು ಅಂದು ರಾತ್ರಿ ಉಣ್ಣೋ ಸಮಯದಲ್ಲಿ ತಾಯಿಯ ಮುಂದಿಟ್ಟ. ರುಕ್ಸಾನ ಸುತರಾಂ ಒಪ್ಪಲಿಲ್ಲ. ರಾತ್ರಿ ಪೂರಾ ನಿದ್ದೆ ಬಾರದೆ ಹೊರಳಾಡುತ್ತಲೇ ಇದ್ದಳು ಆಕೆ. ತನಗಿರುವ ಆಸ್ತಿಯೆಂದರೆ ತನ್ನ ಗಂಡ ಬಿಟ್ಟು ಹೋಗಿದ್ದ ತಲೆಯ ಮೇಲಿನ ಜೋಪಡಿ ಬಿಟ್ಟರೆ ಊರಾಚೆಯ ಈ ಸೈಟು. ಈಗ ಇದನ್ನೂ ಮಾರಿ ಮಗನಿಗೆ ಕೊಟ್ಟು ಕಳಿಸಿದರೆ ಇದ್ದೊಬ್ಬ ಮಗನೂ ದೂರಾಗಿ ತನ್ನ ಕಡೆಗಾಲಕ್ಕೆ ಏನು ಗತಿ ಅನ್ನೋ ಚಿಂತೆ ಕಾಡತೊಡಗಿತು.
ಬೆಳಗಾಗೆದ್ದು ನಾಝಿರನನ್ನೂ ಹೊರಡಿಸಿಕೊಂಡು ನವೀದರ ಬಳಿಗೆ ಕರೆತಂದು ತನ್ನ ಮಗನಿಗೆ ಸ್ವಲ್ಪ ಬುದ್ಧಿಹೇಳುವಂತೆ ಅಂಗಲಾಚಿದಳು.
ನವೀದರನ್ನು ಚಿಕ್ಕಂದಿನಿಂದಲೂ ಕಂಡಿದ್ದ ನಾಝಿರನಿಗೆ ಅವರ ಬಗ್ಗೆ ಗೌರವಭಾವವಿತ್ತು. ಅದರಿಂದಲೇ ನವೀದರ ಮಾತುಗಳಿಗೆ ಎದುರಾಡಲು ಅವನಿಗೆ ಆಗದೇ ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸಿ ಹಿಂದಿರುಗಿದ್ದ.
ರಾತ್ರಿಯೆಲ್ಲ ನಿದ್ದೆಬಾರದೆ ಹೊರಳಾಡುವ ಸರದಿ ಈಗ ನಾಝಿರನದಾಗಿತ್ತು.ಇಷ್ಟೂ ದಿನ ತಾವು ಪಟ್ಟ ಕಷ್ಟಗಳನ್ನು ನೆನೆದು ಕೊರಗುತಿದ್ದ.ದೂರದೂರಿನ ಬಣ್ಣಬಣ್ಣದ ಕನಸುಗಳು ಕೈಬೀಸಿ ಕರೆಯ ಹತ್ತಿದವು. ಸ್ನೇಹಿತನಿಂದ ಕೇಳಿ ತಿಳಿದಿದ್ದ ವಿಷಯಗಳೆಲ್ಲ ರಂಗುರಂಗಾಗಿ ಕಣ್ಮುಂದೆ ಬರತೊಡಗಿದವು.ಡ್ರೈವರ್ ಕೆಲಸ ಕೈತುಂಬಾ ಸಂಬಳ ಎಲ್ಲವನ್ನು ಒಮ್ಮೆಗೆ ಬಿಟ್ಟುಬಿಡುವುದಕ್ಕೆ ಅವನ ಮನಸ್ಸು ಒಪ್ಪಲಿಲ್ಲ.
----*-----
ಬೆಳಕು ಹರಿದಿತ್ತು. ವಿಮನಸ್ಕನಾಗಿದ್ದ ನಾಝಿರ ಇದ್ದಕ್ಕಿದ್ದಂತೆ ಒಂದು ನಿರ್ಧಾರಕ್ಕೆ ಬಂದವನಂತೆ ದಢಕ್ಕನೆ ಎದ್ದು ನವೀದರ ಮನೆಯೆಡೆಗೆ ಹೆಜ್ಜೆ ಹಾಕಿದ.ರಾತ್ರಿಯೆಲ್ಲ ತನ್ನ ಮನಸ್ಸಿನಲ್ಲುಂಟಾದ ಕೋಲಾಹಲಗಳನ್ನು ನವೀದರಿಗೆ ವಿವರಿಸಿದ. ಹಾಗೆಯೇ ತನಗೆ ಒದಗಿ ಬಂದಿರುವ ಅವಕಾಶವನ್ನು ಅದರಿಂದ ತನಗೂ ತನ್ನ ತಾಯಿಗೂ ಆಗಬಹುದಾದ ಪರಿಣಾಮಗಳನ್ನು ಬಣ್ಣಕಟ್ಟಿ ವಿವರಿಸಿದ..ಸಾಲದ್ದಕ್ಕೆ ಈಗ ತಾನು ಒಂಟಿಯಾಗಿ ಹೋಗುವುದಿಲ್ಲವೆಂದೂ ತನ್ನೊಡನೆ ರುಕ್ಸಾನಳನ್ನೂ ಕರೆದೊಯ್ಯುವುದಾಗಿ ಹೇಳಿದ. ಈ ಮಾತುಗಳಿಂದ ನವೀದರಿಗೆ ಸ್ವಲ್ಪ ಸಮಾಧಾನವಾಯ್ತು.ನಾಝಿರನ ಮಾತಿನಂತೆ ಅವರೇ ರುಕ್ಸಾನಳನ್ನು ಬರಹೇಳಿ ಪರಿಸ್ಥಿತಿಯನ್ನು ವಿವರಿಸಿದರು. ಮಗನೊಡನೆ ಅವಳೂ ಹೋಗುವುದರಿಂದ ಅವರ ಜೀವನದಲ್ಲಿ ಆಗಬಹುದಾದ ಸುಧಾರಣೆಗಳ ಬಗ್ಗೆ ವಿವರವಾಗಿ ತಿಳಿಹೇಳಿದರು.ನಿವೇಶನದೊಡನೆ ಅವರಿದ್ದ ಜೋಪಡಿಯನ್ನೂ ಮಾರಿದರೆ ಸುಮಾರು ಮೂರು ಲಕ್ಷದಷ್ಟು ಹಣ ದೊರೆಯಬಹುದೆಂಬ ಅಂದಾಜಿತ್ತು ನವೀದರಿಗೆ. ಅದರ ಮೇಲೆ ಕೈ ಖರ್ಚಿಗೆಂದು ಸುಮಾರು ಇಪ್ಪತ್ತು ಸಾವಿರದಷ್ಟು ಮೊತ್ತವನ್ನು ನವೀದರೇ ಕೊಡುವುದಾಗಿ ಹೇಳಿ ಧೈರ್ಯ ತುಂಬಿದರು.
----*-----
ಉಂಡನ್ನ ಅರಗೋಷ್ಟ್ರಲ್ಲಿ ನಾಝಿರ ಸೈಟು-ಜೋಪಡಿಯನ್ನ ಮಾರಿಯಾಗಿತ್ತು.ಪಕ್ಕದೂರಿನ ರೆಡ್ಡಿಗಳ್ಯಾರೊ ಇವರ ಅಂದಾಜಿಗಿಂತ ಇಪ್ಪತ್ತೇಳು ಸಾವಿರ ಕಡಿಮೆ ಹಣಕ್ಕೆ ಕೊಂಡುಕೊಂಡ್ರು. ಮೇಲಿನ ಸ್ವಲ್ಪ ಖರ್ಚನ್ನ ನವೀದರು ವಹಿಸಿದ್ದರಿಂದ ತಾಯಿ ಮಗನ ಪಾಸ್‍ ಪೋರ್ಟು,ಟಿಕೆಟ್ಟುಗಳು,ವೀಸಾ ಎಲ್ಲವೂ ಸಮಯಕ್ಕೆ ಸರಿಯಾಗಿ ಬಂದವು.ನಾಝಿರನೇ ಖುದ್ದಾಗಿ ಬೆಂಗಳೂರಿಗೆ ಹೋಗಿ ಎಲ್ಲವನ್ನೂ ಮಾಡಿಸಿಕೊಂಡು ಬಂದಿದ್ದ.ದುಬೈಗೆ ಹೊರಡೋಕೆ ಎಲ್ಲ ತಯಾರಿ ನಡೆಸಿಕೊಳ್ಳತೊಡಗಿದರು.
ಶುಕ್ರವಾರ ನಮಾಝಿಗೆ ತೆರಳಿದ್ದ ನಾಝಿರನಿಗೆ ಏನೋ ಕಸಿವಿಸಿ.ಹಿಂದಿನ ದಿನದಿಂದಲೂ ಹೊಟ್ಟೆಗೆ ಏನೂ ತಿಂದಿರಲಿಲ್ಲ...ನಾಲಿಗೆ ರುಚಿ ಕಳೆದುಕೊಂಡಿತ್ತು...ಮಂಕು ಬಡಿದಂತಾಗಿದ್ದ..ಸದಾ ಏನೋ ಯೋಚಿಸುತ್ತಿರುವವನಂತೆ ತೋರುತ್ತಿದ್ದ.ಅಲ್ಲಿ ಮಸೀದಿಯಲ್ಲಿ ಹಾಜಿ ಮೊಹಮ್ಮದರನ್ನ ಭೇಟಿ ಮಾಡಿ ತಾನು ಮತ್ತು ತನ್ನ ತಾಯಿ ರುಕ್ಸಾನ ಬೇಗಂ ದುಬೈಗೆ ಹೋಗುತ್ತಿರುವುದಾಗಿ ಹೇಳಿ ಅವರಿಂದ ಆಶೀರ್ವಾದ ಪಡೆದುಕೊಂಡು ಕುತ್ತಿಗೆಗೆ ತಾವೀಝ್ ಕಟ್ಟಿಸಿಕೊಂಡುಬಂದ.
ಭಾನುವಾರ ಬೆಳಗಿನ ಝಾವದ ಪ್ಲೇನಾದ್ದರಿಂದ ಶನಿವಾರ ರಾತ್ರಿ ಊಟ ಮುಗಿಸಿಕೊಂಡು ಸುಮಾರು ಹತ್ತೂವರೆಯ ಸುಮಾರಿಗೆ ನಾಝಿರನ ಗೆಳೆಯ ಸಲೀಂ ಪಾಶನ ಆಟೋದಲ್ಲಿ ಏರ್ಪೋರ್ಟಿಗೆ ಬಂದಿಳಿದರು.ಇತ್ತ ನಡುರಾತ್ರಿಯೂ ಅಲ್ಲ ಅತ್ತ ಬೆಳಕೂ ಹರಿದಿರುವುದಿಲ್ಲ...ಸರಿ ರಾತ್ರಿ ಎರಡೂ ಐವತಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ನೀರವಾದ ಫ್ಲೈಟು. ಇವರಿಬ್ಬರೂ ಅಲ್ಲಿ ದುಬೈನಲ್ಲಿ ಇಳಿಯುತಿದ್ದ ಹಾಗೆಯೇ ಅಲ್ಲಿದ್ದ ನಾಝಿರನ ಸ್ನೇಹಿತ ಇವರನ್ನು ಏರ್ಪೋರ್ಟಿನಿಂದ ಅವನ ಮನೆಗೆ ಕರೆದುಕೊಂಡು ಹೋಗುವವನಿದ್ದ.ಅದರಿಂದ ಹೆಚ್ಚಿನ ಗಾಭರಿಯೇನೂ ಇರಲಿಲ್ಲ ಇವರಿಗೆ...ಇವರುಗಳನ್ನು ಬೀಳ್ಕೊಡುವ ಸಲುವಾಗಿ ನವೀದರು ಸಂಸಾರದೊಡನೆ ತಮ್ಮ ಕಾರಿನಲ್ಲೇ ಬಂದಿದ್ದರು.
----*-----
ಹೆಚ್ಚಾಗಿ ಬಸ್ಸಿನಲ್ಲೂ ಪ್ರಯಾಣ ಮಾಡದವಳು ಈಗ ಏಕ್‍ದಂ ದೇಶವನ್ನೇ ಬಿಟ್ಟು, ತನ್ನೂರು ಪರಿಚಯಸ್ಥರು ಬಂಧುಗಳನ್ನೆಲ್ಲ ಬಿಟ್ಟು ದೂರದೂರಿಗೆ ಹೋಗಿರಬೇಕು ಅಂದರೆ ಹೊಟ್ಟೆಯೆಲ್ಲಾ ಮರಳಿಸುವಂತಾಗಿತ್ತು.ನುಸ್ರತ್‍ರ ಕೈ ಹಿಡಿದು ಕಣ್ಣೀರು ತುಂಬಿಕೊಂಡಿದ್ದಳು ರುಕ್ಸಾನ.ಅವಳ ಕೈಯನ್ನೇ ಬಿಗಿದಪ್ಪಿ ಹಿಡಿದು ಒಮ್ಮೆ ಸಮಾಧಾನದ ನೋಟ ಬೀರಿದರು..ಅಲ್ಲೇ ಅವಳ ಕೈಯಲ್ಲಿ ಮುದುರಿದ ಎರಡು ಐನೂರರ ನೋಟನ್ನು ತುರುಕಿದ್ದರು.ಹಲವು ವರ್ಷಗಳಿಂದ ತಮ್ಮ ಮನೆ, ಮಕ್ಕಳನ್ನು ನೋಡಿಕೊಂಡ ಹೆಂಗಸು ತಮ್ಮನ್ನೆಲ್ಲ ಬಿಟ್ಟು ದೂರದೂರಿಗೆ ಹೋಗ್ತಿರೋದು ನೋಡಿ ಅವರಿಗೂ ಸ್ವಲ್ಪ ಸಂಕಟವಾಗಿತ್ತು.

ಸಲೀಂ ಮತ್ತು ನಾವಿದರಿಗೆ ಖುದಾಹ್ ಹಾಫಿಝ್ ಹೇಳಿ ಮುಂದೆ ನಡೆದ ನಾಝಿರ. ಚೆಕಿನ್ ಎಲ್ಲ ಮುಗಿಸಿ ತಮ್ಮಿಬ್ಬರ ಪಾಸ್‍ಪೋರ್ಟ್ ಜೋಪಾನವಾಗಿ ಹೆಗಲಿನ ಬ್ಯಾಗಿನಲ್ಲಿಟ್ಟುಕೊಂಡು ತಾಯಿಯ ಕೈ ಹಿಡಿದು ಒಳನಡೆದನು.ಒಳಗೆ ಹೋಗುವ ಮುನ್ನ ದೂರದಿಂದಲೇ ನವೀದರಿಗೂ ಸಲೀಮನಿಗೂ ಮತ್ತೊಮ್ಮೆ ಕೈಬೀಸಿ ಎರ್‍ಪೋರ್ಟಿನೊಳಗೆ ನಡೆದು ಕಣ್ಮರೆಯಾದರು. ಎಲ್ಲವೂ ಒಳ್ಳೇದಾಗಲಿ ಅಂತ ಮನಸ್ಸಲ್ಲೇ ಹರಸಿ ಇತ್ತ ನವೀದರೂ ಸಂಸಾರವೂ ನಿಟ್ಟುಸಿರು ಬಿಟ್ಟು ಮನೆಗೆ ತೆರಳಿದರು.
----*-----
ಬದುಕಿನಲ್ಲಿ ಸಾಕಷ್ಟು ನೊಂದು ಬೆಂದಿದ್ದ ಜೀವಕ್ಕೆ ಏರೋಪ್ಲೇನಿನ ಪ್ರಯಾಣ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.ಅವರು ತಂದುಕೊಟ್ಟ ಊಟವನ್ನು ಮುಗಿಸಿ ಒಂದು ಕಪ್ ಬಿಸಿ ಚಾ ಹೀರಿದಾಗ ಮನಸ್ಸಿಗೆ ಹಿತವೆನಿಸಿರಬೇಕು.ತನ್ನ ಬದುಕಿನ ನೆನಪುಗಳೆಲ್ಲ ಸುರುಸುರುಳಿಯಾಗಿ ಬಿಚ್ಚಿಕೊಳ್ತಿದ್ದ ಹಾಗೆ ತನಗೇ ತಿಳಿಯದಂತೆ ನಿದ್ದೆ ಹೋಗಿದ್ದಳು.ಮುಂದಿನ ತನ್ನ ಬದುಕು ಹಸನಾಗಿದ್ದಂತೆ ಕನಸು ಕೂಡಾ ಕಂಡಳು ಮುದುಕಿ!
ದುಬೈನಲ್ಲಿ ಇಳಿದಾಗ ಸಮಯ ಸುಮಾರು ಎಂಟು ಹೊಡೆದಿತ್ತು. ಅತ್ತ ಛಳಿಯೂ ಅಲ್ಲ ಇತ್ತ ಧಗೆಯೂ ಇಲ್ಲದಂತಹ ವಾತಾವರಣ.ಏರ್‍ಪೋರ್ಟಿನ ಕಣ್ಣು ಕೋರೈಸುವ ಝಗಮಗಿಸುವ ದೀಪಗಳು ಅಂಗಡಿ ಸಾಲುಗಳನ್ನು ಬಿಟ್ಟ ಕಣ್ಣು ಬಾಯಿ ಬಿಟ್ಟು ನೋಡತೊಡಗಿದರು ಇಬ್ಬರೂ.ಲಗೇಜನ್ನೆಲ್ಲ ಟ್ರಾಲಿಗೆ ಹಾಕಿಕೊಂಡು ಬಂದು ರುಕ್ಸಾನಳಿಗೆ ಅಲ್ಲಿ ದೂರದಲ್ಲಿ ಕಾಣುವ ಶೌಚಗೃಹದೆಡೆಗೆ ಕೈ ಮಾಡಿ ತೋರಿಸಿ ಕಳಿಸಿದ.ಬೆಳಗಿನ ಉಪಹಾರವನ್ನು ಅಲ್ಲೇ ಮುಗಿಸಿದರು ಇಬ್ಬರೂ!
ನಾಝಿರನ ಸ್ನೇಹಿತ ಬಂದು ಇವರಿಬ್ಬರನ್ನೂ ಕರೆದೊಯ್ಯಬೇಕಿತ್ತು.ಆದರೆ ಯಾಕೆ ಬಂದಿಲ್ಲವೆಂಬುದು ರುಕ್ಸಾನಳಿಗೆ ತಿಳಿಯದಾಯಿತು.
ನಾಝಿರ ಏನೋ ಮರೆತವನಂತೆ ತನ್ನ ಕಿಸೆಯಲ್ಲೊಮ್ಮೆ ತಡಕಾಡಿ ಇಷ್ಟು ಹಣವನ್ನು ಹೊರತೆಗೆದ. ಆ ರೀತಿಯ ನೋಟುಗಳನ್ನು ಇವಳು ನೋಡಿಯೇ ಇರಲಿಲ್ಲ.ಅದು ದುಬೈನವರ ಹಣದ ನೋಟುಗಳು ಅನ್ನೋದು ಅರ್ಥವಾಯ್ತು. ಒಂಭತ್ತೂವರೆಯಾಗ್ತಾ ಬಂದರೂ ಯಾಕೋ ತನ್ನ ಸ್ನೇಹಿತ ಬಂದಿಲ್ಲ...ಇವನೇ ಟ್ಯಾಕ್ಸಿಯೊಂದನ್ನೆ ತರುವೆನೆಂದು ಹೇಳಿ ಇವಳನ್ನು ಅಲ್ಲಿಯೇ ಕೂರಿಸಿ ಲಗೇಜುಗಳ ಟ್ರಾಲಿಯನ್ನು ತಳ್ಳಿಕೊಂಡು ಹೊರಗೆ ನಡೆದನು.
----*-----
ಸಮಯ ಸುಮಾರು ಸಂಜೆ ನಾಕೂವರೆ.ಸೆಕ್ಯೂರಿಟಿ ಅಧಿಕಾರಿಗಳು ಉರ್ದುವಿನಂಥ ಭಾಷೆಯಲ್ಲಿ ಏನೋ ಕೇಳ್ತಿದಾರೆ..ಮಧ್ಯೆ ಮಧ್ಯೆ ಕಿರ್ರ್ ಗುಟ್ಟುವ ವಾಕಿಟಾಕಿಯಲ್ಲಿ ಯಾರ ಜತೆಗೋ ಮಾತಾಡ್ತಿದಾರೆ..ಅವರ ಎಲ್ಲ ಪ್ರಶ್ನೆಗಳಿಗೂ ಇವಳದು ನಡುಗುವ ದನಿಯಲ್ಲಿ ಒಂದೇ ಉತ್ತರ..ತನ್ನ ಮಗ ಟ್ಯಾಕ್ಸಿ ತರೋದಿಕ್ಕೆ ಹೊರಗೆ ಹೋಗಿದಾನೆ ಅನ್ನೋದು...ಗಂಟಲಿನಿಂದಾಚೆ ಮಾತುಗಳು ಹೊರಡುತ್ತಿಲ್ಲ...ಕಣ್ಣೆವೆ ತುಂಬಿಬಂದಿದೆ...ಅದುರುವ ಕೈಗಳು ಬಾಗಿಲಿನೆಡೆಗೆ ಸಂಜ್ಞೆ ಮಾಡಿ ತೋರಿಸುತ್ತಿವೆ...ತನ್ನ ಹಳೇ ಮಾಸಿದ ಬಟ್ಟೆಯ ಬ್ಯಾಗನ್ನು ಎದೆಗವಚಿಕೊಂಡು ಅವಳಲ್ಲೇ ಕುಸಿದು ಕುಳಿತಿದ್ದಾಳೆ.ಚೀಲದಲ್ಲಿ ಏನಿದೆಯೋ ತಿಳಿಯದೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.ಭಯ-ಆತಂಕದ ವಾತಾವರಣ.ನಾಲ್ಕೈದು ಕರಿ-ಕಂದು ಬಣ್ಣದ ಲ್ಯಾಬ್ರಡಾರ್ ನಾಯಿಗಳು ಸಿಕ್ಕಸಿಕ್ಕದ್ದನ್ನೆಲ್ಲ ಮೂಸಿ ನೋಡ್ತಿದೆ...ರೆಡ್ ಅಲರ್ಟ್!
----*-----
(ಮುಗಿಯಿತು)

Tuesday, September 4, 2007

ಆಸ್ಪತ್ರೆಯ ಕಿಟಕಿ - ಕಾಣದ ನಿರೀಕ್ಷೆಯೇ ನಮ್ಮ ಬದುಕನ್ನು ನಡೆಸುತ್ತೆ

(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ) by cmariejoseph

ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ, ರೋಗನಿದಾನದ ವಿವರಪಟ್ಟಿ, ಬಾಟಲಿಯಿಂದ ನಳಿಕೆಯ ಮೂಲಕ ನಿಧಾನವಾಗಿ ರೋಗಿಯ ಮೈಗೆ ಇಳಿಯುತ್ತಿರುವ ಗ್ಲೂಕೋಸು, ಮಂಚದ ಪಕ್ಕದ ಸಣ್ಣ ಕಪಾಟು, ಅದರ ಮೇಲೆ ಥರ್ಮಾಸ್ ಫ್ಲಾಸ್ಕು, ಕಾಫಿಲೋಟ, ಬ್ರೆಡ್ಡು. ಕೆಲ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇನ್ನು ಕೆಲವರು ಆರಾಮವಾಗಿ ಆಸ್ಪತ್ರೆಗೆ ಹೊಂದಿಕೊಂಡಿದ್ದಾರೆ ಒಂದಿಬ್ಬರು ತಮ್ಮ ಮಂಚದಿಂದ ಬೇರೊಂದು ಮಂಚದ ಬಳಿ ಬಂದು ಕುಳಿತು ಹರಟೆಯಲ್ಲಿ ತೊಡಗಿದ್ದಾರೆ. ಇನ್ನು ರೋಗಿಗಳನ್ನು ನೋಡಲು ಬರುವ ಹಿತೈಷಿಗಳ ದಂಡು ಬಂದರಂತೂ ಆ ವಾರ್ಡು ಒಂದು ವಠಾರವಾಗುತ್ತದೆ. ಪರಸ್ಪರ ಕುಶಲೋಪರಿ, ಊರು, ಮನೆ, ಮಕ್ಕಳು, ಮದುವೆ, ಆಸ್ತಿಪಾಸ್ತಿ ಒಟ್ಟಿನಲ್ಲಿ ಏನೆಲ್ಲ ವಿವರಗಳನ್ನು ಅಲ್ಲಿ ಕಲೆಹಾಕಬಹುದು. ಆದರೆ ಒಂದು ವಿಷಯ ಮಾತ್ರ ಸತ್ಯ, ಆಸ್ಪತ್ರೆಯ ವಾರ್ಡುಗಳಲ್ಲಿ ಇಷ್ಟೆಲ್ಲ ಜನ ಸೇರಿ ಏನೆಲ್ಲ ಮಾತುಕತೆಯಾಡಿದರೂ ಅಲ್ಲಿ ಜಗಳವೆಂಬುದೇ ಇರುವುದಿಲ್ಲ. ಜಗಳ ಮಾಡಲು ಎರಡು ವಿರುದ್ಧ ಅನಿಸಿಕೆಗಳಿರಬೇಕಲ್ಲ. ಆದರೆ ರೋಗಿಗಳೂ ಸೇರಿದಂತೆ ಬಂದವರೆಲ್ಲರೂ ಸಮಾನ ಹೃದಯಿಗಳೇ ಆಗಿರುವುದರಿಂದ ಅಲ್ಲಿ ಜಗಳಕ್ಕೇ ಆಸ್ಪದವೇ ಇಲ್ಲ ಬಿಡಿ. ಜಗಳವೇನಿದ್ದರೂ ಆಸ್ಪತ್ರೆಯ ವೈದ್ಯರ ಮೇಲೆ, ನರ್ಸುಗಳ ಮೇಲೆ ಇಲ್ಲವೇ ಇನ್ಯಾರೋ ಸಿಬ್ಬಂದಿಯ ಮೇಲೆ ಮಾತ್ರ.ಆದರೆ ಸ್ಪೆಷಲ್ ವಾರ್ಡಿನ ಬಿಂಕ ಬಿಗುಮಾನಗಳೇ ಬೇರೆ.

ಜನರಲ್ ವಾರ್ಡಿನ ಗಜಿಬಿಜಿ ಇಲ್ಲಲ್ಲ. ಅಲ್ಲಿ ಎರಡು ಮಂಚಗಳಿದ್ದರೂ ಸಹ ರೋಗಿಗಳಾಗಲೀ ಬಂಧುಗಳಾಗಲೀ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರುತ್ತಾರೆ. ಅಲ್ಲಿ ಡಿಗ್ನಿಟಿಯ ಪ್ರಶ್ನೆ ಬರುತ್ತದೆ. ಆದ್ದರಿಂದ ಅಲ್ಲಿ ಮೌನದ್ದೇ ಕಾರುಬಾರು.ಹೀಗೆ ಒಂದು ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಎರಡು ಮಂಚಗಳು. ಒಂದು ದಿನ ಆ ಕೊಠಡಿಗೆ ಮರಣಾವಸ್ಥೆ ತಲುಪಿ ದಿನವಿಡೀ ಮಲಗಿಯೇ ಇರಬೇಕಿದ್ದ ಇಬ್ಬರು ವಯಸ್ಸಾದ ರೋಗಿಗಳನ್ನು ತಂದು ಮಲಗಿಸಿದರು. ಇಬ್ಬರೂ ತುಂಬಾ ಚಿಂತಾಜನಕ ಸ್ಥಿತಿಯಲ್ಲಿದ್ದರು. ಒಬ್ಬಾತನಿಗೆ ಕುತ್ತಿಗೆಯ ಮೂಳೆ ಮುರಿದಿತ್ತು, ಇನ್ನೊಬ್ಬಾತನಿಗೂ ಅಂಥದೇ ಬೇರೊಂದು ತೊಂದರೆ, ಹಾಗಾಗಿ ಇಬ್ಬರಿಗೂ ಮಲಗಿದ್ದಲ್ಲಿಯೇ ಔಷಧೋಪಚಾರ ನಡೆದಿತ್ತು. ಅವರಲ್ಲಿ ಎರಡನೆಯ ರೋಗಿ ಮಾತ್ರ ತನ್ನ ಶ್ವಾಸಕೋಶದಲ್ಲಿ ಸೇರಿಕೊಳ್ಳುವ ನೀರನ್ನು ಬಸಿಯಲಿಕ್ಕಾಗಿ ದಿನದಲ್ಲಿ ಒಂದು ತಾಸು ಎತ್ತಿ ಕೂಡಿಸುತ್ತಿದ್ದರು.ಆ ಕೊಠಡಿಯಲ್ಲಿ ಒಂದು ರೀತಿಯ ಭಾರವಾದ ನಿಶಬ್ದ ವಿರಮಿಸಿತ್ತು. ಆ ಕೊಠಡಿಗೆ ಸಂದರ್ಶಕರಾರೂ ಬರುತ್ತಿರಲಿಲ್ಲ. ಎಂದೋ ಒಮ್ಮೆ ದಾದಿ ಬಂದು ರೋಗಿಗಳತ್ತ ನೋಡಿ ಹೊದಿಕೆ ಸರಿಪಡಿಸಿ ಏನೂ ಮಾತನಾಡದೆ ಹೊರಟುಬಿಡುತ್ತಿದ್ದಳು. ಇನ್ನುಳಿದಂತೆ ಅಲ್ಲಿ ಭಯಂಕರ ಮೌನ ಆವರಿಸಿತ್ತು.ನಿಧಾನವಾಗಿ ಆ ರೋಗಿಗಳು ಪರಸ್ಪರ ಪರಿಚಯ ಮಾಡಿಕೊಂಡರು. ವಿಚಿತ್ರವೆಂದರೆ ಅವರ ಮಾತುಗಳೆಲ್ಲವೂ ಸಾವಿನ ಕುರಿತೇ ಇದ್ದವು. ಆ ಕೊಠಡಿಯಲ್ಲಿ ಸಾವಿನ ನಿರೀಕ್ಷೆಯಿತ್ತು. ಒಂದು ರೀತಿಯಲ್ಲಿ ಅದು ಸಾವಿನ ಮನೆಯಂತೆಯೇ ಇತ್ತು. ಕ್ರಮೇಣ ಆ ಎರಡನೆಯವನಿಗೆ ಈ ಸಾವಿನ ಚಿಂತನೆಯಿಂದ ಹೊರಬರಬೇಕೆಂದು ಅನ್ನಿಸಿತು.ಆ ಕೊಠಡಿಯಲ್ಲಿ ಒಂದೇ ಒಂದು ಕಿಟಕಿಯಿತ್ತು. ಶ್ವಾಸಕೋಶದ ಸ್ವಚ್ಛತೆಗಾಗಿ ಆ ರೋಗಿಯನ್ನು ಎತ್ತಿ ಕೂಡಿಸಿದಾಗ ಅವನು ಆ ಕಿಟಕಿಯಿಂದಾಚೆ ದೃಷ್ಟಿ ಹಾಯಿಸುತ್ತಿದ್ದ. ಅಲ್ಲಿ ತನಗೆ ಕಾಣುತ್ತಿದ್ದ ಹೊರಗಿನ ಪ್ರಪಂಚದ ಬಗ್ಗೆ ತನ್ನ ನೆರೆಯಾತ ರೋಗಿಗೆ ವಿವರಿಸುತ್ತಾ ಆ ಕೋಣೆಯೊಳಗೆ ಭಾವನೆಗಳನ್ನು ತುಂಬಿದ.ಕಿಟಕಿಯಿಂದಾಚೆ ಕಾಣುವ ಸುಂದರ ಉದ್ಯಾನ, ಗಿಡಮರಗಳಲ್ಲಿ ಅರಳಿದ್ದ ಹೂಗಳು, ಹಕ್ಕಿಗಳ ಕಲರವ, ತೋಳುಗಳ ಬೆಸೆದು ನಡೆದಾಡುತ್ತಿರುವ ಯುವಜೋಡಿ, ತಳ್ಳುಗಾಡಿಯಲ್ಲಿ ಎಳೆಕಂದನನ್ನು ಕೊಂಡೊಯ್ಯುತ್ತಿರುವ ತರುಣಿ, ಐಸ್ಕ್ಯಾಂಡಿ ಚೀಪುತ್ತಿರುವ ಚಿಣ್ಣರು, ಕೈಜಾರಿದ ಬೆಲೂನಿನ ಹಿಂದೆ ಓಡುತ್ತಿರುವ ಪುಟ್ಟ ಹುಡುಗಿ, ತಿಳಿಗೊಳದಲ್ಲಿ ತೇಲುತ್ತಿರುವ ಹಂಸಗಳು, ಕಾಗದದ ದೋಣಿಗಳನ್ನು ನೀರಮೇಲೆ ತೇಲಿಸುತ್ತಿರುವ ಮಕ್ಕಳು ಇವನ್ನೆಲ್ಲ ಆತ ವರ್ಣಿಸುತ್ತಿದ್ದರೆ, ಪಾಪ ! ಕುತ್ತಿಗೆ ಮುರಿದು ಏಳಲಾಗದ ಸ್ಥಿತಿಯಲ್ಲಿ ಪವಡಿಸಿದ್ದ ಆ ಇನ್ನೊಬ್ಬ ರೋಗಿಗೆ ಭಾವನೆಗಳು ಪುಟಿದೇಳುತ್ತಿದ್ದವು. ಆತ ಮಲಗಿದಲ್ಲಿಯೇ ಕಣ್ಣು ಮುಚ್ಚಿಕೊಂಡು ಆ ದೃಶ್ಯಗಳನ್ನು ಆಸ್ವಾದಿಸುತ್ತಿದ್ದ.ಅವರಿಬ್ಬರೂ ತಮ್ಮ ಬಾಲ್ಯ, ತಂದೆತಾಯಿಯರು, ಗೆಳೆಯರು ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದರು. ತಾವು ಓದಿದ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ ಮಾತನಾಡುತ್ತಾ ಇಬ್ಬರೂ ಸರ್ಕಾರದ ಕೆಲಸಕ್ಕೆ ಸೇರಿದ ಕುರಿತೂ ಅಲ್ಲಿನ ರಸಮಯ ಸನ್ನಿವೇಶಗಳ ಕುರಿತೂ ಹಂಚಿಕೊಳ್ಳುತ್ತಿದ್ದರು.ನಿಜವಾಗಿಯೂ ಆ ಒಂದು ಗಂಟೆ ಹೇಗೆ ಸರಿದುಹೋಗುತ್ತಿತ್ತೋ ಏನೋ, ಆ ಒಂದು ಗಂಟೆ ವೇಳೆಗಾಗಿ ಮತ್ತೊಂದು ದಿನ ಕಾಯಬೇಕಿತ್ತು. ಏಳಲಾಗದ ಸ್ಥಿತಿಯಲ್ಲಿದ್ದ ವ್ಯಕ್ತಿ ಆ ಒಂದು ಗಂಟೆಗಾಗಿಯೇ ಕಾತರಿಸುತ್ತಿದ್ದ.

ಹೀಗೆಯೇ ಹಲವಾರು ದಿನಗಳು ಸರಿದುಹೋದವು.ಒಂದು ದಿನ ಅಲ್ಲಿ ಹಾದುಹೋಗುತ್ತಿದ್ದ ಜಾನಪದಜಾತ್ರೆಯ ಬಗ್ಗೆ ಆ ಕಿಟಕಿಯಾತ ವಿವರಿಸುತ್ತಿದ್ದ. ಕೀಲುಕುದುರೆಗಳು, ಸೋಮನಕುಣಿತ, ಪಟದಕುಣಿತ, ಡೊಳ್ಳುಕುಣಿತ, ಗೊರವರಕುಣಿತ, ಕಲಾವಿದರ ವೇಷಭೂಷಣಗಳು, ಡೊಳ್ಳು ತಮಟೆ ನಗಾರಿ ಚಂಡಮದ್ದಲೆಯ ಲಯಬದ್ಧ ಸದ್ದು, ಹಾದಿಯ ಇಕ್ಕೆಲಗಳಲ್ಲೂ ನಿಂತು ಕೈಬೀಸುತ್ತಿರುವ ಜನಸ್ತೋಮ . . . ಮಲಗಿದ್ದ ವ್ಯಕ್ತಿಗೆ ಯಾವ ಸದ್ದು ಕೇಳಿಸುತ್ತಿಲ್ಲವಾದರೂ ಆ ವೀಕ್ಷಕ ವಿವರಣೆಯಿಂದ ಎಲ್ಲವೂ ಒಳಗಣ್ಣಿಗೆ ನಿಚ್ಚಳವಾಗಿ ತೋರುತ್ತಿತ್ತು. ಹೊಸ ನಿರೀಕ್ಷೆಯ ಕಾರಣದಿಂದ ಆತ ಕ್ರಮೇಣ ಗುಣವಾಗತೊಡಗಿದ. ಅವನ ದೇಹದಲ್ಲಿ ಹೊಸಚೈತನ್ಯ ತುಂಬುತ್ತಿತ್ತು.ದಾದಿ ಒಂದು ಬೆಳಗ್ಗೆ ರೋಗಿಗಳ ಮೈ ಒರೆಸಲು ನೀರು ತಂದಾಗ ಆ ಕಿಟಕಿಯ ಮನುಷ್ಯ ಚಿರನಿದ್ರೆಗೆ ಶರಣಾಗಿದ್ದ. ದುಃಖಭಾವದಿಂದ ಆಕೆ ಅವನಮುಖದ ಮೇಲೆ ಮುಸುಕೆಳೆದು ಆಳುಗಳನ್ನು ಕರೆದು ಶವವನ್ನು ತೆರವುಗೊಳಿಸಿದಳು.ಇವೆಲ್ಲ ಮುಗಿದ ನಂತರ ಆ ಇನ್ನೊಬ್ಬ ರೋಗಿಯು ದಾದಿಯನ್ನು ಕುರಿತು ತನ್ನ ಮಂಚವನ್ನು ಆ ಕಿಟಕಿಯ ಬದಿಗೆ ಸರಿಸುವಂತೆ ವಿನಂತಿಸಿದ. ಆಕೆ ಸಂತೋಷದಿಂದ ಒಪ್ಪಿ ಮಂಚವನ್ನು ಸರಿಸಿ ತೃಪ್ತಿಯಾಯಿತೇ ಎನ್ನುತ್ತಾ ಮಂದಹಾಸ ಬೀರಿ ಹೋದಳು.ಏಳಲಾಗದ ಸ್ಥಿತಿಯಲ್ಲಿದ್ದ ಆ ವ್ಯಕ್ತಿಗೆ ಆ ಕಿಟಕಿಯಿಂದಾಚೆಗಿನ ಪ್ರಪಂಚವನ್ನು ಕಾಣಬೇಕೆನ್ನುವ ತವಕದಿಂದ ಹೊಸ ಶಕ್ತಿ ಬಂದಂತಾಗಿತ್ತು. ಮೆಲ್ಲನೆ ಆತ ಬಲಮಗ್ಗುಲಿಗೆ ಹೊರಳಲೆತ್ನಿಸಿದ. ನಿಧಾನವಾಗಿ ಸ್ವಲ್ಪಸ್ವಲ್ಪವೇ ಎದ್ದ. ಆಶ್ಚರ್ಯ! ಅವನ ಕುತ್ತಿಗೆ ಎಲುಬಿಗೆ ಬಲ ಬಂದಿತ್ತು. ಆತ ತನ್ನ ಕುತ್ತಿಗೆಯನ್ನು ಅತ್ತಿತ್ತ ಅಲುಗಾಡಿಸಿದ, ಏನೂ ನೋವೆನಿಸಲಿಲ್ಲ, ಸರಾಗವಾಗಿ ಆತ ತಲೆಯಾಡಿಸಬಹುದಾಗಿತ್ತು. ಕಿಟಕಿಯಿಂದಾಚೆ ನೋಡಿ ಹೊರಗಿನ ಪ್ರಪಂಚವನ್ನು ಕಣ್ಣು ತುಂಬಿಕೊಳ್ಳಬೇಕೆಂಬ ಆತನ ಬಹುನಿರೀಕ್ಷೆಯ ಕನಸು ಇಂದು ನನಸಾಗಲಿತ್ತು.ಕಿಟಕಿಯ ಹೊರಗೆ ಅವನು ದೃಷ್ಟಿ ಹಾಯಿಸಿದ. ಆದರೆ . . ಆದರೆ . . ಅಲ್ಲಿ ಬಿಳಿ ಗೋಡೆಯ ಹೊರತು ಇನ್ನೇನೂ ಕಾಣುತ್ತಿರಲಿಲ್ಲ. ಆ ಮನುಷ್ಯನಿಗೆ ತಳಮಳವಾಯಿತು. ಮತ್ತೆ ಮತ್ತೆ ದೃಷ್ಟಿಸಿ ನೋಡಿದ. ಊಹೂಂ ಅದು ಬರೀ ಗೋಡೆಯಷ್ಟೆ, ಇನ್ನೇನೂ ಅಲ್ಲಿರಲಿಲ್ಲ. ಆತನ ಕನಸುಗಳ ಕಾಣ್ಕೆಗೆ ನಿರಾಶೆಯ ಗೋಡೆ ಅಡ್ಡಬಂದಿತ್ತು.ದಾದಿಯನ್ನು ಕೇಳಿದಾಗ ಆಕೆ ಹೇಳಿದ್ದಿಷ್ಟು. "ನಿಜ ಹೇಳಬೇಕೆಂದರೆ ಅಲ್ಲಿ ಗೋಡೆಯ ಹೊರತು ಇನ್ನೇನೂ ಇಲ್ಲ. ಮತ್ತೊಂದು ಸಂಗತಿಯೆಂದರೆ ನಿಮಗೆ ಇಷ್ಟು ದಿನವೂ ಆ ದೃಶ್ಯಗಳನ್ನು ವರ್ಣರಂಜಿತವಾಗಿ ವಿವರಿಸುತ್ತಿದ್ದನಲ್ಲ ಆ ಮನುಷ್ಯ ಕುರುಡನಾಗಿದ್ದ. ಈ ಗೋಡೆಯನ್ನೂ ಆತ ಕಂಡಿರಲಾರ. ನೀವು ಗುಣಹೊಂದಿದ್ದು ಆತನ ಮಾತುಗಳಿಂದ, ಆತನ ವರ್ಣನೆಯಿಂದಲೇ ಹೊರತು ನಮ್ಮ ಔಷಧಿಗಳಿಂದಲ್ಲ."ಹೌದಲ್ಲವೇ, ಕಾಣದ ನಿರೀಕ್ಷೆಯೇ ನಮ್ಮ ಬದುಕನ್ನು ನಡೆಸುತ್ತೆ.

Tuesday, August 14, 2007

ಕತ್ತಲೆಗೇ ಕಾಯಬೇಕಾದ ಇವರ ಪಾಡು ನೋಡಿ!

ಉಷಾ ಕಟ್ಟೇಮನೆ

ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದಂತಹ ಹಲವಾರು ಸಮಸ್ಯೆಗಳು ಹೆಣ್ಣುಮಕ್ಕಳಲ್ಲಿವೆ. ಅದು ಗಂಡು ಪ್ರಪಂಚಕ್ಕೆ ಅರ್ಥವಾಗಲು ಸಾಧ್ಯವೇ ಇಲ್ಲ. ಅರ್ಥವಾಗಬೇಕೆಂದು ನಾವು ಹಠ ಮಾಡುವುದು ಕೂಡ ಅರ್ಥವಿಲ್ಲದ್ದು.
ನಮ್ಮ ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ವಿಶಾಲವಾದ ಆಟದ ಮೈದಾನವಿರುತ್ತದೆ. ಕೊಠಡಿಗಳ ಸಂಖ್ಯೆ ಕಡಿಮೆಯಿದ್ದರೂ ಕಟ್ಟಡಕ್ಕೆ ಹೆಂಚಿನ ಮಾಡಿರುತ್ತದೆ. ಮೈದಾನದ ತುದಿಯಲ್ಲಿ ಬಾವಿಯಿರುತ್ತದೆ. ಶಾಲೆಯ ಸುತ್ತಲೂ ನಳನಳಿಸುವ ಕೈದೋಟವಿರುತ್ತದೆ.

ಹಳ್ಳಿಗಾಡಿನ ಶಾಲೆಗಳಲ್ಲಿ ಕಟ್ಟಡ, ಪರಿಸರ ಎಲ್ಲಾ ಎಷ್ಟೇ ಚೆನ್ನಾಗಿದ್ದರೂ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಹೆಣ್ಣುಮಕ್ಕಳಂತೂ ಮೂತ್ರ ವಿಸರ್ಜನೆಗಾಗಿ ಪಡುವ ಪಾಡು ಅತ್ಯಂತ ಮುಜುಗರದ್ದು. ಬಹುಶಃ ಶಾಲಾ ಕಟ್ಟಡಗಳನ್ನು ಕಟ್ಟುವವರು, ಅದರ ಮೇಲುಸ್ತುವಾರಿ ನೋಡಿಕೊಳ್ಳುವವರು, ಸರಕಾರ ಎಲ್ಲದರಲ್ಲೂ ಗಂಡಸರದೇ ಪ್ರಾಬಲ್ಯ. ಪ್ರಾಬಲ್ಯವೇನು ಬಂತು, ಅದರಲ್ಲಿ ಭಾಗಿಯಾಗುವವರೆಲ್ಲ ಅವರೇ. ಎಷ್ಟಾದರೂ ಪ್ರಕೃತಿ ಕರೆಗ ಮೋಟುಗೋಡೆಯನ್ನು ಅವಲಂಬಿಸುವವರು ತಾನೆ! ಹಾಗಾಗಿ ಅವರಿಗೆ ಹೆಂಗಸರ ಸಂಕಟ, ಸಮಸ್ಯೆಗಳು ಅರ್ಥವಾಗುವುದೇ ಇಲ್ಲ. ದೂರ ಪ್ರಯಾಣದ ರಾತ್ರಿ ಬಸ್ಸುಗಳಲ್ಲಿ ಸುಲಭ್ ಶೌಚಾಲಯ ಇರುವೆಡೆಗಳಲ್ಲಿ ಡ್ರೈವರ್ ಎಂದೂ ಬಸ್ ನಿಲ್ಲಿಸುವುದೇ ಇಲ್ಲ. ಗಂಡಸರಿಗೆ ಬಯಲು ಪ್ರದೇಶವೇ ಬೇಕು ತಾನೆ?

ನಾವು ಶಾಲೆಗೆ ಹೋಗುವ ಕಾಲದಲ್ಲಾದರೆ ಶೌಚಾಲಯ ಇಲ್ಲದಿರುವುದು ಅಂತಹ ಸಮಸ್ಯೆಯೆಂದೇನೂ ಅನ್ನಿಸುತ್ತಿರಲಿಲ್ಲ. ಯಾಕೆಂದರೆ ಶಾಲೆಯ ಸುತ್ತಮುತ್ತ ಎತ್ತರವಾಗಿ ಬೆಳೆದ ಪೊದೆ ಗಿಡಗಳ ಮರೆಯಿತ್ತು. ಇಲ್ಲವಾದರೂ, ದೇಹಬಾಧೆಯನ್ನು ತಡೆದುಕೊಳ್ಳುವುದು ಹೆಣ್ಣುಮಕ್ಕಳಿಗೆ ಸಾಮಾನ್ಯ ತಾನೆ?

ಈಗ ಈ ವಿಚಾರ ಅಷ್ಟು ಸರಳವಾಗಿಲ್ಲ. ಪ್ರಪಂಚದಾದ್ಯಂತ ಈಗ ಹೆಣ್ಣುಮಕ್ಕಳು ದೈಹಿಕವಾಗಿ ಬಹುಬೇಗನೆ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಹಿಂದೆಲ್ಲಾ ಸರಾಸರಿ ಹನ್ನೆರಡರಿಂದ ಹದಿನಾರು ವರುಷಕ್ಕೆ ಋತುಚಕ್ರ ಆರಂಭವಾಗುತ್ತಿತ್ತು. ಅದು ಈಗ ಎಂಟಕ್ಕೆ ಇಳಿದಿದೆ ಎಂದು ಚೀನಾದಲ್ಲಿ ನಡೆಸಿದ ಸಮೀಕ್ಷೆಯೊಂದು ಹೇಳುತ್ತಿದೆ. ಶೀತ ಪ್ರದೇಶಕ್ಕಿಂತ ಉಷ್ಣ ವಲಯದಲ್ಲಿ ಹುಡುಗಿಯರು ಬಹುಬೇಗನೆ ಕೌಮಾರ್ಯವನ್ನು ದಾಟಿ ಬರುತ್ತಾರೆ.

ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದ ಬಾಲೆಯೊಬ್ಬಳು ಋತುಮತಿಯಾಗಿದ್ದಳು. ಅವಳ ಅಮ್ಮ ದಿಕ್ಕು ತೋಚದೆ ಅಳುತ್ತ ಕುಳಿತದ್ದು, ಆ ಹುಡುಗಿ ಪಿಳಿಪಿಳಿ ಕಣ್ಣು ಬಿಡುತ್ತಾ, “ನನ್ನಿಂದ ಏನು ತಪ್ಪಾಗಿದೆ” ಎಂದು ತೋಚದೆ ಗಲಿಬಿಯಾದದ್ದು ಇತ್ತೀಚೆಗೆ ನನ್ನ ಗಮನಕ್ಕೆ ಬಂದ ವಿಚಾರ.ಹೆಣ್ಣುಮಕ್ಕಳಿಗೆ ಇಂಥದೊಂದು ಸೂಕ್ಷ್ಮ ಸಮಯದಲ್ಲಾದರೂ ತೀರಾ ಖಾಸಗಿ ಪರಿಸರ ಬೇಕು. ನಿರ್ಭೀತಿಯಿಂದ ಯಾವುದೇ ಅಳುಕು ಇಲ್ಲದೆ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿಕೊಳ್ಳುವ ವಾತಾವರಣ ಬೇಕು. ಆದರೆ ಅಂಥ ಪರಿಸರ ನಮ್ಮ ಗ್ರಾಮಂತರ ಶಾಲೆಗಳಲ್ಲಿ ಎಲ್ಲಿದೆ?

ನಮ್ಮ ಕಾಲದಲ್ಲಾದರೆ ವಾರಗಟ್ಟಲೆ ಶಾಲೆಗೆ ಬಾರದಿದ್ದರೂ ಯಾರೂ ಕೇಳುತ್ತಿರಲಿಲ್ಲ. ಈಗಿನ ಕಲಿಕಾ ವಿಧಾನ, ಬೋಧನಾ ಕ್ರಮ ಎಲ್ಲವೂ ಭಿನ್ನ. ಹಾಗಾಗಿ ನಾಲ್ಕೈದು ದಿವಸ ರಜೆ ಹಾಕುವಂತಿಲ್ಲ. ಸ್ಯಾನಿಟರಿ ನ್ಯಾಪ್ ಕಿನ್ನುಗಳು ದುಬಾರಿ. ಅವು ನಗರ ಪ್ರದೇಶದ ಹೆಣ್ಣುಮಕ್ಕಳಿಗೆ ಮಾತ್ರ ಎಟುಕಬಲ್ಲವು.ನಗರ ಪ್ರದೇಶದಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಪುಣ್ಯವಂತರು. ಅಲ್ಲಿ ಶಾಲೆಗಳಲ್ಲಿ ಹುಡುಗಿಯರಿಗೆಂದೇ ಪ್ರತ್ಯೇಕ ಶೌಚಾಲಯಗಳಿರುತ್ತವೆ. ಕೆಲವು ಶಾಲಾ ಕಾಲೇಜುಗಳಲ್ಲಿ ಮಹಿಳೆಯರಿಗಾಗಿಯೇ ವಿಶ್ರಾಂತಿ ಕೊಠಡಿಗಳಿರುತ್ತವೆ. ಅದೂ ಅಲ್ಲದೆ ಕೆಲವು ಶಾಲೆಗಳಲ್ಲಿ ಹುಡುಗಿಯರಿಗೆ ತುರ್ತು ಸನ್ನಿವೇಶಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನೇ ಒದಗಿಸುವ ವ್ಯವಸ್ಥೆ ಇದೆ. ಅದಕ್ಕಾಗಿಯೇ ನಿರ್ದಿಷ್ಟ ಮಹಿಳಾ ಟೀಚರ್ ಗಳಿರುತ್ತಾರೆ.

ಖಾಸಗಿ ಶಾಲೆಗಳಲ್ಲಿ ಮಹಿಳಾ ಶಿಕ್ಷಕಿಯರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಹಾಗಾಗಿ ಅವರು ಕೆಲವು ಸಂದರ್ಭಗಳಲ್ಲಿ ಆಪ್ತ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಗುಣ, ನಡತೆಗಳಿಂದ ಹಿಡಿದು ಬಟ್ಟೆಬರೆಯ ತನಕ ಅಕ್ಕನಂತೆ, ಗೆಳತಿಯಂತೆ, ತಾಯಿಯಂತೆ ಮಾರ್ಗದರ್ಶನ ನೀಡುತ್ತಾರೆ. ಈ ಭಾಗ್ಯ ಗ್ರಾಮಾಂತರ ಶಾಲೆಯ ಮಕ್ಕಳಿಗೆ ಎಲ್ಲಿಂದ ಬರಬೇಕು?

ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಮಕ್ಕಳ ಮನಸ್ಸು ಚಿಗುರೊಡೆಯುವ ಕಾಲ ಅದು. ಅದು ಕೀಳರಿಮೆಯಿಂದ ಮುದುಡುವಂತೆ ಮಾಡಬಾರದು. ಮುಕ್ತವಾಗಿ ಹಾರಾಡಲು ಏನೆಲ್ಲಾ ವ್ಯವಸ್ಥೆ ಮಾದಬೇಕೋ ಅದನ್ನು ಮಾಡಲೇಬೇಕು.ಶಾಲೆಗೊಂದು ಶೌಚಾಲಯ ಕಟ್ಟುವುದಕ್ಕೆ ಲಕ್ಷಗಟ್ಟಲೆ ಹಣವೇನೂ ಬೇಕಾಗುವುದಿಲ್ಲ. ಊರಿನ ಗಣ್ಯ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಹಣದಿಂದಲೇ ಇದನ್ನು ಮಾಡಬಹುದು. ಚೆನ್ನಾಗಿ ಸಂಪಾದನೆಯಿರುವ, ವಿದೇಶಗಳಲ್ಲಿ ವಾಸಿಸುತ್ತಿರುವ ಹಳೆ ವಿದ್ಯಾರ್ಥಿಯೊಬ್ಬನೂ ಇದನ್ನು ಮಾಡಬಹುದು. ಅಥವಾ ಊರಿನ ಯುವಕ ಮಂಡಲ-ಯುವತಿ ಮಂಡಲದಂತಹ ಸಾಮಾನ್ಯ ಸಂಘಟನೆ ಕೂಡ ಈ ವೆಚ್ಚವನ್ನು ಭರಿಸಬಹುದು. ಊರಿನಲ್ಲಿ ಯಾರಾದರೂ ಸತ್ತಾಗ ಅಥವಾ ಧಾರ್ಮಿಕ ಕಾರ್ಯಗಳನ್ನು ನಡೆಸುವಾಗ ಮಾಡುವ ಅನ್ನ ಸಂತರ್ಪಣೆಯಲ್ಲಿ ವಿನಿಯೋಗವಾಗುವ ಹಣದಲ್ಲಿ ಒಂದಂಶವನ್ನು ಉಪಯೋಗಿಸಿಕೊಂಡರೂ ಶೌಚಾಲಯ ನಿರ್ಮಾಣವಾಗುತ್ತದೆ. ಮದುವೆಗೆ ಖ್ರ್ಚಾಗುವ ಹಣದಲ್ಲಿ ಶಾಲೆ ಕಟ್ಟಡವೇ ನಿರ್ಮಾಣವಾಗಬಹುದು. ಅದು ಬೇರೆ ವಿಚಾರ.ನಮ್ಮ ಶಾಲೆಯಲ್ಲಿ ಶೌಚಾಲಯ ಇದೆ ಬಿಡ್ರಿ ಎಂದು ಕೆಲವರು ಅನ್ನಬಹುದು. ಆದರೆ ಅವುಗಳಿಗೆ ನೀರಿನ ವ್ಯವಸ್ಥೆ ಇದೆಯಾ ನೋಡಿ. ಖಂಡಿತವಾಗಿಯೂ ಇರುವುದಿಲ್ಲ. ನಮ್ಮಲ್ಲಿ ಶೌಚಾಲಯ ನಿರ್ಮಿಸುವ ವಿನ್ಯಾಸವೇ ವಿಚಿತ್ರ. ಮೇಲ್ಛಾವಣಿ ಇಲ್ಲದ ಅರ್ಧ ಎತ್ತರಿಸಿದ ಗೋಡೆಗಳು. ಅದರೊಳಗೆ ಉದ್ದನೆಯ ಜಾಗವನ್ನೇ ಮೋಟುಗೋಡೆಗಳಿಂದ ವಿಂಗಡಿಸಿ ಸ್ವಲ್ಪ ಎತ್ತರಿಸಿದ ಜಾಗ. ನಡೆದಾಡಲು ಕಿರು ಹಾದಿ. ಒಳಗೆ ಪ್ರವೇಶಿಸಿದೊಡನೆ ವಿಸರ್ಜನೆ ಮಾಡಲು ಕುಳಿತವರ ಹಿಂಬದಿ ಕಣ್ಣಿಗೆ ಬೀಳುತ್ತದೆ. ಪ್ರೈವೆಸಿಯೇ ಇಲ್ಲದ, ವಾಕರಿಕೆ ಬರುವ ಜಾಗ. ಇಂತಹ ಪರಿಸರದಲ್ಲಿ ತಮ್ಮ ಹೆಣ್ತನವನ್ನು ಕಾಪಾಡಿಕೊಂಡು ನಮ್ಮ ಹುಡುಗಿಯರು ಬೆಳೆಯಬೇಕು. ಹುಡುಗಿಯರ ಹೆಣ್ತನದ ವಿಷಯದಲ್ಲಿ ನಮ್ಮ ಸಮಾಜ ಕಣ್ಣು ಮುಚ್ಚಿ ಕೂತಿದೆ. ಅಥವಾ ಅಸಡ್ಡೆಯಿಂದ ವರ್ತಿಸಿದೆ.
ಬಹುಶಃ ನಮ್ಮ ಗಂಡಸರಿಗೆ ಮಹಿಳೆಯರ ಒಳ ಜಗತ್ತು ಅರ್ಥವಾಗುವುದೇ ಇಲ್ಲವೇನೊ. ಸ್ನಾನಕ್ಕಾಗಿ, ಬಹಿರ್ದೆಶೆಗಾಗಿ ಕತ್ತಲಾಗುವುದನ್ನೇ ಕಾಯುತ್ತ ಕುಳಿತಿರುವ ಎಷ್ಟೊಂದು ಮಹಿಳೆಯರು ನಮ್ಮ ಸುತ್ತಮುತ್ತಲೂ ಇದ್ದಾರೆ. ಸ್ವಲ್ಪ ಪ್ರಯತ್ನ ಪಟ್ಟರೆ ಇವರ ಬದುಕು ಹಸನುಗೊಳ್ಳಲು ಸಾಧ್ಯವಿಲ್ಲವೇ?

Tuesday, July 31, 2007

ಅರೇಂಜ್ಡ್ ಮ್ಯಾರೇಜ್ - ಕಥೆ

ಇಂದಿನ ಯುವಜನಾಂಗದ ದೃಷ್ಟಿಯಲ್ಲಿ ಅರೇಂಜ್ಡ್ ಮ್ಯಾರೇಜ್ ಎಂಬುದು ಅರ್ಥ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವಾಗಿ ಇಂಗ್ಲೀಷಿನಲ್ಲಿ ನಾನು ಓದಿದ ಸಣ್ಣ ಕಥೆಯೊಂದನ್ನು ಕನ್ನಡದಲ್ಲಿ ಓದಿಸುವ ಪ್ರಯತ್ನ ಮಾಡಿದ್ದೇನೆ
=======================================================

ದಟ್ಟವಾದ ಗಿಡಮರಗಳ ಮಧ್ಯ ಒದ್ದೆಯಾದ ಮಣ್ಣಿನ ದಾರಿಯಲ್ಲಿ ಅವಳು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ಪಕ್ಕದಲ್ಲಿ ಬರುತ್ತಿದ್ದವನು ತನ್ನ ಗಂಡ ಎಂದಷ್ಟೆ ಅವಳಿಗೆ ಗೊತ್ತಿತ್ತು. ಅವನು ಬಹಳ ಖುಷಿಯಾಗಿ, ದೂರದಲ್ಲೆಲ್ಲೋ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಬರುತ್ತಿದ್ದ. ಅವಳ ಕೈಯ ಮೆಹಂದಿ ಎರಡು ದಿನಗಳ ಸಂಭ್ರಮವನ್ನು ನೆನಪಿಸುತ್ತಿತ್ತು.

******* *****

ಹೇಯ್. ಅಲ್ನೋಡು... !!! ಆಶ್ಚರ್ಯದಿಂದ ಏನನ್ನೋ ತೋರಿಸುತ್ತಾ ಅವನು ಕೂಗಿದ.ಅವನು ತೋರಿಸದೆಡೆಗೆ ನೋಡಿದಳು.ಸುಂದರವಾದ ಬಣ್ಣ ಬಣ್ಣದ ಬಲೂನುಗಳಿಂದ ಆಕಾಶವು ತುಂಬಿ ಹೋಗಿತ್ತು. ಮಕ್ಕಳು ಆಕಾಶವನ್ನು ನೋಡುತ್ತಾ ಕುಣಿಯುತ್ತಿದ್ದರು.ಇವನು ಅದರಲ್ಲೇ ಪೂರ್ತಿ ಮುಳುಗಿಹೋಗಿದ್ದ. ಹೌದು, ಬಣ್ಣಗಳೆಂದರೆ ಯಾವಾಗಲೂ ಖುಷಿ ಕೊಡುವಂತದ್ದು.. ಆದರೆ ಈಗೇಕೋ ಹಾಗೆ ಅನಿಸುತ್ತಿಲ್ಲ. ಏಕೆಂದರೆ ಅವಳು ಅವಳ ಗೆಳತಿಯರೊಂದಿಗೆ ಇಲ್ಲ, ಅಪ್ಪ-ಅಮ್ಮಂದಿರೊಂದಿಗಿಲ್ಲ, ತನ್ನ ಸಹೋದ್ಯೋಗಿಗಳೊಂದಿಗೂ ಇಲ್ಲ. ಇದು ಶಾಲೆಯ ಅಥವಾ ಕಂಪನಿಯಿಂದ ಬಂದ ಪ್ರವಾಸವಾಗಿರಲಿಲ್ಲ. ಇದು ಅವಳ ಜೀವನದ ಪ್ರಶ್ನೆಯಾಗಿತ್ತು ಮತ್ತು ಅವಳ ಬದುಕನ್ನು ಈ ಹುಡುಗನೊಟ್ಟಿಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿತ್ತು. ಒಂದು ರೀತಿಯ ಒಬ್ಬಂಟಿತನ, ಅಸಮಾಧಾನ ಮನಸ್ಸನ್ನು ಕಾಡುತ್ತಿತ್ತು. ತಾನು ಮದುವೆಯಾದ ಹುಡುಗನ ಹೆಸರು ಮತ್ತು ಕೆಲಸ ಇಷ್ಟು ಬಿಟ್ಟು ಮತ್ತೇನೂ ಅವಳಿಗೆ ಸರಿಯಾಗಿ ಗೊತ್ತೇ ಇರಲಿಲ್ಲ. ಆ ಹುಡುಗನನ್ನು ಇದಕ್ಕೂ ಮೊದಲು ಅವಳು ನೋಡಿದ್ದು ಒಮ್ಮೆ ಮಾತ್ರ . ಒಂದೆರಡು ಬಾರಿ ಮಾತಾಡಿದ್ದಳು ಅಷ್ಟೆ. ಎಲ್ಲವೂ ಬಹಳ ತರಾತುರಿಯಲ್ಲಿ ನಡೆದು, ಅವಳು ಉಸಿರು ಬಿಡುವುದರೊಳಗೆ ಎಲ್ಲವೂ ಮುಗಿದುಹೋಗಿತ್ತು. ಈಗ ಮದುವೆಯಾದ ಆ ಹುಡುಗನೊಂದಿಗೆ ಒಂದು ಗಿರಿಧಾಮಕ್ಕೆ ಬಂದಿದ್ದಳು. ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಇವರು ಈಗ ಯಾರೋ ಗುರುತು ಪರಿಚಯ ಇಲ್ಲದವನ ಜೊತೆ ತಮ್ಮ ಮಗಳನ್ನು ಮದುವೆ ಮಾಡಿ ಈ ರೀತಿ ಅದು ಹೇಗೆ ಇಷ್ಟು ದೂರ ಒಬ್ಬಂಟಿಯಾಗಿ ಕಳುಹಿಸಿದರು ಎಂದು ಮನಸ್ಸಿನಲ್ಲಿ ಅಪ್ಪ ಅಮ್ಮರಿಗೆ ಶಾಪ ಹಾಕುತ್ತಾ ಸುಮ್ಮನೇ ಅವನೆಡೆಗೆ ನೋಡಿತ್ತಾ ಯೋಚಿಸಿದಳು.
"ಈ ಹುಡುಗನಿಗೆ ತನ್ನ ಜೊತೆಗಿರುವವಳು ತನ್ನ ಹೆಂಡತಿ ಎಂದು ಅರ್ಥ ಆಗಿದೆಯೆ. ಅಪರಿಚಿತ ಹುಡುಗಿಯೊಬ್ಬಳನ್ನು ಈ ಹುಡುಗ ಅರ್ಥಮಾಡಿಕೊಳ್ಳುತ್ತಾನಾ, ನನ್ನ ಭಾವನೆಗಳನ್ನು ಗೌರವಿಸುತ್ತಾನಾ, ಪ್ರೀತಿ ಮಾಡುತ್ತಾನಾ, ಬಾಳುತ್ತಾನಾ! "

**************************************************

"ಅಮ್ಮಾ ಈ ರೀತಿ ಎಲ್ಲಾ ಸರಿ ಆಗಲ್ಲ, ದಯವಿಟ್ಟು ನಿಲ್ಲಿಸು ಇದನ್ನ" ಅವಳು ಕೊನೆಯ ಗಳಿಗೆವರೆಗೂ ತನ್ನ ತಾಯಿಗೆ ಹೇಳುತ್ತಲೇ ಇದ್ದರೆ ಅವಳಮ್ಮ ಅದಕ್ಕೆ ಕಿವಿಗೊಡದೆ ಮಗಳಿನ ಕೇಶ ಶೃಂಗಾರದಲ್ಲಿ ತೊಡಗಿದ್ದರು. ರಾತ್ರಿಯೆಲ್ಲಾ ಅತ್ತು ಅತ್ತು ಬಾಡಿದ ಅವಳ ಮುಖಕ್ಕೆ ಪುನಃ ಕಾಂತಿ ತರಿಸುವ ಪ್ರಯತ್ನವೆಂಬಂತೆ ಎರಡು-ಮೂರು ಸಾರಿ ಮೇಕಪ್ ಮಾಡಬೇಕಾಗಿತ್ತು. ಆದರೆ ಈಗ ಬಹಳ ತಡವಾಗಿಹೋಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಅವಳ ಮದುವೆ. ಆ ಮದುವೆಯ ಮುಂಜಾನೆ ಒಂದು ದುಃಸ್ವಪ್ನದಂತೆ ಭಾಸವಾಗಿತ್ತು. ಜೀವನದಲ್ಲಿ ಮೊದಲನೇ ಬಾರಿ ಅವಳಿಗೆ ತಾನು ಯಾರನ್ನಾದರೂ ಪ್ರೀತಿ ಮಾಡಿ ಮದುವೆಯಾಗಬೇಕಿತ್ತು ಎನಿಸಿತ್ತು. ತನಗೆ ಮನಸ್ಸಿಗೆ ಹಿತವೆನಿಸುವ, ಅವನ ಹೆಸರು ಹಿಡಿದು ಕೂಗಿ ತನ್ನ ಗೆಳತಿಯರಿಗೆಲ್ಲಾ ಪರಿಚಯ ಮಾಡಿಕೊಡುವಂತಹ, ನಂಬಿಕೆ ಇರುವಂತಹ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಿತ್ತು. ಅವಳು ಯಾರನ್ನಾದರೂ ಪ್ರೀತಿಸಿ ಅವನನ್ನೆ ಮದುವೆಯಾಗಿತ್ತೇನೆ ಎಂದಿದ್ದರೆ ಅವಳ ತಂದೆ-ತಾಯಿಗಳು ಬೇಡವೆನ್ನುತ್ತಿರಲಿಲ್ಲ. ಆದರೆ ಅವಳು ಇದುವರೆಗೂ ಯಾರನ್ನೂ ಅದರಲ್ಲೂ ಯಾವ ಹುಡುಗನನ್ನೂ ಭಾವನಾತ್ಮಕವಾಗಿ ಹಚ್ಚಿಕೊಂಡಿರಲೇ ಇಲ್ಲ. ತನ್ನ ಗೆಳೆಯರೊಂದಿಗೆ ಸ್ನೇಹದಿಂದ ವರ್ತಿಸುತ್ತಾ , ಆಟ ಆಡುತ್ತಾ, ಕೀಟಲೆ ಮಾಡುತ್ತಾ ಆರಾಮಾಗಿದ್ದಳೇ ಹೊರತು ಯಾರೊಂದಿಗೂ ಆ ರೀತಿಯ ಬೇರೆ ಭಾವನೆಗಳು ಅವಳಿಗೆ ಯಾವತ್ತೂ ಬಂದಿರಲಿಲ್ಲ. ಈಗ ಮದುವೆಯ ವಯಸ್ಸಿಗೆ ಬಂದ ಮೇಲೆ ಸಹಜವಾಗಿಯೇ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುವ ಕರ್ತವ್ಯ ತಂದೆ-ತಾಯಿಯರಿಗೆ ಬಂದಿತ್ತು. ತಮ್ಮ ಮಗಳಿಗೆ ಯೋಗ್ಯ ವರನನ್ನು ಹುಡುಕಲು ಬಹಳ ಕಷ್ಟ ಪಟ್ಟಿದ್ದರು. ಜಾತಿ, ಜಾತಕ, ಒಳ್ಳೆಯ ಕುಟುಂಬ, ಸುರೂಪಿ, ಒಳ್ಳೆ ಆದಾಯ ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಹುಡುಗನನ್ನು ಹುಡುಕಿದ್ದರು. ಅಂತೂ ಅವರ ಪ್ರಯತ್ನ ೮ ತಿಂಗಳ ನಂತರ ಫಲ ಕೊಟ್ಟಿತ್ತು. ಆದರೆ ಅವಳು ತನ್ನ ತಂದೆಗೆ ಹೇಳಿಬಿಟ್ಟಿದ್ದಳು. ಈ ಹುಡುಗನನ್ನು ನೋಡಿದರೆ ನನಗೆ ಯಾವುದೇ ಭಾವನೆಗಳು ಬರುತ್ತಿಲ್ಲ. ತನಗೆ ಅವನು ದಿನಾ ನೋಡುವ ಹುಡುಗರಂತೆ, ಚಾಟ್ ರೂಮಿನಲ್ಲಿ ಸಿಗುವ ಯಾರೋ ಒಬ್ಬನಂತೆ, ಯಾರೋ ಒಬ್ಬ ಅಪರಿಚಿತ ಮನುಷ್ಯನೇ ಹೊರತು ಬೇರೇನೂ ಅನಿಸಿರಲಿಲ್ಲ. ಅವಳ ತಂದೆ ಇಬ್ಬರನ್ನೂ ಪರಸ್ಪರ ಭೇಟಿಯಾಗಲು ಹೇಳಿದ್ದರು, ನಿಮ್ಮ ಇಷ್ಟ ಕಷ್ಟಗಳನ್ನು ಚರ್ಚಿಸಿ ಒಪ್ಪಿಗೆ ಮಾಡಿಕೊಳ್ಳಿ ಎಂದು ಅವಕಾಶ ಕೊಟ್ಟಿದ್ದರು. ಅದರಂತೆಯೇ ಭೇಟಿಯೋ ಆಯಿತು, ಮಾತಾಡಿಯೂ ಆಯಿತು. ಅದು ಅವಳಿಗೆ ತನ್ನ ಕಂಪನಿಯ ಯಾವುದೋ ಮೀಟಿಂಗಿನಂತೆ, ಸೆಮಿನಾರಿನಂತೆ ಅಷ್ಟೆ ಅನಿಸಿತ್ತು. ಬರುತ್ತಿದ್ದಂತೆ ತಂದೆ ಕೇಳಿದ್ದರು, "ಅವನೊಟ್ಟಿಗೆ ಮಾತಾಡಿದೆಯಾ, ಹೇಗನ್ನಿಸಿತು, ಹುಡುಗ ಒಳ್ಳೆಯವನು ತಾನೆ, ಚೆನಾಗಿ ಮಾತಾಡಿದನೆ?" ಅದೂ ಇದೂ ಕೇಳಿದರು. ಇನ್ನೇನು ಹೇಳುವುದು, ಎಲ್ಲಾದಕ್ಕೂ ಹೂಂ ಎಂದು ತಲೆಯಾಡಿಸಿದ್ದಳು. ಹೇಳುವುದಕ್ಕೆ ಏನಾದರೂ ಇದ್ದರೆ ತಾನೆ ! ಮನಸ್ಸಿನಲ್ಲಿ ಮಾತ್ರ "ಅವನು ಕೊಡಿಸಿದ ಐಸ್ ಕ್ರೀಂ ಒಂದು ಭಾರಿ ಚೆನಾಗಿತ್ತು" ಅಂದುಕೊಂಡು ಸುಮ್ಮನೆ ಎದ್ದು ಬಂದಿದ್ದಳು.

ಅವಳ ತಂದೆ-ತಾಯಿಗಳು, ಬಂಧುಗಳು ಎಲ್ಲಾ ಚರ್ಚಿಸಿ, ಅವಳಿಗೆ ತನ್ನ ಜೀವನ ಸಂಗಾತಿ ಆಗುವವನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಟ್ಟಾಯಿತು. ಇನ್ನು ಮದುವೆ ಮಾಡಲು ತೊಂದರೆ ಏನಿಲ್ಲ ಎಂದು ನಿರ್ಧರಿಸಿದ್ದರು. ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು. ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತ್ತು. ಮದುವೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮದುವೆ ಮನೆಯ ತುಂಬಾ ಜನಗಳು, ಹಬ್ಬದ ವಾತಾವರಣ. ಮದುವೆ ಹಾಲಿನಲ್ಲಿ ಮಕ್ಕಳು ಕುಣಿದು, ಓಡುತ್ತಾ , ಕೂಗಾಡುತ್ತಾ ಆಡುತ್ತಿದ್ದರೆ, ಹೆಂಗಸರಿಗೆಲ್ಲಾ ರೇಷ್ಮೆ ಸೀರೆಯ ಸಂಭ್ರಮ. ಹಿತವಾದ ಗುಲಾಬಿಯ,ಮಲ್ಲಿಗೆಯ ಪರಿಮಳ.. ಸಣ್ಣಗೆ ಕೇಳಿ ಬರುತ್ತಿದ್ದ ಮಂಗಳ ವಾದ್ಯದ ಸದ್ದು, ಮಂತ್ರೋದ್ಘೋಷದ ಮದ್ಯೆ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ನಂತರ ಯಥಾಪ್ರಕಾರ ಫೋಟೊಗಳಿಗೆ, ವಿಡಿಯೋ ಗೆ ಸಂಬಂಧಿಕರ, ಗೆಳೆಯರ ಜೊತೆ ನಿಂತು ಕೃತಕ ನಗೆ ಬೀರುವುದು ಎಲ್ಲಾ ಮುಗಿದಿತ್ತು. ಈಗ ಅವಳು ಅವನ ಹೆಂಡತಿ. ಸಮಾಜ ಮತ್ತು ಕಾನೂನಿನ ಪ್ರಕಾರ ಅವರಿಬ್ಬರು ದಂಪತಿಗಳು. ತಂದೆ-ತಾಯಿಯರಿಗೆ ತಮ್ಮ ಕರ್ತವ್ಯ ಭಾರ ಇಳಿದಂತೆ ನಿಟ್ಟುಸಿರು ಬಿಟ್ಟಿದ್ದರು. ತುಂಬಿದ ಮದುವೆ ಮನೆಯಿಂದ ಜನರೆಲ್ಲಾ ಒಬ್ಬೊಬ್ಬರಾಗಿ ಖಾಲಿ ಯಾಗಿ ಈಗ ಅವರಿಬ್ಬರೂ ಹೊಸ ಜಗತ್ತಿನ , ಹೊಸ ಬದುಕಿನ ಪ್ರಾರಂಭದಲ್ಲಿ ನಿಂತಿದ್ದರು.

******************************************************************************

"ಬಾ ಇಲ್ಲಿ ಕೂರೋಣ"..ಅವನು ಅವಳ ಕೈಯನ್ನು ಮೃದುವಾಗಿ ಹಿಡಿದೆಳೆಯುತ್ತಾ ಒಂದು ಕಲ್ಲಿನ ಬೆಂಚಿನೆಡೆಗೆ ಕರೆದ. ಆಗಷ್ಟೆ ಬಿದ್ದ ಸಣ್ಣ ಮಳೆಯಿಂದ ಕಲ್ಲು ಬೆಂಚು ಇನ್ನೂ ಸ್ವಲ್ಪ ಒದ್ದೆ ಇತ್ತು .. ಕೂತಾಗ ತಣ್ಣನೆಯೆ ಅನುಭವ.
"ಏನು ಯೋಚನೆ ಮಾಡ್ತಾ ಇದಿಯಾ? ನಿನಗೆ ಈ ಮದುವೆ ಇಷ್ಟ ಇರಲಿಲ್ಲವೇ?"
ಇದ್ದಕ್ಕಿದ್ದಂತೆ ಅನಿರೀಕ್ಷಿತ ಪ್ರಶ್ನೆ ಅವನಿಂದ !
ತಾನು ಉತ್ತರಿಸಬೇಕೆ? ಸುಮ್ಮನಿರಬೇಕೆ? ಏನೂ ಹೇಳಲು ಮನಸ್ಸಾಗುತ್ತಿಲ್ಲ ! ಅವಳ ಮನಸ್ಸು ತಾನು ಹಿಂದಿನ ತಿಂಗಳು ತನ್ನ ಕಂಪನಿಯಲ್ಲಿ ನಡೆಸಿಕೊಟ್ಟ ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿತ್ತು. ಅದರಲ್ಲಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ಎಷ್ಟು ವಿಶ್ವಾಸದಿಂದ ನಗುನಗುತ್ತಾ ಉತ್ತರಿಸುತ್ತಿದ್ದೆ. ಈಗೇಕೆ ಆಗುತ್ತಿಲ್ಲ !! ಅವಳು ಉತ್ತರಿಸದೇ ಸುಮ್ಮನೇ ಉಳಿದಳು.
ಅವನೆ ಮುಂದುವರೆಸಿದ .."ನಿನಗೆ ಗೊತ್ತಾ ... ನಾನು ಕೂಡ ಇಂಥಹ ಮದುವೆಗೆ ತಯಾರಿರಲಿಲ್ಲ...."!!
"ಅಯ್ಯೋ ದೇವರೆ .. ಏನಿದು !! ಇದನ್ನು ಅವನೇ ಹೇಳುತ್ತಿದ್ದಾನಾ ಅಥವಾ ನಾನೇ ಯೋಚನೆ ಮಾಡುತ್ತಾ ಜೋರಾಗಿ ಹೇಳಿಬಿಟ್ಟೆನಾ" !! ಅವಳಿಗೇ ತಿಳಿಯಲಿಲ್ಲ.
"ಅವನ ಈ ಮಾತಿನ ಅರ್ಥ ಏನು, ಅವನಿಗೆ ನಾನು ಇಷ್ಟ ಇಲ್ಲವಾ, ಅವನು ಒತ್ತಾಯಪೂರ್ವಕವಾಗಿ ನನ್ನನ್ನು ಮದುವೆಯಾದನೆ ! ಅಥವಾ ನನ್ನ ಮನಸ್ಸಿನ ಯೋಚನೆ ನನ್ನ ಮುಖಭಾವದಿಂದ ಅವನಿಗೆ ತಿಳಿದು ಹೋಯಿತಾ !! "
ಅವನ ಮುಖವನ್ನೇ ನೋಡಿದಳು.
ಅವನು ಕಿರುನಗೆಯೊಂದಿಗೆ ಮುಂದುವರೆಸಿದ...
"ನಾನು ನನ್ನ ಹುಡುಗಿಯನ್ನು ನಾನೇ ಹುಡುಕಿಕೊಳ್ಳಬೇಕು ಅಂತ ಇದ್ದೆ.. ಮನಸ್ಸಿಗೆ ಒಪ್ಪುವಂತಹ ಹುಡುಗಿಯನ್ನು ನೋಡಿ ಪ್ರೀತಿ ಮಾಡಿ ನಾನು ಅವಳ ಜೊತೆ ಸುತ್ತಾಡಬೇಕು, ಅವಳಿಗೆ ಶಾಪಿಂಗ್ ಮಾಡಿಸಬೇಕು,ತಮಾಷೆ ಮಾಡಿ ನಗಬೇಕು, ಅವಳೊಂದಿಗೆ ವಾದ ಮಾಡಬೇಕು, ಸುಖ-ದುಃಖ ಹಂಚಿಕೊಳ್ಳಬೇಕು, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು, ಒಟ್ಟಿನಲ್ಲಿ ಅವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು.. ಆಮೇಲೆ ಅವಳನ್ನ ಮದುವೆಯಾಗಿ ಅವಳೊಂದಿಗೆ ಜೀವನ ಮಾಡಬೇಕು ಅಂತ ಆಸೆ ಪಟ್ಟಿದ್ದೆ. ಬೇರೆ ರೀತಿಯ ಮದುವೆ ಏನಿದ್ದರೂ ಎಲ್ಲಾ ಸುಮ್ಮನೆ ನಾಟಕದಂತೆ ಆಗುತ್ತದೆ ಅಂತ ನನ್ನ ಭಾವನೆ ಆಗಿತ್ತು. ನಾನು ಅದಕ್ಕೆ ತಯಾರಿರಲಿಲ್ಲ. ಆದರೆ ನನ್ನ ಕೆಲಸದ ಮೇಲಿನ ಪ್ರೀತಿಯಿಂದ ಅದರಲ್ಲೆ ಮುಳುಗಿಬಿಟ್ಟೆ. ನನಗೆ ನನ್ನ ಹುಡುಗಿಯನ್ನು ಹುಡುಕಿಕೊಳ್ಳಲು ಸಮಯವೇ ಸಿಗಲಿಲ್ಲ. ಅದರ ಬಗ್ಗೆ ಯೋಚನೆ ಮಾಡಲೂ ಮನಸ್ಸು ಬರದೆ ಹೋಯಿತು.ಆದರೆ ಮದುವೆಯ ವಯಸ್ಸು ಆಗುತ್ತಿದ್ದಂತೆ ಮನೆಯಲ್ಲಿ ಹೆಣ್ಣು ಹುಡುಕಲು ಪ್ರಾರಂಭಿಸಿದಾಗಲೇ ನಾನು ಎಚ್ಚೆತ್ತು ಕೊಂಡಿದ್ದು. ಆದರೆ ಆಗ ಸಮಯ ಮಿಂಚಿ ಹೋಗಿತ್ತು. ಕೊನೆಗೆ ನಮ್ಮ ಅಪ್ಪ ಅಮ್ಮ ಯಾರನ್ನು ಹುಡುಕಿತ್ತಾರೋ ಅವಳನ್ನೇ ಮದುವೆಯಾಗುವುದು ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದನ್ನು ಬಿಟ್ಟು ಬೇರೇ ಏನನ್ನೂ ಮಾಡಲು ನನ್ನಿಂದ ಸಾದ್ಯವಿರಲಿಲ್ಲ. ಮದುವೆಗೆ ಮುಂಚೆ ನಮಗೆ ಮಾತನಾಡಲು ಅವಕಾಶ ಕೊಟ್ಟಾಗ ನಿನಗೆ ನನ್ನೊಂದಿಗೆ ಮಾತಾಡುವುದು, ಸಮಯ ಕಳೆಯುವುದು ಕಷ್ಟ, ಕಿರಿಕಿಯಾಗುತ್ತಿದ್ದುದು ನನಗೆ ಅರ್ಥ ಆಗುತ್ತಿತ್ತು. ಒಟ್ಟಿನಲ್ಲಿ ಈ ರೀತಿ ಅಪರಿಚಿತನೊಂದಿಗೆ ಇದ್ದಕ್ಕಿದ್ದಂತೆ ಬದುಕನ್ನು ಹೊಂದಿಸಿಕೊಳ್ಳಲು ನಿನಗೆ ಇಷ್ಟವಿಲ್ಲದಿರುವುದು ತಿಳಿಯುತ್ತಿತ್ತು. ಏಕೆಂದರೆ ನನಗೂ ಅದೇ ರೀತಿ ಆಗುತ್ತಿತ್ತು. ನಾವಿಬ್ಬರೂ ಅಪರಿಚಿತರು. ಆದರೆ ಏನು ಮಾಡುವುದು , ನನಗೆ ನಿನ್ನನ್ನು ಸಾಕಷ್ಟು ಅರ್ಥ ಮಾಡಿಕೊಳ್ಳಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ನನ್ನ ಬಗ್ಗೆ ನಿನಗೆ ನಂಬಿಕೆ ಬರಿಸಲು, ನಿನಗೆ ನನ್ನ ಬಗ್ಗೆ ತಿಳಿಸಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ಎಲ್ಲವೂ ತರಾತುರಿಯಲ್ಲಿ ನಡೆದು ಹೋಯಿತು. ಆದರೆ ಈಗಲೂ ಕಾಲ ಮಿಂಚಿಲ್ಲ. ನನ್ನ ಮುಂದೆ ಇನ್ನೂ ಅಗಾಧವಾಗ ಜೀವನವಿದೆ. ಅದರಲ್ಲಿ ನಿನ್ನನ್ನು ಪ್ರೀತಿಸಲು, ನೋಡಿಕೊಳ್ಳಲು, ನಿನ್ನ ನಂಬಿಕೆಯಲ್ಲಿ ಬದುಕಲು ಬೇಕಾದಷ್ಟು ಸಮಯವಿದೆ. ನಾನು ಇದುವರೆಗೂ ಹುಡುಕುತ್ತಿದ್ದ ಹುಡುಗಿ ಯಾರೋ ಅಲ್ಲ. ಅದು ನೀನೆ ಅಂದು ಕೊಳ್ಳುತ್ತೇನೆ".

ಅವನು ಅವಳ ಕಣ್ಣುಗಳನ್ನೆ ಆಳವಾಗಿ ನೋಡುತ್ತಾ ಕೇಳಿದ.

" ಈಗ ಹೇಳು ನೀನು ನನ್ನನ್ನು ಪ್ರೀತಿಸ್ತೀಯಾ?"

ಅವಳ ಕಣ್ಣಿಂದ ನೀರ ಹನಿಯೊಂದು ಜಾರಿತು. ತನ್ನ ತಂದೆ-ತಾಯಿಗಳು ತನಗೆ ನಿಜವಾಗಿಯೂ 'ಯೋಗ್ಯ' ಹುಡುಗನನ್ನೇ ಹುಡುಗನನ್ನೆ ಹುಡುಕಿದ್ದಾರೆ ಅನ್ನಿಸಿತು. ಮನಸ್ಸಿನಲ್ಲಿಯೇ ಅಪ್ಪ-ಅಮ್ಮರಿಗೆ ನಮಸ್ಕಾರ ಮಾಡಿದಳು."ನನ್ನನ್ನು ಪ್ರೀತಿಸುತ್ತೀಯಾ" ಎಂದು ಅವನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯ ಕಾಣಿಸಲಿಲ್ಲ. ಇಬ್ಬರಿಗೂ ಅದರ ಉತ್ತರ ತಿಳಿದಿತ್ತು.

ಅವನು ಅವಳ ಹೆಗಲ ಮೆಲೆ ಕೈ ಹಾಕಿ, ಅವಳು ಅವನ ಭುಜಕ್ಕೊರಗಿ ನಡೆಯುತ್ತಿದ್ದರೆ ಮುಳುಗುತ್ತಿದ್ದ ಸೂರ್ಯ ಅಲ್ಲಿ ಪ್ರಾರಂಭಗೊಂಡ ಹೊಸ ಬದುಕೊಂದಕ್ಕೆ ಸಾಕ್ಷಿಯಾಗಿದ್ದ. ಹಿತವಾದ ತಂಗಾಳಿ ಬೀಸುತ್ತಾ ಮರಗಿಡಗಳು ತೂಗಾಡುತ್ತಾ ಪ್ರಕೃತಿಮಾತೆ ಹೊಸ ದಾಂಪತ್ಯಕ್ಕೆ ಎದೆತುಂಬಿ ಹಾರೈಸಿದ್ದಳು.

Monday, July 30, 2007

ಹೀಗೊಂದು ಸಂಜೆ...

ಪಾರ್ಕಿನ ಗೇಟಿಗೆ ಸಮೀಪದಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅವಳ ತೊಡೆಯ ಮೇಲೆ ಅವನ ಕೈ, ಅವನ ಕೈ ಮೇಲೆ ಅವಳ ಕೈ. ಅವಳ ಬೆರಳುಗಳು ಅವನ ಬೆರಳುಗಳೊಡನೆ ಆಟವಾಡುತ್ತಿದ್ದವು. ಕಳೆದ ಅರ್ಧ ಗಂಟೆಯಿಂದ ಅವರಿಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ. ಬರಿ ಬೆರಳುಗಳೊಂದಿಗೆ ಬೆರಳಾಟ, ಮನದಲ್ಲಿ ಭಾವನೆಗಳ ಹೊಯ್ದಾಟ, ಮನದಲ್ಲಿ ಮೂಡಿದ ಭಾವನೆಗಳು ಮಾತುಗಳಾಗುತಿಲ್ಲ. ಇಬ್ಬರ ಕಣ್ಣು-ಕಣ್ಣುಗಳು ಸಂಧಿಸಿದವು. ಇಬ್ಬರಿಗೂ ಭಾವನೆಗಳ ಪ್ರಾವಾಹದಲ್ಲಿ ತೆಲಿ ಹೋದಂತಾಯಿತು. ಮೊದಲು ಹತೋಟಿಗೆ ಬಂದವಳು ಅವಳೇ, ಅವನ ಕೈಯನೊಮ್ಮೆ ಅದುಮಿ, ಸಮಾಧಾನ ಮಾಡಿಕೊಳ್ಳೆಂದು ಕಣ್ಣಲ್ಲೇ ಹೇಳಿದಳು. ಅವನಿಗಿನ್ನೂ ಕಣ್ಣೀರು ತಡೆದಿಟ್ಟುಕೊಳ್ಳಲಾಗಲಿಲ್ಲ. ಕಣ್ಣೀರ ಹನಿ ಕೆನ್ನೆಯಿಂದಿಳಿದು ಕೈ ಮೇಲೆ ಬಿದ್ದಾಗಲೆ ಅವನಿಗೆ ಗೊತ್ತಾಗಿದ್ದು ತಟ್ಟನೆ ಕಣ್ಣೀರನ್ಣೊರೆಸಿಕೊಂಡು, "ತುಂಬಾ ಕಣ್ಣುನೋವೂ, ಇತ್ತಿಚಿಗೆ ಕಣ್ಣಿಂದ ನೀರು ತನ್ನಿಂದ ತಾನೇ ಹಾಗೆ ಬರುತ್ತವೆ" ಅಂದ ಅವರಿಬ್ಬರ ನಡುವೆ ಸಂಭಾಷಣೆ ಹೀಗೆ ಶುರುವಾಗಿತ್ತು

ಅವಳು ತನ್ನ ಕಣ್ಣಂಚಿಗೆ ಬಂದು ನಿಂತಿದ್ದ ಕಣ್ಣೀರ ಹನಿಗಳನ್ನು ತನ್ನ ಪುಟ್ಟ ಹಂಸಬಿಳುಪಿನ ಕೈವಸ್ತ್ರದಿಂದ ಹತ್ತಿಕ್ಕಿಕೊಂಡು, ಕಣ್ಣಲ್ಲಿ ಕಸ ಬಿದ್ದಿದೆಯೇನೋ ಎಂಬಂತೆ ಒರೆಸಿಕೊಂಡಳು, "ರಾಕ್ಷಸ ಕಣೋ ನೀನು, ಕೆಲಸಕ್ಕೆ ಅಂತ ಕುಳಿತರೆ ಏಳೋದೇ ಇಲ್ಲ, ಯಾವುದಾದರೂ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಮುಗಿಸಿ ಎಲೋ ವರೆಗೂ ಕಣ್ಣಿನ ರೆಪ್ಪೆಗಳನ್ನು ಬಡಿಯೋದಿಲ್ಲ. ಇವಾಗಲಾದ್ರೂ ಸರಿಯಾಗಿ ನಿದ್ರೆ ಮಾಡ್ತೀಯೋ ಇಲ್ವೋ, ಗೂಬೆ ಜಾತಿಯೋನೇ", ಎನ್ನುತ್ತಾ ಎದೆಯಾಳದಿಂದ ಬಾರದ ನಗೆಯನ್ನು ತುಟಿಗೆ ತರುವ ಯತ್ನ ಮಾಡಿದಳು. ಅವನು ಕೂಡ ಅದೇ ಪ್ರಯತ್ನದಲ್ಲಿ, "ನನ್ನ ಕಣ್ಣಿಗೆ ನಂಬರ ಬರದಿದ್ದರು, ನನ್ನ ಸುತ್ತಳತೆ ಸಾಕಷ್ಟು ಬೆಳದಿದೆ, ಅದಕ್ಕೆ ತಕ್ಕಂತೆ ನಿನ್ನ ಕನ್ನಡಕದ ನಂಬರ್ ಏರಿದೆ" ಎಂದ.

ಇಬ್ಬರು ಬಾರದ ನಗೆಯನ್ನು ತುಟಿಗೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕಾಲೇಜಿನಿಂದ ನೇರವಾಗಿ ಪಾರ್ಕಿಗೆ ಬಂದ ಒಂದು ಜೋಡಿ ಅವರ ಪಕ್ಕದಲ್ಲಿಯೇ ಬೈಕ ನಿಲ್ಲಿಸಿ. ಕೈ-ಕೈ ಹಿಡಿದು ಪಾರ್ಕಿನ ಗಿಡ-ಮರಗಳ ನಡುವೆ ಮರೆಯಾದರು. ಅದನ್ನು ಕಂಡ ಅವರಿಬ್ಬರ ಕಣ್ಣುಗಳಲ್ಲಿ ಹೇಳಲಾಗದ ಮಂದಹಾಸವೊಂದು ಮೀನುಗಿ, ಮೂಡಿದಷ್ಟೇ ವೇಗವಾಗಿ ಕರಗಿಹೋಯಿತು. ಇಲ್ಲಿಯವರೆಗೂ ಕೂತಿದ್ದ ಕಲ್ಲು ಬೆಂಚಿನ ಮೇಲೆ ಈಗ ಕುಳಿತುಕೊಳ್ಳಲಾಗದೇ ಚಡಪಡಿಸಿದರು. ಅದು ಇಬ್ಬರಿಗೂ ಅರ್ಥವಾಗಿ ಅಲ್ಲಿಂದೆದ್ದು ಪಾರ್ಕಿನ ಗೆಟನ್ನು ದಾಟಿ ರಸ್ತೆಗೆ ಬಂದರು. ಕಣ್ಣಲ್ಲೇ ನೂರಾರು ಮಾತು ಮಾತನಾಡಿ, ಕಣ್ಣಲ್ಲೇ ವಿದಾಯ ಹೇಳಿ ಅವನು ಎಡಕ್ಕೂ ಮತ್ತು ಅವಳು ಬಲಕ್ಕೂ ತಿರುಗಿ ಹೋರಟರು.

ಹತ್ತು ಹೆಜ್ಜೆ ನೆಡದ ಅವಳು ಅಲ್ಲಿಯೇ ಹಿಂದೆ ತಿರುಗಿ ನಿಂತಳು. ಅವನು ಹಿಂತಿರುಗಿ ನೋಡುವನೇನೋ ಎಂದು ಕಾದಳು. ಅವನು ತನ್ನಷ್ಟಕ್ಕೆ ತಾನೇ ಏನೋ ಮಾತನಾಡುತ್ತಾ ಹಾಗೆ ಹೊರಟಿದ್ದ. ಅವಳು ಸ್ವಲ್ಪ ಹೊತ್ತು ಕಾಯ್ದು, "ಇವತ್ತಿಗೂ ಇವನು ಏನು ಬದಲಾಗೆ ಇಲ್ಲ" ಎಂದುಕೊಳ್ಳುತ್ತಾ ನಿಟ್ಟುಸಿರು ಬಿಟ್ಟಳು.

ಅವನಿಗೆ ಹೋಗುತ್ತಾ ಒಮ್ಮೆ ಹಿಂತಿರುಗಿ ನೋಡಬೇಕೆನಿಸಿತು......ಮತ್ತೊಮ್ಮೆ ಅವಳ ಶಾಂತ ಸರೋವರಕ್ಕೆ ಕಲ್ಲೇಸೆದು ಕದಡುವ ಪ್ರಯತ್ನ ಬೇಡವೆಂದು ತನ್ನ ಮನಸ್ಸಿಗೆ ಬುದ್ಡಿ ಹೇಳುತ್ತಾ, ಒಮ್ಮೆ ಬೈಯುತ್ತಾ, ಮತ್ತೊಮ್ಮೆ ರಮಿಸುತ್ತಾ ಆ ಅಜ್ಜನು ಹಾಗೆಯೇ ಕಾಲೇಳೆಯುತ್ತಾ ಮುನ್ನೇಡದ. ಅಲ್ಲಿಯೇ ನಿಂತಿದ್ದ ಅಜ್ಜಿ ಮತ್ತೊಮ್ಮೆ ತನ್ನ ಹಂಸಬಿಳುಪಿನ ಕೈವಸ್ತ್ರವನ್ನು ಮುಖಕ್ಕೆ ಹತ್ತಿರ ತಂದಳು.


- ಈರಣ್ಣ ಶೆಟ್ಟರ

ಹೊಸ ಅಂಗಿ

ನಾನು ೧೯೭೭ರಲ್ಲಿ ಹಿರಿಯೂರಿನಲ್ಲಿ ಸರ್ಕಾರಿ ಬಾಲಕರ ಕಿರಿಯರ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾಗ ಈ ಘಟನೆ ನಡೆಯಿತು. ನಮ್ಮ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳಲ್ಲಿ ಬಹುತೇಕರು ಆರ್ಥಿಕವಾಗಿ ತೀರಾ ಹಿಂದುಳಿದ ಹಿನ್ನೆಲೆಯಿಂದ ಬಂದವರಾದ್ದರಿಮ್ದ ಎಷ್ಟೋ ಸಮಯ ಬಹಳಷ್ಟು ಜನರಿಗೆ ಬಟ್ಟೆಬರೆ ಚೆನ್ನಾಗಿರುತ್ತಿರಲಿಲ್ಲ. ನನ್ನ ಮನೆಗೆ ಹತ್ತಿರವೇ ಮನೆ ಇದ್ದ ಸಹಪಾಠಿಯೊಬ್ಬ ಪ್ರತಿದಿನ ಶಾಲೆಯಿಂದ ಹಿತಿರುಗುವಾಗ ನನ್ನನ್ನು ಬಹಳಷ್ಟು ಬಲವಂತ ಮಾಡಿ ಇಡೀ ಶಾಲೆಯಲ್ಲಿ ನನ್ನ ಬಳಿ ಮಾತ್ರ ಇದ್ದಂತಹ ಅಲ್ಯೂಮೀನಿಯಂ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದ. ಅವನ ಚೀಲವನ್ನು ನಾನು ಹಿಡಿದುಕೊಳ್ಳಬೇಕಾಗುತ್ತಿತ್ತು. ತಾನು ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದೇನೆ ಎನ್ನುವುದೇ ಅವನಿಗೆ ಅತ್ಯಂತ ಸಂತಸದ ವಿಷಯವಾಗಿತ್ತು!

ನಾನೊಂದು ದಿನ ಹೊಸ ಬಟ್ಟೆಯನ್ನು ಧರಿಸಿಕೊಂಡು ಶಾಲೆಗೆ ಹೋದೆ. ಗಂಟೆ ಬಾರಿಸಲು ಸಮಯ ಇನ್ನೂ ಬಹಳಷ್ಟಿತ್ತು. ವಿದ್ಯಾರ್ಥಿಗಳು ಹೆಚ್ಚು ಬಂದಿರಲಿಲ್ಲ. ಅಂದು ಹೊಸ ಬಟ್ಟೆ ಧರಿಸಿದ ಹುರುಪಿನಲ್ಲಿ ಶಾಲೆಗೆ ನಾನು ಬಹಳ ಮುಂಚೆಯೇ ಹೋಗಿ ಬಿಟ್ಟಿದ್ದೆ! ಶಾಲೆಯ ಹಿಂದೆ ಶಾಲೆಗೆ ಸೇರಿದ್ದ ಸಣ್ಣದೊಂದು ಕೈತೋಟವಿತ್ತು ಸುಮ್ಮನೇ ಅಲ್ಲಿಗೆ ಹೋದೆ. ಅಲ್ಲಿ ನನ್ನ ಟ್ರಂಕ್ ಗೆಳೆಯ ನೇರಳೇ ಹಣ್ಣು ತಿನ್ನುತ್ತಾ ಕುಳಿತಿದ್ದ. ನನ್ನನ್ನು ನೋಡಿ ನನಗೂ‌ ನೇರಳೇ ಹಣ್ಣನ್ನು ಕೊಟ್ಟ. ಆಗ ಸಹಜವಾಗಿ ಅವನ ದೃಷ್ಟಿ ನಾನು ಧರಿಸಿದ ಅಂಗಿಯ ಮೇಲೆ ಹರಿಯಿತು. ಅದರ ಬಣ್ಣ ಅವನಿಗೆ ತುಂಬಾ ಮೆಚ್ಚುಗೆಯಾಯಿತು. ಒಂದೇ ಒಂದು ಕ್ಷಣ ನಿನ್ನ ಅಂಗಿಯನ್ನು ಹಾಕಿಕೊಂಡು ನೋಡಿ ಕೊಡುತ್ತೇನೆ ಬಿಚ್ಚಿಕೊಡು ಎಂದು ಅವನು ಹೇಳಿದ್ದಕ್ಕೆ ಬಿಚ್ಚಿಕೊಟ್ಟೆ. ನನ್ನ ಅಂಗಿಯನ್ನು ಅವನು ಧರಿಸಿದ ಕೂಡಲೇ ತನ್ನ ಕೈ ಚೀಲವನ್ನು ಬಿಸುಟು ನಾಗಾಲೋಟದಿಂದ ಓಡಿಹೋದ. ನಾನು ಕೂಗಿದರೂ ನಿಲ್ಲಲಿಲ್ಲ! ನಾನು ಬರಿಯ ಚೆಡ್ಡಿ ಹಾಗೂ ಬನಿಯನ್ನಿನಲ್ಲಿ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ನಿಂತಿದ್ದೆ (ಈಗ ಇದನ್ನು ನೆನಪಿಸಿಕೊಂಡಾಗಲೆಲ್ಲಾ ನಗು ಬರುತ್ತದೆ) ನನಗೆ ಅವನ ಮೇಲೆ ಕೋಪ ಬಂದಿತು. ನನ್ನ ಟ್ರಂಕ್ ನೊಂದಿಗೆ ಅವನು ಬಿಸುಟಿದ್ದ ಚೀಲವನ್ನೂ ಹಿಡಿದುಕೊಂಡು ಅವನ ಮನೆಯ ಕಡೆ ನಡೆಯತೊಡಗಿದೆ. ನಾನು ಅರ್ಧ ದಾರಿಯೂ ಸಹ ಕ್ರಮಿಸುವ ಮೊದಲೇ, ಅವನು ಯಾವ ವೇಗದಲ್ಲಿ ಓಡಿ ಹೋಗಿದ್ದನೋ ಅದೇ ವೇಗದಲ್ಲಿ ಓಡಿ ಬರುತ್ತಿದ್ದ! ನನ್ನನ್ನು ಕಂಡಕೂಡಲೇ ನಿಂತು ಏದುಸಿರು ಬಿಡುತ್ತಾ 'ಗುರು, ನಿನ್ನ ಅಂಗಿಯನ್ನು ನಮ್ಮಮ್ಮನಿಗೆ ತೋರಿಸಲು ಹೋಗಿದ್ದೆ ಚೆನ್ನಾಗಿದೆ ಅಂದ್ರು ನನಗೂ‌ ಹಬ್ಬಕ್ಕೆ ಇಂಥದನ್ನೇ ಕೊಡುಸ್ತಾರಂತೆ' ಎಂದು ಸಂತಸದಿಂದ ಹೇಳಿದ.

ಅಂದು ಚಿಕ್ಕ ವಯಸ್ಸಿನ ನನಗೆ ಅವನ ಸಂತಸ ಅರ್ಥ ಮಾಡಿಕೊಳ್ಳುವ ಶಕ್ತಿ ಇರಲಿಲ್ಲ. ಬನಿಯನ್ನಿನಲ್ಲಿ ನಿಲ್ಲಿಸಿದನಲ್ಲ ಎನ್ನುವ ಕೋಪದಿಂದ ಅವನನ್ನು ಹೀನಾಮಾನ ನಿಂದಿಸಿದೆ. ನಾನು ನಿಂದಿಸಿದರೂ ಹೊಸ ಅಂಗಿ ಧರಿಸದೆ ಹೊಸ ಅಂಗಿ ಬರುತ್ತದೆಂಬ ಸಂತಸ ಅವನಲ್ಲಿ ಕಡಿಮೆಯಾಗಲಿಲ್ಲ!

ಇಂದು ಅವನು ಎಲ್ಲಿದ್ದಾನೋ ನನಗೆ ತಿಳಿದಿಲ್ಲ, ತೀರಾ ದುರ್ಬಲವಾದ ಆರ್ಥಿಕ ನೆಲೆಗಟ್ಟಿನಿಂಡ ಬಂದಿದ್ದ ಅವನಿಗೆ ನನ್ನ ಹೊಸ ಅಂಗಿಯನ್ನು ಧರಿಸಿ ಪಡೆದ ಆನಂದದ ಕ್ಷಣ ನನ್ನಲ್ಲಿ ಶಾಶ್ವತವಾಗಿ ನೆಲೆಯೂರಿದೆ.

ಈ ಅನುಭವ ಕಥನ ೨೦೦೧, ಜನವರಿಯ 'ಕಸ್ತೂರಿ' ಮಾಸಿಕದಲ್ಲಿ 'ಇದುವೆ ಜೀವ... ಇದು ಜೀವನ' ಎಂಬ ಕಾಲಂನಲ್ಲಿ ಪ್ರಕಟವಾಗಿತ್ತು
- ಟಿ ಎಸ್ ಗುರುರಾಜ

Monday, July 23, 2007

ಭೂಮಿ ತೂಕದವಳು……………!!!!


ಇದ್ದಿದ್ದೆ ಒಂದು ಚಿಕ್ಕ ಗುಡಿಸಲು, ಗುಡಿಸಿಲ ಮೇಲೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಇದೆಯೋ ಇಲ್ಲವೋ ಅನ್ನುವಷ್ಟು ಹುಲ್ಲು.ಈಗಲೋ ಆಗಲೋ ಧರೆಗುರುಳಲೂ ಸರತಿ ಸಾಲಿನಲ್ಲಿ ನಿಂತಿರುವ ಆ ಮನೆಯ ಬಿರುಕು ಬಿಟ್ಟ ಗೋಡೆಗಳು,ರಾತ್ರಿ ಮಳೆ ಬಂತೆಂದರೆ ಮನೆಯೊಳಗೆ ಈಜಾಡಬಹುದಾದಷ್ಟು ನೀರು ಮನೆಯ ಒಳಗೆ ಜಮಾವಣೆಯಾಗುತ್ತಿತ್ತು…ಇದ್ದ 3 ಜನಮಕ್ಕಳನ್ನು ರಾತ್ರಿ ಒಂದು ಬದಿಗೆ ಕೂರಿಸಿ ತಾನು ಮನೆಯ ಒಳಗಿದ್ದ ಅಷ್ಟೂ ನೀರನ್ನ ಹೊರಗೆ ಹಾಕಿ ಮಕ್ಕಳನ್ನೆಲ್ಲ ಹೇಗೋ ಮನೆಯ ಒಳಗೆ ಮಲಗಿಸಿ ತಾನು ತೂಕಡಿಸುತ್ತ ಮನೆಯ ಹೊರಗೆ ಕುಳಿತರೇ…”ಯಾವ ಮಿಂಡ ಬರ್ತಾನೆ ಅಂತ ಕಾಯ್ತ ಇದ್ದೀಯೇ ಹಾದರಗಿತ್ತೀ” ಅಂತಲೇ ತೂರಾಡುತ್ತ ಬರುವ ಕುಡುಕ ಗಂಡನ ಬೈಗುಳ ಕೇಳಿದೊಡನೆ ಕಣ್ಣೀರಾಗುವ ತಾಯಿ ಗಂಡನ ಬೈಗುಳಗಳಿಗೆ ಸೊಪ್ಪು ಹಾಕದೆ ಕುಡಿದು ತೂರಾಡುತ್ತಿದ್ದ ಗಂಡನನ್ನ ನಿಧಾನವಾಗಿ ಬೀಳದಂತೆ ಮನೆಯ ಒಳಕ್ಕೆ ಕರೆದುಕೊಂಡು ಹೋಗಿ ಕೂರಿಸಿ ಉಣ್ಣಲಿಕ್ಕೆ ಬಡಿಸಿದರೇ..”ಯಾಕೆ ಇಷ್ಟೇ ಅನ್ನ ಇದೆ? ಎಲ್ಲ ನಿನ್ ಮಿಂಡ ತಿಂದು ಹೋಗಿ ಬಿಟ್ನ? ಅಂತ ಹೇಳಿ ಬೆಂಕಿಕೊಳ್ಳಿಯನ್ನ ತೆಗೆದು ಗುಬ್ಬಿ ಗಾತ್ರದ ತಾಯಿಗೆ ಬಡಿದನೆಂದರೇ ತಾಯಿ ಜೋರಗಿ ಕೂಗುವಂತೆಯೂ ಇಲ್ಲ .ಅಕ್ಕ ಪಕ್ಕದ ಮನೆಯವರಿಗೇ ಗೊತ್ತಾದರೇ?..” ಇಲ್ಲ ಕಣ್ರಿ ಇದ್ದಿದ್ದೆ ಪಾವು ಅಕ್ಕಿ ಅದನ್ನೆ ಮಾಡಿದ್ದು ಅಷ್ಟೆ” ಅಂತ ತಾಯಿ ಕಣ್ಣೀರಾದರೇ ಅದ್ಯವುದರ ಪರಿವೇ ಇಲ್ಲದಂತೆ ದನಕ್ಕೆ ಬಡಿದ ಹಾಗೆ ಬಡಿದು ಅಂತ ಮಳೆಗಾಲದ ಚಳಿಮಳೆಯಲ್ಲಿ ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ತಾಯಿಯನ್ನ. ಮುದುರಿ ಮಲಗಿರುವ ಮಕ್ಕಳು ತುಟಿ ಕಚ್ಚಿ ಹಿಡಿಯ ಬೇಕಿತ್ತು ದುಃಖ… ಮಕ್ಕಳತ್ತರೇ ಮಕ್ಕಳಿಗೂ ಅದೇ ಗತಿ ಕೈಗೆ ಸಿಕ್ಕಿದನ್ನ ತೆಗೆದುಕೊಂಡು ಬಾರಿಸುತ್ತಿದ್ದ…ಆದರೂ ದೈರ್ಯ ಮಾಡಿ ಇದ್ದ ಒಬ್ಬ ಮಗ ” ಅಪ್ಪಾ ಅವ್ವಾಗೆ ಚಳಿ ಆಕೈತಿ ಒಳಕ್ಕೆ ಕರಿಲಾ ಅವ್ವನ್ನ?” ಅಂತ ಮೈ ನಡುಗುತ್ತ ಕೇಳಿದರೇ..” ಗೊತ್ತಲೆ ಸೂಳೆ ಮಗನೇ ನೀನು ನಿಮ್ಮವ್ವನ ಪರ ನೀನು ಹೊರಗೆ ಹೋಗಿ ಸಾಯಿ ನಿಮ್ಮವ್ವನ ಜೊತೆ” ಅಂತ ಹೇಳಿ ಮಗನನ್ನು ಅಂತ ಚಳಿಮಳೆಯಲ್ಲಿ ಹೊರಗೆ ಕಳುಹಿಸುತ್ತಿದ್ದ.. ಅಂತ ಚಳಿಮಳೆಯಲ್ಲಿ ಅಮ್ಮನಿಗೆ ಮಗ ಮಗನಿಗೆ ಅವ್ವ ಮಾತ್ರ ಸಮಧಾನ ಹೇಳಿ ಆ ಯಾತನಮಯ ರಾತ್ರಿಯನ್ನ ಕಳೆಯುತ್ತಿದ್ದರು…!ಅಂತ ಸಮಯದಲ್ಲಿ ಆ ದೇವರಾದವನು ಎಲ್ಲಿ ಹುಲ್ಲು ಮೆಯ್ಯುತ್ತಿದ್ದನೊ….

ಮಗಳೇ ಕಾಪೀ ಕೊಡು ಅಂತ ತನ್ನ ಮುದ್ದಿನ ಇಬ್ಬರೂ ಹೆಣ್ಣುಮಕ್ಕಳನ್ನ ಕೇಳುತ್ತಿದ್ದ ಬೆಳಗ್ಗೆ ಎದ್ದ ಕೂಡಲೇ.. ” ಹೋಗಪ್ಪ ನನಗೆ ಬೆಂಕಿ ಒಟ್ಟೋಕೆ ಬರಕಲ್ಲ ಕಾಪೀ ಮಾಡಾಕು ಬರಾಕಲ್ಲ ಅವ್ವನಿಗೆ ರಾತ್ರಿ ಹಂಗೆ ಹೊಡೆದು ಮನೆಯಿಂದ ಹೊರಗೆ ಕಳ್ಸಿದೆ, ನಾವ್ ಮಾಡಿಕೊಡಕಲ್ಲ ಹೋಗು ಅಂತ ಮುದ್ದಿನ ಹೆಣ್ಣು ಮಕ್ಕಳೂ ಹೇಳಿದರೇ” ತಲೆ ತಗ್ಗಿಸಿದ ಅಪ್ಪ ತಲೆ ಮೇಲೆತ್ತುತ್ತಿರಲಿಲ್ಲ .ಯಾವ ಮುಖವಿಟ್ಟಾದರೂ ತನ್ನಿಬ್ಬರು ಹೆಣ್ಣುಮಕ್ಕಳನ್ನ ನೋಡಿಯಾನು?..ತಗ್ಗಿಸಿದ ತಲೆ ತಗ್ಗಿಸಿಕೊಂಡೆ ಮತ್ತೆ ಮನೆಯಲ್ಲಿ ಅವ್ವ ಯಾರಿಗೂ ಕಾಣದಂತಹ ಛಹಾ ಡಬ್ಬಿಗಳಲ್ಲಿ ಮತ್ತೆ ಕಾರದ ಪುಡಿ ಡಬ್ಬಿಗಳಲ್ಲಿ ಅಡಗಿರಿಸುತ್ತಿದ್ದ ಚಿಲ್ರೆ ಕಾಸುಗಳನ್ನ ಸೇರಿಸಿ ತನ್ನ ಜೇಬಿಗಿಳಿಸಿಕೊಂಡು ಮನೆಯಿಂದ ಹೊರಕ್ಕೆ ಹೋದಮೇಲೆಯೇ ತನ್ನ ನೀಚ ತಲೆಯೆತ್ತುತ್ತಿದ್ದ.ಅದೇ ಚಿಲ್ಲರೇ ಕಾಸನ್ನ ಚೌಡಮ್ಮನ ಮನೆನಲ್ಲಿ ಎರೆಡು ಕ್ವಾಟರ್ ಸಾರಾಯಿ ಕುಡಿದುಕೊಂಡು ಬಂದು ತನ್ನ ಪೌರುಷವನ್ನ ಮತ್ತೆ ಮಕ್ಕಳ ಮುಂದೆ ತೋರಿಸುತ್ತಿದ್ದ… ” ಎಲ್ಲೆ ನಿಮ್ಮವ್ವ ರಾತ್ರಿ ಮನೆಯಿಂದ ಹೊರಗೆ ಹೋದವಳು ಇನ್ನು ಬಂದಿಲ್ಲವಲ್ರೆ? ಯಾರ ಜೊತೆಗೆ ಹೋದ್ಲು ” ಅಂತ ಕೇಳಿದರೇ… ” ಅವ್ವ ಸಾವಕಾರ್ ಗದ್ದೆ ಗೆ ಸಸಿ ಕೀಳಾಕೆ ಹೋದ್ಲು ಬೆಳಗ್ಗೆ ೫ ಗಂಟೆಗೆನೆ” ಅಂತ ಮಕ್ಕಳು ಹೇಳಿದ ಕೂಡಲೇ ಸಾವಕಾರ್ ಗದ್ದೆಗೆ ತೂರಾಡುತ್ತ ಹೋಗೇ ಬಿಡುತ್ತಿದ್ದ..ಅಲ್ಲಿ ಆ ಚಳಿಮಳೆಯಲ್ಲಿ ರಾತ್ರಿ ಪೂರ ನಿದ್ದೆಗೆಟ್ಟು ನಡಬಗ್ಗಿಸಿ ಸಸಿ ಕೀಳುತ್ತಿದ್ದವಳನ್ನ ಹಾಗೆ ಕುರಿಯನ್ನ ಎಳೆದುತರುವ ಹಾಗೆ ಗದ್ದೆಯಿಂದ ಹೊರತಂದು ಬಾರಿಸುತ್ತಿದ್ದ “ಒಂದು ಲೋಟ ಟೀ ಮಾಡಿಕೋಡಾಕೆ ಆಗಲ್ಲ ನಿಂಗೆ ನಿನ್ನ ಚರ್ಮ ಸುಲಿತೀನಿ ಹಾದರಗಿತ್ತೀ” ಅಂತ ಕೂಗಾಡುತ್ತಿದ್ದ…” ರೀ ಇನ್ನು ಸ್ವಲ್ಪ ಸಸಿ ಕಿತ್ತು ಬರ್ತೀನಿ ಮಕ್ಕಳ ಸ್ಕೂಲ್ ಪೀಜಿಗೆ ಆಕೈತಿ” ಹೋಗ್ರಿ ಮನಿಗೇ ಅಂತ ಕೇಳಿಕೊಂಡರೂ ಬಿಡುತ್ತಿರಲಿಲ್ಲ..ಗೌಡರ ಗದ್ದೆಯಿಂದ ಹೊಡೆಯುತ್ತ ಬರುತ್ತಿದ್ದವನು ಮನೆತನಕ ಬಂದರೂ ಬಿಡುತ್ತಿರಲಿಲ್ಲ.. ಊರಿನ ತನ್ನ ವಾರಿಗೆಯ ಹೆಂಗಸರ ಮುಂದೆ ತನಗಾಗುತ್ತಿದ್ದ ಅವಮಾನಕ್ಕೆ ಒಂದೊಂದು ಸಲ ಕುಸಿದು ಬೀಳುತ್ತಿದ್ದಳು…

ಒಂದೇ ಚಿಂತೆ ತನ್ನ ನೆರೆಹೊರೆಯವರೆಲ್ಲ ಗಂಡ ಹೆಂಡತಿ ಮಕ್ಕಳೊಡನೆ ಚೆನ್ನಾಗಿರಬೇಕಾದರೆ ನನಗ್ಯಾಕಪ್ಪ ಇಂತಾ ಹಿಂಸೆ ಅಂತ ದಿನಾ ಕೊರಗುತ್ತಾ ಇದ್ಲು. ತನ್ನೊಳಗೆ ಎಲ್ಲಾ ನೋವ ನುಂಗಿಕೊಂಡಿರುತ್ತಿದ್ದಳೇ ವಿನಹಾ ಅಪ್ಪಿ ತಪ್ಪಿ ಕೂಡ ನೆರೆಹೊರೆಯವರಲ್ಲಿ ತನ್ನ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ.ಕೂಲಿ ನಾಲಿ ಮಾಡಿ ಅಷ್ಟಿಷ್ಟು ಉಳಿದ ಹಣದಲ್ಲಿ ಮನೆಗೆ ಒಂದಿಷ್ಟು ಮಣ್ಣಿನ ಗಡಿಗೆಗಳನ್ನ ಶೇಕರಿಸಿಟ್ಟುಕೊಂಡರೇ ಕುಡಿದಾಗ ಅದರ ಮೇಲು ಅವನ ಕಣ್ಣು ಬೀಳುತ್ತಿದ್ದು..” ಮಗನೇ ಬಾರಲಾ ಇಲ್ಲಿ ಒಡೆದ್ ಹಾಕು ಆ ಗಡಿಗೇನ..ಯಾಕ್ ಬೇಕು ಈ ಚಿಕ್ ಮನೆಗೆ ಅಷ್ಟೋಂದು ಗಡಿಗೆಗಳು ಒಡೆದ್ ಹಾಕ್ಲ ” ಅಂತ ತನ್ನ ಮಗನಿಗೆ ಹೇಳಿದರೇ ಮಗ ಆದವನೂ ಹೇಗಾದರೂ ಒಡೆದಾನು? ” ಇಲ್ಲ ನಾನ್ ಒಡಿಯಾದಿಲ್ಲ ಅಂತ ಹೇಳಿದ ಕೂಡಲೇ ಅಲ್ಲಿದ್ದ ಮಣ್ಣಿನ ಗಡಿಗೆಯನ್ನ ಮಗನ ಮುಖಕ್ಕೆ ಬೀಸುತ್ತಿದ್ದ. ಹೀಗೆ ಮಾಡುತ್ತಿದ್ದುದ್ದರಿಂದಲೇ ಕೆಲವೊಂದು ಸಲ ಮಗ ಅಪ್ಪನ ಹೆದರಿಕೆಗೆ ಮಣಿದು ಅವ್ವಾ ಪ್ರೀತಿಯಿಂದ ಕೂಡಿಟ್ಟ ಮಣ್ಣಿನ ಗಡೀಗೆಗಳನ್ನ ನೋವಿನಿಂದ ಒಡೆದುಹಾಕುತ್ತಿದ್ದುದೂ ಇತ್ತು. ಒಂದೊಂದೆ ಮಣ್ಣಿನ ಗಡೀಗೆಗಳನ್ನ ಒಡೆದು ಹಾಕುತ್ತಿದ್ದರೆ ಅವ್ವ ಮಾತ್ರ ಮೂಲೆಯಲ್ಲಿ ಕುಳಿತು ಕಣ್ಣೀರಾಗುತ್ತಿದ್ದಳು. ಅಷ್ಟು ಮಣ್ಣಿನ ಗಡಿಗೆಗಳನ್ನ ಕೂಡಿ ಹಾಕಲಿಕ್ಕೆ ಅವಳು ಪಟ್ಟ ಕಷ್ಟವನ್ನ ನೆನೆಸಿಕೊಂಡರೆ ಎಂತವನಿಗಾದರೂ ಕರುಳು ನೋಯದೇ ಇರುವುದಿಲ್ಲ…

ಅದೆಷ್ಟು ಸಲ ಮನೆಯಿಂದ ನಡುರಾತ್ರಿ ಮಳೆಯಲ್ಲಿ ತೋಯುತ್ತ ನಿದ್ರೆ ಬಾರದ ರಾತ್ರಿಗಳನ್ನ ಕಳೆದಿದ್ದಾಳೋ ದೇವರಿಗೇ ಗೊತ್ತು… ಮನೆಯ ಗೋಡೆಗೆ ಹೊಂದಿಕೊಂಡಂತೆ ಇರುವ ಸದಾ ಕಾಲ ನೀರಿರುವ ಬಾವಿ. ಮನೆಯಿಂದ ಹೊರಗೆ ಹಾಕಿದ ಕೂಡಲೇ ಹೋಗಿ ಬಾವಿ ಕಟ್ಟೆಯ ಮೇಲೆ ಕೂರುತ್ತಿದ್ದಳು. ಮನಸ್ಸು ಮಾಡಿದ್ದರೇ ಯಾವತ್ತೋ ಒಂದು ದಿನ ಅದೇ ಬಾವಿಯಲ್ಲಿ ಹೆಣವಾಗಿ ತೇಲಬಹುದಿತ್ತು ಅವಳು. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅವಳನ್ನ ಅಂತ ಅನಾಹುತ ಮಾಡಿಕೊಳ್ಳದಂತೆ ತಡೆದಿತ್ತು.” ಅಣ್ಣಾ..ಅವ್ವ ಬಾವಿ ಕಟ್ಟೆ ಮ್ಯಾಲೆ ಕುಂತಾಳೇನೋ ನೋಡೋ ನಂಗೆ ಹೆದ್ರಿಕೆ ಆಗ್ತ ಐತಿ” ಅಂತ ತಂಗಿ ಹೇಳಿದರೇ ಅಪ್ಪನಿಗೆ ಗೊತ್ತಗದಂತೆ ಮುರುಕು ಬಾಗಿಲನ್ನ ತಳ್ಳಿಕೊಂಡು ಅಣ್ಣ ಹೊರಗೇ ನೋಡಿದರೇ ಅದೇ ಭಾವಿಕಟ್ಟೆಯ ಮೇಲೆ ಅದೇ ಚಳಿಯಲ್ಲಿ ಮುದುರಿ ಕುಳಿತುಕೊಂಡಿರುತ್ತಿದ್ದ ಗುಬಿ ಗಾತ್ರದ ಅವ್ವನ ಸ್ಥಿತಿ ನೋಡಿ ಕಣ್ಣೀರಾಗುತ್ತಿದ್ದ. ಅಳುತ್ತಿದ್ದ ಮಗನನ್ನ ಸಮಾಧಾನ ಪಡಿಸಿ “ನೀನ್ ಹೋಗಿ ಮಲಿಕ್ಯ ಮಗನೇ ಬಾಳ ಹೊತ್ತಾತು” ಅಂತ ತಾನು ಹಾಗೆ ಮುದುರಿ ಕುಳಿತುಕೊಳ್ಳುತ್ತಿದ್ದಳು.ಬೆಳಗ್ಗೆ ತನ್ನ ಕುಡುಕ ಗಂಡನ ನಿಶೆ ಇಳಿದಿದ್ದನ್ನ ನೋಡಿಕೊಂಡೆ ಮಕ್ಕಳಿಗೆ ಇದ್ದ ಅರೆಪಾವು ಅಕ್ಕಿಯಲ್ಲೆ ಗಂಜಿ ಮಾಡಿ ಹಾಕಿ ಶಾಲೆಗೆ ಕಳಿಸಿ ತಾನು ಮಾತ್ರ ಏನೂ ತಿನ್ನದೇ ಕೂಲಿ ಕೆಲಸಕ್ಕೆ ಹೊರಡುತ್ತಿದ್ದಳು. ಹಾಗೆ ಹಸಿದು ಹೋಗುತ್ತಿತ್ತ ಅವ್ವನನ್ನ ಮಕ್ಕಳೂ ಯಾಕಮ್ಮ ನೀನು ಹಂಗೆ ಹೋಕೀಯಾ ಅಂತ ಕೇಳಿದ್ರೆ..” ಅಯ್ಯೋ ಅಲ್ಲಿ ಮಧ್ಯಾಹ್ನ ಊಟ ಕೋಡುತ್ತಾರೆ ಕಣ್ರೋ ನೀವ್ ಹೋಗಿ ಅಂತ ಸಮಾಧಾನ ಮಾಡುತ್ತಾ ಕಳಿಸುತ್ತಿದ್ದಳು..

ಅವಳಿಗೆ ಯಾವತ್ತೂ ಒಡವೆ ಬಗ್ಗೆ ವ್ಯಾಮೋಹವಿರಲಿಲ್ಲ.ಇದ್ದ ತಾಳಿಗೆ ೧೦ ಬಂಗಾರದ ಗುಂಡು ಮಾಡಿಸಿ ಹಾಕಿಕೊಳ್ಳಬೆಕೆಂಬ ಆಸೆ ಮೊದಮೊದಲು ಇತ್ತಾದರೂ ಕೊನೆಕೊನೆಗೆ ತಾಳಿಯ ಮೇಲೆ ಕೂಡ ಅಂತ ನಂಬಿಕೆ ಮತ್ತೆ ವ್ಯಾಮೋಹವಿಲ್ಲದೇ ಹೋಯಿತು. ಕಾರಣ? ಕುಡಿದುಕೊಂಡು ಬಂದ ಗಂಡ ತಾಳಿಯನ್ನ ವಾರಕ್ಕೆರೆಡು ಬಾರಿ ಹರಿದು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ.ಹರಿಯುವುದು ಮತ್ತೆ ಊರಿನ ಕೆಲವು ಹಿರಿಯರು???? ರಾಜಿ ಮಾಡಿಸಿ ಕಟ್ಟಿಸುವುದು ಮಾಮೂಲೆ ಆಗಿತ್ತು.ಒಂದೊಂದು ಸಲ ಸಿಟ್ಟಿಗೆದ್ದು ನನಗೆ ನನ್ ಮಕ್ಲು ಸಾಕು ಇಂತ ಗಂಡ ನಂಗೆ ಬೇಕಾಗಿಲ್ಲ. ಹಿಂಗೇ ಇದ್ರೆ ನನ್ ಮಕ್ಳನ್ನು ಸಾಯಿಸಿ ಬಿಡ್ತಾನೆ ಇವ್ನು.ನನ್ ಮಕ್ಳು ಕಟ್ಟಿಕೊಂಡು ನಾನ್ ಎಲ್ಲಾದ್ರು ಹೋಕೇನಿ ಅಂತ ಜೋರಾಗಿ ಅಳ್ತ ಇದ್ಲು. ಮತ್ತೆ ಎಲ್ಲವನ್ನು ಸರಿ ಮಾಡಿ?? ಊರ ಹಿರಿಯರೂ ಅವರವರ ಮನೆಗೆ ಹೊರಟರೇ,ಅಂತಾ ಅವ್ವನ ಎದೆಯಲ್ಲಿ ಕೂಡ ನಡುಕ..! ಇವತ್ತು ಮತ್ತೆ ಕುಡಿದು ಬಂದು ಮನೆ ಹೊರಗೆ ನಿಲ್ಲಿಸುತಾನೆಂದು. ತಾನಾದರೂ ಎಷ್ಟು ದಿನ ಹೀಗೆ ನಿದ್ದೆಗೆಟ್ಟು ಇಂತ ನರಕಯಾತನೆಯನ್ನು ಸಹಿಸಿಕೊಂಡಾಳು?..

“ಅಕ್ಕಾ ಅಕ್ಕಾ ನಿನ್ ಗಂಡ ಕುಡಿದು ಊರು ಹೊರಗಿನ ತೋಟದಲ್ಲ್ ಬಿದ್ದಾನೆ ಮೈಮೇಲೆ ಜ್ನಾನ ಇಲ್ಲ ಮಳೆ ಬ್ಯಾರೆ ರವಷ್ಟ್ ಜಾಸ್ತೀನೆ ಬರ್ತ ಐತೆ” ಅಂತ ಊರ ದನಗಳನ್ನ ಕಾಯುವ ಹುಡುಗಾ ಹೇಳಿದ್ದೆ ತಡ.” ಈ ಮನೆಹಾಳ್ರು ನನ್ ಮನೆ ನೆ ತೆಗುದ್ರಪ್ಪಾ ಇವರ್ ಮನೆ ಹಾಳಾಗ ಈ ಸಾರಾಯಿ ಕುಡ್ಸೋರ ಮನೆ ಕಾಯ್ವಾಗ” ಅಂತ ಅಷ್ಟು ಮಳೆನಲ್ಲಿ ಕಂಬಳಿ ಹಾಕೋಂಡು, ಅಂತ ಮಳೆನಲ್ಲಿ ಓಡಿಹೋಗಿದ್ದಳು ತಾಯಿ. ಅಲ್ಲಿ ಕುಡಿದು ಬಿದ್ದಿದ್ದ ತನ್ನ ಗಂಡಾನನ್ನ ನಿಧಾನವಾಗಿ ಎಬ್ಬಿಸಿ ತಂದು ಮನೆನಲ್ಲಿ ಮಲಗಿಸಿ ಮತ್ತೆ ಬಯ್ಯೋಕೆ ಶುರು ಮಾಡ್ತ ಇದ್ಲು. ಅಷ್ಟರಲ್ಲಿ ನಮ್ಮೂರಿನ ಸಾರಾಯಿ ಮಾರೋ ಮನೆಯ ಯಜಮಾನ?? … “ಅಯ್ ಅದ್ಯಾಕಂಗೆ ಬೈಯ್ತಿಯಾ ನಿನ್ ಗಂಡನ್ ಮನೆನಲ್ಲಿ ಕಟ್ಟಾಕೋ ಕುಡಿಯಾಕೆ ಕಳ್ಸ್ ಬ್ಯಾಡ”ಅಂತ ಹೇಳಿದ ಕೂಡಲೇ ” ಹೂನೋ ಬೇವರ್ಸಿ ನನ್ ಗಂಡನ್ ಕಟ್ಟಾಕೊತೀನಿ ಮನೆಹಾಳ ಮೊದಲು ನಿನ್ನ ಹೆಂಡ್ರು ಮದ್ಯ ರಾತ್ರಿ ನಮ್ ಮನೆ ಪಕ್ಕದ್ ಮನೆ ಹನುಮಂತನ ಮನಿ ಒಳಕ್ಕೆ ಪುಸುಕ್ಕ್ ಅಂತ ಯಾಕ್ ಹೊಕ್ಕೊತ್ತಳೆ ಅಲ್ಲವ ಅವಳನ್ನ ಮೊದಲು ಕಟ್ಟಾಕೊಳೋ ರಂಡೆಗಂಡ ಮನೆಹಾಳ ನನಗೆ ಹೆಳಾಕ ಬರ್ತಿಯ ,ನಮ್ಮೂರಿನ ಹೆಂಡ್ರು ಮಕ್ಕಳ ಶಾಪ ತಟ್ಟದೇ ಬಿಡಾದಿಲ್ಲ ನೋಡು ” ಅಂತ ಅವನ ಮೇಲೆ ಜಗಳಕ್ಕೆ ಹೊರಟಿದ್ದಳು ಒಂದು ಸಲ..

ಮನೆಯಲ್ಲಿ ಗಂಡ ಎಷ್ಟೇ ಹೊಡೆದರೂ ಪಕ್ಕದ ಮನೆಯವರಿಗೆ ಗೊತ್ತಾಗದೇ ಇರುತ್ತಿದ್ದಳು..ಯಾಕೆ ಕೈಮೇಲೆಲ್ಲ ಸುಟ್ಟ ಗಾಯ ಅಂತ ಕೆಲಸಕ್ಕೆ ಹೋದಾಗ ಕೆಲ್ಸದ ಹೆಂಗಸರೂ ಕೇಳಿದರೇ” ಅಯ್ಯೋ ಅದಾ ಬೆಳಗ್ಗೆ ನಲ್ಡಿ ಮನೆ[ಸ್ನಾನದ ಮನೆ] ಗೆ ಬೆಂಕಿ ಹಾಕೋವಾಗ ಹೀಗ್ ಆಯ್ತಪ್ಪ ಅಂತ ದು:ಖ ಮುಚ್ಚಿಡುತ್ತಿದ್ದಳು.ಅದೆಷ್ಟು ದಿನ ಉಪವಾಸ ಮಾಡಿದ್ದಳೋ ದೇವರಿಗೇ ಗೊತ್ತು. ಮನೆಯಲ್ಲಿದ್ದ ಅಕ್ಕಿಯೆಲ್ಲ ಕಾಲಿಯಾಗಿ ತಿನ್ನೋಕೆ ಏನು ಇಲ್ಲವಾದಗ ಅಲ್ಲಿ ಇಲ್ಲಿ ಶೇಕರಿಸಿಟ್ಟ ನುಚ್ಚನ್ನ ಗಂಜಿ ಮಾಡಿ ಮಕ್ಕಳಿಗೆ ತಿನ್ನಿಸಿ ತಾನು ಮಾತ್ರ “ಹೊಟ್ಟೇ ಯಾಕೊ ನೋವು ಕಣ್ರೋ ನನಗೆ,ಮದ್ಯಾನ ಜಾಸ್ತಿ ಊಟ ಮಾಡಿದೆ ಅಂತ ಕಾಣುತ್ತೆ ಗೌಡರ ತೋಟದ ಕೆಲ್ಸಕ್ಕೆ ಹೋದಾಗ” ಅಂತ ಹೇಳಿ ತಾನು ಮಾತ್ರ ಹಾಗೆಯೇ ಮಲಗುತ್ತಿದ್ದಳು.ಇಂತ “ಮಹಾನ್ ಸುಳ್ಳುಗಳನ್ನೇನು ” ಕಮ್ಮಿ ಹೇಳುತ್ತಿರಲಿಲ್ಲ.

ಇದ್ದ ಹರಕಲು ಮುರುಕಲು ಮನೆಯ ೪ ಗೋಡೆಗಳಲ್ಲಿ ಆ ಹೊತ್ತಿಗಾಗಲೇ ೨ ಗೋಡೆ ಅರ್ದ ಕುಸಿದು ಕುಳಿತಿದ್ದವು. ಕಂಡ ಕಂಡವರನ್ನೆಲ್ಲ ಕಾಡಿ ಬೇಡಿ ಗ್ರಾಮಪಂಚಾಯತಿ ಕಛೇರಿಗೆ ಅಲೆದು ಅಲೆದೂ ಒಂದು ಆಶ್ರಯಾ ಮನೆಯನ್ನ ಮಂಜೂರು ಮಾಡಿಸಿಕೊಂಡೇ ಬಿಟ್ಟಳು. ಹೇಗಿದ್ರು ಸರ್ಕಾರಿ ಮನೆ ಅಲ್ಲವ ಅರ್ದಂಬರ್ದ ಆಗಿದ್ದ ಮನೆಗೆ ತನ್ನ ಗಂಡನನ್ನ ಕಾಡೀಬೇಡಿ ಅದಕ್ಕೆ ಚಂದನೆಯ ಗೋಡೆ ಕಟ್ಟಿಕೊಂಡು, ನೋಡನೋಡುತ್ತಿದ್ದಂತೆಯೆ ಒಂದು ಚಂದನೆಯ ಮನೆ ಊರ ಹೊರಗೆ ನಿಂತಿತ್ತು. ಒಂದೆ ಸಮಾಧಾನ ಅವಳಿಗೆ ಇನ್ನು ಮುಂದೆ ನನ್ನ ಮಕ್ಕಳು ಮಳೆಯಲ್ಲಿ ತೋಯುವ ಹಾಗಿಲ್ಲ.ರಾತ್ರಿಪೂರ ನಿದ್ದೆಗೆಟ್ಟು ಮಳೆಬಂದಾಗ ಒಳನುಗ್ಗುತ್ತಿದ್ದ ನೀರನ್ನ ಆಚಗೆ ಹಾಕೊ ಕರ್ಮವಿಲ್ಲ. ಹೀಗೆ ಬದುದು ಸಾಗುತ್ತಿರುವಾಗಲೇ ಒಂದು ದಿನ ಕುಡಿದು ಬಂದ ಗಂಡ ಊಟ ಬೇಕೆಂದಾಗ ” ಸ್ವಲ್ಪ ಅಕ್ಕಿ ಇತ್ತು ಮಕ್ಕಳಿಗೆ ಗಂಜಿ ಮಾಡಿ ಹಾಕಿ ಮಲಗಿಸಿಬಿಟ್ಟೆ ರೀ ನಾ ಕೂಡ ಏನು ತಿಂದಿಲ್ಲ” ಅಂದಿದ್ದು ಒಂದೆ ಮಾತು ಅದ್ಯಾವ ಮಹತಾಯಿ ಹೆತ್ತಿದ್ದಳೋ ಅವನನ್ನ ೩ ಮಕ್ಕಳಲ್ಲಿ ಅವನಿಷ್ಟ ಪಡುತ್ತಿದ್ದ ಒಂದು ಹೆಣ್ಣು ಮಗಳನ್ನ ಹೊರಗೆ ಕರೆದು ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಮನೆಗೆ ಬೆಂಕಿ ಕೊಟ್ಟೆ ಬಿಟ್ಟ..!!!! ಬೇಸಿಗೆ ಕಾಲ ಹುಲ್ಲಿನ ಮನೆಯದ್ದರಿಂದ ಬಹುಬೇಗ ಇಡೀ ಮನೆ ಬೆಂಕಿಯುಂಡೆಯಂತಾದರೇ ಮನೆಯಿಂದ ಯಾರು ಹೊರಗೆ ಬರಬಾರದೆಂದು ಮನೆ ಮುಂದೆ ಅರ್ದ ಕಟ್ಟಿದ್ದ ಗೋಡೆಯ ಹತ್ತಿರ ಕೊಡಲಿಯನ್ನು ಹಿಡಿದುಕೊಂಡು ನಿಂತಿದ್ದ ಮಹಾನುಭಾವ.ಮನೆ ಹಿಂದೆ ಕಟ್ಟಿದ ಅರ್ದ ಗೋಡೆಯನ್ನ ಹಾರಿ ತಪ್ಪಿಸಿಕೊಳ್ಳಲಡ್ಡಿಯೇನು ಇರಲಿಲ್ಲ. ಆದರೆ ತಾಯಿ ಮಕ್ಕಳ ಪುಸ್ತಕಗಳನ್ನ ಬಟ್ಟೆಬರೆಗಳನ್ನ ತೆಗಿಯೋಕೆ ಹೋಗಿ ಕೈಸುಟ್ಟುಕೊಂಡಿದ್ದಳು. ಮಗನೂ ಚಿಕ್ಕವನೇನು ಆಗಿರಲಿಲ್ಲ ಅಮ್ಮ ಮತ್ತು ತಂಗಿಯನ್ನ ಬಲವಂತವಾಗಿ ಮನೆ ಹಿಂದಿನ ಗೋಡೆಯಿಂದ ಆಚೆಗೆ ಕಳಿಸಿ ತಾನು ಗೋಡೆ ಹಾರಿ ಪ್ರಾಣ ಉಳಿಸಿಕೊಂಡಿದ್ದ. ಬೆಂಕಿ ಬಿದ್ದ ಮನೆಯಲ್ಲಿದ್ದ ಅಷ್ಟೂ ಬಟ್ಟೆಬರೆಗಳು ದಿನನಿತ್ಯ ಉಪಯೋಗಿಸುವ ಸಾಮನುಗಳು ನೋಡನೋಡುತ್ತಿದ್ದಂತೆಯ ಬೆಂಕಿಯಲ್ಲಿ ಸುಟ್ಟು ಕರುಕಲು. ತಾಯಿ ಎದೆಬಡಿದುಕೊಂಡು ಅಳುತಿದ್ದರೆ ಬೆಂಕಿ ಹಾಕಿದ ಮಹಾನುಭಾವ ಮಾತ್ರ ತನಗೇನು ಆಗೇ ಇಲ್ಲವೆಂದು ಊರ ಜನರ ಬೈಗುಳಗಳಿಗೆ ತಲೆತಗ್ಗಿಸಿ ನಿಂತಿದ್ದ. ತನ್ನದೆಲ್ಲವನ್ನು ಕಳೆದುಕೊಂಡು ತಾಯಿ ರೋಧಿಸುತ್ತಿದ್ದುದ್ದನ್ನ ಕಂಡ ಮಗ ಸಿಟ್ಟಿನಿಂದ ಅಲ್ಲೆ ಇದೆ ಮರದ ತುಂಡನ್ನ ತೆಗೆದುಕೊಂಡು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರೆ ಯಾರೆಂದರೇ ಯಾರು ಬಿಡಿಸಲು ಬಂದಿರಲಿಲ್ಲ. ಹಾಗೆ ಸಿಟ್ಟಿನಿಂದ ಕಾಲಿನಲ್ಲಿ ತುಳಿಯುತ್ತಿದ್ದ ಮಗನನ್ನ ದೂರತಳ್ಳಿದವಳೇ ” ಅಪ್ಪನಿಗೇ ಹೊಡೆಯುವಷ್ಟು ದೈರ್ಯ ಬಂತೇನೋ ನಿನಗೆ” ಅಂದು ಗಂಡನನ್ನ ಬಿಡಿಸಿಕೊಂಡಿದ್ದಳು.

ಅವತ್ತು ಅವನಿಗಾದ ಅವಮಾನದಿಂದ ಕುದ್ದು ಹೋಗಿದ್ದ.೩ ದಿನಕ್ಕೆ ತನ್ನ ಕುಡುಕ ಗೆಳೆಯರ ಸಹಕಾರದಿಂದ ಒಂದು ಚಿಕ್ಕ ಮನೆಯನ್ನ ಮಾಡಿಯೇ ಬಿಟ್ಟ. ಊರ ಮುಂದೇಯೇ ತನಗೆ ಮೈ ಕೈಯಲ್ಲಿ ರಕ್ತ ಬರುವಂತೆ ಹೊಡೆದ ಮಗನ ಮೇಲೆ ಅದ್ಯಾವ ಸಿಟ್ಟಿತ್ತೆಂದರೇ… ಸಿಕ್ಕರೆ ಅವನ ತಲೆ ಕಡಿಯುತ್ತೇನೆಂದು ಅಬ್ಬರದಿಂದ ಅಬ್ಬರಿಸುತ್ತಿದ್ದ.ದುಷ್ಟ ಅಪ್ಪನ ಹೆದರಿಕೆಯಿಂದ ಕಂಗಾಲಾದ ಮಗ ಮನೆ ಬಿಟ್ಟು ಊರಿಂದ ಹೊರ ಬಂದು ಬಿಟ್ಟ. ಮತ್ತೆ ಊರಿಗೆ ಹೋಗಿದ್ದು ೨ ವರ್ಷಗಳ ನಂತರ ಅವನ ತಂಗಿ ಪೋನ್ ಮಾಡಿ ” ಅಣ್ಣಯ್ಯಾ ಅಪ್ಪನಿಗೆ ಲಕ್ವಾ ಆಗೈತಿ ಕಣೋ” ಅಂತ ಕಣ್ಣೀರಿಟ್ಟಾಗಲೆ.

೩ ವರ್ಷಗಳ ನಂತರ ಊರಿಗೆ ಹೋದವನಿಗೆ ಅಲ್ಲಿದ್ದದ್ದನ್ನ ಕಂಡು ಮಾತೆ ಹೊರಡುತಿರಲಿಲ್ಲ. ಅಪ್ಪ ಅಸಹಾಯಕತೆಯಿಂದ ಕುಳಿತಿದ್ದ ಕೈ ಕಾಲುಗಳೆಲ್ಲ ನಡುಗುತ್ತಿದ್ದವು. ಒಂದೆ ಸಮನೇ ಕಣ್ಣೀರು ಹಾಕುತ್ತಿದ್ದ .ಗೊತ್ತಾಗಿರಬೇಕು ಅವನಿಗೆ ಯಾರು ಮತ್ತೆ ಯಾವುದು ಶಾಶ್ವತವಲ್ಲವೆಂದು. ಅವತ್ತು ಒಂದೆ ಒಂದು ಮಾತು ಆಡಲಿಲ್ಲ ಸುಮ್ಮನೆ ಕಣ್ಣೀರು ಹಾಕುತ್ತಿದ್ದ. ತಾಯಿ ಒಂದು ಮೂಲೆಯಲ್ಲಿ ಅಳುತ್ತ ಕೂತಿದ್ದಳು. ಅವತ್ತಿಂದ ಸ್ವಲ್ಪ ಬದಲಾದನಾದರೂ ಪೂರ್ತಿ ಬದಲಾಗಲಿಲ್ಲ ಅದು ಅವನ ಜಾಯಮಾನ. ಕುಡಿದು ಕುಡಿದು ಅರೋಗ್ಯ ಪೂರ್ತಿ ಹಾಳು ಮಾಡಿಕೊಂಡ. ಊರಲ್ಲಿ ಸ್ವಲ್ಪ ದಿನ ಇದ್ದು ಹಿಂದಿರುಗಿದ ಮಗನಿಗೆ ಮತ್ತೆ ಸುದ್ದಿ ಬಂತು. ಅಪ್ಪನಿಗೆ ಮಾತು ಹೊರಟು ಹೋಗಿದೆ ಸರಿಯಾಗಿ ನಡೆಯಲಿಕ್ಕು ಬರುತ್ತಿಲ್ಲ. ಮತ್ತೆ ಊರಿಗೆ ಹೋದಾಗ ನೋಡಿದರೇ ಅಪ್ಪನ ಸ್ಥಿತಿ ಕಂಡು ಕಣ್ಣೀರಾಗಿದ್ದ. ಅವತ್ತಿಂದ ಇವತ್ತಿನವರೆಗೂ ತಾಯಿ ಅವನ ಸೇವೆ ಮಾಡುತ್ತಲೇ ಇದ್ದಾಳೆ ಕೈ ಹಿಡಿದು ಕೂರಿಸುವುದರಿಂದ ಹಿಡಿದು ಅವನ ಎಲ್ಲ ಕೆಲಸಗಳನ್ನು ತಾಯಿ ತನ್ನ ಕೆಲಸಗಳೆಂದೇ ಮಾಡುತ್ತಿದ್ದಾಳೆ.ಸ್ವಲ್ಪವೂ ಅಸಹ್ಯ ಪಡದೇ ಸ್ವಲ್ಪವೂ ಬೇಸರವಿಲ್ಲದೇ. ಸರಿಯಾಗಿ ನಡೆಯಲು ಬಾರದ ಗಂಡ ಕೈ ಸನ್ನೆ ಮಾಡಿ ನನಗೆ ಸರಾಯಿ ಬೇಕೆಂದು ಕೇಳಿದಾಗ ಪಕ್ಕದೂರಿನಿಂದ ಯಾರದೋ ಕೈನಲ್ಲಿ ೫ ರೂಪಾಯಿ ಕೊಟ್ಟು ಸಾರಾಯಿ ತರಿಸಿ ತಾನೆ ಕುಡಿಸಿ ಇವತ್ತಿಗೂ ಗಂಡನ ಸೇವಯೆನ್ನ ಪ್ರೀತಿಯಿಂದ ಮಾಡುತ್ತಿದ್ದಾಳೆ. ಅವಳಿಗೆ ತನ್ನ ಗಂಡ ಕರುಣಿಸಿದ ಹಿಂಸೆ ಕಣ್ಣೀರು ಅವಮಾನ ಇದ್ಯಾವುದರ ಚಿಂತೆ ಇಲ್ಲ. ಈಗ ತನ್ನ ಗಂಡನಿಗೆ ಹೆಂಡತಿ ಮತ್ತೆ ತಾಯಿ ಎರೆಡು ಅವಳೆ…..

ಇದಕ್ಕೆ ಯಾವ ತರಹದ ಪ್ರೀತಿ ಅಂತೀರಿ? ಯಾವ ತರಹದ ಸಹನೆ ಅಂತೀರಿ? ಭೂಮಿ ತೂಕದವಳೂ ಭೂಮಿ ತೂಕದವರೂ ಅಂದರೆ ಇಂತ ತಾಯಂದಿರೇ ಅಲ್ಲವೇ?……………….

by
www.navilagari.wordpress.com
navila_gari@yahoo.com